ಬಾಗಲಕೋಟೆ, ಡಿ.16: ಜಿಲ್ಲೆಯು ಒಂದು ಕಾಲದಲ್ಲಿ ಹೆಚ್ಐವಿ(HIV)ಯಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿತ್ತು. ಇದೀಗ ಕಾಲ ಕ್ರಮೇಣ ಆ ನಂಬರ್ನಿಂದ ಮುಕ್ತವಾಗಿದೆ. ಆದರೆ, ಸದ್ಯ ಜಿಲ್ಲೆಯಲ್ಲಿ ಸದ್ದಿಲ್ಲದೆ ಬಾಲ್ಯ ವಿವಾಹ (Child marriage) ಪ್ರಕರಣಗಳು ಹೆಚ್ಚುತ್ತಾ ಸಾಗುತ್ತಿವೆ. ಬಡ ಮಧ್ಯಮ ವರ್ಗ, ಹಿಂದುಳಿ ವರ್ಗ ಹಾಗೂ ಎಸ್ ಸಿ ಸಮುದಾಯದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹಗಳು ಕಂಡು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದನ್ನು ತಡೆಯುವುದಕ್ಕೆ ಜಾಗೃತಿ ಜೊತೆಗೆ ಕಠಿಣ ಕಾನೂನು ಇದ್ದರೂ ಕೂಡ ಈ ಪಿಡುಗು ನಿಲ್ಲುತ್ತಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರದಿ ಪ್ರಕಾರ 2023 ರಲ್ಲೇ 79 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.
2023 ರಲ್ಲೇ 79 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದರೆ, ಅದರಲ್ಲಿ 57 ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ. ಆದರೂ ಸದ್ದಿಲ್ಲದೆ 16 ಬಾಲ್ಯ ವಿವಾಹಗಳು ನಡೆದಿವೆ. ಜೊತೆಗೆ 8 ಎಫ್ಐಆರ್ ಕೂಡ ಆಗಿವೆ. ಇನ್ನು ಕೋವಿಡ್ 2021 ರಲ್ಲಿ 91 ಬಾಲ್ಯವಿವಾಹ ತಡೆಯಲಾಗಿ, 15 ಬಾಲ್ಯವಿವಾಹ ನಡೆದಿತ್ತು.
ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲು ಹೆಚ್ಐವಿ ನಿಯಂತ್ರಣ ಮಾಡುವುದು ತಲೆ ನೋವಾಗಿತ್ತು. ಆದರೆ, ಹೆಚ್ ಐ ವಿ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಕಳಂಕವನ್ನು ಬಾಗಲಕೋಟೆ ಕಳೆದುಕೊಂಡಿದೆ. ಆದರೆ, ಈಗ ಬಾಲ್ಯವಿವಾಹ ತಲೆನೋವಾಗಿ ಪರಿಣಮಿಸುತ್ತಿದೆ. ಹದಿಹರೆಯದ ಬಾಲೆಯರನ್ನು ಸದ್ದಿಲ್ಲದೆ ಹಸೆಮಣಿಯಲ್ಲಿ ಕೂರಿಸಲಾಗುತ್ತಿದೆ.
1 ಲಿಂಗತ್ವ ಅಸಮಾನತೆ
2 ಬಡತನ, ಪ್ರೇಮ ಪ್ರಕರಣ, ಸಂಬಂಧಿಕರಲ್ಲಿ ಮದುವೆ
3 ಬಾಲ್ಯ ವಿವಾಹ ಮಾಡಲು ಪೋಷಕರು ಮುಂದಾಗುತ್ತಿರುವುದು
ಜೀವನ ಅರಿಯುವ ಮುನ್ನವೇ ಮದುವೆ ಜೀವನಕ್ಕೆ ನೂಕಲಾಗುತ್ತಿದೆ. ಆದರೆ, ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ ಅಂಕಿ-ಸಂಖ್ಯೆಗಳು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಹೇಳುವ ಅಂಕಿ-ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇಲಾಖೆಯವರು 2023 ರ ಸಾಲಿನಲ್ಲಿ ಬರಿ 15 ಬಾಲ್ಯವಿವಾಹ ಆಗಿವೆ ಎಂದು ಹೇಳುತ್ತಾರೆ. ಆದರೆ, ಮಕ್ಕಳ ಕಲ್ಯಾಣ ಸಮಿತಿಯವರು 50 ಬಾಲ್ಯವಿವಾಹ ಆಗಿವೆ. ನಮಗೆ ಪೋಷಕರು ಅಫಿಡವಿಟ್ ಬರೆದುಕೊಟ್ಟಿದ್ದಾರೆ ಎನ್ನುತ್ತಾರೆ. ಜೊತೆಗೆ ಪ್ರತಿ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ಸರಾಸರಿ 50 ಬಾಲ್ಯವಿವಾಹ ನಡೆಯುತ್ತವೆ. ಇವು ಗರ್ಭಿಣಿ, ಹೆರಿಗೆ ಅವಸ್ಥೆಯಲ್ಲೂ ಬೆಳಕಿಗೆ ಬರುತ್ತಿವೆ ಇದು ವಿಪರ್ಯಾಸ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸದ್ದಿಲ್ಲದೆ ಪುಟ್ಟ ಗೌರಿಯರ ಮದುವೆ ನಡೆಯುತ್ತಿದ್ದು, ಇದು ಮಾರಕವಾಗಿದೆ. ಇದಕ್ಕೆ ಇನ್ನು ಹೆಚ್ಚಿನ ಕಣ್ಣಿಟ್ಟು ಬಾಲೆಯರನ್ನು ಕಾಪಾಡುವ ಕಾರ್ಯ ಆಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ