ಮಂಡ್ಯ: ಕರ್ನಾಟಕದಲ್ಲಿ ಮಾನ್ಸೂನ್ ಗರಿಗೆದರಿದ್ದು ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜೊತೆಗೆ ಪ್ರಮುಖ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು ಕೆಲ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಕೆಲವು ದಿನಗಳಿಂದ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ KRS ಮತ್ತು ಕಬಿನಿ ಡ್ಯಾಮ್ಗಳಿಗೆ ಒಳ ಹರಿವು ಹೆಚ್ಚಾಗಿದೆ. ಡ್ಯಾಮ್ಗಳಿಂದ ನೀರನ್ನು ಹೊರಬಿಡುತ್ತಿದ್ದು ಗಗನಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಜೊತೆಗೆ ಸಾವಿರಾರು ಅಡಿ ಮೇಲಿಂದ ನೀರು ಧುಮ್ಮಿಕ್ಕುತ್ತಿರುವುದರಿಂದ ಹಾಲ್ನೊರೆಯ ಜಲಪಾತದಂತೆ ಗಗನಚುಕ್ಕಿ ಕಂಗೊಳಿಸುತ್ತಿದೆ.
ಈ ರುದ್ರರಮಣೀಯ ದೃಶ್ಯಾವಳಿಗಳು ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದೆ. ಪ್ರತಿವರ್ಷವೂ ಈ ವೈಭವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಸೋಂಕಿನಿಂದಾಗಿ ಪ್ರವಾಸಿಗರು ಮನೆಬಿಟ್ಟು ಹೊರಬರದೆ ಇರುವುದರಿಂದ ಗಗನಚುಕ್ಕಿ ಜಲಪಾತ ಪ್ರವಾಸಿಗರಿಲ್ಲದೆ ಬಣಗುಡುತಿದೆ.