ಬೀದರ್: ಕಾಮಗಾರಿ ಶುರುವಾಗಿ ಐದು ವರ್ಷವಾದರೂ ಮುಗಿಯದ ದೇಶದ ಮೊದಲ ಬಂಜಾರಾ ಪಾರ್ಕ್. 200 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಜಾರಾ ಸಮುದಾಯದ ವಿಶಿಷ್ಟ ಉಡುಗೆ, ತೊಡುಗೆ, ನೃತ್ಯ, ಕಲೆಗಳನ್ನು ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬೋರಂಪಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಟ್ರೈಬಲ್ ಪಾರ್ಕ್‌ನ ಕಾಮಗಾರಿಗೆ ಐದು ವರ್ಷಗಳಿಂದ ಗ್ರಹಣ ಹಿಡಿದಿದೆ.
2015-16ನೇ ಸಾಲಿನಲ್ಲೇ ಬೋರಂಪಳ್ಳಿ ಗ್ರಾಮದ 34.06 ಎಕರೆ ಜಾಗದಲ್ಲಿ ಪಾರ್ಕ್ ನಿರ್ಮಿಸಲು ರಾಜ್ಯ ಸರಕಾರ ಮಂಜೂರು ನೀಡಿ, ಒಂದೇ ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಹೊಂದಿತ್ತು. ಆದರೆ ಅದಿನ್ನೂ ಆಗಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಮೊದಲನೇ ಹಂತದಲ್ಲಿ ಕಂಪೌಂಡ್ ಗೋಡೆ, ರಸ್ತೆಗಳನ್ನು ನಿರ್ಮಿಸಿದೆ. ಇದೀಗ ಇಲ್ಲಿ ಸದ್ಯಕ್ಕೆ ಹಾಸ್ಟೆಲ್ ಕಟ್ಟಡ ಹಾಗೂ ಬೇರೆ ಬೇರೆ ಕಟ್ಟಡ ಸೇರಿದಂತೆ ಗೆಸ್ಟ್ ಹೌಸ್ ಹಾಗೂ 10 ಕೋಟಿಗೂ ಅಧಿಕ ವೆಚ್ಚದ ಹಾಸ್ಟೆಲ್ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ನೀಡಿ ಐದು ವರ್ಷವಾದರೂ ಇಂದಿಗೂ ಮುಗಿದಿಲ್ಲ.
ಹಿಂದಿನ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಟ್ರೈಬಲ್ ಪಾರ್ಕ್‌ನ ಕಾಮಗಾರಿ ಅಂದುಕೊಂಡಂತೆ ಆಗುತ್ತಿಲ್ಲ. ಪರಿಣಾಮ ತಾಂಡಾ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಸರಕಾರದ ಸದುದ್ದೇಶ ಇಲ್ಲಿ ಈಡೇರದಂತಾಗಿದೆ. ಉದ್ದೇಶಿತ ಪಾರ್ಕ್‌ನಲ್ಲಿ ಬಂಜಾರಾ ಉಡುಪು ತಯಾರಿಕೆ ಘಟಕ ಸ್ಥಾಪಿಸಿ, ಉಡುಪು ತಯಾರಿಕೆಗೆ ತಂತ್ರಜ್ಞಾನ ಬಳಸಿ, ಆಧುನಿಕ ಸ್ಪರ್ಶ ನೀಡುವ ಉದ್ದೇಶ ಹೊಂದಲಾಗಿದೆ.
ಈ ಮೂಲಕ ಉದ್ಯೋಗ ಸೃಷ್ಟಿಯ ಜತೆಗೆ, ಉಡುಪು ಸಂಸ್ಕೃತಿಯನ್ನು ಉಳಿಸುವ ಆಶಯ ಹೊಂದಲಾಗಿದೆ. ಆಧುನಿಕತೆ ಹೆಚ್ಚಾದಂತೆ ಬಂಜಾರಾ ಕಸೂತಿ ಕಲೆ ಮಾಯವಾಗುತ್ತಿದೆ. ಆದರೆ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ತರಬೇತಿ ಘಟಕಗಳನ್ನು ಸ್ಥಾಪಿಸಿ ಕಸೂತಿ ಕಲೆಯ ತರಬೇತಿ ನೀಡುವ ಉದ್ದೇಶವನ್ನೂ ಸರಕಾರ ಹೊಂದಿದೆ.
ಮದ್ಯ ವ್ಯಸನಿಗಳಿಗೆ ಚಿಕಿತ್ಸಾ ಘಟಕ ಸ್ಥಾಪನೆ ಉದ್ದೇಶ:
ಇಲ್ಲಿ ಉತ್ಪಾದನೆಯಾಗುವ ಉಡುಪುಗಳಿಗೆ ಮಾರುಕಟ್ಟೆ ಕಲ್ಪಿಸಲು, ಪ್ರಚಾರ ಮಾಡಲು ವಿಶೇಷ ಘಟಕವನ್ನು ಪಾರ್ಕ್‌ನಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಬಂಜಾರಾ ಸಮುದಾಯ ಬಳಸುವ ವಾದ್ಯ, ಸಾಂಪ್ರದಾಯಿಕ ನೃತ್ಯಕಲೆಯನ್ನು ಕಲಿಸುವ ಶಾಲೆ ಆರಂಭಿಸುವ ಉದ್ದೇಶವೂ ಇದೆ.
ಸಿಮೆಂಟ್ ಇಟ್ಟಿಗೆ ತಯಾರಿಸುವ ಘಟಕವನ್ನೂ ಸಹ ಇಲ್ಲಿ ನಿರ್ಮಿಸಲಾಗುತ್ತದೆ. ಈ ಸಮಾಜದವರು ಉದ್ಯೋಗವನ್ನರಸಿ ಗುಳೆ ಹೋಗುವುದು ವಾಡಿಕೆ. ಹೀಗಾಗಿ, ಇಂತಹವರ ಮಕ್ಕಳಿಗಾಗಿ ಪಾರ್ಕ್‌ನಲ್ಲಿ ಅರೆಕಾಲಿಕ ವಸತಿ ಶಾಲೆಗಳನ್ನೂ ಆರಂಭಿಸುವ ಉದ್ದೇಶವಿದೆ.
ಮದ್ಯವ್ಯಸನಿಗಳಿಗೆ ಚಿಕಿತ್ಸಾ ಘಟಕ ಸ್ಥಾಪಿಸುವ ಉದ್ದೇಶವನ್ನೂ ನಿಗಮ ಹೊಂದಿದೆ. ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಈ ಯೋಜನೆಗೆ ಬೇಕಾದ 200 ಕೋಟಿ ರೂಪಾಯಿಯನ್ನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ 50 ಕೋಟಿಯಷ್ಟು ಹಣ ಕೂಡಾ ಬಿಡುಗಡೆ ಮಾಡಿದರು.
ಆದರೇ ಇದ್ದನ್ನ ಗುತ್ತಿಗೆ ಪಡೆದ ಇಲಾಖೆ ಮಾತ್ರ ಕಾಮಗಾರಿಗೆ ವೇಗ ಕೊಡಲಿಲ್ಲ. ಹೀಗಾಗಿ ಈ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದು ಸಹಜವಾಗಿ ಸ್ಥಳೀಯ ಬಂಜಾರಾ ಸಮುದಾಯದ ಮುಖಂಡರು ಹಾಗೂ ಜನಪ್ರತಿನಿಧಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
-ಸುರೇಶ್ ನಾಯಕ್