ದಬಾಂಗ್ ಹೀರೊ ಸಲ್ಮಾನ್ ಖಾನ್ ಗೆ ಇವತ್ತು 55ರ ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ನಲ್ಲಿ ನಟ, ನಿರ್ಮಾಪಕ, ನಿರೂಪಕ ಹಾಗೂ ಗಾಯಕನಾಗಿ ಮಿಂಚಿದ ಪ್ರತಿಭೆ ಸಲ್ಲು ಭಾಯ್ ಈ ಬಾರಿ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಆಪ್ತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಚಿತ್ರ ಸಾಹಿತಿ ಸಲೀಂ ಖಾನ್ ಅವರ ಹಿರಿಯ ಮಗನಾದ ಸಲ್ಮಾನ್ ಖಾನ್ ಪೂರ್ತಿ ಹೆಸರು ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್. 1988ರಲ್ಲಿ ‘ಬೀವಿ ಹೋತೋ ಐಸಿ’ ಎಂಬ ಚಿತ್ರದಲ್ಲಿ ಸಹನಟನಾಗಿ ಬಾಲಿವುಡ್ ಪ್ರವೇಶಿಸಿದ ಸಲ್ಲು 90ರ ದಶಕದಲ್ಲಿ ಯುವಜನತೆಯ ಫೇವರೆಟ್ ಹೀರೊ ಆಗಿ ಬದಲಾಗಲು ಕಾರಣ ಸೂರಜ್ ಬಜರಾತಿಯಾ ಅವರ ‘ಮೈನೇ ಪ್ಯಾರ್ ಕೀಯಾ ಸಿನಿಮಾ.
1990ರಲ್ಲಿ ಭಾಗೀ- ಎ ರೆಬೆಲ್ ಆಫ್ ಲವ್ ಎಂಬ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆದ ಬೆನ್ನಲ್ಲೇ ಪತ್ತರ್ ಕೇ ಫೂಲ್, ಸನಮ್ ಬೇವಫಾ, ಖುರ್ಬಾನ್, ರೊಮ್ಯಾಂಟಿಕ್ ಹಿಟ್ ಸಿನಿಮಾ ಸಾಜನ್ ಚಿತ್ರದ ಮೂಲಕ ಸಲ್ಲು ಬಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿಬಿಟ್ಟರು. 1994- 2009 ಸಲ್ಮಾನ್ ಖಾನ್ ಅವರ ಸಿನಿಮಾಗಳ ಕಾಲವಾಗಿತ್ತು. ‘ಅಂದಾಜ್ ಅಪ್ ನಾ ಅಪ್ ನಾ’ , ‘ಹಮ್ ಆಪ್ ಕೇ ಹೈ ಕೌನ್’, ‘ಜುಡ್ ವಾ’, ‘ಪ್ಯಾರ್ ಕಿಯಾ ತೋ ಡರ್ ನ ಕ್ಯಾ’, ‘ಜಬ್ ಪ್ಯಾರ್ ಕಿಸೇ ಸೇ ಹೋತಾ ಹೈ’, ‘ಹಮ್ ಸಾಥ್ ಸಾಥ್ ಹೈ’, ‘ಚೋರಿ ಚೋರಿ ಚುಪ್ಕೇ ಚುಪ್ಕೇ’ ಮೊದಲಾದ ಸಿನಿಮಾಗಳು ಹಿಟ್ ಆಗಿದ್ದವು.
Happy birthday @BeingSalmanKhan 🎂🥂🥰Always remain special! pic.twitter.com/3XOHWC4gmv
— bhagyashree (@bhagyashree123) December 27, 2020
2009ರ ನಂತರ ವಿಭಿನ್ನ ಪಾತ್ರ, ವಿಚಿತ್ರ ಲುಕ್ಗಳಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡರು. ಸಲ್ಮಾನ್ ಖಾನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ದಬಾಂಗ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಯಶಸ್ಸು ದಬಾಂಗ್-2ನಲ್ಲಿಯೂ ಮುಂದುವರಿಯಿತು. 2015ರಲ್ಲಿ ಬಜರಂಗಿ ಭಾಯ್ ಜಾನ್ ಸಿನಿಮಾ ಮೂಲಕ ಸಲ್ಮಾನ್ ಜನರ ಮನಸ್ಸು ಗೆದ್ದರು. ಆನಂತರ ಟ್ಯೂಬ್ ಲೈಟ್, ಟೈಗರ್ ಜಿಂದಾ ಹೈ ಮತ್ತು ಭಾರತ್ ಸಿನಿಮಾಗಳು ತೆರೆ ಕಂಡಿದೆ. ಸಿಖ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿರುವ ಅಂತಿಮ್- ದಿ ಫೈನಲ್ ಟ್ರೂತ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಬಿಡುಗಡೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ.