ಹೊಸಕೋಟೆ: ಕೇಸ್ವೊಂದರ ತನಿಖೆಗಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದ ಎಸ್ಪಿ ಎದುರು ಬಂದು ನಿಂತ ಬಾಲಕನೋರ್ವ ತಾನೂ ಪೊಲೀಸ್ ಆಗಬೇಕಂಬ ಬಯಕೆ ವ್ಯಕ್ತಪಡಿಸಿರುವ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಎಸ್ಪಿ ರವಿ ಡಿ ಚೆನ್ನಣ್ಣನವರ್ನನ್ನು ನೋಡಲು ಬಂದಿದ್ದ 14 ವರ್ಷದ ರೋಹಿತ್ ಎಂಬ ಯುವಕ ತಾನು ಸಹ ಪೊಲೀಸ್ ಆಗೋದಾಗಿ ರವಿ ಡಿ ಚೆನ್ನಣ್ಣನವರ್ ಎದುರು ತನ್ನ ಆಸೆ ವ್ಯಕ್ತಪಡಿಸಿದ್ದಾನೆ. ಜತೆಗೆ ಪೊಲೀಸ್ ಆಗಲು ಏನು ಮಾಡಬೇಕು ಅಂತ ಎಸ್ಪಿಯನ್ನೆ ಕೇಳಿದ್ದಾನೆ.
ಜೀಪ್ನಲ್ಲಿ ತನಿಖಾ ಸ್ಥಳಕ್ಕೆ ಕರೆದೋಗಿ ಇಲಾಖೆಯ ಬಗ್ಗೆ ಮಾಹಿತಿ.. ಚಿಕ್ಕವಯಸ್ಸಿನಲ್ಲೆ ಧೈರ್ಯವಾಗಿ ಪೊಲೀಸ್ ಠಾಣೆಗೆ ಬಂದ ರೋಹಿತ್ಗೆ ಪೊಲೀಸರ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಕೇಸ್ನ ತನಿಖೆಯ ಸ್ಥಳಕ್ಕೆ ತಮ್ಮ ಜೀಪ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಜತೆಗೆ ಜೀಪ್ನಲ್ಲೆ ಬಾಲಕನ ಜೊತೆ ಸೆಲ್ವಿ ತೆಗೆದುಕೊಂಡು, ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಾರೆ ಮತ್ತು ಪೊಲೀಸ್ ಆಗಲು ಏನು ಮಾಡಬೇಕು ಅನ್ನೂ ಸಂಪೂರ್ಣ ಮಾಹಿತಿಯನ್ನ ಬಾಲಕನಿಗೆ ನೀಡಿದ್ದಾರೆ.
ಅಲ್ಲದೆ ಯುವಕ ಚೆನ್ನಾಗಿ ಓದಿದರೆ ತಾನೇ ಪೊಲೀಸ್ ಇಲಾಖೆ ಸೇರಲು ಬೇಕಾದ ಎಲ್ಲಾ ತರಬೇತಿಯನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಪೊಲೀಸ್ ಆಗಲು ಆಸಕ್ತಿ ತೋರಿ ಎಸ್ಪಿ ನೋಡಲು ಬಂದ ಬಾಲಕನಿಗೆ ಕೆಲಸದ ಒತ್ತಡದ ನಡುವೆಯು ರವಿ ಚೆನ್ನಣ್ಣನವರ್ ನೀಡಿದ ಪ್ರತಿಕ್ರಿಯೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.