Budget 2021 ನಿರೀಕ್ಷೆ | ಸಿಗಬಹುದೇ ಆದಾಯ ತೆರಿಗೆ ವಿನಾಯ್ತಿ?
ಜೀವ ವಿಮೆ ಮತ್ತು ಪಿಂಚಣಿ ನಿಧಿಗಳು ದೀರ್ಘಕಾಲೀನ ಉಳಿತಾಯದ ಪ್ರಮುಖ ಮೂಲವಾಗಿದ್ದು, ಈ ಸಮಯದಲ್ಲಿ, ಸೆಕ್ಷನ್ 80 ಸಿ ಹೊರತುಪಡಿಸಿ ಇವೆರಡಕ್ಕೂ ಪ್ರತ್ಯೇಕ ವಿನಾಯಿತಿ ಮಿತಿಯನ್ನು 2021-22ರ ಬಜೆಟ್ನಿಂದ ನಿರೀಕ್ಷಿಸಬಹುದು. ಜತೆಗೆ ಪ್ರಮುಖವಾಗಿ, 2.50 ಲಕ್ಷದಿಂದ 5 ಲಕ್ಷಕ್ಕೆ ತೆರಿಗೆ ವಿನಾಯತಿ ನೀಡಬೇಕು ಎಂಬ ನಿರೀಕ್ಷೆ ಇರುವುದಂತೂ ಸತ್ಯ.
ಒಂದು ಮನೆ ನಿರ್ವಹಿಸಲು ಹಣ ಎಷ್ಟು ಮುಖ್ಯವೋ ಹಾಗೇ ಒಂದು ದೇಶ ನಡೆಯಲು ಹಣ ಅಷ್ಟೇ ಮುಖ್ಯ. ಹಣ ಸಂಪಾದಿಸಲೆಂದು ದುಡಿಯುತ್ತೇವೆ. ಆದರೆ ನಮಗೆ ತಿಳಿಯದೇ ನಮ್ಮ ಕೆಲಸದ ಜತೆಯೇ ದೇಶದ ಆರ್ಥಿಕತೆ ಬಲಗೊಳ್ಳಲೂ ನಾವು ನಮ್ಮದೇ ಆದ ರೀತಿಯಲ್ಲಿ ಕಾರಣರೂ ಆಗಿರುತ್ತೇವೆ. ಇದೇನಪ್ಪಾ ನಮ್ಮ ಆದಾಯಕ್ಕೂ ದೇಶದ ಆದಾಯಕ್ಕು ಏನು ಸಂಬಂಧ ಅಂದುಕೊಂಡ್ರಾ?
ಒಂದು ನಿಮಿಷ ತಾಳಿ. ನಾವು ಗಳಿಸಿದ ಆದಾಯದಲ್ಲಿ ಕಟ್ಟುವ ತೆರಿಗೆ ಸರ್ಕಾರದ ಆದಾಯಕ್ಕೆ ದೊಡ್ಡ ಮೂಲ. ಹೀಗೆ ದೇಶದ ಆರ್ಥಿಕತೆಗೆ ನಮ್ಮದೇ ಆದ ಕೊಡುಗೆ ನೀಡುತ್ತೇವೆ. ಪ್ರತಿ ವರ್ಷ ಬಜೆಟ್ ಮುನ್ನಾ ದಿನಗಳಲ್ಲಿ ಆದಾಯ ತೆರಿಗೆ ಸ್ಲ್ಯಾಬ್ಗಳ ಪರಿಷ್ಕರಣೆಯಾಗುತ್ತಾ? ಹೊಸದಾಗಿ ತೆರಿಗೆ ವಿನಾಯ್ತಿ ಮಿತಿ ಘೋಷಣೆಯಾಗುತ್ತಾ ಎಂಬ ಚರ್ಚೆ ಗರಿಗೆದರುವುದು ಸಾಮಾನ್ಯ. ಈ ಬಾರಿಯೂ ಇಂಥದ್ದೇ ಚರ್ಚೆ ಆರಂಭವಾಗಿದೆ.
ಆದಾಯ ತೆರಿಗೆ ಸ್ಲಾಬ್ಗಳನ್ನು 2020-21ರ ಆಯವ್ಯಯದಲ್ಲಿ ಪರಿಷ್ಕರಿಸಲಾಗಿತ್ತು. ಆ ಪ್ರಕಾರ ₹ 2.50 ಲಕ್ಷದಿಂದ ₹ 5 ಲಕ್ಷದವರೆಗಿನ ಆದಾಯಕ್ಕೆ ಶೇ 5, ₹ 5 ಲಕ್ಷದಿಂದ ₹ 7.50 ಲಕ್ಷದವರೆಗಿನ ಆದಾಯಕ್ಕೆ ಶೇ 10, ₹ 7.50 ಲಕ್ಷದಿಂದ ₹ 10 ಲಕ್ಷದವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಶೇ 15ಕ್ಕೆ ಕಳೆದ ವರ್ಷ ಮಿತಿಗೊಳಿಸಲಾಯಿತು.
ತೆರಿಗೆ ವಿನಾಯತಿಯಲ್ಲಿ ಆಯ್ಕೆಯ ಅವಕಾಶ ಹಾಲಿ ಚಾಲ್ತಿಯಲ್ಲಿದ್ದ ಆದಾಯ ತೆರಿಗೆ ಸ್ಲ್ಯಾಬ್ಗಳ ಜೊತೆಗೆ ಮತ್ತೊಂದು ರೀತಿಯ ಆದಾಯ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ತೆರಿಗೆ ಪಾವತಿದಾರರಿಗೆ ಅವಕಾಶ ನೀಡಲಾಯಿತು. ಹೆಚ್ಚು ಆದಾಯ ಇರುವವರಿಗೆ ಹೊಸ ತೆರಿಗೆ ಪದ್ಧತಿ , ಕಡಿಮೆ ಆದಾಯದವರಿಗೆ ಹಳೆಯ ತೆರಿಗೆ ಪದ್ಧತಿಯಿಂದ ಅನುಕೂಲ ಎಂದು ವೈಯಕ್ತಿಕ ಹಣಕಾಸು ತಜ್ಞರು ಈ ತೆರಿಗೆ ನಿಯಮಗಳನ್ನು ವಿಶ್ಲೇಷಿಸಿದ್ದರು.
ಈ ಬಾರಿಯ ಬಜೆಟ್ನಿಂದ ನಿರೀಕ್ಷೆಗಳೇನು? ಹೊಸ ತೆರಿಗೆ ವಿನಾಯತಿ ಪದ್ಧತಿಯು ತೆರಿಗೆದಾರರಿಗೆ ಲಾಭವೆನಿಸಿದರೂ ಹಳೆಯ ಪದ್ಧತಿಯ ಮೂಲಕ ಹೆಚ್ಚು ಸೌಲಭ್ಯಗಳು ದೊರಕುತ್ತವೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಾರಿಯ ಬಜೆಟ್ನಲ್ಲಿ ಇನ್ನಷ್ಟು ತೆರಿಗೆ ವಿನಾಯತಿಯನ್ನು ಬಯಸುವುದು ಅಷ್ಟೊಂದು ಸರಿಯಲ್ಲ ಎಂಬ ಮಾತುಗಳಿವೆ. ಈಗಾಗಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರದ ಆರ್ಥಿಕ ಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ಹೀಗಿರುವಾಗ ತೆರಿಗೆ ಪಾವತಿದಾರರು ಇನ್ನಷ್ಟು ತೆರಿಗೆ ವಿನಾಯತಿಯನ್ನು ನಿರೀಕ್ಷಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆ ಕಾನೂನಿಕ ಸೆಕ್ಷನ್ 80ಸಿ ನಿಯಮದಡಿ ಸಿಗುವ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ವರ್ಷಕ್ಕೆ ₹ 1.50 ಲಕ್ಷದ ಬದಲು, ₹ 3 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ. 2014ರಲ್ಲಿ 80 ಸಿ ತೆರಿಗೆ ವಿನಾಯ್ತಿ ಮಿತಿಯನ್ನು ₹ 1 ಲಕ್ಷದಿಂದ ₹ 1.50 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ನಂತರದ ದಿನಗಳಲ್ಲಿ ಹಣದುಬ್ಬರ, ಉಳಿತಾಯಕ್ಕೆ ಉತ್ತೇಜನೆ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಮಿತಿಯನ್ನು ಹೆಚ್ಚಿಸಬೇಕೆಂದು ಜನಸಾಮಾನ್ಯರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಕೇಂದ್ರ ಸರ್ಕಾರ ಗಮನ ನೀಡುತ್ತಿಲ್ಲ.
ಜೀವವಿಮೆ ಮತ್ತು ಪಿಂಚಣಿ ನಿಧಿಗಳು ದೀರ್ಘಕಾಲೀನ ಉಳಿತಾಯದ ಪ್ರಮುಖ ಮೂಲಗಳು. ಸೆಕ್ಷನ್ 80 ಸಿ ಹೊರತುಪಡಿಸಿ ಇವೆರಡಕ್ಕೂ ಪ್ರತ್ಯೇಕ ವಿನಾಯಿತಿ ಮಿತಿಯನ್ನು ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ಘೋಷಿಸುವ ಸಾಧ್ಯತೆಯಿದೆ ಎಂದು ವಾಣಿಜ್ಯ ಪತ್ರಿಕೆಗಳು ವರದಿ ಮಾಡಿವೆ.
ಹಾಲಿ ಚಾಲ್ತಿಯಲ್ಲಿರುವ ಆದಾಯ ತೆರಿಗೆ ಸ್ಲ್ಯಾಬ್ಗಳು
ಒಟ್ಟು ಆದಾಯ | ಆದಾಯ ತೆರಿಗೆ |
₹ 2.5 ಲಕ್ಷದವರೆಗೆ | ಇಲ್ಲ |
₹ 2.5ರಿಂದ ₹ 5 ಲಕ್ಷ | ಶೇ 5 |
₹ 5 ರಿಂದ ₹ 7.5 ಲಕ್ಷ | ಶೇ 10 |
₹ 7.5 ರಿಂದ ₹ 10 ಲಕ್ಷ | ಶೇ 15 |
₹ 10 ರಿಂದ 12.5 ಲಕ್ಷ | ಶೇ 20 |
₹ 12.5ರಿಂದ 15 ಲಕ್ಷ | ಶೇ 25 |
₹ 15 ಲಕ್ಷ ಮತ್ತು ಅದಕ್ಕೂ ಹೆಚ್ಚು | ಶೇ 30 |
Budget 2021 ನಿರೀಕ್ಷೆ | ಈ ವರ್ಷದ ಬಜೆಟ್ನಿಂದ ಮಹಿಳೆಯರು ಬಯಸುತ್ತಿರುವುದೇನು?
Published On - 11:22 am, Mon, 1 February 21