ಸಿ.ಎಂ​. ಇಬ್ರಾಹಿಂ​ಗೆ ಜೆಡಿಎಸ್​ ಜೊತೆ ಪ್ಯಾರ್! ಕಾಂಗ್ರೆಸ್​ಗೆ ಕೊಡುತ್ತಾರಾ ತಲಾಖ್? -ಕಿರು ಸಂದರ್ಶನ

ಸಿ.ಎಮ್. ಇಬ್ರಾಹಿಂ ಜನತಾ ದಳ (ಎಸ್​) ಸೇರುವ ತವಕದಲ್ಲಿದ್ದಾರೆ. ಆದರೆ ಅದನ್ನು ಬಾಯ್ಬಿಟ್ಟು ಹೇಳುತ್ತಿಲ್ಲ. ಅವರನ್ನು ಸೇರಿಸಿಕೊಂಡರೆ ಜನತಾ ಪರಿವಾರದ ಪುನರುಜ್ಜೀವನಕ್ಕೆ ರೆಕ್ಕೆ ಸಿಕ್ಕಂತಾಗುತ್ತದೆ ಎಂದು ದೇವೇಗೌಡರು ಕನಸು ಕಂಡಿದ್ದರೆ ಅದು ವಾಸ್ತವಕ್ಕೆ ಹತ್ತಿರವಿರುವ ವಿಚಾರ ಎಂದು ಅಂದುಕೊಳ್ಳಲು ಸಾಧ್ಯವಿಲ್ಲ.

ಸಿ.ಎಂ​. ಇಬ್ರಾಹಿಂ​ಗೆ ಜೆಡಿಎಸ್​ ಜೊತೆ ಪ್ಯಾರ್! ಕಾಂಗ್ರೆಸ್​ಗೆ ಕೊಡುತ್ತಾರಾ ತಲಾಖ್? -ಕಿರು ಸಂದರ್ಶನ
ಸಿ.ಎಂ​. ಇಬ್ರಾಹಿಂ​
bhaskar hegde

| Edited By: sadhu srinath

Jan 07, 2021 | 5:27 PM

ಸಿ.ಎಂ​. ಇಬ್ರಾಹಿಂ​ ಕಾಂಗ್ರೆಸ್ ಬಿಟ್ಟು ಜನತಾ ದಳ (ಎಸ್) ಸೇರುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಇಂದು ಬೆಳಿಗ್ಗೆ ಕೂಡ ಇಬ್ರಾಹಿಂ​, ಜೆಡಿಎಸ್​ ರಾಷ್ಟ್ರ ನಾಯಕ, ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ. ಆದರೆ, ಅಧಿಕೃತವಾಗಿ ಅದನ್ನು ಅವರು ಹೇಳುತ್ತಿಲ್ಲ.

ಈ ಕುರಿತು ಟಿವಿ9 ಕನ್ನಡ ಡಿಜಿಟಲ್​ ಇಬ್ರಾಹಿಂ​ ಅವರನ್ನು ಸಂಪರ್ಕಿಸಿದಾಗ, ನಾನು ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ರಾಜ್ಯಾದಂತ ಓಡಾಡಿ, ಜನರ ಅಭಿಮತ ಸಂಗ್ರಹಿಸಿ ಆಮೇಲೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು. ಕಳೆದ ನಾಲ್ಕು ಚುನಾವಣೆಯಲ್ಲಿ ಮೂರರಲ್ಲಿ ಸ್ಪರ್ಧಿಸಿ ಸೋತಿದ್ದ ಇಬ್ರಾಹಿಂ​ ಮುಸ್ಲಿಮ್​ ಜನಾಂಗದಲ್ಲಿ ಕೂಡ ದೊಡ್ಡ ನಾಯಕರಾಗಿ ಬೆಳೆಯಲಿಲ್ಲ. ತಾನು ಜೆಡಿಎಸ್​ಗೆ ಬಂದರೆ ಮುಸ್ಲಿಂ ಮತಗಳು ಜೆಡಿಎಸ್​ಗೆ ಬರುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಅವರು ವಾಸ್ತವವನ್ನು ತಪ್ಪಾಗಿ ಗ್ರಹಿಸಿದ್ದಾರಾ ಎಂಬ ಸಂಶಯ ಬರುತ್ತಿದೆ.

ಅದೇ ರೀತಿ, ಲಿಂಗಾಯತರು ಬಿಜೆಪಿಯ ಕೈ ಹಿಡಿದ ಮೇಲೂ ಸಹ, ಮುಸ್ಲಿಂ ಮತ್ತು ಲಿಂಗಾಯತರು ಕೈ ಜೋಡಿಸಿದರೆ ಕನಿಷ್ಠ 75 ಕ್ಷೇತ್ರಗಳನ್ನು ಗೆಲ್ಲಬಹುದು ಎಂಬ ಅವರ ಲೆಕ್ಕಾಚರ ಕೂಡ ವಾಸ್ತವದಿಂದ ದೂರ ಇದ್ದಂತೆ ಕಾಣುತ್ತಿದೆ. ಎಲ್ಲದಕ್ಕೂ ಮಿಗಿಲಾಗಿ ಲಿಂಗಾಯತರು ಓರ್ವ ಒಕ್ಕಲಿಗನನ್ನು ಮುಖ್ಯಮಂತ್ರಿ ಮಾಡಲು ಯಾಕೆ ಮತ ಹಾಕುತ್ತಾರೆ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ.

ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ನೀವು ಜನತಾ ದಳವನ್ನು ಯಾವಾಗ ಸೇರುತ್ತೀರಾ?

ಉ: ಇನ್ನೂ ಆ ನಿರ್ಧಾರ ತೆಗೆದುಕೊಂಡಿಲ್ಲ. ನೊಡೋಣ. ಕಾಂಗ್ರೆಸ್​ ನಮ್ಮನ್ನು ಹೇಗೆ ಬಳಸಿಕೊಳ್ಳುತ್ತೆ ಎಂಬುದರ ಮೇಲೆ ನನ್ನ ಮುಂದಿನ ನಿರ್ಧಾರ ನಿಂತಿದೆ.

ಪ್ರ: ಹಾಗಾದರೆ, ಇಂದು ಬೆಳಿಗ್ಗೆ ನೀವು ಗೌಡರನ್ನು ಭೇಟಿ ಮಾಡಿದ್ದು ಯಾಕೆ?

ಉ: ಇದು ಸೌಜನ್ಯದ ಭೇಟಿ. ಕೆಲವು ಕುರುಬ ನಾಯಕರು ಗೌಡರನ್ನು ಭೇಟಿ ಮಾಡಬೇಕು ಎಂದರು. ಅದಕ್ಕಾಗಿ ಹೋಗಿದ್ದೆವು. ಅಷ್ಟೆ.

ಪ್ರ: ನಿಮಗೆ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿಲ್ಲ. ಹಾಗಾಗಿ ನೀವು ಜೆಡಿಎಸ್​ ಕಡೆ ಹೊರಟಿದ್ದೀರಾ?

ಉ: ಹಾಗಲ್ಲ. ಕಾಂಗ್ರೆಸ್​ ಮುಸ್ಲಿಮರಿಗೆ ಏನು ಕೊಟ್ಟಿದೆ. ಯಾವ ಯಾವ ಹಿರಿಯ ನಾಯಕರನ್ನು ಹೇಗೆ ಬಳಸಿಕೊಳ್ಳುತ್ತಿದೆ? ನನ್ನಂತ ಹಿರಿಯನಿಗೆ ಏನು ಕೊಟ್ಟಿದೆ. ಇವನ್ನೆಲ್ಲ ಜನ ನೋಡುತ್ತಿರುತ್ತಾರೆ.

ಪ್ರ: ಸುರ್ಜೇವಾಲಾ ನಿಮಗೆ ಮಾತನಾಡಿ ಏನೋ ಪ್ರಾಮಿಸ್ ಮಾಡಿದ್ದಾರಂತೆ?

ಉ: ಅವರಿಗೆ ಮೈ ಹುಷಾರಿಲ್ಲ. ಅವರು ನನಗೆ ಹೇಳಿರುವಂತೆ, ತಾನು ಬೆಂಗಳೂರಿಗೆ ಬರುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಹೇಳಿದ್ದಾರೆ. ಹಾಗಾಗಿ ನಾನು ಓಕೆ ಅಂತ ಹೇಳಿದ್ದೀನಿ.

ಪ್ರ: ಹಾಗಾದರೆ, ಯಾವಾಗ ನಿರ್ಧಾರ ಮಾಡುತ್ತೀರಾ?

ಉ: ಇನ್ನೂ ಅದನ್ನು ನಿರ್ಧರಿಸಿಲ್ಲ. ಈಗ ನಾನು ರಾಜ್ಯಾದ್ಯಂತ ಓಡಾಡಿ ಜನರ ಅಭಿಪ್ರಾಯ ಕೇಳ್ತಾ ಇದ್ದೀನಿ. ಇವತ್ತು ಮೈಸೂರಿಗೆ ಹೊರಟಿದ್ದೀನಿ. ಜನ ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ.

ಪ್ರ: ಜನತಾ ಪರಿವಾರ ಒಂದುಗೂಡಿಸುವ ಯೋಜನೆ ಏನಾದರೂ ಇದೆಯಾ?

ಉ: ಯಾಕಾಗಬಾರದು. ಈಗಲೂ ಅದರ ಸಾಧ್ಯತೆ ಇದೆ.

ಪ್ರ: ಆ ಕಾಲ ಮಿಂಚಿ ಹೋಗಿದೆ ಅಂತ ಅನ್ನಿಸೋಲ್ವಾ?

ಉ: ಹಾಗೇನು ಇಲ್ಲ. ಉತ್ತರ ಕರ್ನಾಟಕದಲ್ಲಿ ಹಲವಾರು ಕ್ಷೇತ್ರಗಳು ಹೇಗಿವೆ ಎಂದರೆ ಅಲ್ಲಿ, ಮುಸ್ಲಿಂ ಮತ್ತು ಲಿಂಗಾಯತ​ ಮತದಾರರು ಸೇರಿದರೆ ಆ ಕ್ಷೇತ್ರಗಳಲ್ಲಿ ಅವರು ಬೆಂಬಲಿಸುವ ಅಭ್ಯರ್ಥಿಯ ಗೆಲುವು ನಿಶ್ಚಿತ. ಯಾಕಾಗಲ್ಲ. ಬಿಜೆಪಿಯಲ್ಲಿ ಹಲವಾರು ಸದಸ್ಯರು ಆ ಪಕ್ಷದ ವಿಚಾರಧಾರೆ ಮತ್ತು ಆ ಪಕ್ಷ ಅವರನ್ನು ನಡೆಸಿಕೊಳ್ಳುವ ರೀತಿಗೆ ಬೇಸತ್ತಿದ್ದಾರೆ. ಅವರು ಜನತಾ ಪರಿವಾರದ ಜೊತೆ ಕೈ ಜೊಡಿಸಿದರೆ ನಾನು ಈ ಮೊದಲು ಹೇಳಿದ್ದು ಆಗುತ್ತೆ. ಯಾಕಾಗೊಲ್ಲ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada