₹20 ಲಕ್ಷ ಬಹುಮಾನದ ಆಸೆಗೆ ನಕಲಿ ಎನ್​ಕೌಂಟರ್: ಸೇನಾ ಕ್ಯಾಪ್ಟನ್ ವಿರುದ್ಧ ಆರೋಪ ಪಟ್ಟಿ

ಕಳೆದ ವರ್ಷ ಜುಲೈ 18ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮಶಿಪುರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ರಜೌರಿ ಜಿಲ್ಲೆಯ ಇಮ್ತಿಯಾಜ್ ಅಹಮದ್, ಅಬ್ರಾರ್ ಅಹಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂಬ ಮೂವರು ಯುವಕರನ್ನು ಹತ್ಯೆ ಮಾಡಿ ಅವರಿಗೆ ಉಗ್ರರೆಂದು ಹಣೆಪಟ್ಟಿ ಕಟ್ಟಲಾಗಿತ್ತು.

  • TV9 Web Team
  • Published On - 16:09 PM, 11 Jan 2021
₹20 ಲಕ್ಷ ಬಹುಮಾನದ ಆಸೆಗೆ ನಕಲಿ ಎನ್​ಕೌಂಟರ್: ಸೇನಾ ಕ್ಯಾಪ್ಟನ್ ವಿರುದ್ಧ ಆರೋಪ ಪಟ್ಟಿ
ಪ್ರಾತಿನಿಧಿಕ ಚಿತ್ರ

ಶ್ರೀನಗರ: ₹ 20 ಲಕ್ಷದ ಬಹುಮಾನ ಹಣ ಪಡೆಯುವ ಆಸೆಯಿಂದ ನಕಲಿ ಎನ್​ಕೌಂಟರ್ ನಡೆಸಿದ ಸೇನಾ ಕ್ಯಾಪ್ಟನ್ ಭೂಪಿಂದರ್ ಸಿಂಗ್ ವಿರುದ್ಧ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದಾರೆ. ಕಳೆದ ವರ್ಷ ಜುಲೈ 18ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮಶಿಪುರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ರಜೌರಿ ಜಿಲ್ಲೆಯ ಇಮ್ತಿಯಾಜ್ ಅಹಮದ್, ಅಬ್ರಾರ್ ಅಹಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂಬ ಮೂವರು ಯುವಕರನ್ನು ಹತ್ಯೆ ಮಾಡಿ ಅವರಿಗೆ ಉಗ್ರರೆಂದು ಹಣೆಪಟ್ಟಿ ಕಟ್ಟಲಾಗಿತ್ತು.

ಸೇನಾ ಕ್ಯಾಪ್ಟನ್ ಭೂಪಿಂದರ್ ಸಿಂಗ್ ಸದ್ಯ ಸೇನಾ ಕಸ್ಟಡಿಯಲ್ಲಿದ್ದು ಅವರನ್ನು ಕೋರ್ಟ್ ಮಾರ್ಷಲ್​ಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ತಂಡ ರಜೌರಿ ಜಿಲ್ಲೆಯ ಚೀಫ್ ಜ್ಯುಡಿಷಿಯಲ್ ಮೆಜಿಸ್ಟ್ರೇಟ್​ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 75 ಸಾಕ್ಷಿಗಳ ಹೆಸರು ನಮೂದಿಸಿದೆ. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿನ ಆರೋಪಿಗಳ ಫೋನ್ ಕರೆಗಳ ಮಾಹಿತಿಯನ್ನೂ ನೀಡಿದೆ. ಭೂಪಿಂದರ್ ಸಿಂಗ್ ಜತೆ ತಬೀಶ್ ನಾಜಿರ್ ಮತ್ತು ಬಿಲಾಲ್ ಅಹ್ಮದ್ ಲೋನ್ ಅವರು ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಬಿಲಾಲ್ ಅಹ್ಮದ್ ಲೋನ್ ಈಗಾಗಲೇ ಮೆಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಎನ್​ಕೌಂಟರ್​ನಲ್ಲಿ ಹತ್ಯೆಯಾದ ಯುವಕರು ಉಗ್ರರಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಸೆಪ್ಟೆಂಬರ್ ತಿಂಗಳಲ್ಲಿ ಸೇನಾಪಡೆ ಆದೇಶಿಸಿತ್ತು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ (ಎಎಫ್‌ಎಸ್‌ಪಿಎ) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಸೇನಾಪಡೆ ಮೀರಿದೆ ಎಂಬುದನ್ನು ಮನಗಂಡು ಸೇನಾಪಡೆ ಶಿಸ್ತು ಕ್ರಮಗಳನ್ನು ಕೈಗೊಂಡಿತ್ತು.

ಜಮ್ಮು-ಕಾಶ್ಮೀರ ವಿವಾದಿತ ಎನ್​ಕೌಂಟರ್​: ಮಗನ ಶವ ಹೂಳಲು ಗುಂಡಿ ತೋಡಿದ ತಂದೆ