ಚಿಕ್ಕಮಗಳೂರಿನ ಯುವತಿ UPSC ಪರೀಕ್ಷೆಯಲ್ಲಿ 71ನೇ Rank

  • TV9 Web Team
  • Published On - 6:34 AM, 5 Aug 2020
ಚಿಕ್ಕಮಗಳೂರಿನ ಯುವತಿ UPSC ಪರೀಕ್ಷೆಯಲ್ಲಿ 71ನೇ Rank

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರು ಗ್ರಾಮದ ಬಿ. ಯಶಸ್ವಿನಿ 2019ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ 71ನೇ ಸ್ಥಾನ ಪಡೆದಿದ್ದಾರೆ. ಕಡೂರು ತಾಲೂಕಿನ ಗುಬ್ಬಿಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರೋ ಬಿ.ಎಸ್.ಬಸವರಾಜಪ್ಪ ಅವರ ಪುತ್ರಿ ಯಶಸ್ವಿನಿ ಬಾಣೂರು ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ನಂತರ ಕಡೂರಿನ ದೀಕ್ಷಾ ವಿದ್ಯಾ ಮಂದಿರದಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ಶಿವಮೊಗ್ಗದಲ್ಲಿ ಪದವಿ ಪೂರ್ವ ಶಿಕ್ಷಣ ನಂತರ ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

293ನೇ ರ್ಯಾಂಕ್ ಪಡೆದರೂ ಮತ್ತೊಮ್ಮೆ ಪರೀಕ್ಷೆ
ದೆಹಲಿಯ ವಾಜೀರಾಂ ಅಂಡ್ ರವಿ ಇನ್ಸ್ ಟಿಟ್ಯೂಟ್‍ನಲ್ಲಿ ತರಬೇತಿ ಪಡೆದ ಯಶಸ್ವಿನಿ ಪ್ರಸ್ತುತ ಐಡಿಇಎಸ್ (ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವೀಸ್)ನಲ್ಲಿ ಉದ್ಯೋಗದ ತರಬೇತಿಯಲ್ಲಿದ್ದಾರೆ. ಕಳೆದ ಬಾರಿಯೂ ಯುಪಿಎಸ್‍ಸಿ ಪರೀಕ್ಷೆ ಎದುರಿಸಿದ್ದ ಯಶಸ್ವಿನಿ 293ನೇ ರ್ಯಾಂಕ್ ಪಡೆದಿದ್ದರು. ಈ ವರ್ಷ 71ನೇ ರ್ಯಾಂಕ್ ಪಡೆದಿದ್ದಾರೆ.

ಯಶಸ್ವಿನಿ ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದು. ಐಎಎಸ್ ಅಧಿಕಾರಿ ಆಗಬೇಕೆನ್ನುವುದು ಯಶಸ್ವಿನಿ ಅವರ ಹೆಬ್ಬಯಕೆ‌ ಜೊತೆಗೆ ಕನಸು ಕೂಡ.

ಆ ನಿಟ್ಟಿನಲ್ಲಿ ಕಳೆದ ಬಾರಿ 293ನೇ ರ್ಯಾಂಕ್ ಪಡೆದರೂ ಅದು ಕಡಿಮೆ ಎನ್ನಿಸಿ ಮತ್ತೆ ಯುಪಿಎಸ್‍ಸಿ ಪರೀಕ್ಷೆ ಎದುರಿಸಿ 71 ನೇ ರ್ಯಾಂಕ್ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಏನನ್ನ ಬೇಕಾದ್ರೂ ಸಾಧಿಸುತ್ತಾರೆ ಅನ್ನೋದಕ್ಕೆ ಯಶಸ್ವಿನಿ ಕಣ್ಣೆದುರಿನ ಸಾಕ್ಷಿಯಾಗಿದ್ದಾರೆ.

ಮಗಳ ಸಾಧನೆ ಹೆಮ್ಮೆ ತಂದಿದೆ ಎಂದು ಯಶಸ್ವಿನಿ ತಂದೆ ಬಸವರಾಜಪ್ಪ ಹಾಗೂ ತಾಯಿ ಇಂದಿರಾ ಸಂತಸ ಹಂಚಿಕೊಂಡಿದ್ದಾರೆ. ಐಎಎಸ್ ಮಾಡಬೇಕೆನ್ನುವ ನನ್ನ ಗುರಿಗೆ ಸದಾ ಬೆನ್ನೆಲುಬಾಗಿ ನಿಂತ ನನ್ನ ತಂದೆ ಬಸವರಾಜಪ್ಪ ಮತ್ತು ತಾಯಿ ಇಂದಿರಾ ಹಾಗೂ ನಾನು ಓದಿದ ಶಾಲೆಯ ಶಿಕ್ಷಕರ ಮಾರ್ಗದರ್ಶನದಿಂದ ನನಗೆ ಈ ಸ್ಥಾನ ಸಿಕ್ಕಿದೆ. ಜನರ ಸೇವೆ ಮಾಡಬೇಕೆನ್ನುವ ನನ್ನ ಕನಸಿಗೆ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ತನ್ನ ಕೃತಜ್ಞತೆ ಸಲ್ಲಿಸಿದ್ದಾರೆ ಯಶಸ್ವಿನಿ.