ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿ ನಿರ್ಮಾಣ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಕೂಡ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದು, ಮೋದಿಜೀ.. ನಿಮ್ಮ 56 ಇಂಚು ಅಗಲದ ಎದೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

  • TV9 Web Team
  • Published On - 15:08 PM, 19 Jan 2021
ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿ ನಿರ್ಮಾಣ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಕಾಂಗ್ರೆಸ್ ನಾಯಕ, ಸಂಸದ ರಾಹುಲ್​ ಗಾಂಧಿ

ನವದೆಹಲಿ: ಚೀನಾ ಅರುಣಾಚಲ ಪ್ರದೇಶದಲ್ಲಿ ಭಾರತದ ಗಡಿಯೊಳಗೆ ನುಗ್ಗಿ 101 ಮನೆಗಳುಳ್ಳ ಗ್ರಾಮ ನಿರ್ಮಿಸಿದ್ದು ಸ್ಯಾಟಲೈಟ್​ ಚಿತ್ರದ ಮೂಲಕ ಖಚಿತಪಟ್ಟ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕಾಂಗ್ರೆಸ್​ನ ಇತರ ನಾಯಕರೂ ಸಹ ಕಿಡಿಕಾರಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿ ನಿರ್ಮಾಣ ವರದಿ ಮಾಡಿದ ಕೆಲವು ಪೇಪರ್​ಗಳ ಲಿಂಕ್​ಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ನೀಡಿದ ಭರವಸೆಯನ್ನು ಮರೆತಿದ್ದಾರೆ. ನನ್ನ ದೇಶ ಎಂದಿಗೂ, ಯಾರೆದುರೂ ತಲೆಬಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಆ ಮಾತನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಹಾಗೇ, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಕೂಡ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದು, ಮೋದಿಜೀ.. ನಿಮ್ಮ 56 ಇಂಚು ಅಗಲದ ಎದೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್​ನ ಹಿರಿಯ ನಾಯಕ ಪಿ.ಚಿದಂಬರಂ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ಚೀನಾ, ಹೀಗೆ ಗಡಿಗಳಲ್ಲಿ ಗ್ರಾಮ ನಿರ್ಮಾಣವನ್ನೂ ಹೆಚ್ಚಿಸುತ್ತಿದೆ. ಇದೀಗ ಅರುಣಾಚಲ ಪ್ರದೇಶದ ತ್ಸಾರಿ ಚು ನದಿ ಸಮೀಪ ಇರುವ ವಿವಾದಿತ ಪ್ರದೇಶದಲ್ಲಿ 101 ಮನೆಗಳುಳ್ಳ ಹಳ್ಳಿಯನ್ನು ನಿರ್ಮಿಸಿದೆ.

ಭಾರತದ ಗಡಿ ಒಳಗೆ ನುಗ್ಗಿ ಹಳ್ಳಿಯನ್ನೇ ನಿರ್ಮಾಣ ಮಾಡಿದ ಚೀನಾ! ಇಲ್ಲಿವೆ 101 ಮನೆಗಳು..