ಹೆಚ್ಚಾಗುತ್ತಿದೆ ಶಿಕ್ಷಕರಲ್ಲಿ ಕೊರೊನಾ ಸೋಂಕು: ಶಾಲೆಗಳು ಬಂದ್ ಬಂದ್

ಶಾಲಾ ಕಾಲೇಜು ಆರಂಭ ಆಗುವುದಕ್ಕೂ ಮುನ್ನ ಕೊರೊನಾ ಪರೀಕ್ಷೆ ನಡೆಸಿದ್ದು, ಜಿಲ್ಲೆಯ 18 ಶಿಕ್ಷಕರಿಗೆ ಕೊರೊನಾ ಸೋಂಕು ದೃಢವಾಗಿದೆ.

  • TV9 Web Team
  • Published On - 11:57 AM, 5 Jan 2021
ಹೆಚ್ಚಾಗುತ್ತಿದೆ ಶಿಕ್ಷಕರಲ್ಲಿ ಕೊರೊನಾ ಸೋಂಕು: ಶಾಲೆಗಳು ಬಂದ್ ಬಂದ್
ಶಾಲೆ ಬಂದ್

ಶಾಲೆ ಶುರುವಾದ ಬೆನ್ನಲ್ಲೆ ಶಿಕ್ಷಕರಿಗೆ ಕೊರೊನಾ ಗಂಡಾಂತರ ಎದುರಾಗಿದೆ. ರಾಜ್ಯದ ಕೆಲವು ಜಿಲ್ಲೆಗಳ ಶಾಲಾ ಶಿಕ್ಷಕರಿಗೆ  ಕೊರೊನಾ ಸೋಂಕು ದೃಢವಾಗಿದ್ದು, ಕೆಲವು ದಿನಗಳ ವರೆಗೆ ಶಾಲೆಯನ್ನು ಮುಚ್ಚಲಾಗಿದೆ.

18 ಶಿಕ್ಷಕರಿಗೆ ಕೊರೊನಾ ಸೋಂಕು
ಬೆಳಗಾವಿ ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭ ಆಗುವುದಕ್ಕೂ ಮುನ್ನ ಕೊರೊನಾ ಪರೀಕ್ಷೆ ನಡೆಸಿದ್ದು, ಜಿಲ್ಲೆಯ 18 ಶಿಕ್ಷಕರಿಗೆ ಕೊರೊನಾ ಸೋಂಕು ದೃಢವಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,150 ಶಿಕ್ಷಕರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಎರಡು ಸಾವಿರ ಶಿಕ್ಷಕರ ವರದಿ ನೆಗೆಟಿವ್ ಬಂದಿತ್ತು. ಇನ್ನುಳಿದ ಶಿಕ್ಷಕರ ವರದಿ ಬರಬೇಕಿದೆ. ಸದ್ಯ 12 ಶಿಕ್ಷಕರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ತಾಲೂಕಿನ ಕಡೋಲಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಇಂದಿನಿಂದ ಶಾಲೆಯನ್ನು ಬಂದ್ ಮಾಡಲಾಗಿದೆ. ಶಿಕ್ಷಕರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸಹ ಶಿಕ್ಷಕರ ಕೊರೊನಾ ವರದಿ ಬರುವವರೆಗೂ ಕಡೋಲಿ ಸರ್ಕಾರಿ ಶಾಲೆಯನ್ನು ಬಂದ್ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಇಬ್ಬರು ಶಿಕ್ಷಕರಿಗೆ ಕೊರೊನಾ ಸೋಂಕು
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಇಬ್ಬರು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಂದು ವಾರ ಶಾಲೆಯನ್ನು ಬಂದ್ ಮಾಡಲಾಗಿದೆ. ಸೋಂಕು ದೃಢಪಟ್ಟಿರುವ ಇಬ್ಬರು ಶಿಕ್ಷಕರಿಗೆ ಹೋಂ ಐಸೋಲೇಶನ್​ಗೆ ಒಳಪಡಿಸಲಾಗಿದೆ.

ಶಿಕ್ಷಕರಿಗೆ ಸೋಂಕು ದೃಢವಾದಂತೆ ಶಾಲೆಗೆ ಬಂದಿದ್ದ 23 ವಿದ್ಯಾರ್ಥಿಗಳು ಮತ್ತು 5 ಜನ ಶಿಕ್ಷಕರಿಗೆ ಆರೋಗ್ಯ ಇಲಾಖೆ ಕೊರೊನಾ ಪರೀಕ್ಷೆ ನಡೆಸಿದ್ದು, ವರದಿ ನೆಗಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಸ್ಪಷ್ಟಪಡಿಸಿದ್ದಾರೆ.

ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ಸ್ಯಾನಿಟೈಸ್
ಕೊಪ್ಪಳ ಜಿಲ್ಲೆಯ ವದಗನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಗೆ ಕೊರೊನಾ ದೃಢವಾದ ಹಿನ್ನೆಲೆ ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.

ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಕೊರೊನಾ
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರೌಢ ಶಾಲಾ ಐವರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಪೈಕಿ ಹೊನ್ನಾವರದಲ್ಲಿ 2, ಭಟ್ಕಳದಲ್ಲಿ ಒಬ್ಬರಿಗೆ ಹಾಗೂ ಶಿರಸಿ  ಇಬ್ಬರು ಶಿಕ್ಷಕಿಯರಿಗೆ ಕೊರೊನಾ ಇರುವುದು ಸ್ಪಷ್ಟವಾಗಿದೆ. ಶಿರಸಿಯ ಇಬ್ಬರು ಶಿಕ್ಷಕಿಯರು ಗ್ರಾಮ ಪಂಚಾಯತ್ ಮತ ಎಣಿಕೆ ಕಾರ್ಯದಲ್ಲೂ ಭಾಗಿಯಾಗಿದ್ದರು. ಕೊರೊನಾ ದೃಢಪಟ್ಚ ಹಿನ್ನೆಲೆ ಎಲ್ಲರನ್ನು ಹೋಂ ಐಸೋಲೇಷನ್​ನಲ್ಲಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.

ನೈಜೀರಿಯಾದಲ್ಲಿ ಕೊರೊನಾದ ಮತ್ತೊಂದು ಹೊಸ ರೂಪ; ಬ್ರಿಟನ್​ನಲ್ಲಿ ಪತ್ತೆಯಾದ ವೈರಾಣುಗಿಂತ ಭಿನ್ನ !