Debit Credit Card: ಆನ್ಲೈನ್ ಶಾಪಿಂಗ್ಗೆ ನೀವು ಕಾರ್ಡ್ ಬಳಸ್ತೀರಾ? ಮೋಸ ಆಗದಿರಲು ಹೀಗೆ ಮಾಡಿ
ಪರ್ಸ್ ತುಂಬಾ ಹಣ ಕೊಂಡೊಯ್ಯುವುದನ್ನು ತಪ್ಪಿಸಲು ಜನರು ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚು ಮಾಡಿದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾದಂತೆ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಭಾರತದ ನಗರಗಳಲ್ಲಿ ಕ್ರೆಡಿಟ್ ಕಾರ್ಡ್ ಉಪಯೋಗಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಜನರು ಬಳಸುತ್ತಿದ್ದಾರೆ. ಪರ್ಸ್ ತುಂಬಾ ಹಣ ಕೊಂಡೊಯ್ಯುವುದನ್ನು ತಪ್ಪಿಸಲು, ಹೆಚ್ಚು ಸುರಕ್ಷತೆಯ ದೃಷ್ಟಿಯಿಂದ ಜನರು ಹೆಚ್ಚುಹೆಚ್ಚು ಕ್ರೆಡಿಟ್ ಕಾರ್ಡ್ ಉಪಯೋಗಿಸುತ್ತಿದ್ದಾರೆ. ಆದರೆ, ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಮತ್ತು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾದಂತೆ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ಗೆ ಸಂಬಂಧಿಸಿದಂತೆ 2020ರ ಆರ್ಥಿಕ ವರ್ಷದಲ್ಲಿ ಸುಮಾರು 50,000ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಅಂಧೇರಿ ಮೂಲದ ನವೋದ್ಯಮಿ ರೂ. 50,000 ಮೋಸಕ್ಕೊಳಗಾಗಿದ್ದರು. ಕರ್ನಾಟಕ ರಾಜ್ಯದಲ್ಲಿಯೂ ಇಂಥ ಹತ್ತು ಹಲವು ಪ್ರಕರಣಗಳು ದಾಖಲಾಗಿವೆ. ಕೇಜ್ರೀವಾಲ್ ಪುತ್ರಿ OLX ವ್ಯವಹಾರದಲ್ಲಿ ಮೋಸ ಹೋಗಿರುವುದನ್ನು ಕೂಡ ನಾವಿಲ್ಲಿ ಸ್ಮರಿಸಬಹುದು. ಇಂಥ ಘಟನಾವಳಿಗಳಿಂದ ರಕ್ಷಣೆ ಪಡೆಯಲು, ನಮ್ಮ ವ್ಯವಹಾರವನ್ನು ಸುರಕ್ಷಿತವಾಗಿರಿಸಲು 5 ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
1) ಆಯ್ದ ವೆಬ್ಸೈಟ್ಗಳಿಂದ ಮಾತ್ರ ಶಾಪಿಂಗ್ ಮಾಡಿ ಆನ್ಲೈನ್ ಶಾಪಿಂಗ್ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಕ್ರೆಡಿಟ್ ಕಾರ್ಡ್ ಹೊಂದಿರುವವರು ನಿಗದಿತ ರಿಯಾಯಿತಿ, EMI ಅವಕಾಶಗಳು ಪಡೆದು ಆನ್ಲೈನ್ ವೇದಿಕೆಯಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ವೆಬ್ಸೈಟ್ ಮೂಲಕ ಶಾಪಿಂಗ್ ಮಾಡುವಾಗ ಆ ವೆಬ್ಸೈಟ್ನೊಂದಿಗೆ ಸಂಪರ್ಕ ಸಾಧಿಸುವುದು ಸುರಕ್ಷಿತವೇ ಎಂದು ಮೊದಲು ಖಚಿತಪಡಿಸಿಕೊಳ್ಳಿ. ವೆಬ್ಸೈಟ್ನ ಅಡ್ರೆಸ್ http:// ಎಂದು ಆರಂಭವಾಗಿದ್ದರೆ ಅಂಥ ವೆಬ್ಸೈಟ್ಗಳ ಬಗ್ಗೆ ಎಚ್ಚರವಾಗಿರಿ. https:// ಎಂದು ಅಡ್ರೆಸ್ ಶುರುವಾಗಿದ್ದರೆ ಅವುಗಳನ್ನು ನಂಬಬಹುದು. ವೆಬ್ಸೈಟ್ನ ಸುರಕ್ಷತೆ ಪರಿಶೀಲಿಸಲು ಡಿಜಿಟಲ್ ಸರ್ಟಿಫಿಕೇಟ್ಗಳು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು.
2) ಸಾರ್ವಜನಿಕ ಸಾಧನ, ನೆಟ್ವರ್ಕ್ ಬಳಸುವುದು ಕಡಿಮೆ ಮಾಡಿ ಯಾವುದೇ ವಿಧದಲ್ಲಿ ಆನ್ಲೈನ್ ಹಣಕಾಸು ವಹಿವಾಟು ನಡೆಸುವಾಗ ಸಾರ್ವಜನಿಕ ಸಾಧನಗಳನ್ನು ಅಥವಾ ನೆಟ್ವರ್ಕ್ ಬಳಸುವುದು ಕಡಿಮೆ ಮಾಡಿ. ಯಾವತ್ತೂ ಹಣದ ವಹಿವಾಟನ್ನು ಪಾಸ್ವರ್ಡ್ ಇರುವ ಖಾಸಗಿ ಲ್ಯಾಪ್ಟಾಪ್, ಮೊಬೈಲ್ಗಳಲ್ಲಿ ನಡೆಸಿ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಸಾರ್ವಜನಿಕ ಸಾಧನಗಳಲ್ಲಿ ನೀಡಬೇಡಿ. ವೈಫೈ ಬಳಸುವುದಿದ್ದರೆ ಸೆಕ್ಯೂರ್ಡ್ ವೈಫೈ ಬಳಸಿ.
3) ಕ್ಯಾಶ್ ಆನ್ ಡೆಲಿವರಿ ಬಳಸುವುದು ಉತ್ತಮ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಬಳಸುವುದರ ಬಗ್ಗೆ ಹಲವರು ಉದಾಸೀನ ವ್ಯಕ್ತಪಡಿಸುತ್ತಾರೆ. ಡಿಜಿಟಲ್ ಪೇಮೆಂಟ್ ವಿಧಾನ ದೊಡ್ಡದು, ಕ್ಯಾಶ್ ಆನ್ ಡೆಲಿವರಿ ಬಳಸುವುದು ಸಣ್ಣತನ ಎಂಬ ಭಾವ ಇತ್ತೀಚಿನ ಜನರಲ್ಲಿ ಹೆಚ್ಚಾಗಿದೆ. ಜತೆಗೆ, ATMನಿಂದ ಹಣ ಡ್ರಾ ಮಾಡಿಕೊಳ್ಳಲು ಕೂಡ ಜನರು ಆಲಸ್ಯ ತೋರುತ್ತಾರೆ. ಆದರೆ, ಯಾವುದೇ ಆನ್ಲೈನ್ ಶಾಪಿಂಗ್ ನಡೆಸುವಾಗ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಆರಿಸಿಕೊಳ್ಳುವುದು ಸುರಕ್ಷಿತ.
4) ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಸೇವ್ ಮಾಡಿಡಬೇಡಿ ಕಾರ್ಡ್ ಮತ್ತು ಖಾತೆಯ ವಿವರಗಳನ್ನು ವೇಗವಾಗಿ ನೋಡಲು ಜನರು ಅವುಗಳ ಪಾಸ್ವರ್ಡ್ ಮತ್ತಿತರ ವಿಷಯಗಳನ್ನು ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಶಾಪಿಂಗ್ ಸೈಟ್ಗಳಲ್ಲಿ ಕೂಡ ಮುಖ್ಯ ವಿವರಗಳನ್ನು ಮರೆತುಹೋಗುತ್ತದೆ ಎಂಬ ಕಾರಣಕ್ಕೆ ಸೇವ್ ಮಾಡಿ ಇಡುತ್ತಾರೆ. ಆದರೆ, ಹಾಗೆ ಸೇವ್ ಮಾಡಿಡುವುದು ಒಳ್ಳೆಯದಲ್ಲ. ಯಾವುದೇ ಸಂದರ್ಭ ಹಣ ವಹಿವಾಟು ಮಾಡಬೇಕಾದರೆ ಖುದ್ದಾಗಿ, ಹೊಸದಾಗಿ ಮತ್ತೆ ಪಾಸ್ವರ್ಡ್ ಇತರ ವಿವರಗಳನ್ನು ನಮೂದಿಸಿ.
5) ಕಾರ್ಡ್ ಲಾಕ್ ಮಾಡಿಟ್ಟುಕೊಳ್ಳಿ ನಿಮ್ಮ ಕ್ರೆಡಿಟ್ ಕಾರ್ಡ್ ಕಳವಾಗಬಹುದು ಅಥವಾ ಕಾಣೆಯಾಗಬಹುದು. ಇಂಥಾ ಸಂದರ್ಭದಲ್ಲಿ ಮೊದಲು ಮಾಡಬೇಕಾದ ಕೆಲಸ ಎಂದರೆ ಕಾರ್ಡ್ನ್ನು ಲಾಕ್ ಮಾಡುವುದು. ನಾವು ಸಂಬಂಧಪಟ್ಟ ಬ್ಯಾಂಕ್ಗೆ ಕರೆ ಮಾಡುವುದರ ಮುಖೇನ ಕಳೆದುಹೋದ ಕಾರ್ಡ್ ಯಾವುದೇ ರೀತಿಯಲ್ಲಿ ದುರ್ಬಳಕೆ ಆಗದಂತೆ ಬ್ಲಾಕ್ ಮಾಡಿಕೊಳ್ಳಬಹುದು. ಬಳಿಕ, ಕಾರ್ಡ್ ಸ್ಟೇಟ್ಮೆಂಟ್ ಮೇಲೆ ಒಂದು ಕಣ್ಣಿಟ್ಟುಕೊಳ್ಳಬಹುದು. ಯಾವುದೇ ವಿಧದ ಅಕ್ರಮ ವ್ಯವಹಾರ ಕಂಡುಬಂದರೆ ಕೂಡಲೇ ಬ್ಯಾಂಕ್ಗೆ ಸೂಚನೆ ನೀಡಬಹುದು.
ಇದನ್ನೂ ಓದಿ: ಲಕ್ಷಾಂತರ Airtel ಮೊಬೈಲ್ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್
Published On - 7:48 pm, Mon, 1 March 21