ಟ್ರ್ಯಾಕ್ಟರ್ ಪರೇಡ್: ದೆಹಲಿ ಪೊಲೀಸರೇ ನಿರ್ಣಯ ಕೈಗೊಳ್ಳಲಿ ಎಂದ ಸುಪ್ರೀಂ ಕೋರ್ಟ್

ಕಾನೂನು ಸುವ್ಯವಸ್ಥೆ ಕಾಪಾಡುವ ತಮ್ಮ ಕೆಲಸ ನಿಭಾಯಿಸಲು ಪೊಲೀಸರು ಸ್ವತಂತ್ರರಾಗಿದ್ದಾರೆ. ಹೀಗಾಗಿ, ನ್ಯಾಯಾಲಯಕ್ಕಿಂತ ಪೊಲೀಸರೇ ಟ್ರ್ಯಾಕ್ಟರ್ ಪರೇಡ್ ಕುರಿತು ನಿರ್ಣಯ ತೆಗೆದುಕೊಳ್ಳುವುದು ಸಮಂಜಸ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

  • TV9 Web Team
  • Published On - 13:08 PM, 18 Jan 2021
ಟ್ರ್ಯಾಕ್ಟರ್ ಪರೇಡ್: ದೆಹಲಿ ಪೊಲೀಸರೇ ನಿರ್ಣಯ ಕೈಗೊಳ್ಳಲಿ ಎಂದ ಸುಪ್ರೀಂ ಕೋರ್ಟ್
ಪಂಜಾಬ್​ ರೈತರ ಟ್ರ್ಯಾಕ್ಟರ್​ಗಳಲ್ಲಿ ದೆಹಲಿಗೆ ತೆರಳುತ್ತಿರುವುದು

ದೆಹಲಿ: ಜನವರಿ 26ರಂದು ರೈತರ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ದೆಹಲಿ ಪೊಲೀಸರೇ ತೀರ್ಮಾನಿಸಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರೈತರ ಟ್ರ್ಯಾಕ್ಟರ್ ಪರೇಡ್​ಗೆ ತಡೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಯಾವುದೇ ಆದೇಶ ನೀಡಲು ನಕಾರ ವ್ಯಕ್ತಪಡಿಸಿದೆ. ಜತೆಗೆ, ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ತಿಳಿಸಿದೆ.

ಪೊಲೀಸರೇ ನಿರ್ಣಯ ಕೈಗೊಳ್ಳಲಿ
ಪೊಲೀಸರು ತಮ್ಮ ಅಧಿಕಾರ ಉಪಯೋಗಿಸಿ ಟ್ರ್ಯಾಕ್ಟರ್​ ಪರೇಡ್ ಕುರಿತು ನಿರ್ಣಯ ತೆಗೆದುಕೊಳ್ಳಬಹುದು. ಕಾನೂನು ಸುವ್ಯವಸ್ಥೆ ಕಾಪಾಡುವ ತಮ್ಮ ಕೆಲಸ ನಿಭಾಯಿಸಲು ಪೊಲೀಸರು ಸ್ವತಂತ್ರರಾಗಿದ್ದಾರೆ. ಹೀಗಾಗಿ, ನ್ಯಾಯಾಲಯಕ್ಕಿಂತ ಪೊಲೀಸರೇ ಟ್ರ್ಯಾಕ್ಟರ್ ಪರೇಡ್ ಕುರಿತು ನಿರ್ಣಯ ತೆಗೆದುಕೊಳ್ಳುವುದು ಸಮಂಜಸ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂದಿನ ವಿಚಾರಣೆಯಲ್ಲಿ ಯಾವುದೇ ನಿರ್ಣಯ ಹೊರಡಿಸದೇ, ಬುಧವಾರ ಇನ್ನೊಮ್ಮೆ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ.

ರೈತರ ಗುಂಪು ಜನವರಿ 26ರಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದೆ ಎನ್ನುವ ವಿಚಾರ ನಮ್ಮ ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ತಡೆಯೊಡ್ಡಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಉದ್ದೇಶ ಹೊಂದಿರುವ ಮತ್ತು ಇಡೀ ದೇಶಕ್ಕೇ ಮುಜುಗರ ತರುವ ಈ ಮೆರವಣಿಗೆ ನಡೆಸದಂತೆ ನ್ಯಾಯಾಲಯ ಆದೇಶ ಹೊರಡಿಸಬೇಕು ಎಂದು ಪೊಲೀಸರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು.

ದೇಶಕ್ಕೆ ಮುಜುಗರ ಉಂಟುಮಾಡುವ ಟ್ರ್ಯಾಕ್ಟರ್ ಮೆರವಣಿಗೆಗೆ ಅವಕಾಶ ನೀಡಬೇಡಿ: ಸುಪ್ರೀಂಗೆ ದೆಹಲಿ ಪೊಲೀಸರ ಮನವಿ