ಆಸ್ತಿ ವಿವರವನ್ನೇ ಸಲ್ಲಿಸದ ಪ್ರಜಾಪ್ರತಿನಿಧಿಗಳು: MLA, MLC ಮಾತ್ರ ಅಲ್ಲ ಸಚಿವರು ಇದ್ದಾರೆ..

ಆಸ್ತಿ ವಿವರವನ್ನೇ ಸಲ್ಲಿಸದ ಪ್ರಜಾಪ್ರತಿನಿಧಿಗಳು: MLA, MLC ಮಾತ್ರ ಅಲ್ಲ ಸಚಿವರು ಇದ್ದಾರೆ..

ಜನಪ್ರತಿನಿಧಿಗಳು ಚುನಾವಣೆಗೂ ಮೊದಲು ಬಣ್ಣಬಣ್ಣದ ಆಶ್ವಾಸನೆಗಳನ್ನ ಕೊಡ್ತಾರೆ. ಮತದಾನಕ್ಕೂ ಮುನ್ನ ಮತದಾರರನ್ನ ಇಂದ್ರ.. ಚಂದ್ರ ಅಂತಾ ಅಟ್ಟಕ್ಕೇರಿಸ್ತಾರೆ. ಚುನಾವಣೆ ಮುಗಿದ ಮೇಲೆ ಮತದಾರರನ್ನ ಮರೆಯೋ ಜೊತೆಗೆ ತಮ್ಮ ಕರ್ತವ್ಯವನ್ನೂ ಮರೀತಾರೆ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.

ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ, ಚುನಾವಣೆಗೆ ಸ್ಪರ್ಧಿಸೋರು ತಮ್ಮ ಆಸ್ತಿಯ ವಿವರಗಳನ್ನ ಆಯೋಗಕ್ಕೆ ಸಲ್ಲಿಸಬೇಕು. ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿ ವರ್ಷ ಜೂನ್ 30ರೊಳಗೆ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರಗಳನ್ನ ಸಲ್ಲಿಸಬೇಕು ಅಂತಾ ಕಾನೂನು ಹೇಳುತ್ತೆ. ಆದ್ರೆ, ಇದನ್ನ ನಮ್ಮ ಜನಪ್ರತಿನಿಧಿಗಳು ಪಾಲಿಸ್ತಾರಾ ಅಂತಾ ಏನಾದ್ರೂ ಕೇಳಿದ್ರೆ.. ಇಲ್ಲ ಅಂತಲೇ ಹೇಳಬೇಕು. ಯಾಕಂದ್ರೆ, ರಾಜ್ಯದ 73 ಶಾಸಕರು, 44 ವಿಧಾನ ಪರಿಷತ್ ಸದಸ್ಯರು ನವೆಂಬರ್ ಕಳೆಯುತ್ತಾ ಬಂದ್ರೂ ಇನ್ನೂ ಆಸ್ತಿ ವಿವರ ಸಲ್ಲಿಸಿಲ್ಲ. ಪದೇಪದೆ ನೋಟಿಸ್ ಕೊಟ್ರೂ.. ನೆನಪಿನೋಲೆಗಳನ್ನ ಕಳಿಸಿದ್ರೂ ಇದುವರೆಗೆ ಆಸ್ತಿ ವಿವರ ಸಲ್ಲಿಸಿಲ್ಲ.

ಕರ್ತವ್ಯ ಮರೆತ 100ಕ್ಕೂ ಹೆಚ್ಚು ಶಾಸಕರು, ಎಂಎಲ್​ಸಿಗಳು..!
ಲೋಕಾಯುಕ್ತ ಕಾಯ್ದೆ ಪ್ರಕಾರ ಪ್ರತಿ ವರ್ಷ ಜೂನ್ 30 ರ ಒಳಗೆ ಎಲ್ಲ ಶಾಸಕರು, ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನ ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಆದ್ರೆ, ರಾಜ್ಯದ ಬರೋಬ್ಬರಿ 73 ಶಾಸಕರು, 44 ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ. ಪದೇಪದೆ ನೊಟೀಸ್ ಕೊಟ್ಟು ಲೋಕಾಯುಕ್ತ ಸುಸ್ತಾಗಿ ಹೋಗಿದೆ.

ಆದ್ರೂ, 117 ಮಂದಿ ಶಾಸಕರು, ಎಂಎಲ್​ಸಿಗಳು ಇದುವರೆಗೆ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ. ಇವರಲ್ಲಿ ಹಲವು ಸಚಿವರು ಸೇರಿದ್ದಾರೆ ಅಂದ್ರೆ ನಂಬಲೇಬೇಕು. ಇಷ್ಟಕ್ಕೂ ಯಾವ ಸಚಿವರು ಇದುವರೆಗೆ ಆಸ್ತಿ ವಿವರ ಸಲ್ಲಿಸಿಲ್ಲ ಅನ್ನೋದನ್ನ ನೋಡೋದಾದ್ರೆ,

ಆಸ್ತಿ ವಿವರ ಸಲ್ಲಿಸದ ಆಡಳಿತ ಪಕ್ಷದವರು..
ಬಿ.ಸಿ.ಪಾಟೀಲ್
ಬಿ.ಶ್ರೀರಾಮುಲು
ಶ್ರೀಮಂತ ಪಾಟೀಲ್
ಕೋಟ ಶ್ರೀನಿವಾಸ ಪೂಜಾರಿ
ಹೆಚ್.ನಾಗೇಶ್
ಎಸ್.ಟಿ.ಸೋಮಶೇಖರ್
ಕೆ.ಗೋಪಾಲಯ್ಯ

ಕೇವಲ ಆಡಳಿತ ಪಕ್ಷದವರು ಮಾತ್ರವೇ ಅಲ್ಲ, ಪ್ರತಿಪಕ್ಷ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಸಹ ಇದುವರೆಗೆ ಆಸ್ತಿ ವಿವರ ಸಲ್ಲಿಸಿಲ್ಲ. ಅದ್ರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇನ್ನೂ ಆಸ್ತಿ ವಿವರ ಸಲ್ಲಿಸಿಲ್ಲ ಅಂದ್ರೆ, ನಂಬಲೇಬೇಕು. ಇಷ್ಟಕ್ಕೂ ಪ್ರತಿಪಕ್ಷಗಳ ಯಾವ ಪ್ರಮುಖರು ಆಸ್ತಿ ವಿವರ ಸಲ್ಲಿಸಿಲ್ಲ ಅಂತಾ ನೋಡೋದಾದ್ರೆ,

ಆಸ್ತಿ ವಿವರ ಸಲ್ಲಿಸದ ವಿರೋದ ಪಕ್ಷದವರು..
ಡಿ.ಕೆ.ಶಿವಕುಮಾರ್
ಜಮೀರ್ ಅಹಮದ್ ಖಾನ್
ಯು.ಟಿ.ಖಾದರ್
ಎನ್.ಎ.ಹ್ಯಾರಿಸ್
ರಾಮಲಿಂಗಾ ರೆಡ್ಡಿ
ಸೌಮ್ಯಾ ರೆಡ್ಡಿ

ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸದ ಬಗ್ಗೆ ಸಾಮಾಜಿಕ ಹೋರಾಟಗಾರರು ಕೆಂಡ ಕಾರುತ್ತಿದ್ದು, ಲೋಕಾಯುಕ್ತವನ್ನ ಹಲ್ಲಿಲ್ಲದ ಹಾವಿನಂತೆ ಮಾಡಿದ್ದೇ ಇದಕ್ಕೆಲ್ಲ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಆಸ್ತಿ ವಿವರ ಸಲ್ಲಿಸಬೇಕು. ಬಳಿಕ ತಮ್ಮನ್ನು ಆರಿಸಿ ಕಳಿಸಿದ ಜನರಲ್ಲಿ ವಿಶ್ವಾಸ ಮೂಡಿಸಲು, ಯಾವುದೇ ಭ್ರಷ್ಟಾಚಾರ ನಡೆಸಿಲ್ಲ ಅನ್ನೋದನ್ನು ಸಾಬೀತು ಪಡಿಸಲು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಕೂಡ. ಆದ್ರೆ ಆಡಳಿತದಲ್ಲಿ ಪಾರದರ್ಶಕತೆ ಅನ್ನೋದೇ ಮಂಗ ಮಾಯವಾಗ್ತಿದ್ದು, ತಮ್ಮ ಆಸ್ತಿ ವಿವರಗಳನ್ನು ಬಿಚ್ಚಿಡುವುದಕ್ಕಿಂತಾ, ಬಚ್ಚಿಡುವುದಕ್ಕೆ ಶಾಸಕರು ಹೆಚ್ಚು ಆಸಕ್ತಿ ತೋರಿಸ್ತಾದ್ದಾರಾ ಅನ್ನೋ ಪ್ರಶ್ನೆ ಈಗ ಎದುರಾಗಿದೆ.

ಇದನ್ನೂ ಓದಿ: ಇನ್ಮುಂದೆ ಜಿ.ಪಂ ಸದಸ್ಯರೂ ಆಸ್ತಿ ಘೋಷಿಸಲೇಬೇಕು