ಭುವಿಗಿಳಿದ ದೇವರಲೋಕ..! ಪ್ರವಾಸಿಗರ ಹಾಟ್ ಸ್ಪಾಟ್ ಆಯ್ತು ಭೂ ಲೋಕದ ಸ್ವರ್ಗ..!

  • TV9 Web Team
  • Published On - 11:21 AM, 23 Oct 2020
ಭುವಿಗಿಳಿದ ದೇವರಲೋಕ..!  ಪ್ರವಾಸಿಗರ ಹಾಟ್ ಸ್ಪಾಟ್ ಆಯ್ತು ಭೂ ಲೋಕದ ಸ್ವರ್ಗ..!

ಚಿಕ್ಕಮಗಳೂರು: ಪ್ರಕೃತಿಯನ್ನ ಆಸ್ವಾದಿಸಲು ಯಾವುದೋ ಪರದೇಶಕ್ಕೆ ಹೋಗಬೇಕಾಗಿಲ್ಲ. ನಮ್ಮ ದೇಶ, ರಾಜ್ಯದಲ್ಲಿರೋ ಸ್ಥಳಗಳನ್ನೇ ಸರಿಯಾಗಿ ನೋಡಿದ್ರೆ ಎಂತೆಂಥ ಬ್ಯೂಟಿಫುಲ್ ಪ್ಲೇಸ್​ಗಳು ಅನಾವರಣಗೊಳ್ಳುತ್ತೆ. ಕಾಫಿನಾಡಲ್ಲಿ ಬರೋ ರಮಣೀಯ ಸ್ಥಳವೊಂದು ನಿಮ್ಮನ್ನ ಮಂತ್ರಮುಗ್ಥರನ್ನಾಗಿಸುತ್ತೆ . ಸಾಕ್ಷಾತ್ ದೇವಾನುದೇವತೆಗಳೇ ಅಲ್ಲಿ ವಾಸವಾಗಿದ್ದಾರಾ..? ಇದೇನು ಸ್ವರ್ಗವಾ.? ಅಂತಾ ಅನಿಸುತ್ತದೆ..

ಯೆಸ್, ಅದು ದೇವರಮನೆಯೇ..! ಭೂ ಲೋಕದ ಸ್ವರ್ಗವೇ..!
ಯೆಸ್, ಅದು ದೇವರಮನೆಯೇ..! ಭೂ ಲೋಕದ ಸ್ವರ್ಗವೇ..! ಇಲ್ಲಿ ಮೋಡಗಳು ಕಣ್ಣಾಮುಚ್ಚಾಲೆ ಆಡ್ತಾವೆ..! ಸುಯ್ ಅಂತಾ ಬೀಸೋ ತಂಗಾಳಿ ಮನಸ್ಸಿಗೆ ಹಿತವನ್ನ ನೀಡುತ್ತೆ..! ದೂರದಲ್ಲಿ ಕಾಣೋ ಝರಿಗಳ ನೋಟ ನಯನ ಮನೋಹರ!

ಮೋಡಗಳ ಮಧ್ಯೆ ಸಾಗೋ ಮಂಜಿನಾಟವಂತೂ ಕಣ್ಣಿಗೆ ಹಬ್ಬ..!! ದೇವರೇ ಸೃಷ್ಟಿ ಮಾಡಿದಂತಿರೋ ಈ ಸುಂದರ ಲೋಕದ ಹೆಸರೇ ದೇವರಮನೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ, ನಿಜಕ್ಕೂ ಭೂ ಲೋಕದ ಸ್ವರ್ಗವಾಗಿ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತದೆ. ಸಮುದ್ರಮಟ್ಟದಿಂದ 2,000 ಅಡಿ ಎತ್ತರದ ದೇವರಮನೆ ಗುಡ್ಡ ಪ್ರಕೃತಿಯ ಸೌಂದರ್ಯವನ್ನೆಲ್ಲಾ ತಾನೇ ಹಿಡಿದುಕೊಂಡಂತೆ ಭಾಸವಾಗುತ್ತೆ.

ಪೋಟೋಶೂಟ್ ಗೆ ಹೇಳಿಮಾಡಿಸಿದ ಸ್ಪಾಟ್..!
ದೇವರಮನೆ ಗುಡ್ಡದ ತುದಿಯಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದ್ರೆ ವಾಹ್.. ಅದ್ಭುತ.. ಅನ್ನೋ ಉದ್ಘಾರ ಪ್ರಕೃತಿ ಪ್ರಿಯರ ಬಾಯಿಂದ ಹೊರಹೊಮ್ಮುತ್ತೆ. ರಿಯಲಿ, ದೇವರಮನೆಯ ಅಂದಚೆಂದಕ್ಕೆ ಮನಸೋಲದವರೇ ಇಲ್ಲ.. ಟ್ರಕ್ಕಿಂಗ್ ಪ್ರಿಯರಿಗಂತೂ ಹೇಳಿ ಮಾಡಿಸಿದ ಜಾಗ. ಪ್ರವಾಸಿಗರು, ಚಾರಣ ಪ್ರಿಯರು ಆಗ್ಗಿಂದಾಗ್ಗೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ರಮಿಸಿ ಹೋಗ್ತಾರೆ.

ಮೈ ಕೊರೈಸುವ ಚಳಿಯಲಿ, ಮಂಜಿನ ಮಧ್ಯೆದಲ್ಲಿ ಸಾಗೋ ಪಯಣ ನಿಜಕ್ಕೂ ರೋಮಾಂಚನ. ಇನ್ನೂ ಮಂಜಿನಾಟದ ಮಧ್ಯೆ ಫ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳೋದಂತೂ ನಿಜಕ್ಕೂ ಅವಿಸ್ಮರಣೀಯ ಕ್ಷಣವೇ ಸರಿ. ಹಾಗಾಗೀ ಎಲ್ಲೆಡೆಯಿಂದಲೂ ಕಪಲ್ಸ್ ಗಳು ದೇವರಮನೆಗೆ ಬಂದು ಈ ರಮಣೀಯ ಸ್ಥಳದಲ್ಲಿ ಪೋಟೋ ಶೂಟ್​ಗೆ ನಗೆ ಬೀರುತ್ತಾರೆ.


ದೇವರಮನೆಯಲ್ಲಿ ನೆಲೆನಿಂತಿರುವ ಕಾಲಭೈರವ.!

ದೇವರಮನೆಯಲ್ಲಿ ಐತಿಹಾಸಿಕ ಕಾಲಭೈರೇಶ್ವರ ದೇವಾಲಯದವಿದೆ. ಲಕ್ಷಾಂತರ ಜನರ ಮನೆದೇವ, ಕುಲದೈವ ಆಗಿರೋ ಕಾಲಭೈರವನ ಸನ್ನಿಧಿಯಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತೆ. ಅಲ್ಲದೇ ವರ್ಷಕೊಮ್ಮೆ ಎಲ್ಲಾ ಭಕ್ತರು ಒಟ್ಟಾಗಿ ದೇವರ ಪೂಜಾ ಕೈಂಕರ್ಯವನ್ನ ನಡೆಸಿಕೊಂಡು ಕಾಲಭೈರವನಿಗೆ ನಮಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಟೂರಿಸ್ಟ್ ಹಾಟ್ ಸ್ಪಾಟ್ ಆಗಿ ಬದಲಾಗಿರೋ ದೇವರಮನೆ ಮೂಲತಃ ಭಕ್ತಿಯ ಕೇಂದ್ರ ಅನ್ನೋದನ್ನ ಪ್ರವಾಸಿಗರು ಮರೆಯಬಾರದು.

ಲಕ್ಷಾಂತರ ಮಂದಿಯ ಭಕ್ತಿಯ ಆರಾಧ್ಯ ಸ್ಥಳದಲ್ಲಿ, ದೇವರಮನೆಯ ನೈರ್ಮಲ್ಯಕ್ಕೆ ಮೋಜು ಮಸ್ತಿಯ ನೆಪದಲ್ಲಿ ಧಕ್ಕೆ ತಂದ್ರೆ ತಕ್ಕ ಶಿಕ್ಷೆ ಕಟ್ಟಿಟ್ಟ ಬುತ್ತಿ. ಕೆಲ ಪ್ರವಾಸಿಗರು ಎಣ್ಣೆ ಹೊಡೆಯೋ ತಾಣವಾಗಿಯೋ, ಪ್ಲಾಸ್ಟಿಕ್ ಕಸಗಳನ್ನ ಬಿಸಾಡೋ ಜಾಗವಾಗಿಯೋ ಮಾಡಿಕೊಂಡು ಅತಿರೇಕವಾಗಿ ವರ್ತನೆ ತೋರಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಮೋಡಗಳ ಮಧ್ಯೆ ಸಾಗೋ ಮಂಜಿನಾಟ ನಯನ ಮನೋಹರ..!
ಮೋಡಗಳ ಮಧ್ಯೆ ಸಾಗೋ ಮಂಜಿನ ದೃಶ್ಯವನ್ನ ನೋಡೋದೇ ಕಣ್ಣಿಗೆ ಹಬ್ಬ.! ಹಾಗೆಯೇ ಚಲಿಸುತ್ತಿರೋ ಮಂಜನ್ನು ಕೈಯಲ್ಲಿ ಕ್ಯಾಚ್ ಹಾಕೊಂಡ್ ಬಿಡೋಣ ಅಂತನ್ನಿಸುತ್ತೆ. ಸುಯ್ ಅಂತಾ ಬೀಸೋ ತಂಗಾಳಿ ಜೊತೆಗೆ ಗಿರಿಶಿಖರಗಳ ಮಧ್ಯೆ ಮಂಜಿನಾಟ ನಿಜಕ್ಕೂ ಮನಸ್ಸಿಗೆ ಉಲ್ಲಾಸವನ್ನ ನೀಡುತ್ತೆ. ಇನ್ನು ಕರಾವಳಿ, ಸಕಲೇಶಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನ ದೇವರಮನೆ ಗುಡ್ಡದಲ್ಲೇ ನಿಂತು ವೀಕ್ಷಿಸಬಹುದು. ಇಲ್ಲಿ ವಾರದ ಎಲ್ಲ ದಿನವೂ ಚಾರಣ ಪ್ರಿಯರು ಬರ್ತಾರೆ.

ಬೆಟ್ಟ-ಗುಡ್ಡಗಳನ್ನ ಹತ್ತಿ, ಕಾಡು-ಮೇಡು ಅಲೆದು ಟ್ರಕ್ಕಿಂಗ್ ನಡೆಸುತ್ತಾ ಸಖತ್ ಎಂಜಾಯ್ ಮಾಡ್ತಾರೆ. ಇನ್ನು ಇಲ್ಲಿಗೆ ಟ್ರಕಿಂಗ್ಗೆ ಬರೋರು ಮಲೆನಾಡಿನ ಸೌಂದರ್ಯವನ್ನ ಹಾಡಿ, ಹೊಗಳಿ, ಕಣ್ತುಂಬಿಕೊಂಡು ಹೋಗ್ತಾರೆ. ದಾರಿಮಧ್ಯದ ಸುತ್ತಮುತ್ತಲಿರೋ ಹಚ್ಚಹಸಿರಿನ ಬೆಟ್ಟ-ಗುಡ್ಡದ ಸೌಂದರ್ಯವನ್ನ ಸವಿಯುತ್ತಾ ಕಾಂಕ್ರೀಟ್ ಕಾಡಿನಿಂದ ಬರೋ ಸಾವಿರಾರು ಪ್ರವಾಸಿಗರು ಈ ಹಸಿರು ಕಾನನದಲ್ಲಿ ಒಂದಿಷ್ಟು ರಿಲ್ಯಾಕ್ಸ್ ಆಗ್ತಾರೆ. ಗುಡ್ಡದ ಮೇಲೇರಿ ಸೆಲ್ಫಿಗೆ ಫೋಸ್ ನೀಡುತ್ತಾ, ಕುಣಿದು ಕುಪ್ಪಳಿಸೋ ಪ್ರವಾಸಿಗರ ಸಂತಸಕ್ಕೆ ಪಾರವೇ ಇರಲ್ಲ.

ಭೂಲೋಕದ ನೈಜ ಸ್ವರ್ಗ ದೇವರಮನೆ..!
ಭೂ ಲೋಕದ ಸ್ವರ್ಗದಂತಿರೋ ದೇವರಮನೆಗೆ ವರ್ಷದ ಮೂನ್ನೂರೈವತ್ತು ದಿನವೂ ಪ್ರವಾಸಿಗರು ಆಗಮಿಸಿ ರಮಣೀಯ ದೃಶ್ಯವನ್ನ ಕಣ್ತುಂಬಿಕೊಳ್ಳುತ್ತಾರೆ. ಅಕ್ಟೋಬರ್ ಮುಗಿಯೋಕೇ ಬಂದ್ರೂ ಕೂಡ ಮಳೆಯ ಸಿಂಚನದಿಂದ ದೇವರಮನೆಯ ಗಿರಿ ಶಿಖರಗಳು ಮತ್ತಷ್ಟು ರಂಗು ಪಡೆದಿದ್ದು, ಇಲ್ಲಿ ಮಂಜಿನಾಟವನ್ನ ನೋಡಲು ಎರಡು ಕಣ್ಣು ಸಾಲದು.

ಸೌಂದರ್ಯವನ್ನೇ ಹೊದ್ದು ಮಲಗಿರೋ ದೇವರಮನೆ ಗುಡ್ಡವನ್ನ ವೀಕ್ಷಿಸಲು ದಿನಂಪ್ರತಿ ನೂರಾರು ಪ್ರವಾಸಿಗರು ಇತ್ತ ಹೆಜ್ಜೆ ಹಾಕುತ್ತಾ ಇದ್ದಾರೆ. ಈ ಮನಮೋಹಕ ದೃಶ್ಯ ವೈಭವವನ್ನ ನೀವೂ ಕೂಡ ಎಂಜಾಯ್ ಮಾಡ್ಬೇಕಂದ್ರೆ ಮಿಸ್ ಮಾಡ್ದೇ ದೇವರಮನೆ ಕಡೆಗೆ ಬನ್ನಿ.
-ಪ್ರಶಾಂತ್