ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಗಮನ ನೀಡಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಪ್

ನಗರ ಸೌಂದರೀಕರಣದಿಂದ ಹೂಡಿಕೆದಾರರನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಘನ ತ್ಯಾಜ್ಯಗಳ ಮತ್ತು ಕಸ ನಿರ್ವಹಣೆಗೆ ಏಕೀಕೃತ ನಿಯಂತ್ರಣ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಬೇಕು. ತೆರಿಗೆ ಬಾಕಿ ವಸೂಲಾತಿಗೆ ಮತ್ತು ಸಂಗ್ರಹಕ್ಕೆ ಗಮನ ನೀಡುವಂತೆ ಡಿ. ರಂದೀಪ್ ತಿಳಿಸಿದ್ದಾರೆ.

  • ಅಶೋಕ ಯಡಳ್ಳಿ
  • Published On - 6:33 AM, 10 Jan 2021
ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಗಮನ ನೀಡಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಪ್
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಪ್

ವಿಜಯಪುರ: ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ನಗರದ ಮುಖ್ಯ ರಸ್ತೆಗಳ ಸುಧಾರಣೆ ಹಾಗೂ ನಗರ ಸೌಂದರೀಕರಣಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ವಿಶೇಷ ಗಮನ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಿ. ರಂದೀಪ್ ಸೂಚಿಸಿದ್ದು, ಅಭಿವೃದ್ಧಿ, ಪ್ರವಾಹ ಮತ್ತು ಮಳೆ ಹಾನಿ ಕುರಿತು ಪರಿಶೀಲನೆ ಹಾಗೂ ಕೋವಿಡ್-19 ಕ್ರಮಗಳ ಕುರಿತು ಸಭೆ ನಡೆಸಿದರು.

ದೆಹಲಿ ನಂತರ ಅತೀ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಬೇಕು. ವಿಶೇಷವಾಗಿ ಮುಖ್ಯ ರಸ್ತೆಗಳ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದು,ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಈ ನಗರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳ್ಳಬೇಕಾಗಿದೆ ಎಂದು ಡಿ. ರಂದೀಪ್ ತಿಳಿಸಿದರು.

ಕ್ರಿಯಾ ಯೋಜನೆ ಅನ್ವಯ ಅಥಣಿ, ಸೋಲಾಪೂರ, ಬಾಗಲಕೋಟ ಮತ್ತು ಸಿಂದಗಿ ಕಡೆಗೆ ಹೋಗುವಂತಹ ರಸ್ತೆಗಳು ಆಂತರಿಕ ರಸ್ತೆಗಳಿಗೆ ಸಂಪರ್ಕ ಹೊಂದಿದ್ದು, ಇಂತಹ ರಸ್ತೆಗಳ ಸುಧಾರಣೆಗೆ ಗಮನ ನೀಡಬೇಕು. ಅವಶ್ಯಕ ಅನುದಾನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಅದರಲ್ಲಿಯೂ ಬೃಹತ್ ಪ್ರಮಾಣದ ಮೂಲಸೌಕರ್ಯ ಕಲ್ಪಿಸುವಂತಹ ಕಾರ್ಯಗಳ ಅಡಿಯಲ್ಲಿ ಪ್ಯಾಕೇಜ್ ರೂಪದ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಡಿ. ರಂದೀಪ್ ಹೇಳಿದ್ದಾರೆ.

ನಗರ ಸೌಕರ್ಯದ ಬಗ್ಗೆ ಚರ್ಚೆ ನಡೆಸುತ್ತಿರುವ ಚಿತ್ರಣ

ಸರ್ಕಾರಕ್ಕೆ ಮಹಾನಗರ ಪಾಲಿಕೆಯಿಂದ ಸಲ್ಲಿಸಲಾದ ಪ್ರಸ್ತಾವನೆಗಳ ಬಗ್ಗೆಯೂ ಗಮನಕ್ಕೆ ತರಲು  ಸೂಚಿಸಿದ್ದು, ಅದರಂತೆ ಐತಿಹಾಸಿಕ ಸ್ಮಾರಕಗಳ ವ್ಯಾಪ್ತಿಯಲ್ಲಿ ಅವಶ್ಯಕ ಮೂಲಸೌಲಭ್ಯಗಳನ್ನು ಕಲ್ಪಿಸುವ ಕುರಿತು ಪ್ರವಾಸೋದ್ಯಮ ಅಧಿಕಾರಿಗಳು ಕೂಡ ವಿಶೇಷ ರೀತಿಯಲ್ಲಿ ಚಿಂತನೆ ನಡೆಸಿದ್ದು, ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಹ ಸಲ್ಲಿಸಬೇಕು ಎಂದು ಡಿ. ರಂದೀಪ್ ತಿಳಿಸಿದ್ದಾರೆ.

ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಮೂಲಕ ಅನುದಾನಕ್ಕೆ ತಾಂತ್ರಿಕ ಅನುಮೋದನೆ ಪಡೆಯಬೇಕೆಂದು ತಿಳಿಸಿದರು. ನಗರದ ಸ್ವಚ್ಛತೆ, ವೈಯಕ್ತಿಕ ಶೌಚಾಲಯಗಳ ನಿರ್ವಹಣೆ, ಘನ ತ್ಯಾಜ್ಯಗಳ ನಿರ್ವಹಣೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳ ಮೂಲಕ ಸುಂದರ ನಗರ ರೂಪಿಸಲು ಸಾಧ್ಯವಿದ್ದು, ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆಗಳ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಧಿಕಾರಿಗಳಿಗೆ ಡಿ. ರಂದೀಪ್ ಸೂಚನೆ ನೀಡಿದರು.

ನಗರ ಸೌಂದರೀಕರಣದಿಂದ ಹೂಡಿಕೆದಾರರನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಘನ ತ್ಯಾಜ್ಯಗಳ ಮತ್ತು ಕಸ ನಿರ್ವಹಣೆಗೆ ಏಕೀಕೃತ ನಿಯಂತ್ರಣ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಬೇಕು. ತೆರಿಗೆ ಬಾಕಿ ವಸೂಲಾತಿಗೆ ಮತ್ತು ಸಂಗ್ರಹಕ್ಕೆ ಗಮನ ನೀಡುವಂತೆ ಡಿ. ರಂದೀಪ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಅರಣ್ಯ ಭೂಮಿ ಗುರುತಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದು, ಇಕೋ ಟೂರಿಸ್‍ಂ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಬೇಕು. ಅರಣ್ಯ ಅಧಿಕಾರಿಗಳು ಅರಣ್ಯೀಕರಣ ಮತ್ತು ಇಕೋ ಟೂರಿಸ್‍ಂ ಕುರಿತು ಪಿಪಿಟಿ ಮೂಲಕ ವರದಿ ಸಿದ್ಧಪಡಿಸಲು ಡಿ. ರಂದೀಪ್ ಸೂಚನೆ ನೀಡಿದ್ದಾರೆ.

ಇನ್ನು ವಿಜಯಪುರ ನಗರದ ಸಮೀಪ ಬುರಾಣಾಪೂರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಪ್ಯಾಕೆಜ್ ಒಂದರ ಕಾಮಗಾರಿಗೆ ಟೆಂಡರ್ ಏಜೆನ್ಸಿ ನಿಗದಿಯಾಗಿದ್ದು, ಪೂರ್ವ ಚಟುವಟಿಕೆಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಡಿ. ರಂದೀಪ್ ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಪ್

ಕ್ರೀಡಾ ಇಲಾಖೆ ವ್ಯಾಪ್ತಿಯ ಸೈಕಲಿಂಗ್ ವೆಲೋಡ್ರೋಮ್ ನಿರ್ಮಾಣ ಮಾಡಲು ವಿಳಂಬ ಮತ್ತು ಈ ಹಿಂದಿನ ಏಜೆನ್ಸಿ ಕಾಮಗಾರಿಗೆ ನಿರಾಕರಿಸುತ್ತಿರುವುದರಿಂದ ನಿಯಮಾವಳಿಯಂತೆ ಈ ಏಜೆನ್ಸಿಯನ್ನು ರದ್ದು ಪಡಿಸಿ, ಬಾಕಿ ಅನುದಾನ ವಸೂಲಾತಿ ಮಾಡಿ ನೂತನ ಟೆಂಡರ್ ಕರೆಯುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಕ್ರೀಡಾಧಿಕಾರಿಗಳಿಗೆ ಸೂಚಿಸಿದರು.

ಈ ಹಿಂದೆ ಬೇಸಿಗೆ ಕಾಲದಲ್ಲಿ ತೀವ್ರ ನೀರಿನ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲೆಯು ಕ್ರಮೇಣ ನೀರಿನ ಕೊರತೆಯಿಂದ ಹೊರಬರುತ್ತಿರುವುದಕ್ಕೆ ಡಿ. ರಂದೀಪ್ ಸಂತಸ ವ್ಯಕ್ತಪಡಿಸಿದರು. ಆ ಮೂಲಕ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದ ಪ್ರಸ್ತಾವನೆಗಳ ಬಗ್ಗೆ ತಮ್ಮ ಗಮನಕ್ಕೆ ತರುವಂತೆ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಕೋವಿಡ್ -19 ಡ್ರೈ ರನ್ ಪೂರ್ವಾಭ್ಯಾಸ, ಪ್ರವಾಹ ಹಾನಿ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಸ್ತೆ ನಿರ್ಮಾಣ ವಿರೋಧಿಸಿದ ಮಹಿಳೆಯರ ಮೇಲೆ JCB ಯಿಂದ ಮಣ್ಣು ಸುರಿಯುವ ಯತ್ನ, ಎಲ್ಲಿ?