ಕೊರೊನಾ ದಿಗ್ಬಂಧನ.. ಜೈಲಿನಂತಾಗಿರುವ ಮನೆಯೊಳಗೇ ಇಂದು ಮಕ್ಕಳ ದಿನಾಚರಣೆ!

ಕೊರೊನಾ ದಿಗ್ಬಂಧನ.. ಜೈಲಿನಂತಾಗಿರುವ ಮನೆಯೊಳಗೇ ಇಂದು ಮಕ್ಕಳ ದಿನಾಚರಣೆ!

ಬೆಳ್ಳಂಬೆಳಗ್ಗೆ ಬೇಗ ಎದ್ದು, ಶಾಸ್ತ್ರಕ್ಕೊಂದು ಸ್ನಾನ ಮಾಡಿ, ಗಡಿಬಿಡಿಯಲ್ಲೇ ಅಮ್ಮ ಮಾಡಿಟ್ಟ ತಿಂಡಿ ತಿಂದು, ಬಾಕಿ ಉಳಿದ ಹೋಂ ವರ್ಕ್ ಯಾವುದಾದರೂ ಕಡೇ ಕ್ಷಣದಲ್ಲಿ ನೆನಪಾದರೆ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಅತ್ತು ಕರೆದು, ಆ ಕ್ಷಣಕ್ಕೆ ತೋಚಿದ್ದನ್ನ ಗೀಚಿ, ಹೆಗಲಿಗೆ ಮಣಬಾರದ ಬ್ಯಾಗೇರಿಸಿಕೊಂಡು ಓಡುವ ಶಾಲಾ ಮಕ್ಕಳ ಬದುಕು ಆನ್ಲೈನ್ ಲೋಕಕ್ಕೆ ಶಿಫ್ಟ್ ಆಗಿ ಎಂಟು ತಿಂಗಳು ತುಂಬಿದೆ.

ಕೊರೊನಾ ಆದಷ್ಟು ಬೇಗ ತೊಲಗಲಿ, ಶಾಲೆ ಮತ್ತೆ ಶುರುವಾಗಲಿ!
ನಿತ್ಯವೂ ಶಾಲೆಗೆ ಹೋಗಿ ಬರುವ ದಾರಿಯುದ್ದಕ್ಕೂ ಹೊಸ ಅನುಭವಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದ, ಶಾಲೆಯಲ್ಲಿ ಶಿಕ್ಷಕರು, ಸ್ನೇಹಿತರೊಂದಿಗೆ ಆಟ ಪಾಠ ಹುಟ್ಟುಹಬ್ಬದ ಸಂಭ್ರಮ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಮಕ್ಕಳೀಗ ಕೊರೊನಾ ದೆಸೆಯಿಂದ ಒಂಟಿಯಾಗಿ ಮನೆಯಲ್ಲೇ ಕೂತು ಮೊಬೈಲ್, ಲ್ಯಾಪ್​ಟಾಪ್ ಪರದೆಯಲ್ಲೇ ಪಾಠ ಕೇಳುತ್ತಿದ್ದಾರೆ. ಒಂದರ್ಥದಲ್ಲಿ ಮಕ್ಕಳಿಗೀಗ ನಿತ್ಯವೂ ಭಾನುವಾರ! ಆದರೆ, ಮಕ್ಕಳು ಬೆಳೆಯಬೇಕಾದ ಬಗೆ ಇದಲ್ಲ. ಹೊರ ಪ್ರಪಂಚಕ್ಕೆ ತೆರೆದುಕೊಳ್ಳದೇ ಇದ್ದರೆ ಮಕ್ಕಳ ಮನಸ್ಸು ಅರಳುವುದು ಕಷ್ಟ. ಆಟ, ಪಾಠ, ಜಗಳ, ನಗು, ಕೀಟಲೆ, ತಲೆಹರಟೆಗಳಿದ್ದಾಗಲೇ ಮಕ್ಕಳು ಮಕ್ಕಳಾಗಿರಲು ಸಾಧ್ಯ. ಹಾಗಾಗಿಯೇ ಅನೇಕರು ಕೊರೊನಾ ಆದಷ್ಟು ಬೇಗ ತೊಲಗಲಿ, ಶಾಲೆ ಮತ್ತೆ ಶುರುವಾಗಲಿ ಎಂದು ಕಾತರದಿಂದ ಕಾಯುತ್ತಿದ್ದಾರೆ.

ನವೆಂಬರ್ ತಿಂಗಳು ಅಂದ್ರೆ ಮಕ್ಕಳ ತಿಂಗಳ..
ತುಸು ಭಾರದಿಂದಲೇ ಇದನ್ನ ಹೇಳಬೇಕಿದೆ

ಅದರಲ್ಲೂ ನವೆಂಬರ್ ತಿಂಗಳೆಂದರೆ ಮಕ್ಕಳಿಗೆ ವಿಶೇಷ ಸಂಭ್ರಮ. ದಸರಾ ರಜೆ ಮುಗಿಸಿ ಶಾಲೆಗೆ ಬರುತ್ತಿದ್ದಂತೆಯೇ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ದೀಪಾವಳಿ ಹೀಗೆ ಸಾಲು ಸಾಲು ಸಂಭ್ರಮಗಳು ಮಕ್ಕಳಿಗಾಗಿ ಕಾದು ಕುಳಿತಿರುತ್ತಿದ್ದವು. ನವೆಂಬರ್ ಹದಿನಾಲ್ಕರ ಮಕ್ಕಳ ದಿನಾಚರಣೆಯಂತೂ ಮಕ್ಕಳಿಗೆ ಅಚ್ಚುಮೆಚ್ಚಿನ ದಿನ.

ಅದೊಂದು ದಿನ ಶಾಲೆಯಲ್ಲಿ ಅವರದ್ದೇ ಕಾರುಬಾರು. ಬಣ್ಣಬಣ್ಣದ ಬಟ್ಟೆ ತೊಟ್ಟು, ಅವರೇ ಅತಿಥಿ, ಅಧ್ಯಕ್ಷರ ಸ್ಥಾನದಲ್ಲಿ ಕೂತು ಮೆರೆಯುವ ದಿನವದು. ಆದರೆ, ಈ ಬಾರಿ ಕೊರೊನಾ ಅದೆಲ್ಲಾ ಸಂಭ್ರಮಗಳನ್ನೂ ಮಕ್ಕಳಿಂದ ಕಿತ್ತುಕೊಂಡಿದೆ. ಈಗೇನಿದ್ದರೂ ಮೊಬೈಲ್, ಲ್ಯಾಪ್​ಟಾಪ್ ಮುಂದೆ ನಿಂತು ಕ್ಯಾಮೆರಾ ಆನ್ ಮಾಡಿಕೊಂಡು ಡ್ಯಾನ್ಸ್ ಮಾಡುವ, ಹಾಡು ಹೇಳುವ ಪರಿಸ್ಥಿತಿ.

ಆದರೆ ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶದ ಮಕ್ಕಳಿಗೆ..
ಈ ಬಾರಿ ಸಹಪಾಠಿಗಳ ಕೂಗು, ಚಪ್ಪಾಳೆಯ ಸದ್ದಿಲ್ಲದೇ ಬರೀ ಮ್ಯೂಟ್, ಅನ್​ಮ್ಯೂಟ್ ಸೂಚನೆಯಲ್ಲಿ ಮಕ್ಕಳ ದಿನಾಚರಣೆ ಕಳೆದು ಹೋಗಲಿದೆ. ವೇದಿಕೆ ಹೋಗಿ ಬಹುಮಾನ ಪಡೆಯುವ ಸಂಭ್ರಮ, ವಿಭಿನ್ನ ವೇಶ ತೊಟ್ಟು ಮಿಂಚುವ ಅವಕಾಶ ಎಲ್ಲವೂ ಆನ್ಲೈನ್​ಗಷ್ಟೇ ಸೀಮಿತವಾಗಲಿದೆ. ಪಟ್ಟಣದ ಮಕ್ಕಳಾದರೂ ಕಡೇಪಕ್ಷ ಆನ್ಲೈನ್ ನಲ್ಲಿ ಮಕ್ಕಳ ದಿನಾಚರಣೆ ಆಚರಿಸಬಹುದೆಂದು ಸಮಾಧಾನಪಟ್ಟುಕೊಳ್ಳಬಹುದು.

ಆದರೆ, ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆ ಅವಕಾಶವೂ ಇಲ್ಲದಿರುವುದು ಬೇಸರದ ಸಂಗತಿ. ಒಂದು ವೈರಾಣು ಜನರ ಜೀವನ ಶೈಲಿ, ಆರ್ಥಿಕ ಪರಿಸ್ಥಿತಿ, ಕಾರ್ಯವೈಖರಿಗಳೆಲ್ಲವನ್ನೂ ಬದಲಿಸಿತು ಮತ್ತು ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಹುಡುಕಿಕೊಂಡು ಚೇತರಿಸಿಕೊಳ್ಳುವುದನ್ನು ಜನರೂ ಕಂಡುಕೊಂಡರು. ಆದರೆ, ಮಕ್ಕಳು ಶಾಲೆಯಲ್ಲಿ ಕೂತು ಕಲಿಯುವ, ನಲಿಯುವ ಸಂಭ್ರಮಕ್ಕೆ ಆನ್ಲೈನ್ ಪರ್ಯಾಯವಾಗುವುದೇ?

ತಮ್ಮದೇ ದಿನಾಚರಣೆಯನ್ನು ಮನೆಯ ನಾಲ್ಕು ಗೋಡೆಯ ನಡುವೆ ಕೂತು ಆಚರಿಸಬೇಕಾದ ಮಕ್ಕಳ ಸಂಕಟವನ್ನು ಶಮನ ಮಾಡುವ ಮಾರ್ಗ ಸಿಕ್ಕೀತೇ? ಎಂಬುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ. ಕೊರೊನಾ ಬೇಗ ಮುಗಿಯಲಿ, ಮಕ್ಕಳಿಗೆ ಮತ್ತೆ ಅವರ ಖುಷಿಯ ಲೋಕ ಸಿಕ್ಕಲಿ, ಆನ್ಲೈನ್ ಬಿಟ್ಟು ಶಾಲೆಗೆ ಹೋಗುವಂತಾಗಲಿ ಎಂದು ಆಶಿಸುತ್ತಾ. ಎಲ್ಲಾ ಮಕ್ಕಳಿಗೂ, ಮಕ್ಕಳ ಮನಸ್ಸುಳ್ಳವರಿಗೂ ‘ಹ್ಯಾಪಿ ಚಿಲ್ಡ್ರನ್ಸ್ ಡೇ’.

ಈ ಸಲ ನಮಗೆ ಆನ್ಲೈನ್ ಅಲ್ಲೇ ಮಕ್ಕಳ ದಿನಾಚರಣೆ ಮಾಡ್ತಾ ಇದ್ದಾರೆ. ಒಂದಷ್ಟು ಚಿತ್ರಗಳನ್ನ ತೋರಿಸಿ ಗುರುತಿಸೋದು, ಹಾಡು, ಜೋಕ್ಸ್ ಅಂತೆಲ್ಲಾ ಇದೆ. ಆದ್ರೆ, ಅದು ಶಾಲೆಯಲ್ಲಿ ಫ್ರೆಂಡ್ಸ್ ಜೊತೆ ಸೇರಿ ಆಚರಿಸುವ ಖುಷಿ ಕೊಡೋದಿಲ್ಲ. ನಮಗೆ ಆನ್ಲೈನ್​ಗಿಂತ ಶಾಲೆಯೇ ಬೆಸ್ಟ್. ಕೊರೊನಾ ಬೇಗ ಕಡಿಮೆಯಾಗಲಿ ಅಂತ ಕಾಯ್ತಾ ಇದ್ದೇವೆ.
-ಜ್ಞಾನ, 9ನೇ ತರಗತಿ ವಿದ್ಯಾರ್ಥಿ