ಕರ್ನಾಟಕ ಬಜೆಟ್ 2021: ಗ್ರಾಹಕರು ಖರೀದಿಸುವ ಮೊತ್ತದ ಶೇ 90ರಷ್ಟು ಹಣ ರೈತರ ಕೈ ಸೇರಲಿ- RS ದೇಶಪಾಂಡೆ

ಕರ್ನಾಟಕ ಬಜೆಟ್ 2021ರಲ್ಲಿ ಈ ಸಲದ ಲೆಕ್ಕಾಚಾರ ಹೇಗಿರಬಹುದು ಮತ್ತು ಯಾವ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂಬ ಬಗ್ಗೆ ಇನ್​​ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ನಿವೃತ್ತ ನಿರ್ದೇಶಕರಾದ ಆರ್.ಎಸ್. ದೇಶಪಾಂಡೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕರ್ನಾಟಕ ಬಜೆಟ್ 2021: ಗ್ರಾಹಕರು ಖರೀದಿಸುವ ಮೊತ್ತದ ಶೇ 90ರಷ್ಟು ಹಣ ರೈತರ ಕೈ ಸೇರಲಿ- RS ದೇಶಪಾಂಡೆ
ಆರ್.ಎಸ್.ದೇಶಪಾಂಡೆ
Follow us
Srinivas Mata
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 04, 2021 | 8:10 PM

‘ಈ ಬಾರಿ ರಾಜ್ಯ ಬಜೆಟ್​ನಲ್ಲಿ ತೆರಿಗೆಯೇತರ ರಾಜಸ್ವ (ನಾನ್ ಟ್ಯಾಕ್ಸ್ ರೆವೆನ್ಯೂ) ಸಂಗ್ರಹಕ್ಕೆ ಒತ್ತು ನೀಡಬಹುದು. ಮನರಂಜನಾ ತೆರಿಗೆ, ಅಬಕಾರಿ ತೆರಿಗೆ ಹೆಚ್ಚಾಗಲಿದೆ. ಈ ಬಾರಿ ಬಹಳ ಕಠಿಣ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆ. ಇದಕ್ಕೆ ಕೊರೊನಾ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದದ್ದಿಲ್ಲ’ ಎಂದರು ISEC (ಇನ್​​ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್) ನಿವೃತ್ತ ನಿರ್ದೇಶಕರಾದ ಆರ್.ಎಸ್. ದೇಶಪಾಂಡೆ. ಸದ್ಯದ ಸ್ಥಿತಿಯಲ್ಲಿ 2021ರ ಕರ್ನಾಟಕ ಬಜೆಟ್ ನಿರೀಕ್ಷೆಗಳು ಹೇಗಿರಬಹುದು ಎಂದು ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ನಿಮ್ಮೆದುರಿಗೆ ಇದೆ.

ಜನರ ಕೈಯಲ್ಲಿ ಸರ್ಕಾರಗಳು ಹಣ ನೀಡಬೇಕು ಎಂದು ನೊಬೆಲ್ ಬಹುಮಾನ ಬಂದಿರುವ ಅಭಿಜಿತ್ ಬ್ಯಾನರ್ಜಿಯಂಥವರು ವಾದಿಸುತ್ತಾರೆ. ಆದರೆ ಇಂಥ ಪ್ರಯತ್ನ ಮೂರ್ಖತನದ್ದು ಅಂತ ನನಗೆ ಅನಿಸುತ್ತೆ. ಜನರ ಖರ್ಚಿನ ಆದ್ಯತೆಗಳು ಹೀಗೇ ಎಂದು ಹೇಳಲು ಸಾಧ್ಯವಿಲ್ಲ. ಆ ಹಣ ಯಾವುದಕ್ಕೆ ಬೇಕಾದರೂ ಖರ್ಚಾಗಬಹುದು. ಸರ್ಕಾರ ನಿರೀಕ್ಷೆ ಮಾಡಿದಂಥ ಹಾದಿಯಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ ಎಂದೇನಿಲ್ಲ. ಇನ್ನು ಈ ಸಲ ಕರ್ನಾಟಕ ಬಜೆಟ್​ನಲ್ಲಿ ವಿತ್ತೀಯ ಕೊರತೆ ಜಾಸ್ತಿ ಆಗಲಿದೆ. ಸಣ್ಣ ಕೈಗಾರಿಕೆಗಳಿಗೆ ಭೂಮಿ, ವಿದ್ಯುಚ್ಛಕ್ತಿ ಸುಲಭವಾಗಿ ದೊರೆಯಲು ಬೇಕಾದ ನಿಯಮಗಳನ್ನು ರೂಪಿಸಬಹುದು. ಖಾಸಗಿ ಶಾಲೆಗಳ ಆರಂಭಕ್ಕೆ ಹೆಚ್ಚಿನ ಅನುಮತಿ ಹಾಗೂ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ಸಿಗಬಹುದು.

ಗಿಳಿಪಾಠದಂತೆ ಆಕ್ಷೇಪಗಳು ಒಪ್ಪಿಸುತ್ತಿದ್ದಾರೆ ಈಗ ಕೇಂದ್ರ ಸರ್ಕಾರ ತರಲು ಹೊರಟಿರುವ ಕೆಲವು ಕೃಷಿ ಕಾಯ್ದೆ ತಿದ್ದುಪಡಿಗಳಿಂದ ಬಹಳ ದೊಡ್ಡ ಸಮಸ್ಯೆಗಳಾಗಬಹುದು ಎನ್ನಲಾಗುತ್ತಿದೆ. ಈ ಹಿಂದೆ ವಿಶ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಾಗಲೂ ಏನೋ ಸಮಸ್ಯೆ ಆಗಿಬಿಡುತ್ತದೆ ಎಂಬಂತೆ ಬಿಂಬಿಸಲಾಯಿತು. ಅದಾಗಿ ವರ್ಷಗಳೇ ಕಳೆದವು. ಯಾವ ಕೋಲಾಹಲವೂ ಆಗಲಿಲ್ಲ. ಅವತ್ತಿಗೆ ಗಾಬರಿ ವ್ಯಕ್ತಪಡಿಸಿದ ರೀತಿಯಲ್ಲಿ ಯಾರ ಬಳಿಯೂ ಆಹಾರ ಪದಾರ್ಥಕ್ಕೆ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ. ಬ್ಯಾಂಕ್​ಗಳಿಗೆ ಕಂಪ್ಯೂಟರ್ ಬಂದಾಗಲೂ ಇದೇ ರೀತಿ ಆತಂಕ ಕೇಳಿಬಂತು. ಏನೂ ಸಮಸ್ಯೆ ಕಾಣಿಸಲಿಲ್ಲ. ನಿಮಗೆ ಗೊತ್ತಿರಲಿ, ಎಪಿಎಂಸಿಯಲ್ಲಿ ಬಹಳ ಸಮಸ್ಯೆಗಳಿವೆ. ಅಂಬಾನಿ, ಅದಾನಿಯವರು ಎಲ್ಲ ರೈತರಿಗೂ ಮೋಸ ಮಾಡಿಬಿಡುತ್ತಾರೆ ಎಂಬುದೆಲ್ಲ ಗಿಳಿಪಾಠ ಒಪ್ಪಿಸಿದಂತೆ ಎಲ್ಲರೂ ಮಾಡುತ್ತಿರುವ ಆರೋಪ ಮಾತ್ರ. ಇದರಲ್ಲಿ ನಿಜವಿಲ್ಲ. ಅವರಿಗೆ ಮಾಡುವುದಕ್ಕೆ ದೇಶ- ವಿದೇಶಗಳಲ್ಲಿ ದೊಡ್ಡ ದೊಡ್ಡ ಉದ್ಯಮಗಳಿವೆ. ಸರ್ಕಾರಗಳಿಗೆ ನಿಜವಾದ ಕಾಳಜಿ ಇದ್ದಲ್ಲಿ ಗ್ರಾಹಕರು ಖರೀದಿ ಮಾಡುವ ಮೊತ್ತದಲ್ಲಿ ಶೇ 90ರಷ್ಟು ರೈತರ ಕೈ ಸೇರುವಂತಾಗಬೇಕು. ಆಗ ಬದಲಾವಣೆ ಕಾಣಬಹುದು.

ಇನ್ನು ಸರ್ಕಾರವು ಆದ್ಯತೆಗಳು ಎಂದು ತೆಗೆದುಕೊಂಡು, ಬಜೆಟ್​​ನಲ್ಲಿ ಮಾಡುವುದಾಗಿದ್ದರೆ ನನ್ನ ಅನುಭವದಿಂದ ಒಂದಿಷ್ಟು ಸಲಹೆಗಳಿದ್ದು, ಅವುಗಳು ಹೀಗಿವೆ: * ಬರ ಪ್ರದೇಶಗಳಲ್ಲಿ ಹನಿ ನಿರಾವರಿ ವ್ಯವಸ್ಥೆ ಒದಗಿಸಬೇಕು. ಅಲ್ಲಿ ಸರ್ಕಾರದಿಂದ ಶೇ 100ರಷ್ಟು ಸಬ್ಸಿಡಿ ಒದಗಿಸಿ, ಯೋಜನೆ ಅನುಷ್ಠಾನವನ್ನು ಕೃಷಿ ಇಲಾಖೆಯಿಂದಲೇ ಮಾಡಬೇಕು ಹೊರತು ಖಾಸಗಿಯವರಿಗೆ ಒಪ್ಪಿಸಬಾರದು. * ಕೃಷಿ ಉತ್ಪನ್ನ ಒಕ್ಕೂಟಗಳ ರಚನೆ ಆಗಬೇಕು. ಅದರಲ್ಲಿ ಸುಧಾರಣೆಗಳು ಕಾಣುವಂತಾಗಬೇಕು. ಗೊಬ್ಬರ, ಕೀಟನಾಶಕ, ಬೀಜ ಇವೆಲ್ಲಕ್ಕೂ ಬೆಲೆ ತೆತ್ತು ತರುವ ರೈತರಿಗೆ ಸರಿಯಾದ ದರ ಸಿಗಬೇಕು. * ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಆದ್ಯತೆ ಮೇಲೆ ಮೂಲಸೌಕರ್ಯ ಒದಗಿಸಬೇಕು. ಅದು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಇರಬೇಕು. * ರಾಜ್ಯದಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಪ್ರಾಶಸ್ತ್ಯ ನೀಡಬೇಕು. ಎಷ್ಟು ವರ್ಷಗಳಿಂದ ಹಾಗೇ ಬಾಕಿ ಉಳಿದುಹೋಗಿದೆ ಹಾಗೂ ಅದರ ಪ್ರಾಮುಖ್ಯತೆಯನ್ನು ವರ್ಗೀಕರಿಸಿ, ಶೀಘ್ರದಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು. * ಯಾವ ಸಣ್ಣ ಕೈಗಾರಿಕೆಗಳು ವರ್ಷಾವರ್ಷ ಉತ್ತಮವಾದ ಉತ್ಪಾದನೆಯನ್ನು ಮಾಡುತ್ತಾ, ಸರ್ಕಾರದ ನಿಯಮಾವಳಿಗಳಿಗೆ ಬದ್ಧವಾಗಿ ತೆರಿಗೆ ಪಾವತಿಸುತ್ತಾ ಅದನ್ನು ದಾಖಲೆ ಸಮೇತ ಸಾಬೀತು ಮಾಡುತ್ತದೋ ಅಂಥ ಸಣ್ಣ ಕೈಗಾರಿಕೆಗಳಿಗೆ ವಿದ್ಯುಚ್ಛಕ್ತಿ, ನೀರಿನ ಬಿಲ್​ನಲ್ಲಿ ವಿನಾಯಿತಿ ನೀಡಬೇಕು. ಉತ್ಪಾದನೆ ಹಾಗೂ ತೆರಿಗೆ ಪಾವತಿ ಮತ್ತು ನಿಯಮಾವಳಿಗಳ ಪಾಲನೆ ಈ ಮೂರನ್ನೂ ಮಾನದಂಡವಾಗಿ ಪರಿಗಣಿಸಬೇಕು. * ಕರ್ನಾಟಕದ ಎಲ್ಲ ಕಡೆಯೂ ವಲಸಿಗ ಕಾರ್ಮಿಕರಿಗಾಗಿಯೇ ಕೈಗೆಟುಕುವ ಬಾಡಿಗೆ ದರದಲ್ಲಿ ಮೂಲಸೌಕರ್ಯಗಳಿರುವ ಮನೆಗಳನ್ನು ಸರ್ಕಾರವೇ ನಿರ್ಮಿಸಿಕೊಡಬೇಕು. ಅದರ ಮಾಲೀಕತ್ವವನ್ನು ಅವರು ಬೇರೆಯವರಿಗೆ ಬದಲಿಸದಂತೆ ನಿಯಮಾವಳಿಗಳನ್ನು ರೂಪಿಸಬೇಕು. ಇದರಿಂದ ಕಾರ್ಮಿಕರ ಕೊರತೆ ಬಹುಮುಖ್ಯವಾಗಿ ನೀಗುತ್ತದೆ.”

(ನಿರೂಪಣೆ: ಎಮ್.ಶ್ರೀನಿವಾಸ)

ಇದನ್ನೂ ಓದಿ: ಕರ್ನಾಟಕ ಬಜೆಟ್ 2021ರಲ್ಲಿ ಕೃಷಿ ಕ್ಷೇತ್ರದ ನಿರೀಕ್ಷೆ ಬಗ್ಗೆ ಪ್ರಕಾಶ್ ಕಮ್ಮರಡಿ ಹೇಳೋದೇನು?

ಇದನ್ನೂ ಓದಿ: Karnataka Budget 2021: ಹಸಿವುಮುಕ್ತ ಕರ್ನಾಟಕಕ್ಕೆ ಪಣ, ಹಣ ಪೋಲು ತಪ್ಪಿಸಲು ಸಿಎಂ ಡ್ಯಾಶ್​ಬೋರ್ಡ್

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ