ಧಾರವಾಡ: ಉದ್ಯೋಗ ಕಳೆದುಕೊಳ್ಳುವ ಆತಂಕದಿಂದ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಕವಳಿಕಾಯಿ ಚಾಳದಲ್ಲಿ ನಡೆದಿದೆ. ಮೌನೇಶ್ ಪತ್ತಾರ್(36), ಅರ್ಪಿತಾ(28) ಹಾಗೂ ಪುತ್ರಿ ಸುಕೃತಾ(4) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಗಳು.
ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದವನಾದ ಮೌನೇಶ್ ಪತ್ತಾರ್ ನಗರದ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ. ಈ ನಡುವೆ ಕಾರ್ಖಾನೆಯಲ್ಲಿ ಇತ್ತೀಚೆಗೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿತ್ತು. ಹೀಗಾಗಿ, ಮೌನೇಶ್ಗೆ ಉದ್ಯೋಗ ಕಳೆದುಕೊಳ್ಳೋ ಆತಂಕ ಶುರುವಾಗಿತ್ತು. ಇದೇ ಯೋಚನೆಯಲ್ಲಿ ಪತ್ನಿ ಹಾಗೂ ಮಗಳಿಗೆ ವಿಷ ನೀಡಿದ್ದ ಮೌನೇಶ್ ಬಳಿಕ ತಾನೇ ನೇಣಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಮೃತದೇಹದ ಬಳಿ ಡೆತ್ನೋಟ್ ಪತ್ತೆ ಇನ್ನು ನೇಣಿಗೆ ಶರಣಾದ ಮೌನೇಶ್ ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ. ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಹಲವರಿಗೆ ಕೊರೊನಾ ದೃಢಪಟ್ಟಿತ್ತು. ಈ ನಡುವೆ ಮನೆಯಲ್ಲಿ ಪತ್ನಿ ಹಾಗೂ ಪುತ್ರಿಗೆ ಸೋಂಕಿನ ಲಕ್ಷಣ ಕಂಡು ಬಂದಿತ್ತಂತೆ. ಹೀಗಾಗಿ, ಪತ್ನಿಗೆ ಲೋ ಬಿಪಿ ಹಿನ್ನೆಲೆಯಲ್ಲಿ ಬದುಕುಳಿಯುವ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಮನೆಯಲ್ಲಿ 60 ಸಾವಿರ ಹಣ, 4 ತೊಲೆ ಬಂಗಾರವಿದೆ. 2 ಲಕ್ಷ ರೂ. ಸಾಲ ಮಾಡಿರುವೆ. ನಿವೇಶನ ಮಾರಿ ಸಾಲ ತೀರಿಸಿ ಎಂದು ಡೆತ್ನೋಟ್ನಲ್ಲಿ ಮೌನೇಶ್ ಮನವಿ ಮಾಡಿಕೊಂಡಿದ್ದಾರೆ.