‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!

  • TV9 Web Team
  • Published On - 15:36 PM, 2 Aug 2020
‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ ನುಗ್ಗಿದೆ. ಅದೃಷ್ಟವಶಾತ್​ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಕಾಲಿಗೆ ಮಾತ್ರ ಗಾಯಗಳಾಗಿವೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ಕೇಸ್​ ದಾಖಲಿಸಿದರು. ಅಚ್ಚರಿಯ ಸಂಗತಿಯೆಂದರೆ, ಮಹಿಳೆಯ ವಿಚಾರಣೆ ವೇಳೆ ನಾನು ಕಾರ್​ನಲ್ಲಿ ಕೂತು ಐಸ್​ಕ್ರೀಮ್ ತಿನ್ನುತ್ತಿದ್ದೆ. ಇದೇ ವೇಳೆ ನನ್ನ ನಾಯಿ ಗೇರ್​ ಮೇಲೆ ಕಾಲಿಟ್ಟು ಕಿಟಕಿಯಿಂದ ಹೊರಕ್ಕೆ ಜಿಗಿಯಿತು. ಹಾಗಾಗಿ, ನಿಂತಿದ್ದ ವಾಹನ ಮುನ್ನುಗ್ಗಿ ಅಪಘಾತ ಸಂಭವಿಸಿತು ಎಂದು ಹೇಳಿದ್ದಳಂತೆ.

ಸದ್ಯ ಮಹಿಳೆಯನ್ನ ಜಾಮೀನಿನ ಮೇಲೆ ರಿಲೀಸ್​ ಮಾಡಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.