ನನ್ನ ಅಪ್ಪ ನನ್ನ ಬದುಕಿನ ರಿಯಲ್ ಹೀರೋ “, ನನ್ನೊಬ್ಬಳಿಗೇ ಅಂತೇನಲ್ಲ, ಬಹಳಷ್ಟು ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಅವರ ಅಪ್ಪನೇ ಬದುಕಿನ ಹೀರೋ ಆಗರ‍್ತಾರೆ. ಪತ್ರಿಕೋದ್ಯಮ ವಿಷಯವನ್ನು ಆಯ್ಕೆ ಮಾಡಿ ಸ್ನಾತಕೋತ್ತರ ಪದವಿಗಾಗಿ ಬೆಂಗಳೂರಿನಿಂದ ಉಜಿರೆಗೆ ಬಂದ ಮೇಲಂತು ಮೊದಲಿಗಿಂತ ಅಪ್ಪನ ಮೇಲೆ ಪ್ರೀತಿ ಹೆಚ್ಚಾಗಿದೆ. ಮೊದಮೊದಲು ಸ್ಟ್ರಿಕ್ಟ್ ಟೀಚರ್ ಅನ್ಸೋರು, ಅನಂತರದಲ್ಲಿ ನಾನು ಏನೇ ಕೇಳಿದ್ರು ಇಲ್ಲಾ, ಬೇಡ ಅಂತೆಲ್ಲಾ ಅನ್ನೋಕೆ ಶುರು ಮಾಡಿದ್ರು, ಆಗ ಎಲ್ಲರಂತೆ ನನಗೂ ಅಪ್ಪ ವಿಲನ್ ತರ ಕಾಣೋರು. ಆದ್ರೆ ಇತ್ತೀಚೆಗೆ ನನ್ನೆಲ್ಲಾ ಕೆಲಸಗಳಿಗೂ ಮೆಚ್ಚುಗೆ ಸೂಚಿಸುವ ಗೈಡಾಗಿ, ಎಲ್ಲವನ್ನೂ ಹಂಚಿಕೊಳ್ಳುವ ಸ್ನೇಹಿತನಾಗಿ, ಕೇಳದೇನೆ ಬೇಕಾದ್ದನ್ನು ತಂದು ಮುಂದಿರಿಸುವ ಸಾಹುಕಾರನಾಗಿ, ಆಗಾಗ ವರರ ಭಾವಚಿತ್ರವನ್ನು ವಾಟ್ಸ್ಆಪ್ ಮಾಡಿ ಅದಕ್ಕೆ ನಾನು ಪ್ರತಿಕ್ರಿಯಿಸದಿದ್ದಾಗ ಕರೆ ಮಾಡಿ ವಿಚಾರಿಸಿಕೊಳ್ಳುವ ಜವಾಬ್ದಾರಿ ತಂದೆಯಾಗಿ ಕಾಣುತ್ತಾರೆ.
ನಿರೂಪಣೆ ಒಂದೇ ನನ್ನ ಗುರಿ ಎಂಬುದನ್ನು ಸುಳ್ಳು ಮಾಡಿದ್ದೇ ಬರವಣಿಗೆ. ಅಪ್ಪನಿಗೆ ನಾನು ಬರೆಯಬೇಕು, ಒಳ್ಳೆಯ ಲೇಖಕಿ ಆಗಬೇಕು ಅಂತ ಬಹಳಾ ಹಿಂದಿನಿಂದಲೂ ಆಸೆ ಇತ್ತು. ಆಗಾಗ ನನ್ನನ್ನು ಏನಾದರೂ ಬರೆ ಎಂದು ಹೇಳುವ ಶಿಕ್ಷಕ. ಪುಸ್ತಕಗಳನ್ನು ಓದುವ ಅಭ್ಯಾಸ ಕಲಿಸಿದವರು. ಮನೆಯಲ್ಲಿರುವ ಅವರ ಮಿನಿ ಲೈಬ್ರರಿಯಿಂದ ಪುಸ್ತಕಗಳನ್ನು ಓದಲು ಕೊಟ್ಟು, ನನ್ನಲ್ಲಿ ಬರೆಯುವ ಆಸಕ್ತಿ ಬರುವಂತೆ ಮಾಡುತ್ತಿದ್ದರು. ನಾನು ಶಾಲೆ ಕಾಲೇಜುಗಳಲ್ಲಿ ಯಾವುದಾದರೂ ವಿಷಯದ ಬಗ್ಗೆ ಒಂದು ಪ್ರಬಂಧ ಅಥವಾ ಲೇಖನ ಬರೆದರೆ, ಅದನ್ನು ಮೊದಲು ಅಪ್ಪನಿಗೇ ತೋರಿಸ್ತಿದ್ದೆ. ಅವರೋ,ಮೊದಲೇ ಕನ್ನಡ ಉಪನ್ಯಾಸಕರು, ಲೇಖನ ಹೇಗಿದೆ ಅನ್ನೋದಕ್ಕಿಂತ ಅದರಲ್ಲಿನ ಕಾಗುಣಿತ, ಒತ್ತಕ್ಷರಗಳ ತಪ್ಪನ್ನೇ ಹುಡುಕಿ ತೋರಿಸುತ್ತಿದ್ದರು. ಎಂದಿಗೂ ಹೊಗಳಿ ಅಟ್ಟಕ್ಕೆ ಏರಿಸುತ್ತಿರಲಿಲ್ಲ. ಬಹುಷಃ ಇಂದು ನಾನು ಅಷ್ಟು ಸ್ಪಷ್ಟವಾಗಿ ಯಾವುದಾದರೂ ವಿಷಯದ ಬಗ್ಗೆ ಮಾತನಾಡಬಲ್ಲೆ, ಬರೆಯಬಲ್ಲೆ, ವಿಚಾರವನ್ನು ಮಂಡಿಸಬಲ್ಲೆ ಅಂದ್ರೆ ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟದ್ದು ನನ್ನ ಪಪ್ಪಾ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನಮ್ಮ ಕಣ್ಣಿನಿಗೆ ಹೀರೋ ನನ್ನ ಅಪ್ಪ
ನನ್ನ ಇತ್ತೀಚಿನ ಎಲ್ಲಾ ಲೇಖನಗಳನ್ನು ಓದುವ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಲೇಖನಗಳು ಪ್ರಕಟವಾದಲ್ಲಿ ನನಗಿಂತಲೂ ಹೆಚ್ಚಿನ ಸಂಭ್ರಮಪಡುತ್ತಾರೆ. ಈ ರೀತಿಯಾಗಿ ಎಷ್ಟೋ ವಿಚಾರಗಳಿಗೆ ಬೆಂಬಲವಾಗಿರೋ ನನ್ನ ಅಪ್ಪನ ಬಗ್ಗೆಯೇ ಏನಾದರು ಬರೆಯೋಣ ಅಂದ್ರೆ, ಎಷ್ಟೇ ಬರೆದರೂ ಅದು ಸಾಗರದಲ್ಲಿನ ಬೊಗಸೆ ನೀರಿನಷ್ಟೇ” ಅಂತ ಅನಿಸೋದು ಒಂದು ಕಡೆ ಆದ್ರೆ ಅವರ ಬಗ್ಗೆ ಅಪಾರವಾದ ಪ್ರೀತಿ, ಗೌರವ ಹಾಗೂ ನಂಬಿಕೆ ಇರುವಾಗ ಏನಾದರೂ ಬರೆದರೆ ಅದು ಸಣ್ಣದಾಗಬಹುದು ಎನ್ನುವ ಭಯ ಮತ್ತೊಂದು ಕಡೆ.
ಚಿಕ್ಕಂದಿನಿಂದ “ಅಪ್ಪ ಎಂಬ ಅದ್ಭುತ” ನಮ್ಮೆಲ್ಲರ ಮುಂದೆ ಮಾಯಾಲೋಕವನ್ನು ಸೃಷ್ಟಿಸುವ ಮಾಂತ್ರಿಕ. ನನ್ನ ಬಾಳಿನಲ್ಲಿ ತಂದೆಗಿಂತ ಒಬ್ಬ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದು ಹೆಚ್ಚು. ಅ, ಆ, ಇ, ಈ, ಒಂದು ಎರಡು, ಅಕ್ಷರದಿಂದ ಇಂದ ಹಿಡಿದು ಜೀವನದ ಪಾಠದವರೆಗೂ ಅವರೇ ನನ್ನ ಮೊದಲ ಗುರು. ಮಗ್ಗಿ ಪುಸ್ತಕದಿಂದ ತೇಜಸ್ವಿ ಅವರ ಮಾಯಾಲೋಕದವರೆಗೂ ಅವರೇ ನನ್ನ ದೇವರು. ನನ್ನ ಹಾಗು ತಂಗಿ ತನುಳಾ ಒಳಿತಿಗಾಗಿ ಸದಾ ದುಡಿಯುವ ಕಷ್ಟ ಜೀವಿ.
ಏನು? ಇಬ್ಬರೂ ಹೆಣ್ಣು ಮಕ್ಕಳೇನಾ ? ಒಂದು ಗಂಡಿಲ್ವೇ? ಅಂತ ಮೂಗು ಮುರಿದವರ ಮುಂದೆ ನನನ್ನು ತೋರಿಸಿ ‘ ಇವಳೇ ನನ್ನ ದೊಡ್ಡ ಮಗಳು ‘ತೇಜಶ್ವಿನಿ’ ಸದಾ ಬೆಳಕು ನೀಡಲಿ, ಬೇರೆಯವರಿಗೂ ಬೆಳಕಾಗಲಿ ಅಂತ ಆ ಹೆಸರಿಟ್ಟಿದ್ದೀನಿ, ನನಗೆ ಮಗಳೂ ಇವಳೇ, ಮಗನೂ ಇವಳೇ ಅಂತ ಹೆಮ್ಮೆಯಿಂದ ಹೇಳ್ತಾ ಇದ್ರು. ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎನ್ನುವ ಸಿದ್ಧಾಂತವನ್ನು ಪಾಲಿಸುವ ಮಮತೆಯ, ವಾತ್ಸಲ್ಯದ ರಾಯಭಾರಿ ನನ್ನ ಪಪ್ಪ.
ಅಪ್ಪನ ಮತ್ತೊಂದು ಗುಣದ ಬಗ್ಗೆ ನಾನಿಲ್ಲಿ ತಿಳಿಸಲೇ ಬೇಕು. ನಾನು ಶಾಲೆಗೆ ಹೋಗುತ್ತಿದ್ದಾಗ ಒಮ್ಮೆ, “ ಪಪ್ಪಾ ಇವತ್ತು ಚೈತ್ರಾಳ ಮನೆಗೆ ಹೋಗುವೇ, ಫ್ರೆಂಡ್ಸ್ ಎಲ್ಲ ಬರುತ್ತಾರೆ. ಅಂತ ನಾನು ಶುರು ಮಾಡೋ ಮೊದಲೇ ಬೇಡ ಅಂತ ಹೇಳ್ತಿದ್ರು. ಅನಂತರದಲ್ಲಿ ಡಿಗ್ರಿ ಓದುವಾಗ ಒಮ್ಮೆ , ಹೇಗಿದ್ರು ಬಸವನಗುಡಿಯಲ್ಲೇ ಇರುವುದು ಗಾಂಧಿಬಜಾರ್, ಫುಡ್ ಸ್ಟ್ರೀಟ್ ಕಡೆ ಫ್ರೆಂಡ್ಸ್ ಒಟ್ಟಿಗೆ ಹೋಗಿ ರ‍್ತೀನಿ ಅಂದಾಗ್ಲೂ ಬೇಡಮ್ಮ, ಸಮಯ ವ್ರ‍್ಥಮಾಡೋದಕ್ಕಿಂತ ಮನೆಗೆ ಬಾ ಅನ್ನೋರು. ಇನ್ನೂ ಪ್ರವಾಸಕ್ಕೆ ಕಳಿಸೋದಕ್ಕೆಲ್ಲ ಒಪ್ತಾನೆ ರ‍್ಲಿಲ್ಲಾ. ಹೀಗಿರೋವಾಗ ಅವರ ಇಷ್ಟಕ್ಕೆ ವಿರುದ್ಧವಾಗಿ ಮೀಡಿಯಾ ಫೀಲ್ಡ್ ಆರಿಸಿಕೊಂಡಾಗ ಅಪ್ಪನ ಕೆಂಗಣ್ಣಿಗೆ ಗುರಿಯಾಗಿದ್ದೆ. ಅದೆಷ್ಟೋ ಕೋಪ ತಾಪಗಳು, ಕಣ್ಣೆರಿನ ಕಥೆಗಳು, ಮುನಿಸಿನ ನಡುವೆ ಅವರನ್ನು ಒಪ್ಪಿಸಿದ್ದೆ ದೊಡ್ಡ ವಿಷಯ.
ಆದ್ರೆ ಅಪ್ಪ ಈಗ ಹಾಗಿಲ್ಲ, ಬಹಳ ಬದಲಾಗಿದ್ದಾರೆ, ಎಲ್ಲಿಗೆ ಬೇಕಾದರೂ, ಯಾವಾಗ ಬೇಕಾದರೂ ಹೋಗಿ ಬರಬಹುದಾದ ಸ್ವಾತಂತ್ರ‍್ಯ ಕೊಟ್ಟಿದ್ದಾರೆ. ಯಾವುದಕ್ಕೂ ಅಡ್ಡಿ ಮಾಡೋದಿಲ್ಲ, ಪ್ರಶ್ನಿಸೋದಿಲ್ಲ ನಿಜಕ್ಕೂ ಇದು ಅಪ್ಪಾನೇನಾ ಅಂತ ಆಶ್ರ‍್ಯವಾಗುವಷ್ಟು ನನ್ನ ಮೇಲೆ ಅಪಾರವಾದ ನಂಬಿಕೆ, ಪ್ರೀತಿ ಇಟ್ಟಿದ್ದಾರೆ. ಏಕಿರಬಹುದು ಈ ಬದಲಾವಣೆ ಅಂತೀರಾ? ತಂದೆ ಅಂದ್ರೆನೇ ಹಾಗೆ, ಚಿಕ್ಕವರಿದ್ದಾಗ ಮಕ್ಕಳಿಗೆ ಪ್ರೀತಿ ಕಾಳಿಜಿಯ ಧಾರೆಯೆರೆದು ಸಾಕಿ ಸಲಹುತ್ತಾರೆ, ಮುಂದೆ ಬೆಳೆಯುವ ವಯಸ್ಸಿನಲ್ಲಿ ಸರಿಯಾದ ದಾರೀಲಿ ನಡೆಸುವ ಸಲುವಾಗಿ ಸ್ಟ್ರಿಕ್ಟ್ ಟೀಚರ್ ಆಗ್ತಾರೆ, ಅದೇ ಮಕ್ಕಳು ಕಣ್ಮುಂದೆ ಒಳ್ಳೆ ಕೆಲಸಗಳನ್ನು ಮಾಡುತ್ತಾ ಸಾಧನೆಯ ಶಿಖರವನ್ನು ಏರುತ್ತಿರುವುದನ್ನು ಕಂಡಾಗ ಮಕ್ಕಳ ಬಗ್ಗೆ ಹೆಮ್ಮೆ ಪಡ್ತಾರೆ. ಸರಿ ತಪ್ಪುಗಳ ತಿಳುವಳಿಗೆ ಮಕ್ಕಳಲ್ಲಿ ಕಂಡಾಗ ಸ್ನೇಹಿತರಾಗ್ತಾರೆ. ಇದೆಲ್ಲಾ ಎಲ್ಲೋ ಕೇಳಿದ್ದೋ, ಕಂಡಿದ್ದೋ ಅಲ್ಲ ಸ್ವತಃ ನನ್ನ ಅನುಭವಕ್ಕೆ ಬಂದಿದ್ದು.
ಹೆಗಲು ಕೊಟ್ಟು ಕುತೂಹಲ ತಣಿಸಿದ, ಯಾರನ್ನಾದರೂ ಸೋಲಿಸೊ ಶಕ್ತಿ ತುಂಬಿದ, ಹಗಲು ರಾತ್ರಿ ಮನೆಗಾಗಿ– ಮಕ್ಕಳಿಗಾಗಿ ದುಡಿದ , ಅಂಗಿಯ ಬೆವರಲ್ಲಿ ನಮ್ಮ ಅನ್ನ ಅಡಗಿಸಿದ, ರ‍್ಣನಂತೆ ತ್ಯಾಗ ಮಾಡಿದ , ಕೈ ಹಿಡಿದು ಮೊನ್ನೆಡೆಸಿದ , ಮಗಳೇ ಎನ್ನೋ ಮಾತಿನಲ್ಲಿ ಆಗಸದಷ್ಟು ಪ್ರೀತಿಯನ್ನು ಬೊಗಸೆಯಲ್ಲಿ ಮುಚ್ಚಿಡುವ, ತನ್ನಷ್ಟೇ ಪ್ರೀತಿ ಕಾಳಜಿ ಮಾಡಿ ಕಣ್ಣರೆಪ್ಪೆಯಂತೆ ನನ್ನನ್ನು ನೋಡಿಕೊಳ್ಳುವ ಜೊತೆಗಾರನನ್ನು ಹುಡುತ್ತಿರುವ…ಅಪ್ಪಾ…. ಐ ಲವ್ ಯು ಪಾ!!!
ತೇಜಶ್ವಿನಿ ಕಾಂತರಾಜ್
ಬೆಂಗಳೂರು
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ