ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಫೆ.1) ಬಜೆಟ್ ಮಂಡನೆ ಮಾಡಲಿದ್ದಾರೆ. ಅನೇಕ ಕ್ಷೇತ್ರಗಳು ಈಗಾಗಲೇ ಕೊರೊನಾದಿಂದ ತತ್ತರಿಸಿವೆ. ಈ ಕ್ಷೇತ್ರಗಳಿಗೆ ಕೇಂದ್ರದಿಂದ ದೊಡ್ಡ ಮಟ್ಟದ ಸಹಕಾರ ಸಿಗುವ ನಿರೀಕ್ಷೆ ಇದೆ. ಇನ್ನು ಭಾರತದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲು ಈ ಬಾರಿಯ ಬಜೆಟ್ ತುಂಬಾನೇ ಮಹತ್ವ ಪಡೆದುಕೊಂಡಿದೆ.
2020ರಲ್ಲಿ ಕೊರೊನಾ ವೈರಸ್ನಿಂದ ಶಿಕ್ಷಣ ಕ್ಷೇತ್ರವೂ ಏಟನ್ನು ತಿಂದಿದೆ. ಆದರೆ, ತಂತ್ರಜ್ಞಾನದ ಸಹಾಯದಿಂದ ದೇಶದ ಬಹುತೇಕ ಶಾಲಾ-ಕಾಲೇಜುಗಳು ಆನ್ಲೈನ್ ಮೂಲಕ ತರಗತಿ ನಡೆಸುತ್ತಿವೆ. ಬೇಸರದ ಸಂಗತಿ ಎಂದರೆ ಅನೇಕ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆಯಿಂದಾಗಿ ಶಿಕ್ಷಕರು ಆನ್ಲೈನ್ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸರ್ಕಾರಿ ಕಾಲೇಜುಗಳ ಬಗ್ಗೆ ಗಮನ ಹರಿಸುವ ಕೆಲಸ ಆಗಬೇಕಿದೆ ಎಂದು ತಜ್ಞರು ಆಗ್ರಹ ಮಾಡಿದ್ದಾರೆ.
2020ರಲ್ಲಿ ಎಲ್ಲಾ ಕ್ಷೇತ್ರಗಳ ಆಲೋಚನೆಗಳು ಬದಲಾಗಿವೆ. ಶಾಲಾ-ಕಾಲೇಜುಗಳು ಸಂಪೂರ್ಣವಾಗಿ ಬಂದ್ ಆದಾಗ ಆನ್ಲೈನ್ ಕಲಿಕೆಗೆ ಆದ್ಯತೆ ನೀಡಲಾಯಿತು. ಲೈವ್ ಆನ್ಲೈನ್ ತರಗತಿಯಿಂದ ವಿದ್ಯಾರ್ಥಿಗಳು ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ. ಆನ್ಲೈನ್ ತರಗತಿಗೆ ತಂತ್ರಜ್ಞಾನ ಅತ್ಯಗತ್ಯವಾಗಿದ್ದು, ಈ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ಗಳು ತುಂಬಾನೇ ಪ್ರಮುಖ ಪಾತ್ರವಹಿಸಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂದಿಗೂ ಸಾಕಷ್ಟು ಗ್ರಾಮಗಳಲ್ಲಿ ಇಂಟರ್ನೆಟ್ ಸೇವೆ ಇಲ್ಲ. ಮೊಬೈಲ್ ನೆಟ್ವರ್ಕ್ ಬರುವುದಿಲ್ಲ. ಇದು ಆನ್ಲೈನ್ ಕಲಿಕೆಗೆ ಹಿನ್ನಡೆ ಉಂಟು ಮಾಡಿದೆ. ಇದರ ಜತೆಗೆ ಭಾರತದ ಸಾಕಷ್ಟು ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಆನ್ಲೈನ್ ಶಿಕ್ಷಣಕ್ಕೆ ಬೇಕಾಗುವ ಸ್ಮಾರ್ಟ್ಫೋನ್ ಮತ್ತು ಕಂಪ್ಯೂಟರ್ ವ್ಯವಸ್ಥೆಯಿಂದ ಅನೇಕ ಶಾಲೆಗಳು ವಂಚಿತವಾಗಿವೆ. ಇದು ಆನ್ಲೈನ್ ಶಿಕ್ಷಣಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ ಎಂಬುದು ತಜ್ಞರ ಮಾತು.
ಈ ಬಾರಿಯ ಬಜೆಟ್ನಲ್ಲಿ ಶಾಲೆಗಳ ಡಿಜಿಟಲೀಕರಣದತ್ತ ಹೆಚ್ಚು ಒತ್ತು ನೀಡಬೇಕು. ಶಾಲೆಗಳಿಗೆ ಬೇಕಾಗಿರುವ ಡಿಜಿಟಲ್ ಮೂಲಸೌಕರ್ಯವನ್ನು ಸರ್ಕಾರವೇ ಒದಗಿಸಬೇಕು. ಅನೇಕ ವಿದ್ಯಾರ್ಥಿಗಳಿಗೆ ಮೊಬೈಲ್ ತೆಗೆದುಕೊಳ್ಳಲು ಹಣ ಇರುವುದಿಲ್ಲ. ಅಂಥವರನ್ನು ಗುರುತಿಸಿ ಸರ್ಕಾರವೇ ಮೊಬೈಲ್ ಅಥವಾ ಟ್ಯಾಬ್ ನೀಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಆಗಬೇಕು ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ದುಡಿಯುವ ಭರವಸೆ ಬಿತ್ತುವುದೇ ನಿರ್ಮಲಾ ಸೀತಾರಾಮನ್ ಎದುರಿಗಿರುವ ಅತಿದೊಡ್ಡ ಸವಾಲು
ವಿದ್ಯಾರ್ಥಿಗಳು (ಪಿಟಿಐ ಚಿತ್ರ)
ಖಾಸಗಿ ಸಹಭಾಗಿತ್ವಕ್ಕೆ ಬೇಕು ಆದ್ಯತೆ ಈಗಾಗಲೇ ಸರ್ಕಾರಿ ಶಾಲೆಗಳು ಮೂಲ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ. ಲಾಕ್ಡೌನ್ ಎನ್ನುವುದು ಮಕ್ಕಳ ಮೇಲೆ ತುಂಬಾನೇ ಪರಿಣಾಮ ಬೀರಿದೆ. ಹೀಗಾಗಿ, ಸರ್ಕಾರಿ ಶಾಲೆಗಳು ಖಾಸಗಿ ಸಹಭಾಗಿತ್ವ ಹೊಂದುವುದರ ಮೂಲಕ ಕಲಿಕೆಯಲ್ಲಿ ಉನ್ನತಿ ಹೊಂದಲು ಸಾಧ್ಯ. ಇದನ್ನು ಆದಷ್ಟು ಬೇಗ ಜಾರಿಗೆ ತರಬೇಕಿದೆ. ಇದಕ್ಕಾಗಿ ಪ್ರಾಯೋಗಿಕ ನಿಧಿ ಸರ್ಕಾರ ಸ್ಥಾಪನೆ ಮಾಡಬೇಕು. ಈ ಮೂಲಕ ಸರ್ಕಾರಿ ಶಾಲೆಗಳು ಖಾಸಗಿ ಸಹಭಾಗಿತ್ವ ಹೊಂದಲು ಸಹಾಯ ಮಾಡಬೇಕು ಎಂದು ತಜ್ಞರು ಸೂಚನೆ ನೀಡಿದ್ದಾರೆ.
ಪ್ರತಿ ಶಾಲೆಗೂ ಬೇಕು ಅಂತರ್ಜಾಲದ ಸಂಪರ್ಕ ಈಗಾಗಲೇ ಬಹುತೇಕ ಶಾಲೆಗಳು ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿವೆ. ಆದರೆ, ಹಳ್ಳಿ ಭಾಗದ ಶಾಲೆಗಳಿಗೆ ಇಂಟರ್ನೆಟ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತ ಶಾಲೆಗಳನ್ನು ಗುರುತಿಸಿ ಅವರಿಗೆ ಇಂಟರ್ನೆಟ್ ಸೇವೆ ನೀಡಬೇಕು. ಈ ಬಾರಿಯ ಬಜೆಟ್ನಲ್ಲಿ ಈ ಕೆಲಸ ಆಗಬೇಕು ಎಂದು ಶಿಕ್ಷಣ ಪಂಡಿತರು ಆಗ್ರಹಿಸಿದ್ದಾರೆ.
ಶಿಕ್ಷಣದಲ್ಲಿ ತಂತ್ರಜ್ಞಾನ ಎನ್ನುವುದು ಈ ಮೊದಲಿನಿಂದಲೂ ಬೆಳವಣಿಗೆ ಕಾಣುತ್ತಾ ಬಂದಿದೆ. ಕೊರೊನಾ ಸಂದರ್ಭದಲ್ಲಿ ಇದು ಸಾಕಷ್ಟು ಪಟ್ಟು ದ್ವಿಗುಣವಾಗಿದೆ. ಹೀಗಾಗಿ, ಸರ್ಕಾರ ಇ-ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲಾ ಶಾಲೆಗಳಿಗೆ ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ಫೋನ್ಒದಗಿಸಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಅನುದಾನ ನೀಡಬೇಕಿದೆ. ಈ ಬಾರಿಯ ಬಜೆಟ್ನಲ್ಲಿ ಈ ನಿರೀಕ್ಷೆಗಳನ್ನು ನಾವು ಮಾಡುತ್ತಿದ್ದೇವೆ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ. ಈ ಬಾರಿ ಶಿಕ್ಷಣ ಕ್ಷೇತ್ರ ಕೊರೊನಾದಿಂದ ಹೊಡೆತ ತಿಂದಿದೆ. ಹೀಗಾಗಿ, ಸಾಕಷ್ಟು ಬದಲಾವಣೆಗಳು ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿದೆ. ಈ ಎಲ್ಲಾ ಕಾರಣಗಳಿಂದ ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಸರ್ಕಾರ ಹೆಚ್ಚಿಸಬೇಕಿದೆ ಎಂದು ಶಿಕ್ಷಣ ಪಂಡಿತರು ಆಗ್ರಹಿಸಿದ್ದಾರೆ.
Budget 2021 Explainer | ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು
Budget 2021 | ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ನಲ್ಲಿ ಏನು ನಿರೀಕ್ಷಿಸಬಹುದು?