Budget 2021 ನಿರೀಕ್ಷೆ | ಜಾನುವಾರು ಲಸಿಕೆ ದಾಸ್ತಾನು, ವಿತರಣೆಗೆ ಸಿಗಬೇಕು ಆದ್ಯತೆ

ಜಾನುವಾರುಗಳಿಗೆ ನೀಡುವ ಲಸಿಕೆಗಳ ಬೇಡಿಕೆ ಹೆಚ್ಚಾಗಿದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸಲು, ಲಸಿಕೆ ದಾಸ್ತಾನು ಮತ್ತು ಅದನ್ನು ಸಕಾಲದಲ್ಲಿ ಜಾನುವಾರುಗಳಿಗೆ ನೀಡಲು ಈ ಬಾರಿಯ ಬಜೆಟ್​ನಲ್ಲಿ ಅನುದಾನ ಮೀಸಲಿಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

Budget 2021 ನಿರೀಕ್ಷೆ | ಜಾನುವಾರು ಲಸಿಕೆ ದಾಸ್ತಾನು, ವಿತರಣೆಗೆ ಸಿಗಬೇಕು ಆದ್ಯತೆ
ಜಾನುವಾರುಗಳಿಗೆ ಲಸಿಕೆ ಹಾಕುವ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಗಮನ ನೀಡಬೇಕಿದೆ. (ಪಿಟಿಐ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ

| Edited By: Rashmi Kallakatta

Jan 29, 2021 | 12:08 PM

ಕೇಂದ್ರ ಬಜೆಟ್​ನಿಂದ ಕೃಷಿ ವಲಯದ ನಿರೀಕ್ಷೆಗಳು ಹಲವು. ಈ ಪೈಕಿ ಎಣ್ಣೆಬೀಜ, ಜಾನುವಾರ ಸಾಕಣೆ ಮತ್ತು ಸಂಶೋಧನೆ ಬಗ್ಗೆ ಕೃಷಿ ಕ್ಷೇತ್ರದ ನಿರೀಕ್ಷೆಗಳ ಬಗ್ಗೆ ವಿವಿಧ ತಜ್ಞರು ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಕೃಷಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕು ಮತ್ತು ಎಣ್ಣೆಬೀಜಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿ ಖಾದ್ಯತೈಲಗಳ ಆಮದನ್ನು ಕಡಿತಗೊಳಿಸಬೇಕು. ಪಶುಸಂಗೋಪನೆ ರೈತರ ಆದಾಯದ ಪ್ರಮುಖ ಮೂಲವಾಗಿದೆ. ಜಾನುವಾರುಗಳಿಗೆ ತಗುಲುವ ಹಲವು ಸೋಂಕು ಮತ್ತು ರೋಗಗಳಿಂದ ಅವು ಅಕಾಲಿಕ ಮರಣವನ್ನುಪ್ಪುತ್ತಿವೆ. ಹೀಗಾಗಿ ನಿರೀಕ್ಷಿತ ಉತ್ಪಾದನೆಯ ಮೇಲೆ ಅಡ್ಡಪರಿಣಾಮ ಬೀರುತ್ತಿವೆ ಎಂದು ಡೆಲಾಯ್ಟ್ ಇಂಡಿಯ ಸಂಸ್ಥೆ ಹೇಳಿದೆ.

ಜಾನುವಾರುಗಳಿಗೆ ನೀಡುವ ಲಸಿಕೆಗಳ ಬೇಡಿಕೆ ಹೆಚ್ಚಾಗಿದೆ. ಆದರೆ ಸರಬರಾಜು ಸಮರ್ಪಕವಾಗಿಲ್ಲ. ಲಸಿಕೆಗಳನ್ನು ಅಭಿವೃದ್ಧಿಪಡಿಸಲು, ಲಸಿಕೆ ದಾಸ್ತಾನು ಮತ್ತು ಅದನ್ನು ಸಕಾಲದಲ್ಲಿ ಜಾನುವಾರುಗಳಿಗೆ ನೀಡಲು ಈ ಬಾರಿಯ ಬಜೆಟ್​ನಲ್ಲಿ ಅನುದಾನ ಮೀಸಲಿಡಬೇಕು ಎಂದು ಸಂಸ್ಥೆ ಹೇಳಿದೆ.

ಆರ್ಗ್ಯಾನಿಶ್ ಓವರ್​ಸೀಸ್ ಸಂಸ್ಥೆಯ ಸಂಸ್ಥಾಪಕ ಚಿರಾಗ್ ಅರೋರ, ಸಾವಯವ ಕೃಷಿ ಅಳವಡಿಸಿಕೊಳ್ಳಲು ಸರ್ಕಾರ ರೈತರನ್ನು ಉತ್ತೇಜಿಸಬೇಕು ಎಂದು ಹೇಳಿದ್ದಾರೆ.

‘ಕೃಷಿವಲಯದಲ್ಲಿ ಸ್ಟಾರ್ಟ್​ಅಪ್ ಚಟುವಟಿಕೆ ಹೆಚ್ಚಾಗುತ್ತಿದೆ. ಅವರಿಗೆ ತೆರಿಗೆ ರಿಯಾಯಿತಗಳನ್ನು ಒದಗಿಸಿ ಪ್ರೋತ್ಸಾಹಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕಿದೆ. ಹಾಗೆಯೇ, ದಾಸ್ತಾನು ವ್ಯವಸ್ಥೆ ಹೆಚ್ಚಿಸುವ ಸಲುವಾಗಿ ಶೈತ್ಯಾಗಾರಗಳನ್ನು ಸೃಷ್ಟಿಸುವ ಆಯಾಮದ ಮೇಲೂ ಹೂಡಿಕೆಯನ್ನು ಸಹ ಸರ್ಕಾರ ಬಲಪಡಿಸಬೇಕಿದೆ’ ಎಂದು ಅರೋರ ಹೇಳಿದ್ದಾರೆ.

ಇದನ್ನೂ ಓದಿ: ಬನ್ನಿ, ಅರ್ಥ ಮಾಡಿಕೊಳ್ಳೋಣ: ಏನಿದು ಧನವಿನಿಯೋಗ ವಿಧೇಯಕ, ಹಣಕಾಸು ಮಸೂದೆ?

ಶೈತ್ಯಾಗಾರ

ಕಳೆದ ತಿಂಗಳು ಹಣಕಾಸು ಸಚಿವಾಲಯದ ಜೊತೆ ನಡೆದ ಬಜೆಟ್-ಪೂರ್ವ ವರ್ಚ್ಯುವಲ್ ಸಭೆಯಲ್ಲಿ ಭಾರತ್ ಕೃಷಿಕ್ ಸಮಾಜದ (ಬಿಕೆಎಸ್) ಪ್ರತಿನಿಧಿಯೊಬ್ಬರು ಸರ್ಕಾರ ಯೂರಿಯಾ ಬೆಲೆಯನ್ನು ಹೆಚ್ಚಿಸಿ, ಫಾಸ್ಫೇಟ್ ಮತ್ತು ಪೊಟ್ಯಾಶ್ ಪೋಷಕಾಂಶಗಳ ಬೆಲೆಯನ್ನು ತಗ್ಗಿಸಬೇಕು. ಈ ಮೂಲಕ ಸಮತೋಲಿತ ರಸಗೊಬ್ಬರ ಬಳಕೆಗೆ ಅನುವಾಗುವಂಥ ವ್ಯವಸ್ಥೆಯನ್ನು ಬಜೆಟ್​ ಮೂಲಕ ಕಲ್ಪಿಸಬೇಕು ಎಂದು ಹೇಳಿದ್ದರು.

ಡೀಸೆಲ್, ಹಣ್ಣು ಹಾಗೂ ತರಕಾರಿ ಸಾರಿಗೆ ಸಬ್ಸಿಡಿ ಮೇಲೆ ಕಡಿತದ ಬೇಡಿಕೆಯಿಟ್ಟ ಬಿಕೆಸ್ ಅಧ್ಯಕ್ಷ ಅಜಯ್ ವೀರ್ ಜಖರ್, ಆನಾರೋಗ್ಯಕರ ಆಹಾರ ಪದಾರ್ಥಗಳ ಮೇಲೆ ತೆರಿಗೆ ಹೆಚ್ಚಿಸಬೇಕು ಎಂದಿದ್ದರು. ರೈತರಿಗೆ ವ್ಯಕ್ತಿಗತವಾಗಿ ಸಣ್ಣ ನೀರಾವರಿ ಮತ್ತು ಸೋಲಾರ್ ಪಂಪ್​ಗಳ ಮೇಲಿನ ಆರ್ಥಿಕ ನೆರವನ್ನು ಮೂರು ಪಟ್ಟು ಹೆಚ್ಚಿಸಿ ಮಣ್ಣಿನ ತೇವಾಂಶ ಅಳೆಯುವ ಸೆನ್ಸಾರ್​ಗಳನ್ನು ಖರೀದಿಸಲೂ ಹಣಕಾಸಿನ ಸಹಾಯ ಒದಗಿಸಬೇಕೆಂದು ಹೇಳಿದ್ದರು.

‘ಮೂಲ ಸೌಕರ್ಯ ಮೇಲಿನ ಹೂಡಿಕೆಗಿಂತ ಮಾನವ ಸಂಪನ್ಮೂಲಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿ ಸಂಶೋಧನೆ ಕೇಂದ್ರಗಳಲ್ಲಿ ಶೇಕಡಾ 50ರಷ್ಟು ಹುದ್ದೆಗಳು ಖಾಲಿಬಿದ್ದಿವೆ. ಮುಂದಿನ ಕೆಲ ವರ್ಷಗಳ ಕಾಲ ಜಿಡಿಪಿಯ ಶೇಕಡ 2ರಷ್ಟನ್ನು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಹೂಡುವ ಗುರಿಯನ್ನು ಸರ್ಕಾರ ಇಟ್ಟುಕೊಳ್ಳಬೇಕು’ ಎಂದು ಸಲಹೆ ಮಾಡಿದ್ದರು.

Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?

Budget 2021 ನಿರೀಕ್ಷೆ: ಕೃಷಿ ಸಬ್ಸಿಡಿ ಬದಲು ನೇರ ನಗದು ವರ್ಗಾವಣೆಗೆ ಸಿಗಲಿ ಆದ್ಯತೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada