Budget 2021 | ಅತ್ತ ಪಾಕಿಸ್ತಾನ, ಇತ್ತ ಚೀನಾ; ಈ ಬಾರಿಯಾದರೂ ರಕ್ಷಣೆಗೆ ಸಿಗುತ್ತಾ ಬೇಕಿರುವಷ್ಟು ಅನುದಾನ

ಹಿಂದೂ ಮಹಾಸಾಗರದಲ್ಲಿ ಚೀನಾದ ಬಾಲ ಹಿಂಡಿದರೆ, ಹಿಮಾಲಯದಲ್ಲಿ ಡ್ರಾಗನ್ ಹಿಂದೆ ಸರಿಯುತ್ತದೆ. ಈ ತಂತ್ರವನ್ನು ಕಾರ್ಯಸಾಧುವಾಗಿಸಿಕೊಳ್ಳಲು ಪ್ರಬಲ ನೌಕಾಪಡೆ ಬೇಕು. ಅದೇ ಈ ಹೊತ್ತಿನ ಬಜೆಟ್​ನಲ್ಲಿ ಆದ್ಯತೆಯಾಗಬೇಕು.

Budget 2021 | ಅತ್ತ ಪಾಕಿಸ್ತಾನ, ಇತ್ತ ಚೀನಾ; ಈ ಬಾರಿಯಾದರೂ ರಕ್ಷಣೆಗೆ ಸಿಗುತ್ತಾ ಬೇಕಿರುವಷ್ಟು ಅನುದಾನ
ಬಜೆಟ್​ನಲ್ಲಿ ರಕ್ಷಣೆಗೆ ಹೆಚ್ಚಿನ ಆದ್ಯತೆ ಸಿಗಬೇಕಿದೆ.
Ghanashyam D M | ಡಿ.ಎಂ.ಘನಶ್ಯಾಮ

|

Jan 31, 2021 | 6:19 PM

ಕೊರೊನಾ ಸಂಕಷ್ಟ, ಕುಗ್ಗಿದ ಆರ್ಥಿಕತೆ, ತೆರಿಗೆ ಸಂಗ್ರಹದಲ್ಲಿ ಸಮಸ್ಯೆ, ಉದ್ಯಮ ವಲಯದಲ್ಲಿ ನಿಸ್ತೇಜ ವಾತಾವರಣ.. ಇಷ್ಟೆಲ್ಲದರ ನಡುವೆಯೂ ಬಾಹ್ಯಶಕ್ತಿಗಳಿಂದ ದೇಶದ ರಕ್ಷಣೆ ಈ ವರ್ಷವೂ ದೊಡ್ಡ ಸವಾಲೇ ಆಗಿದೆ. ಭದ್ರತೆಯ ವಿಚಾರದಲ್ಲಿ ಈ ವರ್ಷದ ಅನುದಾನದ ನಿರೀಕ್ಷೆ ಲೆಕ್ಕ ಹಾಕುವಾಗ ಕಳೆದ ವರ್ಷದ ಘಟನಾವಳಿಗಳನ್ನೂ, ಆ ಘಟನಾವಳಿಗಳಿಗೆ ಹಿನ್ನೆಲೆಯಾಗಿ ಒದಗಿಬಂದ ಭೂಮಿಕೆಯನ್ನೂ ನೆನಪಿಸಿಕೊಳ್ಳಬೇಕು.

ಕಳೆದ ವರ್ಷ ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳು ಭಾರತದ ನೆಲಸ್ಪರ್ಶ ಮಾಡಿದವು. ರಫೇಲ್ ಬೇಕೇಬೆನ್ನುವ ಅನಿವಾರ್ಯತೆಯನ್ನು ಸೃಷ್ಟಿಸಿದ ಪ್ರಸಂಗಗಳ ಅರಿವಾಗಬೇಕಾದರೆ ನಾವು ಇನ್ನೂ ಒಂದು ವರ್ಷ ಹಿಂದೆ ನಡೆದ ಘಟನಾವಳಿಗಳನ್ನು ಅವಲೋಕಿಸಬೇಕು. ಫೆ 14, 2019ರಂದು ಕಾಶ್ಮೀರದ ಪುಲ್ವಾಮಾ ಪಟ್ಟಣ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಸಿಆರ್​ಪಿಎಫ್​ ಯೋಧರ ವಾಹನಸಾಲಿನ ಬಸ್ ಒಂದನ್ನು ಉಗ್ರಗಾಮಿಗಳು ಸ್ಫೋಟಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಫೆ.26ರಂದು ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಜೈಷ್-ಎ-ಮೊಹಮದ್ ಉಗ್ರರ ತರಬೇತಿ ಶಿಬಿರದ ಮೇಲೆ ಬಾಂಬ್ ಎಸೆದು ಬಂದವು.

ಈ ಬೆಳವಣಿಗೆಯ ನಂತರ ಕ್ಷಿಪ್ರಗತಿಯಲ್ಲಿ ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಭಾರತದ ಸೇನಾನೆಲೆಗಳತ್ತ ಬರುತ್ತಿದ್ದ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧವಿಮಾನಗಳೊಂದಿಗೆ ಭಾರತದ ಹಳೆಯ ಮಿಗ್-21 ಯುದ್ಧವಿಮಾನಗಳು ಹೋರಾಡಿದವು. ರಕ್ಷಣೆಗೆ ನಿಯೋಜಿಸಿದ್ದ ಸುಖೋಯ್ ವಿಮಾನಗಳು ಹೊಸಕಾಲದ ಸಂಘರ್ಷದಲ್ಲಿ ಪರಿಣಾಮಕಾರಿಯಾಗಲಾರದು ಎಂದು ಹಿರಿಯ ರಣತಂತ್ರ ನಿಪುಣರಿಗೆ ಮನವರಿಕೆಯಾದ ಘಳಿಗೆಯಿದು.

‘ನಮ್ಮ ಬಳಿ ರಫೇಲ್ ಇದ್ದಿದ್ದರೆ’ ಎಂದು ಅಂದಿನ ವಾಯುಪಡೆ ಮುಖ್ಯಸ್ಥರ ಸಹಿತ ಹಲವರು ಉದ್ಗರಿಸಿದ್ದನ್ನು ಈ ಸಂದರ್ಭ ನೆನಪಿಸಿಕೊಳ್ಳಬಹುದು. ಭಾರತಕ್ಕೆ ರಫೇಲ್​ ಬರುವ ಹಾದಿಯನ್ನು ಸುಗಮಗೊಳಿಸಿದ ಈ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡೇ ನಂತರದ ದಿನಗಳಲ್ಲಿ ಏನೆಲ್ಲಾ ಆಯಿತು ಎಂಬುದನ್ನು ಪರಿಶೀಲಿಸಬೇಕು.

ಇಂದಿಗೂ ಅಷ್ಟೇ, ದೇಶಕ್ಕಿರುವ ರಕ್ಷಣಾ ಸವಾಲು ಯೋಚಿಸಿದರೆ ಗಡಿಯ ಮುಂಚೂಣಿ ನೆಲೆಗಳಲ್ಲಿ ನಿಯೋಜನೆಗೊಂಡಿರುವ ಭಾರತೀಯ ವಾಯುಪಡೆಯ ವಿಮಾನಗಳಿಗೆ ಎಲೆಕ್ಟ್ರಾನಿಕ್ ಯುದ್ಧೋಪಕರಣ ಮತ್ತು ಅತ್ಯಾಧುನಿಕ ಕ್ಷಿಪಣಿಗಳ ಅಳವಡಿಕೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ರಫೇಲ್ ಒಪ್ಪಂದ ಅಂತಿಮಗೊಳ್ಳುವವರೆಗೆ ಅಂದರೆ ದಶಕಗಳ ಕಾಲ ಭಾರತದ ವಾಯುಸೇನೆಯನ್ನು ಉನ್ನತದರ್ಜೆಗೇರಿಸುವ ಪ್ರಕ್ರಿಯೆಗೆ ವೇಗ ಸಿಗಲಿಲ್ಲ. ವಾಯುದಾಳಿ ತಡೆಯುವ ವಿಚಾರದಲ್ಲಿ ಅತ್ಯಂತ ಮುಖ್ಯ ಎನಿಸುವ ನೆಲದಿಂದ ಆಗಸಕ್ಕೆ ಚಿಮ್ಮುವ, ವಿಮಾನದಿಂದ ಹಾರಿಬಿಡುವ ಕ್ಷಿಪಣಿಗಳ ಅಗತ್ಯ ಬಾಲಾಕೋಟ್​ ನಂತರದ ಬೆಳವಣಿಗೆಗಳಲ್ಲಿ ಎದ್ದು ಕಾಣಿಸಿತು.

ಇದನ್ನೂ ಓದಿ: ಕ್ರೆಡಿಟ್ ರೇಟಿಂಗ್ ಎಂದರೇನು? ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಅಷ್ಟೇಕೆ ತಕರಾರು ಮಾಡಿತು?

ಡಿಫೆನ್ಸ್​ ಎಕ್ಸ್​ಪೊದಲ್ಲಿ ಪ್ರಧಾನಿ ನರೇಂದ್ರ ಮೋದಿ

ಗಾಲ್ವಾನ್ ಸಂಘರ್ಷ: ರಕ್ಷಣೆಗೆ ಒತ್ತು ಬಾಲಾಕೋಟ್​ ದಾಳಿ ಮತ್ತು ಅದರ ನಂತರದ ಪರಿಣಾಮಗಳಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಚೀನಾಗಡಿಯಲ್ಲಿ ಉದ್ವಿಗ್ನತೆ ತಲೆದೋರಿತು. ಗಾಲ್ವಾನ್​ ಕಣಿವೆ ಸಂಘರ್ಷದಲ್ಲಿ ಓರ್ವ ಕಮಾಂಡಿಂಗ್ ಆಫೀಸರ್ ಸೇರಿ 20 ಯೋಧರು ಹುತಾತ್ಮರಾದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಭಾರತದ ವಿರುದ್ಧ ಚೀನಾ ಇಂದಲ್ಲದಿದ್ದರೆ ನಾಳೆ ತೊಡೆತಟ್ಟಬಹುದು ಎಂಬ ಲೆಕ್ಕಾಚಾರ ಇತ್ತಾದರೂ ಆ ಘಳಿಗೆ ಇಷ್ಟು ಬೇಗ ಬಂದೇ ಬಿಡಬಹುದು ಎಂದು ರಕ್ಷಣಾ ಇಲಾಖೆ ಅಂದಾಜಿಸಿರಲಿಲ್ಲ.

ಭಾರತದ ಗಡಿಯುದ್ದಕ್ಕೂ ಉತ್ತಮ ರಸ್ತೆಗಳನ್ನು ನಿರ್ಮಿಸಿರುವ ಚೀನಾ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಿಕೊಂಡ ನಂತರವೇ ಭಾರತವನ್ನು ಕೆಣಕುವ ಸಾಹಸ ಮಾಡಿತು. ಚೀನಾ ಗಡಿ ಒತ್ತರಿಸಿದೆ ಎಂಬ ವಿಚಾರ ಭಾರತದ ಗಮನಕ್ಕೆ ಬರುವ ಹೊತ್ತಿಗೆ ಅತ್ಯಾಧುನಿಕ ರಾಡಾರ್​ಗಳು, ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್​ಗಳೊಂದಿಗೆ ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್​ಎ) ಭಾರತದ ಗಡಿಗೆ ಬಂದಿತ್ತು. ಸೈನಿಕರ ಧೈರ್ಯ, ಹಿರಿಯ ಸೇನಾಧಿಕಾರಿಗಳು ತುರ್ತಾಗಿ ರೂಪಿಸಿದ ರಣತಂತ್ರ ಮತ್ತು ಭಾರತೀಯ ಸೇನೆಯ ಕಾರ್ಯವನ್ನು ಜಾಗತಿಕ ವೇದಿಕೆಗಳಲ್ಲಿ ಸಮರ್ಥಿಸಿಕೊಂಡು ವಿದೇಶಾಂಗ ಇಲಾಖೆಯ ಸಂಘಟಿತ ಕಾರ್ಯವೈಖರಿಯಿಂದ ಚೀನಾ ಹುನ್ನಾರಕ್ಕೆ ಹಿನ್ನೆಡೆಯಾಯಿತು.

ಆದರೂ ಗಡಿಯಲ್ಲಿ ಎಲ್ಲವೂ ಸರಿಯಿಲ್ಲ, ಚೀನಾದ ಸಾಮರ್ಥ್ಯಕ್ಕೆ ಸರಿಗಟ್ಟುವ ಸೇನೆ ಭಾರತಕ್ಕೆ ಬೇಕು ಎಂದು ಸರ್ಕಾರಕ್ಕೆ ಚೆನ್ನಾಗಿ ಮನವರಿಕೆಯಾದ ಕ್ಷಣಗಳಿವು. ಗಾಲ್ವಾನ್ ಸಂಘರ್ಷದ ನಂತರ ಮೋದಿ ಸರ್ಕಾರವು ಸೇನೆಗೆ ಅತ್ಯಗತ್ಯವಾಗಿ ಬೇಕಿರುವ ಯುದ್ಧೋಪಕರಣ ಖರೀದಿಗೆ ತುರ್ತಾಗಿ ₹ 500 ಕೋಟಿ ಬಿಡುಗಡೆ ಮಾಡಿತ್ತು. ಈ ಅನುದಾನದ ಆಸರೆಯಲ್ಲಿ ಸೇನೆ ತನ್ನ ತುರ್ತು ಅಗತ್ಯಗಳನ್ನು ಈಡೇರಿಸಿಕೊಂಡಿತು.

ಇದನ್ನೂ ಓದಿ: Explainer | ರೈಲ್ವೆ ಇಲಾಖೆಯ ಗ್ರೂಪ್​ ಸಿ ಅಧಿಕಾರಿಗೆ ಸೇನಾ ಮೆಡಲ್, ರಕ್ಷಣಾ ಇತಿಹಾಸದಲ್ಲಿದು ಮಹತ್ವದ ವಿದ್ಯಮಾನ

ಕಾಲುಭಾಗ ಕಡಿಮೆ ರಕ್ಷಣಾ ಪಡೆಗಳ ಬಜೆಟ್ ಅನುದಾನದ ಬೇಡಿಕೆಗೂ, ಪ್ರತಿವರ್ಷ ಸರ್ಕಾರ ಒದಗಿಸುವ ಅನುದಾನದ ಮೊತ್ತಕ್ಕೂ ಸಾಮಾನ್ಯವಾಗಿ ಶೇ 25ರಷ್ಟು ಅಂತರವಿರುತ್ತದೆ. ಅಂದರೆ ಭೂಸೇನೆ ತನಗೆ 100 ರೂಪಾಯಿ ಬೇಕು ಅಂದರೆ, ಸರ್ಕಾರ ಕೊಡುವುದು ಕೇವಲ 75 ರೂಪಾಯಿ ಮಾತ್ರ. ಹೀಗೆ ಮಾಡುವುದರಿಂದ ಎಷ್ಟೋ ಸಲ ಸಿಕ್ಕಷ್ಟು ಹಣವನ್ನು ಹೇಗೆ ಬಳಸಬೇಕು ಎಂದು ಯೋಚಿಸಬೇಕಾದ ಸ್ಥಿತಿ ಬರುತ್ತದೆ. ನಿವೃತ್ತ ಸಿಬ್ಬಂದಿಯ ಪಿಂಚಣಿ ಹೊರೆಯನ್ನಾದರೂ ಸರ್ಕಾರ ಹೊತ್ತುಕೊಳ್ಳಬೇಕು, ಅದನ್ನು ರಕ್ಷಣಾ ಬಜೆಟ್​ನಿಂದ ಬೇರ್ಪಡಿಸಬೇಕು ಎಂಬ ಹಳೇ ಬೇಡಿಕೆ ಮತ್ತೆ ಮುನ್ನೆಲೆಗೆ ಬರಲು ಇದು ಮುಖ್ಯ ಕಾರಣ.

ರಕ್ಷಣೆಗಾಗಿ ಖರ್ಚು ಮಾಡುವ ವಿಚಾರಕ್ಕೆ ಬಂದರೆ ಭಾರತಕ್ಕಿಂತಲೂ ಚೀನಾ ಮುಂದಿದೆ. ರಕ್ಷಣೆಗಾಗಿ ವಿಶ್ವದಲ್ಲಿ ಅತಿಹೆಚ್ಚು ಹಣ ಖರ್ಚು ಮಾಡುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ನಂತರದ ಸ್ಥಾನದಲ್ಲಿದೆ. ಉದಾಹರಣೆಗೆ 2019ರಲ್ಲಿ ಅಮೆರಿಕ 732 ಶತಕೋಟಿ ಡಾಲರ್ ಖರ್ಚು ಮಾಡಿದ್ದರೆ, ಚೀನಾ 177.6 ಶತಕೋಟಿ ಡಾಲರ್ ಮೀಸಲಿಟ್ಟಿತ್ತು. ಈ ಅವಧಿಯಲ್ಲಿ ರಕ್ಷಣೆಗಾಗಿ ಭಾರತ ಮೀಸಲಿಟ್ಟಿದ್ದ ಮೊತ್ತ 71.1 ಶತಕೋಟಿ ಡಾಲರ್.

2020ರಲ್ಲಿ ರಕ್ಷಣೆಗಾಗಿ ಚೀನಾ 179 ಶತಕೋಟಿ ಡಾಲರ್​ ಮೀಸಲಿಟ್ಟಿತ್ತು. ಭಾರತವು ಈ ಅವಧಿಯಲ್ಲಿ 70 ಶತಕೋಟಿ ಡಾಲರ್ ಮೀಸಲಿಟ್ಟಿತ್ತು. ರಕ್ಷಣಾ ವೆಚ್ಚಕ್ಕಾಗಿ ಭಾರತ ಮೀಸಲಿಟ್ಟಿರುವ ಮೊತ್ತದಲ್ಲಿ ಅರ್ಧದಷ್ಟು ಹಣ ಸಂಬಳ ಮತ್ತು ಪಿಂಚಣಿಗಾಗಿಯೇ (ನಿರ್ವಹಣಾ ವೆಚ್ಚ) ವ್ಯಯವಾಗುತ್ತದೆ. ಉಳಿದದ್ದರಲ್ಲಿ ಯುದ್ಧೋಪಕರಣ ಖರೀದಿ ಮತ್ತು ಇತರ ದೀರ್ಘಾವಧಿ ವೆಚ್ಚಗಳು (ಬಂಡವಾಳ ವೆಚ್ಚ) ಸರಿದೂಗಿಸಬೇಕು.

2020-21ರಲ್ಲಿ ಭಾರತ ಸರ್ಕಾರದ ಒಟ್ಟು ವೆಚ್ಚಗಳ ಪೈಕಿ ರಕ್ಷಣೆಯ ವೆಚ್ಚ ಶೇ 15.5 ಇತ್ತು. ಈ ಅವಧಿಯಲ್ಲಿ ಚೀನಾದ ರಕ್ಷಣಾ ವೆಚ್ಚ ಆ ದೇಶದ ಬಜೆಟ್ ಗಾತ್ರದ ಶೇ 36.2 ಇತ್ತು. ಚೀನಾ ತನ್ನ ರಕ್ಷಣಾ ವೆಚ್ಚವನ್ನು ಪೂರ್ಣಪ್ರಮಾಣದಲ್ಲಿ ಬಜೆಟ್ ದಾಖಲೆಗಳಲ್ಲಿ ತೋರಿಸುತ್ತಿಲ್ಲ. 2019ರಲ್ಲಿ ಚೀನಾದ ರಕ್ಷಣಾ ವೆಚ್ಚ 240 ಶತಕೋಟಿ ಡಾಲರ್ ಇತ್ತು. ಆದರೆ ಅಧಿಕೃತವಾಗಿ ಅದು 177.6 ಶತಕೋಟಿ ಡಾಲರ್ ಎಂದು ಘೋಷಿಸಿಕೊಂಡಿತ್ತು. ಭಾರತ ಎಂದಿಗೂ ಚೀನಾದಷ್ಟು ರಕ್ಷಣಾ ವೆಚ್ಚ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಬೇಕು ಎಂದುಕೊಂಡರೆ ಅದು ಮೂರ್ಖತನ ಆಗುತ್ತದೆ.

ಇದನ್ನೂ ಓದಿ: ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು

ಸಮರಾಭ್ಯಾಸದಲ್ಲಿ ಭಾರತೀಯ ನೌಕಾಪಡೆ

ಸಾಗರದಲ್ಲಿದೆ ಡ್ರಾಗನ್ ಬಾಲ ರಕ್ಷಣೆಗಾಗಿ ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ಯುದ್ಧಭೂಮಿಯನ್ನು ಜಾಣತನದಿಂದ ಆಯ್ಕೆ ಮಾಡಿಕೊಳ್ಳಬೇಕಾದ್ದು ಅನಿವಾರ್ಯ. ಹಿಮಾಲಯದಲ್ಲಿ ಎಷ್ಟು ದಿನ ಸನ್ನದ್ಧಸ್ಥಿತಿಯಲ್ಲಿದ್ದರೂ, ಅಪ್ಪಿತಪ್ಪಿ ಸಂಘರ್ಷ ನಡೆದರೂ ಎರಡೂ ದೇಶಗಳಿಗೆ ಏನೂ ಲಾಭವಿಲ್ಲ. ಆರ್ಥಿಕವಾಗಿ ಚೀನಾ ಇದನ್ನು ನಿಭಾಯಿಸಬಲ್ಲದಾದರೂ, ಭಾರತಕ್ಕೆ ಇದು ಹೊರೆಯಾದೀತು. ಆದರೆ ಹಿಂದೂ ಮಹಾಸಾಗರದಲ್ಲಿ ಚೀನಾದ ಬಾಲ ಹಿಂಡಿದರೆ, ಹಿಮಾಲಯದಲ್ಲಿ ಡ್ರಾಗನ್ ಹಿಂದೆ ಸರಿಯುತ್ತದೆ. ಈ ತಂತ್ರವನ್ನು ಕಾರ್ಯಸಾಧುವಾಗಿಸಿಕೊಳ್ಳಲು ಪ್ರಬಲ ನೌಕಾಪಡೆ ಬೇಕು. ಅದೇ ಈ ಹೊತ್ತಿನ ಬಜೆಟ್​ನಲ್ಲಿ ಆದ್ಯತೆಯಾಗಬೇಕು.

ಟ್ಯಾಂಕ್ ನಾಶಕ ಗುರಿ ನಿರ್ದೇಶಿತ ಕ್ಷಿಪಣಿಗಳಿರುವ ಎದುರಾಳಿಯ ಎದುರು ಟ್ಯಾಂಕ್​ಗಳನ್ನು ಖರೀದಿಸಿ ನಿಲ್ಲಿಸುವುದು ಜಾಣತನವಾದೀತೆ? ಚೀನಾದಂಥ ಪ್ರಬಲ ದೇಶವನ್ನು ಎದುರು ಹಾಕಿಕೊಂಡಾಗ ಏರ್​ಡಿಫೆನ್ಸ್​ಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಎಂಬುದು ನಿರ್ವಿವಾದ. ಈ ನೆಲೆಗಟ್ಟಿನಿಂದ ಯೋಚಿಸಿದರೆ ರಕ್ಷಣಾ ಆದ್ಯತೆಗಳು ಏನಾಗಿರಬೇಕು ಎಂಬುದು ಸ್ಪಷ್ಟವಾಗುತ್ತವೆ.

ಚೀನಾ ಸೇನೆಯು ದಿನದಿಂದ ದಿನಕ್ಕೆ ಮಾನವ ಕೇಂದ್ರೀತ ಯುದ್ಧತಂತ್ರಗಳಿಂದ ತಂತ್ರಜ್ಞಾನ ಆಧರಿತ ಯುದ್ಧತಂತ್ರಗಳ ಬಳಕೆಯ ಕಡೆಗೆ ಹೆಚ್ಚು ಒತ್ತು ನೀಡುತ್ತಿದೆ. ರಾಕೆಟ್​ ಫೋರ್ಸ್​ ಅನ್ನು ಭೂಸೇನೆಯ ಬಲಾಢ್ಯ ಅಂಗವಾಗಿಸಿದೆ. ಶಸ್ತ್ರಸಜ್ಜಿತ ಡ್ರೋಣ್​ಗಳೊಂದಿಗೆ ಸೈಬರ್ ಮತ್ತು ಬಾಹ್ಯಾಕಾಶಗಳನ್ನೂ ರಣರಂಗವಾಗಿಸಲು ಮುಂದಾಗಿದೆ. ನೌಕಾಪಡೆಯ ಮೇಲೆಯೂ ಗಮನಾರ್ಹ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತಿದೆ. ಕಣ್ಣಿಗೆ ಕಾಣುವ ಇಬ್ಬರು ವೈರಿಗಳ ಬಲವೃದ್ಧಿಯನ್ನು ನೋಡಿಕೊಂಡು ಭಾರತ ಸುಮ್ಮನೆ ಕೂರುವಂತಿಲ್ಲ. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಜೊತೆಜೊತೆಗೆ ಮುಂದಿನ ದಿನಗಳಲ್ಲಿ ಸೈಬರ್​ ಯುದ್ಧತಂತ್ರಗಳತ್ತಲೂ ಹೆಚ್ಚು ಗಮನಹರಿಸಬೇಕಿದೆ. ಪೂರಕ ಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಿಕೊಡಬೇಕಿದೆ.

ಇದನ್ನೂ ಓದಿ: ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ, ಅದರರ್ಥವೇನು?

ಭಾರತೀಯ ಸೈನಿಕರು (ಪ್ರಾತಿನಿಧಿಕ ಚಿತ್ರ)

ರಕ್ಷಣೆಯಲ್ಲಿ ಸ್ವಾವಲಂಬನೆ ಈ ಹೊತ್ತಿನ ತುರ್ತು ಎಚ್​ಎಎಲ್ ನಿರ್ಮಿತ ಲಘು ಯುದ್ಧ ವಿಮಾನವನ್ನು (ಎಲ್​ಸಿಎ) ವಾಯುಪಡೆ ಸ್ವೀಕರಿಸಿದ ಮಹತ್ವದ ವರ್ಷ ಇದು. ವಾಯುಪಡೆಯ ವಿಚಾರದಲ್ಲಿ ಇದು ಐತಿಹಾಸಿಕ ಕ್ಷಣ. ಇದೇ ಹೊತ್ತಿಗೆ ಇಲ್ಲಿನ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ (ಆರ್ಡಿನೆನ್ಸ್​ ಫ್ಯಾಕ್ಟರಿ) ಗುಣಮಟ್ಟದ ಉತ್ಪನ್ನಗಳನ್ನು ಕೊಡುವುದಿಲ್ಲ ಎಂದು ಸೇನಾಧಿಕಾರಿಯೊಬ್ಬರು ಹೇಳಿ, ದೊಡ್ಡ ವಿವಾದವೆದ್ದಿದ್ದು ನಿಮಗೆ ನೆನಪಿರಬಹುದು. ಇದು ತಲೆತಗ್ಗಿಸುವಂತೆ ಮಾಡಿದ ವಿಚಾರ.

ರಕ್ಷಣಾ ಉಪಕರಣಗಳ ವಿಚಾರದಲ್ಲಿ ಭಾರತ ಸಂಪೂರ್ಣ ಆಮದು ಅವಲಂಬಿತ ದೇಶವಾಗಿದೆ. ಆತ್ಮನಿರ್ಭರ್, ಮೇಕ್​ ಇನ್ ಇಂಡಿಯಾದಂಥ ಹಲವು ಘೋಷಣೆಗಳ ನಂತರವೂ ರಕ್ಷಣಾ ಉಪಕರಣಗಳ ವಿಚಾರದಲ್ಲಿ ಭಾರತಕ್ಕೆ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿಲ್ಲ. ದೇಶೀಯ ಉತ್ಪಾದನೆ ಹೆಚ್ಚಾಗಿ, ಆಮದು ಬಂಧನದಿಂದ ಬಿಡಿಸಿಕೊಳ್ಳುವವರೆಗೂ ವೆಚ್ಚವನ್ನು ಸರಿದೂಗಿಸುವುದು ಕಷ್ಟಕಷ್ಟ. ಏಕೆಂದರೆ ವಿದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ದೇಶೀಯ ನಿರ್ಮಾಣಕ್ಕಿಂತಲೂ ವೆಚ್ಚದಾಯಕ.

ಯುದ್ಧೋಪಕರಣಗಳನ್ನು ಆಮದು ಮಾಡಿಕೊಳ್ಳುವ ಪಟ್ಟಿಯಲ್ಲಿ ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಭಾರತ ಮತ್ತು 3ನೇ ಸ್ಥಾನದಲ್ಲಿ ಈಜಿಪ್ಟ್ ಇದೆ. ಯುದ್ಧೋಪಕರಣಗಳನ್ನು ದೇಶದೊಳಗೆ ನಿರ್ಮಿಸುವ ಪ್ರಕ್ರಿಯೆಗೆ ಪ್ರೋತ್ಸಾಹ ನೀಡಲು 2020ರಲ್ಲಿ ₹52,000 ಕೋಟಿ ಮೊತ್ತವನ್ನು ತೆಗೆದಿರಿಸಿತ್ತು. ಇಷ್ಟು ಮೊತ್ತದ ಯುದ್ಧೋಪಕರಣಗಳನ್ನು ದೇಶೀಯ ತಯಾರಿಕರಿಂದಲೇ ಖರೀದಿಸುವುದಾಗಿ ಸರ್ಕಾರ ಘೋಷಿಸಿತ್ತು. ಈ ವರ್ಷವೂ ಈ ಮೊತ್ತ ಹೆಚ್ಚಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಯುದ್ಧಭೂಮಿಯ ನಿಯಮಗಳು ಈಗ ಬದಲಾಗಿವೆ. ಸಶಸ್ತ್ರಪಡೆಗಳ ಸಿಬ್ಬಂದಿ ಸಂಘಟನೆಯನ್ನು ಕಾಲಕ್ಕೆ ತಕ್ಕಂತೆ ಮಾರ್ಪಡಿಸಿ, ಭೂಸೇನೆ-ವಾಯುಪಡೆ-ನೌಕಾಪಡೆಗಳ ಏಕೀಕೃತ ಕಮಾಂಡ್ ವ್ಯವಸ್ಥೆ ನೆಲೆಗೊಳಿಸುವ ಘೋಷಣೆ ಮತ್ತು ಚಿಂತನಮಂಥನಗಳು ಈವರೆಗೆ ಕಾರ್ಯರೂಪಕ್ಕೆ ಬರಲಿಲ್ಲ. ಈ ಬಾರಿಯ ಬಜೆಟ್​ನಲ್ಲಿ ಇದಕ್ಕೆ ಹೆಚ್ಚು ಸಿಗಬೇಕೆನ್ನುವ ನಿರೀಕ್ಷೆ ವ್ಯಕ್ತವಾಗಿದೆ.

ಭಾರತಕ್ಕೆ ಆಧುನಿಕ ತಂತ್ರಜ್ಞಾನ ಆಧರಿತ, ಅತಿವೇಗದಲ್ಲಿ ದಾಳಿ ಮಾಡುವ ಸಾಮರ್ಥ್ಯವಿರುವ ಡ್ರೋಣ್​ಗಳು ಬೇಕಿದೆ. ಈಚೆಗಷ್ಟೇ ಸೇನೆಯು 75 ದೇಶೀಯ ನಿರ್ಮಿತ ದಾಳಿ ಸಾಮರ್ಥ್ಯದ ಡ್ರೋಣ್​ಗಳನ್ನು ಪ್ರದರ್ಶಿಸಿತ್ತು. ಕೃತಕ ಬುದ್ಧಿಮತ್ತೆ ಸಾಮರ್ಥ್ಯದ ಡ್ರೋಣ್​ಗಳು ಭವಿಷ್ಯದ ಯುದ್ಧತಂತ್ರದ ದೃಷ್ಟಿಯಿಂದ ಅನಿವಾರ್ಯ. ಸಬ್​ಮರೀನ್​ಗಳಿಂದ ಉಡಾವಣೆ ಮಾಡಬಹುದಾದ ಖಡಾಂತರ ಕ್ಷಿಪಣಿಗಳಿಗೂ ಈ ಬಾರಿಯ ಬಜೆಟ್​ನಲ್ಲಿ ಒತ್ತು ಸಿಗಬೇಕಿದೆ. ರಷ್ಯಾದಿಂದ ಖರೀದಿಸಿರುವ ಎಸ್​-400 ವಾಯುರಕ್ಷಣಾ ವ್ಯವಸ್ಥೆಯು ಇದೇ ವರ್ಷ ಕಾರ್ಯಾರಂಭ ಮಾಡಬಹುದು ಎಂಬ ನಿರೀಕ್ಷೆಯಿದೆ.

ಈ ವರ್ಷ ಭಾರತವು ಅನೇಕ ಮಿಲಿಟರಿ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಯಿದೆ. ಇದರಲ್ಲಿ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ರುಸ್ತೊಂ ಮಾನವರಹಿತ ವೈಮಾನಿಕ ವಾಹನ ಹಾರಾಟದ ಅಂತಿಮ ಹಂತದ ಪರೀಕ್ಷೆಗಳು ಸೇರಿವೆ. ದೂರಗಾಮಿ ಟ್ಯಾಂಕ್ ನಿರೋಧಕ ಸ್ಪೈಕ್ ಕ್ಷಿಪಣಿಗಳನ್ನು ಪಡೆದುಕೊಳ್ಳುವ ಉದ್ದೇಶವನ್ನೂ ಭಾರತ ಹೊಂದಿದೆ.

ಲಾಕ್​ಡೌನ್ ಕಾರಣದಿಂದ ಈ ಬಾರಿ ಆರ್ಥಿಕತೆ ಕಳಾಹೀನವಾಗಿದೆ. ಆದರೂ ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲವೇ ಇಲ್ಲ ಎಂದು ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನಾಯಕರು ಹೇಳಿದ್ದಾರೆ. ಈ ಹೇಳಿಕೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಬಜೆಟ್​ ಭಾಷಣದ ನಂತರ ತಿಳಿಯಲಿದೆ.

Budget 2021 | ರಾಜಾ ಶೈಲೇಶ್​ಚಂದ್ರ ಗುಪ್ತ ಬರಹ: ದುಡಿಯುವ ಭರವಸೆ ಬಿತ್ತುವುದೇ ನಿರ್ಮಲಾ ಸೀತಾರಾಮನ್ ಎದುರಿಗಿರುವ ಅತಿದೊಡ್ಡ ಸವಾಲು

Budget 2021 | ಕೃಷಿಯೊಂದೇ ಭರವಸೆ ಎನ್ನುತ್ತೆ Economic Survey

Budget 2021 | ರೈತರ ಖಾತೆಗೆ ಹೆಚ್ಚು ಹಣ, ಕಿಸಾನ್ ಸಮ್ಮಾನ್ ಮೊತ್ತ ₹10,000ಕ್ಕೆ ಏರುವ ನಿರೀಕ್ಷೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada