ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ 2020-21 ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಭಾರತದ ಆರ್ಥಿಕ ವ್ಯವಸ್ಥೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರವು ಕೊವಿಡ್-19 ಲಸಿಕೆ ನೀಡುವ ಕಾರ್ಯಕ್ರಮವನ್ನು ದೇಶದಾದ್ಯಂತ ಆರಂಭಿಸಿರುವುದು ಮತ್ತು ಗ್ರಾಹಕ ಬೇಡಿಕೆಯಲ್ಲಿ ಭಾರಿ ಹೆಚ್ಚಳ ಕಂಡಿರುವುದು ಆರ್ಥಿಕ ಚೇತರಿಕೆಗೆ ಕಾರಣವಾಗಿದೆ ಎಂದು ಸಮೀಕ್ಷೆ ತಿಳಿಸುತ್ತದೆ.
V-ಆಕಾರದ ಚೇತರಿಕೆ ಎಂದರೇನು? ಈ ಪ್ರಶ್ನೆ ನಮ್ಮಲ್ಲಿ ಮೂಡೋದು ಸಹಜವೇ. ಕೊವಿಡ್-19 ಪಿಡುಗು ಸೃಷ್ಟಿಸಿದ ಅವಾಂತರ ಕೇವಲ ಭಾರತದ ಆರ್ಥಿಕತೆ ಮೇಲೆ ಮಾತ್ರ ವಕ್ರ ಪರಿಣಾಮ ಬೀರಲಿಲ್ಲ, ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಅದರಡಿ ಸಿಲುಕಿ ನಲುಗುತ್ತಿದೆ. ಅಮೆರಿಕ ಸೇರಿದಂತೆ ಆರ್ಥಿಕವಾಗಿ ಬಲಾಢ್ಯವಾಗಿರುವ ಹಲವು ರಾಷ್ಟ್ರಗಳು ಸಹ ಚೇತರಿಸಿಕೊಳ್ಳಲು ಒದ್ದಾಡುತ್ತಿವೆ. ಆರ್ಥಿಕ ತಜ್ಞರ ಪ್ರಕಾರ V-ಆಕಾರದ ಚೇತರಿಕೆ ಎಂದರೆ ಕುಸಿದುಬಿದ್ದ ಆರ್ಥಿಕ ವ್ಯವಸ್ಥೆ ಪುನಃ ಮೊದಲಿನ ಸ್ಥಿತಿಗೆ ವಾಪಸ್ಸಾಗುವುದು.
ಒಂದು ದೇಶದ ಆರ್ಥಿಕ ವ್ಯವಸ್ಥೆಯ ಚೇತರಿಕೆಯನ್ನು ವಿವರಿಸಲು ತಜ್ಞರು L-ಆಕಾರ, W-ಆಕಾರ, U-ಆಕಾರ, J-ಆಕಾರದ ಆರ್ಥಿಕ ಚೇತರಿಕೆಯ ಪಾರಿಭಾಷಿಕ ಪದಗಳನ್ನು ಬಳಸುತ್ತಾರೆ. ಪ್ರತಿಯೊಂದು ಆಕಾರದ ಪಟ ಆರ್ಥಿಕ ಸ್ವಾಸ್ಥ್ಯವನ್ನು ಪ್ರತಿನಿಧಿಸುತ್ತದೆ. ಉದ್ಯೋಗ ದರ, ಒಟ್ಟು ದೇಶೀಯ ಉತ್ಪನ್ನ, ಕೈಗಾರಿಕಾ ಉತ್ಪನ್ನ ಸೂಚ್ಯಂಕ ಮೊದಲಾದ ಆಯಾಮಗಳನ್ನು ಆಧಾರದವಾಗಿಟ್ಟುಕೊಳ್ಳುವ ತಜ್ಞರು ಆರ್ಥಿಕ ಸ್ವಾಸ್ಥ್ಯವನ್ನು ಮೇಲೆ ಹೇಳಿರುವ ಆಕಾರಗಳ ಮೂಲಕ ತಿಳಿಸುತ್ತಾರೆ.
ಇದನ್ನೂ ಓದಿ: ಈ ಬಾರಿಯ ಬಜೆಟ್ನಲ್ಲಿ ಜನಸಾಮಾನ್ಯರ ನಿರೀಕ್ಷೆಗಳೇನು?
ಹೀಗಿತ್ತು ಲಾಕ್ಡೌನ್
ಇಂಥ ಇತರ ಉದಾಹರಣೆಗಳಿವೆಯೇ? V-ಆಕಾರದ ಚೇತರಿಕೆಯಲ್ಲಿ ಆರ್ಥಿಕತೆಯು ತೀವ್ರವಾದ ಕುಸಿತ ಕಂಡ ನಂತರ ಶೀಘ್ರ ಗತಿಯಲ್ಲಿ ಚೇತರಿಸಿಕೊಳ್ಳುತ್ತದೆ. ಗ್ರಾಹಕರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಿ, ವ್ಯವಹಾರಗಳಲ್ಲಿ ಹಣವನ್ನು ಹೂಡಿದಾಗ ಆರ್ಥಿಕ ಚಟುವಟಿಕೆಗಳಲ್ಲಿ ಉತ್ತೇಜನಕಾರಿ ಬದಲಾವಣೆ ಕಂಡುಬರುತ್ತದೆ. ಆರ್ಥಿಕತೆ ಕುಸಿದ ನಂತರ ಅದರ ತೀವ್ರಗತಿಯ ಹೊಂದಾಣಿಕೆ ಮತ್ತು ಬೃಹತ್ ಉದ್ಯಮಗಳ ಚೇತರಿಕೆಯನ್ನು ಅತ್ಯುತ್ತಮ ಎಂದು ಪರಿಗಣಿಸುವ ಪರಿಣಿತರು ಅದನ್ನು V-ಆಕಾರದ ಚೇತರಿಕೆ ಎಂದು ವರ್ಗೀಕರಿಸುತ್ತಾರೆ. 1920-21ರ ಮಹಾಕುಸಿತ ಮತ್ತು 1953ರ ಆರ್ಥಿಕ ಕುಸಿತದ ನಂತರ ಅಮೆರಿಕ ಚೇತರಿಸಿಕೊಂಡಿದ್ದನ್ನು V-ಆಕಾರದ ಚೇತರಿಕೆಯ ಕ್ಲಾಸಿಕ್ ಉದಾಹರಣೆಗಳು ಎಂದು ಹೇಳಲಾಗುತ್ತದೆ.
ಓಕೆ, ಈಗ ಭಾರತದ ಆರ್ಥಿಕ ಸಮೀಕ್ಷೆಗೆ ವಾಪಸ್ಸಾಗುವ. ಭಾರತ ಸರ್ಕಾರದ ನಿರೀಕ್ಷೆಯಂತೆ ಲಾಕ್ಡೌನ್ ಅವಧಿಯ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಕುಸಿತ ಶೇ 23.9ರಷ್ಟಿತ್ತು. 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಇಳಿಕೆ ಶೇ 7.5 ರಷ್ಟಿತ್ತು. ಜುಲೈನಿಂದೀಚೆಗೆ ಭಾರತದ ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಸಮೀಕ್ಷೆ ತಿಳಿಸುತ್ತದೆ.
ಇದನ್ನೂ ಓದಿ: Budget 2021: ಬಜೆಟ್ ಮೊಬೈಲ್ ಆ್ಯಪ್ನಲ್ಲಿ ಏನಿದೆ?
ನಿರ್ಮಲಾ ಸೀತಾರಾಮನ್
ಶೀಘ್ರ ಚೇತರಿಕೆಗೆ ಏನು ಕಾರಣ? ಚೇತರಿಕೆಗೆ ಕಾರಣವಾಗಿರುವ ಅಂಶಗಳ ಮೇಲೆ ಬೆಳಕು ಚೆಲ್ಲಿರುವ ಸಮೀಕ್ಷೆಯು, ‘ಕೊವಿಡ್-19 ಪಿಡುಗಿನ ಅಬ್ಬರ ಭಾರತದಲ್ಲಿ ತಗ್ಗುತ್ತಿದಂತೆ ಜನ ಹೊರಬರತೊಡಗಿದರು. ಇ-ಬಿಲ್ಗಳು, ರೈಲು ಸರಕು ಸಾಗಾಣಿಕೆ, ಜಿಎಸ್ಟಿ ಸಂಗ್ರಹ ಮತ್ತು ಇಂಧನ ಬಳಕೆ ಪ್ರಮಾಣವನ್ನು ನೋಡಿದರೆ, ಭಾರತದ ಆರ್ಥಿಕತೆಯು ಕೋವಿಡ್ ಪಿಡುಗು ಕೋಲಾಹಲವೆಬ್ಬಿಸುವ ಮೊದಲಿದ್ದ ಆರ್ಥಿಕ ಸ್ಥಿತಿಗೆ ಮರಳಿದ್ದೂ ಅಲ್ಲದೆ ಕಳೆದ ವರ್ಷದ ಹಂತವನ್ನು ಸಹ ಮೀರಿದೆ’ ಎಂದು ಸಮೀಕ್ಷೆ ತಿಳಿಸುತ್ತದೆ.
ನೆರವಾಯ್ತೇ ಲಾಕ್ಡೌನ್? ಕೊರೊನಾ ವೈರಸ್ ದೇಶದೆಲ್ಲೆಡೆ ಹಬ್ಬಿದಾಗ ಭಾರತವು ಅಲ್ಪಾವಧಿಯ ತೊಂದರೆ ದೀರ್ಘಾವಧಿಯ ಲಾಭ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿತು ಎಂದು ಸಮೀಕ್ಷೆ ತಿಳಿಸುತ್ತದೆ.
‘ಮಾನವೀಯತೆಯ ದೃಷ್ಟಿಯಿಂದ ಭಾರತ ಸರ್ಕಾರ ಸ್ಥಿತಿಯನ್ನು ಎದುರಿಸಿತು. ಜನರ ಪ್ರಾಣ ಉಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿತ್ತ್ತು. ಕಠಿಣವಾದ ಲಾಕ್ಡೌನ್ ಹೇರಿದರೆ ಅದು ದೀರ್ಘಾವಧಿಯ ಪ್ರಯೋಜನ ತಂದುಕೊಡಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಜನರ ಪ್ರಾಣಗಳನ್ನು ಉಳಿಸಿ ಆರ್ಥಿಕ ಚೇತರಿಕೆಯ ವೇಗದೆಡೆ ಗಮನ ಹರಿಸಲಾಯಿತು’ ಎಂದು ಸಮೀಕ್ಷೆ ತಿಳಿಸುತ್ತದೆ.
Budget 2021 | ಆರ್ಥಿಕತೆ ಸಬಲ, ಭವಿಷ್ಯ ಆಶಾದಾಯಕ: Economic Survey ಮುಖ್ಯಾಂಶಗಳಿವು
Budget 2021 | ರೈತರ ಖಾತೆಗೆ ಹೆಚ್ಚು ಹಣ, ಕಿಸಾನ್ ಸಮ್ಮಾನ್ ಮೊತ್ತ ₹10,000ಕ್ಕೆ ಏರುವ ನಿರೀಕ್ಷೆ