ಬೆಂಗಳೂರು: ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಖಾಸಗಿ ಮತ್ತು ಅನುದಾನ ರಹಿತ ಶಿಕ್ಷಕರು ಸಂಕಷ್ಟ ಎದುರಿಸುತ್ತಿದ್ದು ಅವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಮಾಜಿ ಪ್ರದಾನಿ ಹಾಗೂ ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೆಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ ಎಚ್.ಡಿ.ದೇವೇಗೌಡ ಅವರು, ಖಾಸಗಿ ಶಾಲೆಗಳ ಶಿಕ್ಷಕರ ಸಹಾಯಕ್ಕೆ ಸರ್ಕಾರ ಕೂಡಲೇ ಧಾವಿಸಬೇಕು. ಈ ಸಂಬಂಧ ಈಗಾಗಲೇ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದೇನೆ. ಇನ್ನೂ ಮತ್ತೊಂದು ಪತ್ರವನ್ನು ಸಿಎಂ ಬಿಎಸ್ವೈಗೆ ಬರೆಯುತ್ತೇನೆ ಎಂದು ಹೇಳಿದ್ದಾರೆ.
ಕೊರೊನಾದಂಥ ಸಾರ್ವತ್ರಿಕ ಸಂಕಷ್ಟದ ಸಮಯದಲ್ಲಿ ಸರ್ಕಾರ ಮಾನವೀಯತೆ ಪ್ರದರ್ಶನ ಮಾಡಬೇಕು. ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದ ದೇವೇಗೌಡರು, ಈ ವಿಚಾರವನ್ನ ಸಂಸತ್ ಅಧಿವೇಶನಲ್ಲಿಯೂ ಚರ್ಚೆ ಮಾಡ್ತೀನಿ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಕರೂಪ ಶಿಕ್ಷಣ ನೀತಿಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸರ್ಕಾರ ಏಕರೂಪ ಶಿಕ್ಷಣ ಜಾರಿಗೆ ತರಲು ಹೊರಟಿದೆ. ಇದರಿಂದ ಅನೇಕ ಸಮಸ್ಯೆಗಳು ಆಗ್ತವೆ. ನಾನು ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡ್ತೀನಿ. ಅಂಕಿ- ಅಂಶದ ಸಮೇತ ಈ ಬಗ್ಗೆ ಧ್ವನಿ ಎತ್ತಿ ನನ್ನ ವಿರೋಧ ವ್ಯಕ್ತಪಡಿಸುತ್ತೆನೆ ಎಂದು ಹೇಳಿದ್ದಾರೆ.