ಬೆಂಗಳೂರು: ಕೇಂದ್ರದ ನೂತನ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರದಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಕ್ಕೆ ಹಿರಿಯ ಸಾಹಿತಿ, ನಾಡೋಜ ಹಂ.ಪ. ನಾಗರಾಜಯ್ಯ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ಈ ನಡೆಗೆ ಹಲವೆಡೆಯಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಏನಿದು ಪ್ರಕರಣ?
ಜ.17ರಂದು ಮಂಡ್ಯದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದ ಹಂಪನಾ ಅವರು, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರಿಸ್ಥಿತಿ ಕಂಡು ಬೇಸರವಾಗುತ್ತಿದೆ. ಪ್ರಧಾನಿ ಮೋದಿ ಅಲ್ಲಿಗೆ ಹೋಗಿ ಅವರ ಕಷ್ಟಸುಖ ವಿಚಾರಿಸಿದರೆ ಏನು ತಪ್ಪು ಎಂದು ಪ್ರಶ್ನೆ ಮಾಡಿದ್ದರು. ಜತೆಗೆ, ಮಹಾಭಾರತದ ದುರ್ಯೋಧನ ಮತ್ತು ಧರ್ಮರಾಯನ ಪಾತ್ರಗಳ ಮೂಲಕ ಸರ್ಕಾರದ ಚುಕ್ಕಾಣಿ ಹಿಡಿದಿರುವವರ ವರ್ತನೆಯನ್ನೂ ವಿಮರ್ಶೆ ಮಾಡಿದ್ದರು.
ಅವರ ಹೇಳಿಕೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಡ್ಯದ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ನಾಡೋಜ ಹಂಪನಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ದೂರುದಾರರು ಯಾವುದೇ ಸಾಕ್ಷ್ಯ ನೀಡದ ಕಾರಣ ಹಂಪನಾ ಅವರ ಹೇಳಿಕೆ ಪಡೆದು ಕಳುಹಿಸಲಾಗಿದೆ.
ಪೊಲೀಸರ ನಡೆಗೆ ಎಲ್ಲೆಡೆಯಿಂದ ಭಾರಿ ವಿರೋಧ
ಪೊಲೀಸರು ಹಿರಿಯ ಸಾಹಿತಿ ನಾಡೋಜ ಹಂಪನಾ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ ಬಗ್ಗೆ ಸಾಹಿತ್ಯ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ. ಪ್ರಜಾಪ್ರಭುತ್ವದಲ್ಲಿ ಸರಕಾರವೊಂದನ್ನು ಟೀಕಿಸುವದು ಅಪರಾಧವೇ? ಯಾರೋ ಬಿಜೆಪಿ ಕಾರ್ಯಕರ್ತರು ದೂರು ನೀಡಿದರೆಂದು ಹಿರಿಯ ಸಾಹಿತಿ ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸುವದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಲ್ಲದೆ ಬೇರೇನೂ ಅಲ್ಲ. ಹಂಪನಾ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶಾಲೆಯಲ್ಲಿ ಪಾಠ ಮಾಡಿದ ಗುರುಗಳು. ಅವರಿಗೆ ಮಾಡಿದ ಈ ಅವಮಾನವನ್ನು ನಾಡಿನ ಪ್ರಜ್ಞಾವಂತರು ಖಂಡಿಸಬೇಕಾಗಿದೆ ಎಂದು ಅನೇಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಕಿಡಿ
ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರ ಕೃತ್ಯ ಖಂಡನೀಯ. ಈ ಮೂಲಕ ಕರ್ನಾಟಕ ಬಿಜೆಪಿ ತಮ್ಮದು ದುರ್ಯೋಧನ ಸರ್ಕಾರ ಎಂದು ಸಾಬೀತುಪಡಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿರುವ ಬಿ.ಎಸ್. ಯಡಿಯೂರಪ್ಪ ಅವರ ಗೋಮುಖವ್ಯಾಘ್ರ ಮುಖ ಬಯಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.