ಕೇರಳದ ಜನರು ಕರ್ನಾಟಕ ಪ್ರವೇಶಿಸದಂತೆ ತಡೆದಿಲ್ಲ: ಡಾ.ಸುಧಾಕರ್ ಸ್ಪಷ್ಟನೆ

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳವಾರದಂದು ಪತ್ರವೊಂದನ್ನು ಬರೆದು, ಕರ್ನಾಟಕ ಸರ್ಕಾರ, ಕೇರಳದಿಂದ ಕರ್ನಾಟಕವನ್ನು ಪ್ರವೇಶಿಸುವ ವಾಹನ ಮತ್ತು ಜನರ ಮೇಲೆ ನಿಷೇಧ ವಿಧಿಸಿದೆ ಎಂದು ಹೇಳಿದ್ದಾರೆ

  • TV9 Web Team
  • Published On - 22:41 PM, 23 Feb 2021
ಕೇರಳದ ಜನರು ಕರ್ನಾಟಕ ಪ್ರವೇಶಿಸದಂತೆ ತಡೆದಿಲ್ಲ: ಡಾ.ಸುಧಾಕರ್ ಸ್ಪಷ್ಟನೆ
ಡಾ. ಕೆ ಸುಧಾಕರ್, ಆರೋಗ್ಯ ಸಚಿವರು

ಬೆಂಗಳೂರು: ಕರ್ನಾಟಕದ ನೆರೆ ರಾಜ್ಯಗಳಲ್ಲಿ ಕೊವಿಡ್-19 ಪ್ರಕರಣಗಳು ಇತ್ತೀಚಿಗೆ ಪುನ: ಹೆಚ್ಚಲಾರಂಭಿಸಿದ ನಂತರ ಎಚ್ಚರಿಕೆಯ ಕ್ರಮ ಅಂಗವಾಗಿ ರಾಜ್ಯ ಸರ್ಕಾರವು ಫೆಬ್ರುವರಿ 16ರಂದು ಬಿಡುಗಡೆ ಮಾಡಿದ ಸುತ್ತೋಲೆಯೊಂದಕ್ಕೆ ಸಂಬಂಧಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳವಾರ ಪತ್ರವೊಂದನ್ನು ಬರೆದು, ಕರ್ನಾಟಕ ಸರ್ಕಾರವು ಕೇರಳದಿಂದ ಕರ್ನಾಟಕವನ್ನು ಪ್ರವೇಶಿಸುವ ವಾಹನ ಮತ್ತು ಜನರ ಮೇಲೆ ನಿಷೇಧ ವಿಧಿಸಿದೆ ಎಂದು ಹೇಳಿರುವ ಕಾರಣ ಸುಧಾಕರ್​ ಅವರು ಸ್ಪಷ್ಟೀಕರಣ ನೀಡುವ ಪ್ರಸಂಗ ಎದುರಾಗಿದೆ.

ಕೇರಳದಿಂದ ಕರ್ನಾಟಕ ರಾಜ್ಯವನ್ನು ಪ್ರವೇಶಿಸುವ ಜನರ ಮೇಲಾಗಲೀ, ಅಥವಾ ವಾಹನಗಳ ಮೇಲಾಗಲೀ ಸರ್ಕಾರವು ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಎಂದು ಡಾ. ಸುಧಾಕರ್ ಹೇಳಿದ್ದಾರೆ.

‘ಕರ್ನಾಟಕದ ಆರೋಗ್ಯ ಸಚಿವನಾಗಿ ನಾನು ಈ ಮೂಲಕ ಸ್ಪಷ್ಟಪಡಿಸುವದೇನೆಂದರೆ, ಕೇರಳದ ಯಾವುದೇ ಭಾಗದಿಂದ ಕರ್ನಾಟಕವನ್ನು ಪ್ರವೇಶಿಸುವ ಜನರ ಮೇಲಾಗಲಿ ಅಥವಾ ವಾಹನಗಳ ಮೇಲಾಗಲೀ ನಮ್ಮ ಸರ್ಕಾರವು ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. ಜನರಾಗಲೀ, ವಾಹನಗಳಾಗಲೀ ನಮ್ಮ ಗಡಿಯನ್ನು ಪ್ರವೇಶಿಸದಂತೆ ಎಲ್ಲೂ ತಡೆದಿಲ್ಲ.

‘ಆದರೆ, ಕೇರಳದಿಂದ ಬರುವ ಜನರು ಆರ್​ಟಿಪಿಸಿಆರ್ ಟೆಸ್ಟ್​ ಮಾಡಿಸಿಕೊಂಡಿರುವ ಬಗ್ಗೆ ರಿಪೋರ್ಟ್ ಹೊಂದಿರಬೇಕಾಗಿರುವುದನ್ನು ನಾವು ಕಡ್ಡಾಯ ಮಾಡಿದ್ದೇವೆ. ಕೇರಳದ ಜನರು ಕರ್ನಾಟಕವನ್ನು ಪ್ರವೇಶಿಸುವುದಕ್ಕೆ ಮುಕ್ತರಾಗಿದ್ದಾರೆ. ಆದರೆ ಆರ್​ಟಿಪಿಸಿಆರ್ ಟೆಸ್ಟ್​ ರಿಪೋರ್ಟ್​ ಅವರು ಹೊಂದಿರಬೇಕಿರುವುದು ಅತ್ಯವಶ್ಯವಾಗಿದೆ. ಮತ್ತೊಂದು ಅಂಶವೇನೆಂದರೆ, ಅವರು ತರುವ ರಿಪೋರ್ಟ್ 72 ಗಂಟೆಗಳಿಗಿಂತ ಹಳೆಯದಾಗಿರಬಾರದು.

‘ಸದರಿ ನಿರ್ಬಂಧವನ್ನು ಕರ್ನಾಟಕ ಸರ್ಕಾರವು ಕೇವಲ ಕೇರಳದಿಂದ ಬರುವ ಜನರ ಮೇಲೆ ಮಾತ್ರ ಹೇರಿಲ್ಲ. ಮಹಾರಾಷ್ಟ್ರದಿಂದ ಬರುವ ಜನರಿಗೂ ಈ ನಿಯಮವನ್ನು ಪಾಲಿಸುವಂತೆ ತಿಳಿಸಲಾಗಿದೆ,’ ಎಂದು ಸುಧಾಕರ್ ಹೇಳಿದ್ದಾರೆ. ಕೇರಳ ಮತ್ತು ಮಹಾರಾಷ್ಟದಲ್ಲಿ ಕೊವಿಡ್​-19 ಪ್ರಕರಣಗಳು ಪುನಃ ಹೆಚ್ಚಾಗುತ್ತಿರುವುದರಿಂದ ಆ ರಾಜ್ಯಗಳಿಂದ ಕರ್ನಾಟಕಕ್ಕೆ ಸೋಂಕು ಹರಡದಂತೆ ತಡೆಯಲು ಇಂಥ ಕಟ್ಟಿನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿSAARC Workshop on COVID-19 Management ಕೊರೊನಾ ನಿರ್ವಹಣೆ ಕಾರ್ಯಾಗಾರ: ನೆರೆಯ 10 ದೇಶಗಳ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ