Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು

Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು
ಪ್ರಾತಿನಿಧಿಕ ಚಿತ್ರ

Housing Loan: ಮನೆ ಸಾಲಕ್ಕೆ ಅಷ್ಟು ಕಡಿಮೆ ಬಡ್ಡಿ ಅಂತಾರೆ. ನಮ್ಮಂತಹವರಿಗೆಲ್ಲ ಎಲ್ಲಿ ಸಿಗುತ್ತೆ ಹೇಳಿ? ಹೀಗೆ ಅಲವತ್ತುಕೊಳ್ಳುವವರಿಗಾಗಿಯೇ ಈ ಲೇಖನ. ಯಾವ ಬ್ಯಾಂಕ್​ನಲ್ಲಿ ಗೃಹ ಸಾಲದ ಬಡ್ಡಿ ದರ ಎಷ್ಟಿದೆ, ಏನೆಲ್ಲ ದಾಖಲಾತಿಗಳನ್ನು ಕೇಳಲಾಗುತ್ತದೆ, ಸಾಲ ಪಡೆಯುವಾಗ ಯಾವ ಅಂಶಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಇತ್ಯಾದಿ ವಿವರಗಳೆಲ್ಲ ಇಲ್ಲಿ ಒಂದೇ ಕಡೆ ನಿಮಗೆ ಸಿಗುತ್ತದೆ.

Skanda

|

Feb 24, 2021 | 1:07 PM

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಮನೆ ಕಟ್ಟುವುದು ಅಥವಾ ಖರೀದಿ ಮಾಡುವುದು ಎಂದರೆ ಸುಲಭದ ಕೆಲಸವೇನಲ್ಲ. ಸಾಮಾನ್ಯರಿಗಂತೂ ಕೈಯಲ್ಲಿರುವ ಹಣವನ್ನು ಮಾತ್ರ ನೆಚ್ಚಿಕೊಂಡು ಮನೆ ಕಟ್ಟುವುದಾಗಲೀ, ಖರೀದಿ ಮಾಡುವುದಾಗಲೀ ಸಾಧ್ಯವಿಲ್ಲ. ಇಷ್ಟಾದರೂ ಒಂದೇ ಒಂದು ರೂಪಾಯಿ ದುಡ್ಡಿಟ್ಟುಕೊಳ್ಳದೆ ಮನೆ ಕಟ್ಟಿದೆ, ಖರೀದಿ ಮಾಡಿದೆ ಎನ್ನುವವರು ಸಿಗುತ್ತಾರೆ. ಇದಕ್ಕೆ ಮುಖ್ಯ ಕಾರಣ ಬ್ಯಾಂಕ್​ಗಳ ಸಹಾಯ! ಬ್ಯಾಂಕ್​ಗಳಲ್ಲಿ ಹೌಸಿಂಗ್ ಲೋನ್ ( ಮೇಲಿನ ಬಡ್ಡಿ ದರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ಇರುವಾಗ ಅದನ್ನು ಪಡೆದುಕೊಳ್ಳುವುದು ಬುದ್ಧಿವಂತಿಕೆಯ ಮಾರ್ಗ. ಆದರೆ, ಆ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳೇನು, ಸಾಲ ಪಡೆಯಬೇಕು ಎಂದು ನಿರ್ಧರಿಸಿದ ಮೇಲೆ ಸಿದ್ಧತೆ ಹೇಗಿರಬೇಕು ಎಂದು ತಿಳಿಯುವುದಕ್ಕೆ ಇಲ್ಲಿದೆ ಮಾಹಿತಿ.

ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ನೀಡುವ ಟಾಪ್ 15 ಸಂಸ್ಥೆಗಳು (ಫೆಬ್ರವರಿ 24, 2021ಕ್ಕೆ ಅನ್ವಯ): 1 ಕೊಟಕ್ ಮಹೀಂದ್ರಾ ಬ್ಯಾಂಕ್ 6.75% 2 ಸಿಟಿ ಬ್ಯಾಂಕ್ ಆಫ್ ಇಂಡಿಯಾ 6.75% 3 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 6.80%* 4 ಬ್ಯಾಂಕ್ ಆಫ್ ಬರೋಡ 6.85% 5 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 6.85% 6 ಬ್ಯಾಂಕ್ ಆಫ್ ಇಂಡಿಯಾ 6.85% 7 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6.80% 8 ಎಚ್ ಡಿಎಫ್ ಸಿ ಲಿಮಿಟೆಡ್ 6.80%* 9 ಐಸಿಐಸಿಐ ಬ್ಯಾಂಕ್ 6.90% 10 ಎಲ್ ಐಸಿ ಹೌಸಿಂಗ್ ಫೈನಾನ್ಸ್ 6.90% 11 ಆಕ್ಸಿಸ್ ಬ್ಯಾಂಕ್ 6.90% 12 ಕೆನರಾ ಬ್ಯಾಂಕ್ 6.90% 13 ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 6.90% 14 ಐಡಿಎಫ್ ಸಿ ಫಸ್ಟ್ ಬ್ಯಾಂಕ್ 7% 15 ಬ್ಯಾಂಕ್ ಆಫ್ ಮಹಾರಾಷ್ಟ್ರ 7.05%

ಮನೆ ಸಾಲ ಪಡೆಯುವಾಗ ಬ್ಯಾಂಕ್​ನಿಂದ ಕೇಳಲಾಗುವ ಪ್ರಮುಖ ದಾಖಲೆಗಳು:

 • ಕ್ರಯ ಪತ್ರ, ದಾನ ಪತ್ರ, ಮರಣ ಪತ್ರ (ವಿಲ್), ನಿವೇಶನ ಹಂಚಿಕೆ ಆಗಿದ್ದಲ್ಲಿ ಆ ಸಂಸ್ಥೆಯಿಂದ ವಿತರಿಸಿದ ಪತ್ರ (ಆ ಆಸ್ತಿ ನಿಮಗೆ ಹೇಗೆ ಬಂತು ಎಂಬುದಕ್ಕೆ ದಾಖಲೆ)
 • ಮೂಲ ಪತ್ರ (ಮದರ್ ಡೀಡ್)
 • ಇತ್ತೀಚಿನ ತೆರಿಗೆ ಪಾವತಿ ರಸೀದಿ
 • ಎನ್​ಕಂಬರೆನ್ಸ್ ಪ್ರಮಾಣಪತ್ರ (ಕನಿಷ್ಠ 30 ವರ್ಷದ ಋಣರಾಹಿತ್ಯ ಪತ್ರ)
 • ಖಾತೆ, ಖಾತೆ ಎಕ್ಸ್ ಟ್ರಾಕ್ಟ್ (ಈಚಿನದು)
 • ಮನೆ ಕಟ್ಟುವುದಿದ್ದಲ್ಲಿ ನಕ್ಷೆ ಮತ್ತು ಅದಕ್ಕೆ ಸ್ಥಳೀಯ ಸಂಸ್ಥೆಯಿಂದ ಅನುಮತಿ, ಮನೆ ಕಟ್ಟುವ ವೆಚ್ಚದ ಅಂದಾಜು ಪಟ್ಟಿ
 • ಒಂದು ವೇಳೆ ಈಗಾಗಲೇ ಕಟ್ಟಿದ ಮನೆ ಇದ್ದಲ್ಲಿ ಆ ಮನೆ ಕಟ್ಟುವುದಕ್ಕೆ ಪಡೆದ ನಕ್ಷೆ, ಅನುಮತಿ ಪತ್ರ ಇತ್ಯಾದಿ

ಆದಾಯ ಮೂಲಕ್ಕೆ ಸಂಬಂಧಿಸಿದ ದಾಖಲೆಗಳು:

 • ಮೂರರಿಂದ ಆರು ತಿಂಗಳ ಪೇ ಸ್ಲಿಪ್ (ವೇತನದಾರರಿಗೆ)
 • ಫಾರ್ಮ್ 16- ಎರಡು ವರ್ಷದ್ದು
 • ಎರಡು ವರ್ಷದ ಐಟಿಆರ್
 • ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್
 • ವೇತನ ಹೊರತಾಗಿ ಆದಾಯ ಇದ್ದಲ್ಲಿ ಅದನ್ನು ಖಾತ್ರಿ ಪಡಿಸುವಂಥ ದಾಖಲೆಗಳು
 • ಸ್ವಂತ ವ್ಯವಹಾರ, ಉದ್ಯಮ ನಡೆಸುತ್ತಿರುವವರು ಅದಕ್ಕೆ ಹಾಗೂ ತಮ್ಮ ಆದಾಯಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು.

ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್: ಹೌಸಿಂಗ್ ಲೋನ್ ಗೆ ಪ್ರಯತ್ನಿಸುವಾಗ ಕ್ರೆಡಿಟ್ ಸ್ಕೋರ್ 750 ಮತ್ತು ಅದಕ್ಕಿಂತ ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ಸಾಲ ನೀಡುವ ಸಂಸ್ಥೆಗಳು ಅರ್ಜಿ ಸಲ್ಲಿಸುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳುತ್ತವೆ. 900 ಗರಿಷ್ಠ ಅಂಕ. ಅದಕ್ಕೆ ಕನಿಷ್ಠ 700 ಅಂಕ ಇದ್ದಲ್ಲಿ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದಕ್ಕಿಂತ ಕಡಿಮೆ ಇದ್ದಲ್ಲಿ ಅರ್ಜಿಯನ್ನೇ ತಿರಸ್ಕರಿಸಬಹುದು ಅಥವಾ ಹೆಚಚು ಬಡ್ಡಿಯನ್ನು ಹಾಕಬಹುದು. ಇದರ ಜತೆಗೆ ಕ್ರೆಡಿಟ್ ರಿಪೋರ್ಟ್ ಕೂಡ ಉತ್ತಮವಾಗಿರಬೇಕು. ಕೆಲವರ ಸ್ಕೋರ್ ಉತ್ತಮವಾಗಿರುತ್ತದೆ. ಆದರೆ ರಿಪೋರ್ಟ್ ಅಷ್ಟೇನೂ ಚೆನ್ನಾಗಿರುವುದಿಲ್ಲ. ಇಲ್ಲಿ ಚೆನ್ನಾಗಿರಲ್ಲ ಅಂದರೆ, ಕ್ರೆಡಿಟ್ ಕಾರ್ಡ್ ಹೆಚ್ಚಾಗಿ ಬಳಸಿರುತ್ತಾರೆ. ಈಗಾಗಲೇ ಬೇರೆ ಬೇರೆ ಸಾಲ ಮಾಡಿ, ಹೆಚ್ಚಿನ ಇಎಂಐ ಕಟ್ಟುತ್ತಿದ್ದಲ್ಲಿ ಅಂಥ ರಿಪೋರ್ಟ್ ಇರುವವರಿಗೆ ಸಾಲ ನೀಡುವುದು ಕಷ್ಟ ಅಥವಾ ಹಾಗೊಂದು ವೇಳೆ ಸಿಕ್ಕರೂ ಬಡ್ಡಿ ದರ ಹೆಚ್ಚಿರುತ್ತದೆ.

ಸಾಲ ಪಡೆಯುವಾಗ ಗಮನಿಸಬೇಕಾದ ಇತರ ಅಂಶಗಳು:

 • ಪ್ರೊಸೆಸಿಂಗ್ ಶುಲ್ಕ
 • ಪ್ರೀ ಕ್ಲೋಶರ್ ಶುಲ್ಕ (ಅವಧಿಗೆ ಮುಂಚಿತವಾಗಿ ಹಣ ಪಾವತಿಗೆ ವಿಧಿಸುವ ವೆಚ್ಚ)
 • ಭಾಗಶಃ ಪಾವತಿಗೆ ಅವಕಾಶ (ಪಾರ್ಷಿಯಲ್ ಪೇಮೆಂಟ್)
 • ಆದಾಯ ತೆರಿಗೆ ಅನುಕೂಲಗಳು
 • ಹಿಡನ್ ಶುಲ್ಕ
 • ಸಾಲ ಪಾವತಿ ತಡವಾದಲ್ಲಿ ವಿಧಿಸುವ ಶುಲ್ಕ
 • ಫ್ಲೋಟಿಂಗ್ ಬಡ್ಡಿ ದರವೇ ಅಥವಾ ಫಿಕ್ಸೆಡ್ ಬಡ್ಡಿ ದರವೇ
 • ಬಾಕಿ ಮೊತ್ತವನ್ನು ಬೇರೆ ಬ್ಯಾಂಕ್ ಗೆ ವರ್ಗಾವಣೆ ಮಾಡುವುದಕ್ಕೆ ಅವಕಾಶ ಮತ್ತು ಅದಕ್ಕೆ ಶುಲ್ಕ

ಈ ಬಗ್ಗೆಯೂ ನಿಮಗೆ ಗೊತ್ತಿರಲಿ: ಗೃಹ ಸಾಲ ಅಂದರೆ ಕಡಿಮೆ ಬಡ್ಡಿಯ, ದೀರ್ಘಾವಧಿ ಸಾಲ ಅಂತ ಬಹಳ ಮಂದಿ ತಮ್ಮ ಅರ್ಹತೆ ಎಷ್ಟಿದೆಯೋ ಪೂರ್ತಿ ಮೊತ್ತವನ್ನೂ ತೆಗೆದುಕೊಂಡು ಬಿಡುತ್ತಾರೆ. ಹಾಗೆ ಮಾಡುವುದು ಸರಿಯಲ್ಲ. ಮನೆಯನ್ನು ಕಟ್ಟುವುದಕ್ಕೆ ಅಥವಾ ಖರೀದಿಗೆ ಆಗುವ ವೆಚ್ಚ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚದ ಶೇಕಡಾ 20ರಷ್ಟು ಹಣವನ್ನಾದರೂ ಕೈಲಿಟ್ಟುಕೊಳ್ಳಬೇಕು. ಇದು ಎಮರ್ಜೆನ್ಸಿ ಫಂಡ್ (ತುರ್ತು ನಿಧಿ) ಹೊರತಾಗಿ ಇರುವ ಮೊತ್ತವಾಗಿರಬೇಕು. ಇಲ್ಲಿ ಎಮರ್ಜೆನ್ಸಿ ಫಂಡ್ ಅಂದರೆ, ತುರ್ತು ಪರಿಸ್ಥಿತಿ ಅಂತ ಬಂದಾಗ ತಕ್ಷಣಕ್ಕೆ ಸಿಗುವ ನಗದು. ಇದನ್ನು ಬೇರೆಲ್ಲೂ ಹೂಡಿಕೆ ಮಾಡಿರಬಾರದು. ಉಳಿತಾಯ ಖಾತೆಯಲ್ಲಿ ಈ ಮೊತ್ತ ಇರುವುದು ಉತ್ತಮ. ದೀರ್ಘಾವಧಿಗೆ ಸಾಲ ಮಂಜೂರು ಮಾಡಿಸಿಕೊಂಡರೂ ಪರವಾಗಿಲ್ಲ. ದೊಡ್ಡ ಮೊತ್ತವು ಬಂದಾಗ ಹಣ ಮರುಪಾವತಿಸಿ. ಇನ್ನು ಬಡ್ಡಿ ದರ ಕಡಿಮೆಯಾದಾಗ ಇಎಂಐ ಕಡಿಮೆ ಮಾಡಿಸುವ ಬದಲಿಗೆ ಹಾಗೇ ಮುಂದುವರಿಸಿದಲ್ಲಿ ಸಾಲ ಬೇಗ ತೀರಿಸಲು ಅನುಕೂಲ ಆಗುತ್ತದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ದೊಡ್ಡ ಮೊತ್ತ ಅಗತ್ಯ ಬಂದಾಗ ಹೌಸಿಂಗ್ ಲೋನ್ ಟಾಪ್ ಅಪ್ ಮಾಡುವ ಸಾಧ್ಯತೆ ಇರುತ್ತದೆ. ಟಾಪ್ ಅಪ್ ಅಂದರೆ, ಈಗ ಪಡೆದಿರುವ ಸಾಲದ ಮೇಲೂ ನಿಮ್ಮ ಅರ್ಹತೆ ಎಷ್ಟಿದೆಯೋ ಆ ಮೊತ್ತದ ತನಕ ಸಾಲ ಪಡೆಯುವುದಾಗಿರುತ್ತದೆ. ಅದಕ್ಕೂ ಹೌಸಿಂಗ್ ಲೋನ್ ಬಡ್ಡಿ ದರವೇ ಬೀಳುತ್ತದೆ.

ಇದನ್ನೂ ಓದಿ: FY20 ಮೂರನೇ ತ್ರೈಮಾಸಿಕದಲ್ಲಿ GDP ಮತ್ತೆ ಹಳಿಗೆ: DBS ವರದಿ

Follow us on

Related Stories

Most Read Stories

Click on your DTH Provider to Add TV9 Kannada