Aadhaar Address Update: ದಾಖಲೆ ಇಲ್ಲದೆ ಆಧಾರ್ನಲ್ಲಿ ವಿಳಾಸ ಬದಲಾವಣೆಗೆ ಈ 8 ಹಂತ ಅನುಸರಿಸಿ
Aadhaar Address Update: ಆಧಾರ್ನಲ್ಲಿ ನಿಮ್ಮ ವಿಳಾಸ ಬದಲಾವಣೆ ಮಾಡಬೇಕಿದ್ದಲ್ಲಿ ಈ 8 ಹಂತವನ್ನು ಅನುಸರಿಸಿ, ಸುಲಭವಾಗಿ ಮಾಡಬಹುದು. ಯಾವುದೇ ದಾಖಲೆಗಳನ್ನು ಸಹ ಸಲ್ಲಿಸುವ ಅಗತ್ಯ ಇಲ್ಲದೆ ವಿಳಾಸ ಬದಲಾವಣೆ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.
ಆಧಾರ್ ಕಾರ್ಡ್ ಇಲ್ಲದೆ ಯಾವುದೇ ವ್ಯವಹಾರ ಕಷ್ಟ ಎಂಬ ಪರಿಸ್ಥಿತಿ ಇದೆ. ಹಲವರಿಗೆ ಏನಾಗುತ್ತೆ ಅಂದರೆ, ತಾವು ಆಧಾರ್ ಕಾರ್ಡ್ ಮಾಡಿಸುವಾಗ ಒಂದು ವಿಳಾಸದಲ್ಲಿ ಇರುತ್ತಾರೆ. ಆ ನಂತರ ವಿಳಾಸ ಬದಲಾವಣೆಯನ್ನು ಮಾಡಿಸಬೇಕಾಗುತ್ತದೆ. ಹೊಸ ಅಡ್ರೆಸ್ ದೃಢೀಕರಣವನ್ನು ಮಾಡಿಸೋದು ಹೇಗೆ ಎಂಬುದೇ ಹಲವರ ಪಾಲಿಗೆ ತಲೆನೋವು. ನಿಮಗೆ ಗೊತ್ತಿರಲಿ, ಯಾವುದೇ ದಾಖಲೆ ಇಲ್ಲದಿದ್ದರೂ ಈಗಿನ ವಿಳಾಸಕ್ಕೆ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ಮಾಡಿಕೊಟ್ಟಿದೆ.
ನೀವು ಹೊಸದಾಗಿ ಯಾವ ವಿಳಾಸಕ್ಕೆ ಬದಲಾಗಿದ್ದೀರೋ ಅದನ್ನು ಖಾತ್ರಿ ಮಾಡುವುದಕ್ಕೆ ಒಬ್ಬ ವ್ಯಕ್ತಿ ಬೇಕಾಗುತ್ತಾರೆ. UIDAIನಿಂದ ವ್ಯಾಲಿಡೇಷನ್ ಪತ್ರವನ್ನು ಆನ್ಲೈನ್ನಲ್ಲಿ ಕಳುಹಿಸಲಾಗುತ್ತದೆ. ನೀವು ಇದೇ ವಿಳಾಸದಲ್ಲಿ ಇದ್ದೀರಿ ಎಂದು ಖಾತ್ರಿ ಪಡಿಸಬೇಕಾದ ವ್ಯಕ್ತಿಗೆ ಆ ಪತ್ರವು ತಲುಪುತ್ತದೆ. ಅಂದ ಹಾಗೆ ಆ ದೃಢೀಕರಿಸಬೇಕಾದ ವ್ಯಕ್ತಿ ನಿಮ್ಮ ಕುಟುಂಬದ ಸದಸ್ಯರೋ, ಸ್ನೇಹಿತರೋ, ಮನೆ ಮಾಲೀಕರೋ.. ಹೀಗೆ ಯಾರು ತಮ್ಮ ವಿಳಾಸವನ್ನು ಬಳಸಿಕೊಳ್ಳಲು ನಿಮಗೆ ಒಪ್ಪಿಗೆ ನೀಡುತ್ತಾರೋ ಅವರೇ ಆಗಿರಬೇಕು. ಅದಾದ ಮೇಲೆ ಕೆಲವು ಷರತ್ತುಗಳನ್ನು ನೀವು ಪೂರೈಸಿದಲ್ಲಿ ಮಾತ್ರ ವಿಳಾಸ ಅಪ್ಡೇಟ್ ಆಗುತ್ತದೆ.
ಇಷ್ಟಾದ ಮೇಲೆ 8 ಸುಲಭ ಹಂತಗಳಲ್ಲಿ ಆಧಾರ್ನಲ್ಲಿ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು. ಅದು ಹೇಗೆ ಎಂಬ ವಿವರ ತಿಳಿಯಲು ಮುಂದೆ ಓದಿ.
1. UIDAI ವೆಬ್ಸೈಟ್ ಆದ https://uidai.gov.in/ ಭೇಟಿ ನೀಡಿ, My Aadhaar (ಮೈ ಆಧಾರ್) ಮೆನುವಿನಲ್ಲಿ Address Validation Letter (ಅಡ್ರೆಸ್ ವ್ಯಾಲಿಡೇಷನ್ ಲೆಟರ್) ಮೇಲೆ ಕ್ಲಿಕ್ ಮಾಡಿ. 2. ಅಲ್ಲಿಂದ ನೀವು ಅಡ್ರೆಸ್ ವ್ಯಾಲಿಡೇಷನ್ ಲೆಟರ್ ಪುಟಕ್ಕೆ ತೆರಳುತ್ತೀರಿ. ಅಲ್ಲಿ 12 ಅಂಕಿಯ ನಿಮ್ಮ ಆಧಾರ್ ಸಂಖ್ಯೆಯನ್ನು ಅಥವಾ 16 ಅಂಕಿಯ ವರ್ಚುವಲ್ ಐ.ಡಿ.ಯನ್ನು ನಮೂದಿಸಿ. 3. Captcha ಭರ್ತಿ ಮಾಡಿದ ಮೇಲೆ Send OTP ಮೇಲೆ ಕ್ಲಿಕ್ ಮಾಡಿ. 4. ನಿಮ್ಮ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಅಂಕಿಯನ್ನು ನಮೂದಿಸಿ, ಲಾಗ್ ಇನ್ ಆಗಬೇಕು. ಆ ನಂತರ ನಿಮ್ಮ ವಿಳಾಸ ದೃಢೀಕರಣ ಮಾಡುವಂಥ ವ್ಯಕ್ತಿಗಳ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕು. 5. ವಿಳಾಸ ದೃಢೀಕರಿಸಬೇಕಾದ ವ್ಯಕ್ತಿಗೆ ಎಸ್ಸೆಮ್ಮೆಸ್ ಬರಲಿದ್ದು, ಅದರಲ್ಲಿ ಲಿಂಕ್ ಇರುತ್ತದೆ. ಆದ್ದರಿಂದ ಅದಕ್ಕೆ ಒಪ್ಪಿಗೆ ಬೇಕಾಗುತ್ತದೆ. 6. ಆ ನಂತರ ಎರಡನೇ ಎಸ್ಸೆಮ್ಮೆಸ್ ಬರುತ್ತದೆ. ಅದರಲ್ಲಿ ಒಟಿಪಿ ಕೂಡ ಇರುತ್ತದೆ. ಅದನ್ನು ನಮೂದಿಸಿ, Captcha ಭರ್ತಿ ಮಾಡಿದ ನಂತರ ಖಾತ್ರಿಪಡಿಸಬೇಕು. 7. ದೃಢೀಕರಣ ಆದ ನಂತರ ನಿಮಗೆ ಎಸ್ಸೆಮ್ಮೆಸ್ ಮೂಲಕವಾಗಿ ಸರ್ವೀಸ್ ರಿಕ್ವೆಸ್ಟ್ ನಂಬರ್ (SRN) ಬರುತ್ತದೆ. 8. SRN ಮೂಲಕ ಲಾಗಿನ್ ಆಗಿ ವಿಳಾಸವನ್ನು ಒಮ್ಮೆ ಪರಿಶೀಲಿಸಿ. ಎಡಿಟ್ (ಪರಿಷ್ಕರಣೆ) ಆದ ನಂತರ ಸಬ್ಮಿಟ್ (ಸಲ್ಲಿಕೆ) ಮಾಡಿ. ನಿಮ್ಮ Update Request Number (URN) ರದ್ದು ಮಾಡಿ.
ಇದನ್ನೂ ಓದಿ: ಮೋಟಾರು ವಾಹನ ಪ್ರಮಾಣಪತ್ರಗಳ ಸಂಬಂಧ ಈ 18 ಸೇವೆಗೆ ಇನ್ನು ಆಧಾರ್ ದೃಢೀಕರಣವಷ್ಟೇ ಸಾಕು