ಇಂಡಿಯಾ ಟುಡೆ ಸಮೀಕ್ಷೆ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ?

ಅರ್ಧ ಶತಕದ ಗಡಿ ದಾಟಿ ಮುನ್ನಡೆಯುತ್ತಿರುವ ಪಂಜಾಬ್ ರೈತರ ಪ್ರತಿಭಟನೆ, ತೈಲ ಬೆಲೆ ಏರಿಕೆ ಅಥವಾ ಇನ್ನಾವ ವಿವಾದ-ಗಲಾಟೆಗಳೂ ಬಿಜೆಪಿಯನ್ನು ಅಧಿಕಾರದಿಂದ ದೂರವುಳಿಯಂತೆ ಮಾಡಲು ಸಫಲವಾಗದು ಎನ್ನುತ್ತದೆ ಸಮೀಕ್ಷೆ

  • TV9 Web Team
  • Published On - 17:06 PM, 22 Jan 2021
ಇಂಡಿಯಾ ಟುಡೆ ಸಮೀಕ್ಷೆ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ?
ಸಾಂದರ್ಭಿಕ ಚಿತ್ರ

ದೇಶದಲ್ಲಿ ಇಂದೇ ಲೋಕಸಭಾ ಚುನಾವಣೆ ನಡೆದರೆ.. ಯಾರು ಗೆಲ್ಲಬಹುದು? ಅಧಿಕಾರದಲ್ಲಿರುವ ಎನ್​ಡಿಎ ಮತ್ತೆ ಬಹುಮತ ಪಡೆಯಬಹುದೇ? ಕಳೆದ 58 ದಿನಗಳಿಂದ ನಡೆಯುತ್ತಿರುವ ದೆಹಲಿ ಚಲೋ ಚಳುವಳಿ ದೇಶದ ಮತದಾರರ ಮೇಲೆ ಗಂಭೀರ ಪರಿಣಾಮ ಬೀರಿದೆಯೇ? ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಶಕ್ತವಾಗಿದೆಯೇ..?

ಅಬ್ಬಬ್ಬಾ! ಎಷ್ಟೆಲ್ಲ ಪ್ರಶ್ನೆಗಳು? ಇಡೀ ದೇಶದ ಯೋಚನೆಗಳನ್ನೇ ತನ್ನ ವಶ ಮಾಡಿಕೊಳ್ಳುವ ಶಕ್ತಿ ಒಂದು ಚುನಾವಣೆಗಿದೆ. ಚುನಾವಣೆಗಳ ಕುರಿತು ನಮಗೆ ಎಂದಿಗೂ ಮುಗಿಯದ ಕುತೂಹಲ. ಹಾಗಾದರೆ, ಈಗ ಚುನಾವಣೆ ನಡೆದರೆ ಯಾರು ಅಧಿಕಾರದ ಚುಕ್ಕಾಣಿ ಏರಬಹುದು? ಆಂಗ್ಲ ಸುದ್ದಿವಾಹಿನಿ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯನ್ನು ಟಿವಿ9 ಕನ್ನಡ ಡಿಜಿಟಲ್ ನಿಮಗಾಗಿ ತೆರೆದಿಟ್ಟಿದೆ.

ಈ ಕ್ಷಣಕ್ಕೆ ಗೆಲುವು ಯಾರದು?
ಇಂಡಿಯಾ ಟುಡೆ ನಡೆಸಿದ ಸಮೀಕ್ಷೆ ಪ್ರಕಾರ ಇದೇ ತಿಂಗಳಲ್ಲಿ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವೇ ಅಧಿಕಾರದ ಮಣೆಯಲ್ಲಿ ಆಸೀನವಾಗಲಿದೆ. ಅರ್ಧ ಶತಕದ ಗಡಿ ದಾಟಿ ಮುನ್ನಡೆಯುತ್ತಿರುವ ಪಂಜಾಬ್ ರೈತರ ಪ್ರತಿಭಟನೆ, ತೈಲ ಬೆಲೆ ಏರಿಕೆ ಅಥವಾ ಇನ್ನಾವ ವಿವಾದ-ಗಲಾಟೆಗಳೂ ಬಿಜೆಪಿಯನ್ನು ಅಧಿಕಾರದಿಂದ ದೂರವುಳಿಯಂತೆ ಮಾಡಲು ಸಫಲವಾಗುವುದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ 353 ಸ್ಥಾನಗಳಲ್ಲಿ ವಿಜಯದ ಧ್ವಜ ಹಾರಿಸಿದ್ದ ಎನ್​ಡಿಎ ಈಗಲೇ ಚುನಾವಣೆ ನಡೆದರೂ 321 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ.

ಶಿವಸೇನೆ, ಶಿರೋಮಣಿ ಅಕಾಲಿದಳ ದೋಸ್ತಿ ಕಟ್: ಆದರೂ ಎನ್​ಡಿಎಗೆ ಭಂಗವಿಲ್ಲ

2019ರಲ್ಲಿ ಮಹಾರಾಷ್ಟ್ರದ ಶಿವಸೇನಾ ಮತ್ತು ಪಂಜಾಬ್​ನ ಶಿರೋಮಣಿ ಅಕಾಲಿದಳ ಪಕ್ಷಗಳು ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದವು. ಆದರೆ, ರಾಜಕೀಯದಲ್ಲಿ ಮಿತ್ರರಾರು? ಶತ್ರುಗಳಾರು? ಗತಕಾಲದ ಗೆಳೆಯರಾದ ಮಹಾರಾಷ್ಟ್ರದ ಹುಲಿಯೂ, ಪಂಜಾಬ್​ನ ಸಿಂಹವೂ ಈಗ ಬಿಜೆಪಿಯನ್ನು ನುಂಗಿಹಾಕಲು ಬಾಯ್ತೆರೆದು ಕುಳಿತಿದ್ದಾರೆ.ಆದರೆ, ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಎನ್​ಡಿಎಗಂತೂ ಇದರಿಂದ ಧಕ್ಕೆಯಿಲ್ಲ. ಎಂಥದ್ದೇ ಹುಲಿ ಸಿಂಹಗಳನ್ನೂ ಬಂಧಿಸುವ ಬೋನು ಬಿಜೆಪಿ ಬಳಿಯಿದೆ ಎನ್ನುತ್ತದೆ ಈ ಅಂಕಿ ಅಂಶ.

ಕಾಂಗ್ರೆಸ್ ಕಳವಳ
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಕೇವಲ 52 ಸ್ಥಾನಗಳನ್ನು. ಒಟ್ಟಾರೆ ಯುಪಿಎ ಮೈತ್ರಿಕೂಟ ಎಂದು ಲೆಕ್ಕಿಸಿದರೂ ಈ ಸಂಖ್ಯೆ 100 ಕ್ಕೂ ತಲುಪದೇ, 93 ರಷ್ಟನ್ನೇ ಹೊಡೆದು ಶತಕವಂಚಿತವಾಗುತ್ತದೆ. ಇಂತಹ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಪಡೆಯುವುದೆಷ್ಟು?

ಕಾಂಗ್ರೆಸ್​ನ ಕಳವಳ ಇನ್ನೂ ಮುಂದುವರೆಯಲಿದೆ ಎನ್ನುತ್ತದೆ ಇಂಡಿಯಾ ಟುಡೆ ಸಮೀಕ್ಷೆ. ಯುಪಿಎಯ ದೋಸ್ತಿಗಳೆಲ್ಲ ಸೇರಿ ಪಡೆಯುವ ಸ್ಥಾನಗಳಲ್ಲಿ ಒಂದು ಹೆಚ್ಚಿಲ್ಲ; ಒಂದು ಕಡಿಮೆಯಿಲ್ಲ. 2019ರಲ್ಲಿ ಗೆದ್ದಷ್ಟೇ, ಅಂದರೆ 93 ಸ್ಥಾನಗಳನ್ನಷ್ಟೇ ಯುಪಿಎ ಗೆಲ್ಲಲಿದೆಯಂತೆ. ಒಂದಾನುವೇಳೆ 2020ರ ಜನವರಿಯಲ್ಲಿ ಚುನಾವಣೆ ನಡೆದಿದ್ದರೆ ನೂರೆಂಟು ಸ್ಥಾನಗಳನ್ನು ಗೆಲ್ಲುತ್ತಿತ್ತಂತೆ!

ಇತರ ಪಕ್ಷಗಳ ಪಾಲೆಷ್ಟು?
ಇತರ ಪ್ರಾದೇಶಿಕ ಪಕ್ಷಗಳ ಪ್ರದರ್ಶನವೇ ಕಾಂಗ್ರೆಸ್​ಗಿಂತ ಬಹು ಚೆನ್ನಾಗಿದೆ. ಎನ್​ಡಿಎ ಮತ್ತು ಯುಪಿಎ ಮೈತ್ರಿಕೂಟದ ಪಕ್ಷಗಳನ್ನು ಹೊರತುಪಡಿಸಿ ಇತರ ಪಕ್ಷಗಳು ಸುಮಾರು 129 ಸ್ಥಾನಗಳನ್ನು ಗೆಲ್ಲುತ್ತವೆ ಎನ್ನುತ್ತದೆ ಇಂಡಿಯಾ ಟುಡೆ ಸಮೀಕ್ಷೆ. ದೇಶದ ಶೇ.30ರಷ್ಟು ಮತಗಳನ್ನು ಗೆಲ್ಲುವ ತಾಕತ್ತು ಈ ಪಕ್ಷಗಳಿಗಿವೆ. ಈ ಲೆಕ್ಕದಲ್ಲಿ ನೋಡಿದರೆ ಯುಪಿಎ ಗೆಳೆಯರ ಪಾಲು ಶೇ.27 ಮಾತ್ರ!

ಕೊರೊನಾ ಲಸಿಕೆ ಪಡೆಯುತ್ತೀರಾ?
ಕೊರೊನಾ ಲಸಿಕೆ ಪಡೆಯುತ್ತೀರೋ ಇಲ್ಲವೋ ಎಂದು ಸಹ ಇಂಡಿಯಾ ಟುಡೆ ದೇಶವ್ಯಾಪಿ ಸಮೀಕ್ಷೆ ನಡೆಸಿದೆಯಂತೆ. ಅದರ ಪ್ರಕಾರ ಶೇ.76 ಜನರು ಲಸಿಕೆ ಪಡೆಯಲು ಬಯಸುತ್ತಾರೆ. ಶೇ.21ರಷ್ಟು ಜನರು ಕೊರೊನಾಗೆ ಲಸಿಕೆಯು ಬೇಡ ಏನೂ ಬೇಡ ಎಂದಿದ್ದಾರೆ. ಹಾಗೆಯೇ, ಶೇ 3ರಷ್ಟು ಜನರು ‘ಇಲ್ಲ, ನಾವು ಲಸಿಕೆ ಕುರಿತು ಏನನ್ನೂ ಹೇಳಲಾಗದು’ ಎಂದಿದ್ದಾರೆ.

ಅಂದಹಾಗೆ, ಲಸಿಕೆ ಉಚಿತವಾಗಿ ದೊರೆಯಬೇಕು ಎಂದು ದೇಶದ ಶೇ.92ರಷ್ಟು ಜನರಿಗೆ ಅನಿಸಿದೆ. ‘ಬೇಡಪ್ಪಾ,ನಮಗೆ ನಿಮ್ಮ ಲಸಿಕೆ ಉಚಿತವಾಗೇನೂ ಬೇಡ, ಹಣ ಕೊಟ್ಟೇ ಕೊಳ್ಳುತ್ತೇವೆ ಎಂದು ಶೇ. 7 ರಷ್ಟು ಜನರು ಹೇಳಿದ್ದಾರೆ. ಶೇ.1ರಷ್ಟು ಜನರು ಮಾತ್ರ ‘ನಾವೇನೂ ಹೇಳಲಾಗದು..ಹೇಗೆ ಬಂತೋ ಹಾಗೆ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಚೆನ್ನಾಗಿದೆಯೇ ಇಲ್ಲವೇ? ಜನ ಏನಂದಿದ್ದಾರೆ?
ಬರೋಬ್ಬರಿ 8ನೇ ವರ್ಷದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಕುರಿತು ದೇಶದ ಶೇ.44ರಷ್ಟು ಜನರಿಗೆ ಈಗಲೂ ಉತ್ತಮ ಅಭಿಪ್ರಾಯವಿದೆ. ಶೇ.30 ರಷ್ಟು ಜನ ಅತ್ಯುತ್ತಮವಾಗಿದೆ ಎಂದು ಪ್ರಧಾನಿಯವರನ್ನು ಹಾಡಿ ಹೊಗಳಿದ್ದಾರೆ. ಆದರೆ, ಶೇ.17ರಷ್ಟು ಜನರಿಗೆ ಮಾತ್ರ ಸಾಮಾನ್ಯವಾಗಿದೆ ಎಂದು ಅನಿಸಿದ್ದು, ಆಡಳಿತದ ಗುಣಮಟ್ಟ ‘ಏನಕ್ಕು ಸಾಲದು, ಕಳಪೆ’ ಎಂದವರ ಪ್ರಮಾಣ ಶೇ.6

ಭಾರತ ಕೊರೊನಾ ಪ್ಯಾಂಡೆಮಿಕ್ ನಿರ್ವಹಿಸುವಲ್ಲಿ ಸಫಲವಾಯಿತೇ?
ಕೊರೊನಾ ಪಿಡುಗು ನಿಯಂತ್ರಣದ ಕುರಿತೂ ಇಂಡಿಯಾ ಟುಡೇ ಸಮೀಕ್ಷೆ ನಡೆಸಿತ್ತು. ಚೆನ್ನಾಗಿ ನಿರ್ವಹಿಸಿಲ್ಲ ಎಂದು ಶೇ.9ರಷ್ಟು ಜನ ಅಭಿಪ್ರಾಯಪಟ್ಟಿದ್ದರೆ, ಶೇ 73ರಷ್ಟು ಜನರು ಕೊರೊನಾದ ನಿರ್ವಹಣೆಯಲ್ಲಿ ಭಾರತ ಸಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರಗಳು ಕುರಿತು ಶೇ.50ರಷ್ಟು ಜನ ಸದಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ‘ಭರ್ಜರಿ’ ನಿರ್ವಹಣೆ ಮಾಡಿದ್ದಾರೆ ಎಂದವರು ಶೇ 23ರಷ್ಟು ಜನ. ಶೇ.18ರಷ್ಟು ಜನರು ‘ಅಡ್ಡಿಲ್ಲ, ಸಾಧಾರಣ’ಎಂದಿದ್ದಾರೆ. ಕಳಪೆ ಎಂದು ಶೇ.7ರಷ್ಟು ಜನ ಹೇಳಿದ್ದರೆ ಶೇ.2ರಷ್ಟು ಜನ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಭವ್ಯ ಭವಿಷ್ಯದ ನಿರ್ಮಾಣಕ್ಕೆ ಸಂಶೋಧನೆ ಅತ್ಯಗತ್ಯ, ಭಾರತೀಯ ಬ್ರಾಂಡ್ ಸೃಷ್ಟಿಗೆ ಒತ್ತು: ಪ್ರಧಾನಿ ನರೇಂದ್ರ ಮೋದಿ