ಪ್ರವಾಹದ ನಂತರ ರೈತರಿಗೆ ಕೀಟ ಸಂಕಷ್ಟ; ಕೈ ಹಿಡಿಯದ ಕಡಲೆ ಬೆಳೆ

ಧಾರವಾಡ ಜಿಲ್ಲೆಯ ನವಲಗುಂದ ಕಳೆದ ಎರಡು ವರ್ಷಗಳಿಂದ ಅತಿ ಹೆಚ್ಚು ಪ್ರವಾಹಕ್ಕೆ ಸಿಲುಕಿದ ತಾಲೂಕು. ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳಗಳಿಗೆ ಬಂದಿದ್ದ ಪ್ರವಾಹ ಎಲ್ಲಾ ಬೆಳೆಗಳನ್ನು ನುಂಗಿ ಹಾಕಿತ್ತು. ಇದೀಗ ಕಡಲೆಕಾಯಿ ಬೆಳೆಗೂ ಸಂಕಷ್ಟ ಎದುರಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

  • ನರಸಿಂಹಮೂರ್ತಿ ಪ್ಯಾಟಿ
  • Published On - 14:29 PM, 19 Dec 2020
ಪ್ರವಾಹದ ನಂತರ ರೈತರಿಗೆ ಕೀಟ ಸಂಕಷ್ಟ; ಕೈ ಹಿಡಿಯದ ಕಡಲೆ ಬೆಳೆ
ಕೀಡಬಾಧೆಗೆ ಒಳಗಾದ ಕಾಡಲೆಕಾಯಿ ಬೆಳೆ

ಧಾರವಾಡ: ಇತ್ತೀಚಿಗಷ್ಟೇ ಸುರಿದ ಭಾರಿ ಮಳೆಯಿಂದ ಮುಂಗಾರು ಬೆಳೆಯನ್ನು ಕಳೆದುಕೊಂಡಿದ್ದ ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕಡಲೆ ಬೆಳೆಗೆ ಅಂಟಿಕೊಂಡಿರುವ ಕೀಟಬಾಧೆ ರೈತರಲ್ಲಿ ಆತಂಕ ಸೃಷ್ಟಿಸಿದೆ. ಅದರಲ್ಲೂ ಪ್ರವಾಹದಿಂದಾಗಿ ಭಾರಿ ನಷ್ಟ ಅನುಭವಿಸಿದ್ದ ನವಲಗುಂದ ರೈತರಿಗೆ ಈ ಕೀಟಬಾಧೆಯಿಂದ ಮತ್ತೊಂದು ಸಂಕಷ್ಟ ಎದುರಾಗಿದ್ದು, ಒಂದು ಕಡೆ ಕೃಷಿಗಾಗಿ ಮಾಡಿಕೊಂಡಿರುವ ಸಾಲ, ಮತ್ತೊಂದು ಕಡೆ ಹಾಕಿದ ಹಣ ಮರಳಿ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕದ ನಡುವೆಯೇ ರೈತರು ಜೀವನ ನಡೆಸುವಂತಾಗಿದೆ.

ಬಹುತೇಕ ಕಡೆಗಳಲ್ಲಿ ಕಡಲೆ ಬೆಳೆಗೆ ಕೀಟಬಾಧೆ 
ಧಾರವಾಡ ಜಿಲ್ಲೆಯ ನವಲಗುಂದ ಕಳೆದ ಎರಡು ವರ್ಷಗಳಿಂದ ಅತಿ ಹೆಚ್ಚು ಪ್ರವಾಹಕ್ಕೆ ಸಿಲುಕಿದ ತಾಲೂಕು. ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳಗಳಿಗೆ ಬಂದಿದ್ದ ಪ್ರವಾಹ ಎಲ್ಲಾ ಬೆಳೆಗಳನ್ನು ನುಂಗಿ ಹಾಕಿತ್ತು. ಅದರಲ್ಲೂ ಕೆಲ ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಈ ಎರಡೂ ಹಳ್ಳಗಳಿಗೆ ಪ್ರವಾಹ ಬಂದು, ಕೋಟ್ಯಾಂತರ ರೂಪಾಯಿ ಬೆಳೆ ಹಾನಿಯಾಗಿದೆ.

ಕಡಲೆ ಗಿಡಗಳಿಗೆ ಕೀಟನಾಶಕ ಸಿಂಪಡಿಸುತ್ತಿರುವ ರೈತ

ಪ್ರತಿ ವರ್ಷ ಅನಾವೃಷ್ಟಿಯಿಂದ ಬಳಲುತ್ತಿದ್ದ ನವಲಗುಂದ ತಾಲೂಕಿನಲ್ಲಿ ಎರಡು ವರ್ಷಗಳಿಂದ ಅತಿವೃಷ್ಟಿ  ಸಾಕಷ್ಟು ಬಾಧಿಸಿದೆ. ಅದರಲ್ಲೂ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಸೇರಿದಂತೆ ಇತರೆ ಹಳ್ಳಗಳ ಅಕ್ಕಪಕ್ಕದ ಸಾವಿರಾರು ರೈತರ ಪಾಲಿಗೆ ಬೆಳೆ ಅನ್ನೋದು ಕನಸಿನ ಮಾತೇ ಆಗಿದೆ. ಇನ್ನೇನು ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಈ ಹಳ್ಳಗಳಿಗೆ ಬಂದ ಪ್ರವಾಹ ಎಲ್ಲ ಬೆಳೆಯನ್ನೂ ನಾಶ ಮಾಡಿದೆ. ಹೀಗಾಗಿ ರೈತರು ಕಳೆದೆರಡು ವರ್ಷಗಳಿಂದ ಯಾವುದೇ ರೀತಿಯ ಲಾಭ ಮಾಡಿಕೊಂಡಿಲ್ಲ. ಇಂತಹ ವೇಳೆಯಲ್ಲಿ ಮುಂಗಾರು ಬೆಳೆ ನಾಶವಾಗಿ ಇದೀಗ ಕಡಲೆ ಬೆಳೆಯಾದರೂ ಕೈಗೆ ಬರಬಹುದು ಎನ್ನುವ ಆಶಾಭಾವನೆಯಲ್ಲಿದ್ದ ರೈತರಿಗೆ ಕಾಯಿಕೊರಕ ಕೀಟ ಆತಂಕ ತಂದೊಡ್ಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ನವಲಗುಂದ, ಅಣ್ಣಿಗೇರಿ ತಾಲೂಕಿನಲ್ಲಿ ಆಶಾಭಾವನೆ ಹುಟ್ಟಿಸಿದ ಕಡಲೆ
ನವಲಗುಂದ ತಾಲೂಕಿನಲ್ಲಿ 38,832 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಈ ಬಾರಿ ತೇವಾಂಶ ಉತ್ತಮವಾಗಿದ್ದರಿಂದ ರೈತರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಮೋಡ ಕವಿದ ವಾತಾವರಣದಿಂದಾಗಿ ಕಡಲೆ ಬೆಳೆಗೆ ಆರಂಭದಲ್ಲಿಯೇ ಸಮಸ್ಯೆ ಎದುರಾಗಿದೆ. ಏಕೆಂದರೆ ಈ ವಾತಾವರಣದಿಂದಾಗಿ ಎಲ್ಲಾ ಕಡಲೆ ಗಿಡಗಳಿಗೆ ಕಾಯಿಕೊರಕ ಕೀಟದ ಬಾಧೆ ಕಂಡು ಬಂದಿದೆ.

ಭಾರೀ ಮಳೆಯಿಂದಾಗಿ ಮುಂಗಾರು ಬೆಳೆಯನ್ನು ಕಳೆದುಕೊಂಡಿದ್ದ ರೈತರು ಹಿಂಗಾರು ಬೆಳೆಯಾದರೂ ಚೆನ್ನಾಗಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಕೀಟಬಾಧೆಯಿಂದ ಹಿಂಗಾರು ಬೆಳೆ ಕೂಡ ಕೈ ಕೊಡುವ ಲಕ್ಷಣಗಳು ಕಂಡುಬಂದಿವೆ. ಇದರಿಂದಾಗಿ ರೈತರು ಕೈ ಸುಟ್ಟುಕೊಳ್ಳುವ ಆತಂಕದಲ್ಲಿದ್ದಾರೆ.

ಬಹುತೇಕ ಕಡಲೆ ಬೆಳೆಗೆ ಕೀಟಬಾಧೆ

ಈ ರೋಗದಿಂದ ಬೆಳೆಯ ಮೇಲೆ ಯಾವ ಪರಿಣಾಮ?
ಮೋಡ ಕವಿದ ವಾತಾವರಣ ಇರುವುದರಿಂದ ಈ ಕಾಯಿಕೊರಕ ಕೀಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬೆಳೆಯ ಎಲೆ, ಮೊಗ್ಗು, ಹೂವು ಮತ್ತು ಕಾಯಿಗಳನ್ನು ಈ ಕೀಟ ತಿಂದು ಹಾಕುತ್ತದೆ. ಒಂದು ಬಾರಿ ಈ ಕೀಟ ಬೆಳೆಗೆ ಲಗ್ಗೆ ಇಟ್ಟರೆ ಅಲ್ಲಿಗೆ ಬೆಳೆಯ ಕಥೆ ಮುಗಿದಂತೆಯೇ ಸರಿ. ಇನ್ನು ಕೀಟಗಳು ಎಲೆಯನ್ನೇ ಹೆಚ್ಚು ತಿನ್ನುವುದರಿಂದಾಗಿ ಗಿಡಗಳಿಗೆ ಪತ್ರ ಹರಿತ್ತು ಇಲ್ಲದೆ ಒಣಗಿದಂತೆ ಕಾಣುತ್ತವೆ. ಬಳಿಕ ನಿಧಾನವಾಗಿ ಅವುಗಳ ಬೆಳವಣಿಗೆ ಕುಂಠಿತಗೊಂಡು, ಇಳುವರಿ ಕಡಿಮೆಯಾಗುತ್ತದೆ.

ರೈತರ ಅಳಲು ಏನು?
ಕಳೆದ ಎರಡು ವರ್ಷಗಳಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ನಮಗೆ ಈ ಬಾರಿ ಕಡಲೆ ಬೆಳೆ ಕೈ ಹಿಡಿಯಬಹುದು ಎನ್ನುವ ಲೆಕ್ಕಾಚಾರವಿತ್ತು. ಈ ಬಾರಿ ಕಡಲೆಗೆ ಉತ್ತಮ ದರ ನಿಗದಿಯಾಗುವ ಸಾಧ್ಯತೆಯೂ ಇತ್ತು. ಇದೇ ಕಾರಣಕ್ಕೆ ಎಲ್ಲಾ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಕಡಲೆ ಬೆಳೆದಿದ್ದೇವೆ. ಬಳಿಕ ಸಾವಿರಾರು ರೂಪಾಯಿ ಖರ್ಚು ಮಾಡಿ ಕಳೆ ಕಿತ್ತಿಸಿ, ಗೊಬ್ಬರವನ್ನು ನೀಡಿದ್ದೇವೆ. ಆದರೆ ಈ ಬಾರಿ ವಾತಾವರಣದ ಸಮಸ್ಯೆಯಿಂದಾಗಿ ಕಾಯಿಕೊರಕ ಕೀಟಬಾಧೆ ಕಾಣಿಸಿಕೊಂಡಿದೆ. ಇದರಿಂದಾಗಿ ಸಾಕಷ್ಟು ಆತಂಕವಾಗಿದೆ. ಇದು ಆರಂಭದ ಹಂತದಲ್ಲಿದ್ದು, ಅದಕ್ಕಾಗಿ ಮತ್ತೆ ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ಕೀಟನಾಶಕ ಸಿಂಪಡಿಸಬೇಕು. ಇಷ್ಟು ಮಾಡಿದರೂ ಕೀಟಬಾಧೆ ಕಡಿಮೆಯಾಗುತ್ತದೆ ಎನ್ನುವ ಹಾಗಿಲ್ಲ. ಹೀಗಾಗಿ ಈ ಬಾರಿಯೂ ನಮಗೆ ನಿರಾಸೆಯಾಗಿದೆ ಎನ್ನುತ್ತಾರೆ ನವಲಗುಂದದ ರೈತ ಶರಣಪ್ಪ ಯಮನೂರು.

ಕೀಟಬಾಧೆ ನಿಯಂತ್ರಣಕ್ಕೆ ಏನು ಮಾಡಬೇಕು?
ಈ ರೋಗಬಾಧೆ ನಿಯಂತ್ರಿಸಲು ಪ್ರತಿ ಲೀಟರ್ ನೀರಿಗೆ ಕೀಟಗಳ ಮೊಟ್ಟೆ ನಾಶಕಗಳಾದ ಪ್ರೊಫೆನೋಫಾಸ್ ಮಿ.ಲೀ. ಅಥವಾ ತೈಯೋಡಿಕಾರ್ಬ್ 0.75 ಗ್ರಾಂ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಕೀಟಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದರೆ 0.5 ಮಿ.ಲೀ. ಲ್ಯಾಮ್ಡಾ ಸೈಲೋಥಿನ್, 0.2 ಗ್ರಾಂ ಇಮಾಮೆಕ್ಸೀನ್ ಬೆಂಝೋಯೇಟ್ 5 .ಸಿ. ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಇನ್ನು ಮುಂದಿನ ದಿನಗಳಲ್ಲಿ ಕಡಲೆ ಹಾಗೂ ಗೋಧಿ ಬೆಳೆಗೆ ತುಕ್ಕು ರೋಗದ ಬಾಧೆಯೂ ಕಂಡು ಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೆಕ್ಸಾಕೋನಾಝೋಲ್ 1 ಮಿ.ಲೀ. ಅಥವಾ ಪ್ರೊಫಿಕೋನಾಝೋಲ್ 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ ಚಿಮ್ಮಲಗಿ ಮನವಿ ಮಾಡಿಕೊಂಡಿದ್ದಾರೆ

ಭತ್ತ ಖರೀದಿ ಕೇಂದ್ರಗಳಲ್ಲಿ ಶುರುವಾಗಿಲ್ಲ ವಹಿವಾಟು: ಇದೆಂಥ ವಿಪರ್ಯಾಸ?