IPL Auction 2021: ಪ್ರತಿ ಐಪಿಎಲ್ ಟೀಮಿನ ಪ್ರಮುಖ ಆಟಗಾರರ ಬಗ್ಗೆ ಒಂದಿಷ್ಟು ಮಾಹಿತಿ

IPL Auction 2021: ಪ್ರತಿಸಲವೂ ಐಪಿಎಲ್​ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ. ನಮಗೆಲ್ಲ ಗೊತ್ತಿರುವಂತೆ ಎಲ್ಲ ಟೀಮುಗಳಲ್ಲಿ ಮಾರ್ಕೀ ಆಟಗಾರರು, ಟಾಪ್ ಆಟಗಾರರು ಇರುತ್ತಾರೆ. ಅವರ ಬಗ್ಗೆ ಒಂದು ಕಿರುನೋಟ ಇಲ್ಲಿದೆ

  • TV9 Web Team
  • Published On - 22:24 PM, 17 Feb 2021
IPL Auction 2021: ಪ್ರತಿ ಐಪಿಎಲ್ ಟೀಮಿನ ಪ್ರಮುಖ ಆಟಗಾರರ ಬಗ್ಗೆ ಒಂದಿಷ್ಟು ಮಾಹಿತಿ
ಐಪಿಎಲ್​ ಪ್ರಮುಖ ಆಟಗಾರರು

ಇಂಡಿಯನ್ ಪ್ರಿಮೀಯರ್ ಲೀಗ್ 2021 ಹರಾಜು ಪ್ರಕ್ರಿಯೆ ನಾಳೆ ಅಂದರೆ ಫೆಬ್ರುವರಿ 18 (ಗುರುವಾರ) ರಂದು ಚೆನೈನಲ್ಲಿ ನಡೆಯಲಿದೆ. ಕೊವಿಡ್-19ಗೆ ಸಂಬಂಧಿಸಿದಂತೆ ಕೆಲ ನಿಯಮಾವಳಿಗಳನ್ನು ಫ್ರಾಂಚೈಸಿಗಳ ಮಾಲೀಕರು ಪಾಲಿಸಬೇಕಿದೆ. ಹರಾಜು ನಡೆಯುವ ಆಡಿಟೋರಿಯಂಗೆ ಪ್ರವೇಶಿಸುವಾಗ ಅವರು ತಮ್ಮೊಂದಿಗೆ ಆರ್​ಟಿ-ಪಿಸಿಆರ್ ನೆಗಟಿವ್ ರಿಪೋರ್ಟ್​ಗಳನ್ನು ಕ್ಯಾರಿ ಮಾಡಬೇಕಾಗುತ್ತದೆ. ಭಾರತೀಯ ಕ್ರಿಕೆಟ್ ಸಂಸ್ಥೆಯ ಮೂಲಗಳ ಪ್ರಕಾರ ಆಟಗಾರರ ಹರಾಜು ಪ್ರಕ್ರಿಯೆಯನ್ನು ಸ್ಟಾರ್ ಸ್ಪೊರ್ಟ್ಸ್​ ನೆಟ್​ವರ್ಕ್​ನ ಡಿಜಿಟಲ್ ಪ್ಲಾಟ್​ಪಾರ್ಮ್​ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಪ್ರತಿಸಲದ ಐಪಿಎಲ್​ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ. ನಮಗೆಲ್ಲ ಗೊತ್ತಿರುವಂತೆ ಎಲ್ಲ ಟೀಮುಗಳಲ್ಲಿ ಮಾರ್ಕೀ ಆಟಗಾರರು, ಟಾಪ್ ಆಟಗಾರರು ಇರುತ್ತಾರೆ. ಈ ಬಾರಿಯ ಆಕ್ಷನ್​ಗೆ ಮೊದಲು ಎಲ್ಲ ಫ್ರಾಂಚೈಸಿಗಳು ಕಳೆದ ಸೀಸನ್​​ನಲ್ಲಿ ತಮ್ಮ ಟೀಮಿಗೆ ಆಡಿದ ಹಲವು ಆಟಗಾರರನ್ನು ರಿಲೀಸ್ ಮಾಡಿವೆ. ಈಗ ಆಯಾ ಟೀಮುಗಳಲ್ಲಿ ಉಳಿದಿರುವ ಪ್ರಮುಖ ಆಟಗಾರರು ಯಾರೆಂದು ನೋಡುವ.

ಮುಂಬೈ ಇಂಡಿಯನ್ಸ್
ಕಳೆದ ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರೆಂದರೆ, ಟೀಮಿನ ನಾಯಕ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಹಾರ್ದಿಕ್ ಪಾಂಡ್ಯ. ಕಳೆದ ಬಾರಿ ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಯಾದವ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದೇ ಹೋಗಿದ್ದು ಬಹಳ ಚರ್ಚೆಯಾಗಿತ್ತು. ಈ ಬಾರಿಯೂ ಅವರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ.

IPL Marquee Players

ರೋಹಿತ್ ಶರ್ಮ

ಚೆನೈ ಸೂಪರ್ ಕಿಂಗ್ಸ್
ಸುರೇಶ ರೈನಾಗೆ ಫ್ರಾಂಚೈಸಿಯಿಂದ ಯಾವುದೇ ತೊಂದರೆಯಾಗದಿದ್ದರೆ, ಅವರು ನಿಸ್ಸಂದೇಹವಾಗಿ ಸಿಎಸ್​ಕೆ ಟೀಮಿನ ಟಾಪ್ ಆಟಗಾರನೆನಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ರನ್ ಗಳಿಸಲು ವಿಫಲರಾದ ಮತ್ತು ಟೀಮನ್ನು ಯಶಸ್ಸಿನ ಹಾದಿಯಲ್ಲಿ ನಡೆಸಲು ವಿಫಲರಾದ ಮಹೇಂದ್ರಸಿಂಗ್​ಗೆ ಒಬ್ಬ ಆಟಗಾರನಾಗಿ ಇದು ಕಡೆಯ ಸೀಸನ್​ ಅಗಬಹುದು. ಅಂಬಟಿ ರಾಯುಡು ಬಗ್ಗೆಯೂ ಅದೇ ಆಭಿಪ್ರಾಯ ಕೇಳಿ ಬರುತ್ತಿದೆ. ಸೀಸನ್ 2020ರಲ್ಲಿ ಯುವ ಪ್ರತಿಭೆ ಋತುರಾಜ್ ಗಾಯಕ್ವಾಡ್ ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರು. ವಿಶ್ವದ ಆಗ್ರಮಾನ್ಯ ಅಲ್​ರೌಂಡರ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ರವೀಂದ್ರ ಜಡೇಜಾ ಸಹ ಟೀಮಿನ ಪ್ರಮುಖ ಆಟಗಾರರು. ಬೌಲರ್​ಗಳ ಪೈಕಿ ಜೊಶ್ ಹೆಜೆಲ್​ವುಡ್, ಸ್ಯಾಮ್ ಕರನ್, ಮಿಚೆಲ್ ಸ್ಯಾಂಟ್ನರ್ ಮಿಂಚಬಹುದು.

ಕೊಲ್ಕತಾ ನೈಟ್ ರೈಡರ್ಸ್
ನಿಸ್ಸಂದೇಹವಾಗಿ 2021 ಸೀಸನ್​ನಲ್ಲಿ ಶುಭ್ಮನ್ ಗಿಲ್ ಮಿಂಚಲಿದ್ದಾರೆ. ರಾಷ್ಟ್ರೀಯ ತಂಡದ ಸದಸ್ಯನಾಗಿರುವುದು ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಹಾಗೆಯೇ ಅವರಲ್ಲಿರುವ ಬೆಟ್ಟದಷ್ಟು ಪ್ರತಿಭೆ ಕುರಿತು ಮಾಜಿ ಆಟಗಾರರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅಯಾನ್ ಮೊರ್ಗನ್ ಮತ್ತು ನಿತಿಶ್ ರಾಣಾ ಸಹ ಟೀಮಿನ ಪ್ರಮುಖ ಅಟಗಾರರಾಗಿದ್ದು ಮಿಂಚಿನ ಗತಿಯಲ್ಲಿ ರನ್​ ಗಳಿಸುತ್ತಾರೆ. ವಿದೇಶೀ ಆಟಗಾರರ ಪೈಕಿ ಅತಿಹೆಚ್ಚು ಸಂಭಾವನೆ ಪಡೆದಿರುವ ಖ್ಯಾತಿಯ ಪ್ಯಾಟ್ ಕಮ್ಮಿನ್ಸ್ ಕೆಕೆಆರ್ ಟೀಮಿನ್ ಬೌಲಿಂಗ್ ಟ್ರಂಪ್​ಕಾರ್ಡ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಮತ್ತು ಅವರ ಆತ್ಮೀಯ ಗೆಳೆಯ ಹಾಗೂ ಟೀಮಿನ ನಾಯಕ ವಿರಾಟ್ಕೊಹ್ಲಿ ಆರ್​ಸಿಬಿ ಟೀಮಿನ ಆಧಾರಸ್ತಂಭಗಳು. ಕಳೆದ ಸೀಸನ್​ನಲ್ಲಿ ಚಾಂಪಿಯನ್​ ಬ್ಯಾಟ್ಸ್​ಮನ್​ನಂತೆ ಆಡಿದ ದೇವದತ್ ಪಡಿಕ್ಕಲ್ ಈ ಬಾರಿಯೂ ಮಿಂಚಬಹುದು. ಬೌಲರ್​ಗಳಲ್ಲಿ ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಪ್ರಮುಖರೆನಿಸಿದ್ದಾರೆ. ಆರ್​ಸಿಬಿ ಬಲಿಷ್ಠ ತಂಡವಾಗಿದ್ದರೂ ಇದುವೆರೆಗೆ ಒಮ್ಮೆಯೂ ಚಾಂಪಿಯನ್​ಶಿಪ್ ಗೆದ್ದಿಲ್ಲ.

IPL Marquee players

ಎಬಿ ಡಿ ವಿಲಿಯರ್ಸ್

ಸನ್​ರೈಸರ್ಸ್ ಹೈದರಾಬಾದ್
ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೇರ್​ಸ್ಟೋ ಮತ್ತು ಮನೀಶ್ ಪಾಂಡೆ ಬ್ಯಾಟಿಗ್ ವಿಬಾಗದಲ್ಲಿ ಎಸ್ ಆರ್ ಹೆಚ್ ತಂಡಕ್ಕೆ ಹೇರಳವಾಗಿ ರನ್​ ಗಳಿಸುತ್ತಿದ್ದಾರೆ. ಆದರೆ ಈ ಟೀಮಿಗೆ ಹೆಚ್ಚು ಪಂದ್ಯಗಳನ್ನು ಗೆದ್ದುಕೊಡುತ್ತಿರುವವರು ಬೌಲರ್​ಗಳಾದ ಟಿ ನಟರಾಜನ್ ಮತ್ತು ರಶೀದ ಖಾನ್. ಭುವನೇಶ್ವರ್ ಕಳೆದ ಸಲ ಹೆಚ್ಚು ಪಂದ್ಯಗಳನ್ನಾಡಲಿಲ್ಲ. ಅವರು ಸಹ ಉತ್ತಮ ಬೌಲರ್ ಮತ್ತು ರಾಷ್ಟ್ರೀಯ ತಂಡಕ್ಕೆ ವಾಪಸ್ಸಾಗಲು ತವಕಿಸುತ್ತಿದ್ದಾರೆ.

ರಾಜಸ್ತಾನ ರಾಯಲ್ಸ್
ಐಪಿಎಲ್-13ನೇ ಸೀಸನ್​ನ ಆರಂಭಿಕ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್​ ಆರ್​ ಟೀಮಿನ ಸಂಜು ಸ್ಯಾಮ್ಸನ್​ ನಂತರದ ಪಂದ್ಯಗಳಲ್ಲಿ ಅಷ್ಟು ಅಬ್ಬರಿಸಲಿಲ್ಲ. ಈ ಟೀಮಿನಲ್ಲಿ ಬೆನ್ ಸ್ಟೋಕ್ಸ್, ಜೊಸ್ ಬಟ್ಲರ್, ರಾಬಿನ್ ಉತ್ತಪ್ಪ ಮೊದಲಾದ ಆಕ್ರಮಣಕಾರಿ ಆಟಗಾರರಿದ್ದಾರೆ. ಬೌಲರ್​ಗಳ ಪೈಕಿ ಜೊಫ್ರಾ ಆರ್ಚರ್ ನಿಶ್ಚಿತವಾಗಿಯೂ ಟೀಮಿನ ಟ್ರಂಪ್​ಕಾರ್ಡ್.

ಕಿಂಗ್ಸ್ ಇಲೆವೆನ್ ಪಂಜಾಬ್
ಪಂಜಾಬ್ ತಂಡದಲ್ಲಿ ಹೆಚ್ಚ್ಚು ಕನ್ನಡಿಗರಿದ್ದಾರೆ. ಟೀಮಿನ ನಾಯಕ ಕೆಎಲ್ ರಾಹುಲ್ 13ನೇ ಸೀಸನ್​ನಲ್ಲಿ ಅತಿಹೆಚ್ಚು ರನ್​ ಗಳಿಸಿದ ಖ್ಯಾತಿಗೆ ಪಾತ್ರರಾದರು. ಸೀಸನ್ ​ಕೊನೆಯಲ್ಲಿ ಕೆಲ ಪಂದ್ಯಗಳನ್ನು ಆಡಿದ ಕ್ರಿಸ್ ಗೇಲ್ ತಮ್ಮನ್ನು ಕಡೆಗಣಿಸಿದ್ದು ದೊಡ್ಡ ಪ್ರಮಾದ ಎನ್ನುವಂತೆ ಆಡಿದರು. ಮಾಯಾಂಕ್ ಅಗರವಾಲ್ ಸಹ ಕೆಲ ಉತ್ತಮ ಇನ್ನಿಂಗ್ಸ್​ಗಳನ್ನು ಆಡಿದರು ಮತ್ತು ಒಂದು ಶತಕವನ್ನೂ ದಾಖಲಿಸಿದರು. ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ಟೀಮಿನ ಪ್ರಮುಖ ಬೌಲರ್​ಗಳು.

ಡೆಲ್ಲಿ ಕ್ಯಾಪಿಟಲ್ಸ್
ಶಿಖರ್ ಧವನ್, ನಾಯಕ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಡೆಲ್ಲಿ ಟೀಮಿಗೆ ಬ್ಯಾಟಿಂಗ್ ವಿಭಾಗದ ಮೇನ್​ಸ್ಟೇಗಳು. ಆಲ್​ರೌಂಡರ್ ಮಾರ್ಕಸ್ ಸ್ಟಾಯ್ನಿಸ್, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಉತ್ತಮ ಬೌಲರ್​ಗಳೂ ಹೌದು ಮತ್ತು ಅಗತ್ಯಬಿದ್ದರೆ ಬ್ಯಾಟ್​ ಸಹ ಬೀಸಬಲ್ಲರು. ಕಗಿಸೊ ರಬಾಡ, ಆ್ಯನ್ರಿಖ್ ನೊರ್ಕಿಯ ಬೌಲಿಂಗ್​ನಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: IPL 2020 Auction Highest Paid Players: ಐಪಿಎಲ್​ 2020 ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆದಿದ್ದ ಟಾಪ್​ 10 ಆಟಗಾರರು ಇವರೇ!

ಇದನ್ನೂ ಓದಿ: Farmers Protest ಫೆ.18 ಕರ್ನಾಟಕಾದ್ಯಂತ ರೈಲು ಸೇವೆ ಬಂದ್?