T.A.ನಾರಾಯಣಗೌಡ ಯಾರೆಂದು ಪ್ರಶ್ನಿಸಿದ್ದಕ್ಕೆ ಸಚಿವರಿಗೆ ಕರವೇ ಕಾರ್ಯಕರ್ತರಿಂದ ಘೇರಾವ್

ನಾರಾಯಣಗೌಡ ಯಾರೆಂದು ಪ್ರಶ್ನಿಸಿದ್ದಕ್ಕೆ ಆರೋಗ್ಯ ಸಚಿವ ಸುಧಾಕರ್​ಗೆ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಘೇರಾವ್ ಹಾಕಿರುವ ಘಟನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ. ಸಚಿವ ಡಾ.ಕೆ.ಸುಧಾಕರ್ ಕಾರಿಗೆ ಘೇರಾವ್ ಹಾಕಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

  • TV9 Web Team
  • Published On - 21:49 PM, 18 Jan 2021
T.A.ನಾರಾಯಣಗೌಡ ಯಾರೆಂದು ಪ್ರಶ್ನಿಸಿದ್ದಕ್ಕೆ ಸಚಿವರಿಗೆ ಕರವೇ ಕಾರ್ಯಕರ್ತರಿಂದ ಘೇರಾವ್
T.A. ನಾರಾಯಣಗೌಡ ಯಾರೆಂದು ಪ್ರಶ್ನಿಸಿದ್ದಕ್ಕೆ ಸಚಿವರಿಗೆ ಕರವೇ ಕಾರ್ಯಕರ್ತರಿಂದ ಘೇರಾವ್

ಬೆಳಗಾವಿ: ನಾರಾಯಣಗೌಡ ಯಾರೆಂದು ಪ್ರಶ್ನಿಸಿದ್ದಕ್ಕೆ ಆರೋಗ್ಯ ಸಚಿವ ಸುಧಾಕರ್​ಗೆ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಘೇರಾವ್ ಹಾಕಿರುವ ಘಟನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ. ಸಚಿವ ಡಾ.ಕೆ.ಸುಧಾಕರ್ ಕಾರಿಗೆ ಘೇರಾವ್ ಹಾಕಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಕಾರಿನ ಎದುರು ಕುಳಿತು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ, ಇಲಾಖೆ ಪ್ರಗತಿ ಪರಿಶೀಲನೆ ಸಭೆ ಮುಗಿಸಿ ಹೊರಬಂದಿದ್ದ ಸಚಿವ ನಾನು ನಿಪ್ಪಾಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲವೆಂದ ಸಮಜಾಯಿಷಿ ನೀಡಲು ಮುಂದಾದರು.

ಈ ನಡುವೆ, MESನವರು ಕರೆದರೂ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀರಾ? ಎಂದು ಸಚಿವ ಡಾ.ಕೆ.ಸುಧಾಕರ್‌ಗೆ ಕರವೇ ಕಾರ್ಯಕರ್ತರು ಪ್ರಶ್ನೆ ಹಾಕಿದರು. ಜೊತೆಗೆ, ನಾರಾಯಣಗೌಡ ಯಾರೆಂದು ಕೇಳಿದ್ದೀರಲ್ಲಾ ಎಂದು ಗರಂ ಸಹ ಆದರು.

ಏನಿದು ಪ್ರಕರಣ?
ಜಿಲ್ಲೆಯ ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಚಿವ ಸುಧಾಕರ್​ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆ ಮರಾಠಿ ಭಾಷೆ ಬಳಕೆಯಾದ ಬಗ್ಗೆ ಎಲ್ಲೆಡೆಯಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ತಾಯಿ-ಮಗು ಆಸ್ಪತ್ರೆ ಉದ್ಘಾಟನೆಯಲ್ಲಿ ಮರಾಠಿ ಗೀತೆ ಹಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.

ಹಾಗಾಗಿ, ಮರಾಠಿಮಯ ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸಚಿವೆ ರಾಜೀನಾಮೆ ನೀಡುವಂತೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದರು. ಈ ಕುರಿತು ಸಚಿವ ಸುಧಾಕರ್​ಗೆ ಪ್ರಶ್ನಿಸಿದ್ದಕ್ಕೆ ಟಿ.ಎ.ನಾರಾಯಣಗೌಡ ಯಾರೆಂದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಈ ಮಧ್ಯೆ, ನಾರಾಯಣಗೌಡ ಗೊತ್ತಿಲ್ಲಪ್ಪ ಎಂದು ಹೇಳಿದ್ದೆ. ಕರ್ನಾಟಕದಲ್ಲಿ ಎಷ್ಟು ಜನ ನಾರಾಯಣಗೌಡರು ಇದ್ದಾರೆ. ಯಾರು ಹೇಳಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಮಜಾಯಿಶಿ ನೀಡಿದರು. ಇದಕ್ಕೆ ಒಪ್ಪದ ಕಾರ್ಯಕರ್ತರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಕೊನೆಗೆ, ಪೊಲೀಸರು ಕಾರ್ಯಕರ್ತರನ್ನ ಎಳೆದು ಹಾಕಿ ಕಾರು ಹೋಗಲು ಅವಕಾಶ ನೀಡಿದರು.

 

ಕರ್ನಾಟಕ ಸರ್ಕಾರದ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ: ಕನ್ನಡಿಗರ ಆಕ್ರೋಶ