ಪರಿಷತ್ತಿನಲ್ಲಿ ಜಂಗೀ ಕುಸ್ತಿ: ಬಿಜೆಪಿ ಉದ್ದೇಶ ವಿಫಲ, ಕಾಂಗ್ರೆಸ್ ಒರಟುತನಕ್ಕೆ ಜಯ!

ಸಾರಿಗೆ ಮುಷ್ಕರದ ವಿಚಾರದಲ್ಲಿ ತನ್ನ ಅಸಮರ್ಪಕತೆಯನ್ನು ರಾಜ್ಯದ ಜನರಿಗೆ ತೋರಿಸಿಕೊಟ್ಟಿದ್ದ ಬಿಜೆಪಿ ಸರಕಾರ ಮತ್ತೆ ವಿಧಾನ ಪರಿಷತ್ತಿನಲ್ಲಿ ಸದನ-ತಂತ್ರಗಾರಿಕೆ ಮಾಡುವಲ್ಲಿ ವಿಫಲವಾಗಿ, ಬಹುನಿರೀಕ್ಷಿತ ಗೋಹತ್ಯಾ ಮಸೂದೆ ಪಾಸು ಮಾಡಿಸಿಕೊಳ್ಳುವಲ್ಲಿ ವಿಫಲವಾಗಿ ನಗೆಪಾಟಲಿಗೀಡಾಯ್ತು.

ಪರಿಷತ್ತಿನಲ್ಲಿ ಜಂಗೀ ಕುಸ್ತಿ: ಬಿಜೆಪಿ ಉದ್ದೇಶ ವಿಫಲ, ಕಾಂಗ್ರೆಸ್ ಒರಟುತನಕ್ಕೆ ಜಯ!
ಪರಿಷತ್ತಿನಲ್ಲಿ ಜಂಗೀ ಕುಸ್ತಿ
bhaskar hegde

|

Dec 15, 2020 | 5:14 PM

ಇಂದು ವಿಧಾನ ಪರಿಷತ್ತಿನ ಕಲಾಪದಲ್ಲಿ ಸೋಲು ಜನರಿಗಾಯ್ತು ಎಂದು ನೈತಿಕ ಆಧಾರವಿಟ್ಟುಕೊಂಡು ಹೇಳುವುದು ಸಾಮಾನ್ಯವಾದರೂ ಇಂದು ನಿಜವಾಗಿ ಸೋತಿದ್ದು ಆಡಳಿತಾರೂಢ ಭಾರತೀಯ ಜನತಾ ಪಕ್ಷ. ಅವರು ಇಂದಿನ ಸಭೆ ಕರೆಸಿದ್ದೇ ಗೋ ಹತ್ಯೆ ನಿಷೇಧದ ವಿಧೇಯಕ ಅಂಗೀಕರಿಸುವ ಉದ್ದೇಶದಿಂದ. ಮತ್ತು ಸಾಧ್ಯವಾದರೆ, ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತಾಗಿತ್ತು. ಈ ಎರಡೂ ಉದ್ದೇಶ ಈಡೇರದಂತೆ ಕಾಂಗ್ರೆಸ್​ ನೋಡಿಕೊಂಡು ಅವರು ಈ ಸುತ್ತಿನಲ್ಲಿ ಒಳ್ಳೆಯ ತಂತ್ರಗಾರಿಕೆ ಮಾಡಿ ಗೆದ್ದಂತಾಯಿತು.

ಏನು ನಡೆದಿತ್ತು?

ಇಂದು ವಿಧಾನ ಪರಿಷತ್​ನಲ್ಲಿ ಆಡಳಿತ ಭಾರತೀಯ ಜನತಾ ಪಕ್ಷ ಮತ್ತು ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್​ ಸದಸ್ಯರು ಪರಸ್ಪರ ಎಳೆದಾಟ, ಕೂಗಾಟದಲ್ಲಿ ಸಭಾ ಮರ್ಯಾದೆ ಮಣ್ಣು ಪಾಲಾಯ್ತು. ಕಳೆದ ವಾರ ರಾಜ್ಯಪಾಲರ ಬಳಿ ಹೋಗಿ ಒತ್ತಾಯಿಸಿ ಸದನ ಕರೆಯುವಂತೆ ಮಾಡಿದ್ದ ಬಿಜೆಪಿಯ ಗಮನ ಗೋ ಹತ್ಯೆ ಮಸೂದೆ ಪಾಸು ಮಾಡಿಸಿಕೊಳ್ಳುವುದರಲ್ಲಿತ್ತು. ಆದರೆ ಅದಕ್ಕೆ ತಕ್ಕಾಗಿ ಸದನ ಹೇಗೆ ನಡೆಸಬೇಕಾಗಿತ್ತು ಎಂಬ ತಂತ್ರಗಾರಿಕೆ (floor management strategy) ಬಿಜೆಪಿಯಲ್ಲಿ ಕಾಣಲಿಲ್ಲ. ಮೊದಲನೆಯದಾಗಿ, ಸದನ ಪ್ರಾರಂಭವಾಗುವ ಮೊದಲೇ, ಉಪ ಸಭಾಪತಿ ಧರ್ಮೇಗೌಡ ಸಭಾಪತಿ ಪೀಠದಲ್ಲಿ ಕುಳಿತಿದ್ದುದು ಆಶ್ಚರ್ಯವಾಗಿತ್ತು. ಸಭಾ ಸಂಪ್ರದಾಯದಂತೆ, ಗಂಟೆ ನಿಲ್ಲುವವರೆಗೂ ಸಭಾಪತಿ ಪೀಠದಲ್ಲಿ ಯಾರೂ ಕುಳಿತುಕೊಳ್ಳುವುದಿಲ್ಲ. ಗಂಟೆ ನಿಲ್ಲುತ್ತಿದ್ದಂತೆ, ಸಭಾಪತಿಗಳು ಅಥವಾ ಉಪಸಭಾಪತಿ ಒಳಗೆ ಬಂದು ಪೀಠದಲ್ಲಿ ಕೂಡ್ರುವುದು ಸಂಪ್ರದಾಯ. ಆದರೆ, ಇಂದು ಉಪ ಸಭಾಪತಿ ಧರ್ಮೆಗೌಡ ಅವರಿಗೆ ಮೊದಲೇ ಅಲ್ಲಿ ಕುಳಿತುಕೊಳ್ಳಲು ಯಾರು ಹೇಳಿದ್ದರು? ಇದು ಕುತೂಹಲದ ಪ್ರಶ್ನೆ. ಒಮ್ಮೆ ಬಿಜೆಪಿ ಈ ತಂತ್ರಗಾರಿಕೆ ಮಾಡಿದ್ದಿದ್ದರೆ ಅದು ಕೆಟ್ಟ ತಂತ್ರವಾಗಿತ್ತು ಎಂಬುದು ನಿಜ. ಇದನ್ನು ಯಾರೂ ಒಪ್ಪಿಕೊಳ್ಳಲಾರರು.

ತಾವು ಮೊದಲೇ ಸಭಾಪತಿ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದೆವು. ಹಾಗಾಗಿ ಧರ್ಮೇಗೌಡ ಅವರನ್ನು ಸಭಾಪತಿ ಸ್ಥಾನದಲ್ಲಿ ಕೂಡ್ರಿಸಲಾಗಿತ್ತು ಎಂದು ಬಿಜೆಪಿ ಹೇಳಿದರೆ ಅದು ಹಾಸ್ಯಾಸ್ಪದದ ಮಾತಾಗುತ್ತದೆ. ಏಕೆಂದರೆ, ಇವತ್ತಿನ ಕಾರ್ಯಸೂಚಿಯಲ್ಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಇರಲಿಲ್ಲ. ಹಾಗಾಗಿ ಅವಿಶ್ವಾಸ ನಿರ್ಣಯದ ವಿಚಾರ ಇಂದು ಚರ್ಚೆಗೆ ಹೇಗೆ ಬರಲು ಸಾಧ್ಯವಾಗುತ್ತಿತ್ತು? ಇದನ್ನು ನೋಡಿದಾಗ ಬಿಜೆಪಿ ಎಡವಿದ್ದು ಸರಿಯಾಗಿ ಗೊತ್ತಾಗುತ್ತದೆ.

ಕಾಂಗ್ರೆಸ್​ ಕೂಡ ತೀರಾ ಕೆಳದರ್ಜೆಗಿಳಿದು ಧರ್ಮೇಗೌಡ ಅವರನ್ನು ಮೈ ಮುಟ್ಟಿ ಪೀಠದಿಂದ ಇಳಿಸಿದ್ದು ಎರಡನೆಯ ತಪ್ಪು. ಅವರನ್ನು ಇಳಿಸಿ, ಚಂದರಶೇಖರ ಪಾಟೀಲ್ ಅವರು ಕುಳಿತಿದ್ದು ಕೂಡ ತಪ್ಪಾಗಿತ್ತು. ಕೊನೆಗೆ ಗಂಟೆ ನಿಂತು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಒಳಗೆ ಬಂದು, ಒಮ್ಮಿಂದೊಮ್ಮೆಲೆ ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದರು. ಇದನ್ನು ಬಿಜೆಪಿ ನಿರೀಕ್ಷಿಸಿರಲಿಲ್ಲ. ಇದು ಕಾಂಗ್ರೆಸ್ಸಿನ ಮಹಾ ತಂತ್ರಗಾರಿಕೆಯ ಭಾಗವಾಯ್ತು. ಇದರಿಂದಾಗಿ ಬಿಜೆಪಿ ತನ್ನ ಯಾವ ಉದ್ದೇಶವನ್ನೂ ಈಡೇರಿಸಿಕೊಳ್ಳಲು ಆಗಲಿಲ್ಲ ಎಂಬುದು ಈಗ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada