ಬೆಳಗಾವಿ: ಬಸವಕಲ್ಯಾಣ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಪರಿಷತ್ ಸದಸ್ಯನಿದ್ದೇನೆ, ಬೈಎಲೆಕ್ಷನ್ನಲ್ಲಿ ಸ್ಪರ್ಧಿಸಲ್ಲ. ಜೊತೆಗೆ, ನನ್ನ ಪುತ್ರನೂ ಸಿಂದಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಚುನಾವಣೆ ಸ್ಪರ್ಧಿಸುವ ಕುರಿತು ಆತನೂ ಸ್ಪಷ್ಟನೆ ನೀಡಿದ್ದಾನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಆದರೆ, ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 18 ಜನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. 18 ಆಕಾಂಕ್ಷಿಗಳು ಒಗ್ಗಟ್ಟಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಚುನಾವಣಾ ಸಮಿತಿ ಸಭೆ ಸೇರಿ ಆಕಾಂಕ್ಷಿಗಳ ಪಟ್ಟಿ ಮಾಡಿ ಹೈಕಮಾಂಡ್ಗೆ ಕಳುಹಿಸುತ್ತೆ. ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಬಸವಕಲ್ಯಾಣ ಉಪಚುನಾವಣೆ ಉಸ್ತುವಾರಿ ನನಗೆ ನೀಡಲಾಗಿದೆ. ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಅವರಿಗೂ ಜವಾಬ್ದಾರಿ ನೀಡಲಾಗಿದೆ. ಅಭ್ಯರ್ಥಿ ಯಾರೇ ಆಗಲಿ, ಅಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಸವಕಲ್ಯಾಣ ಜೊತೆ ಮಸ್ಕಿ, ಸಿಂದಗಿ, ಬೆಳಗಾವಿಯಲ್ಲೂ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
‘ತೈಲ ಬೆಲೆ ಏರಿಕೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ’ ತೈಲ ಬೆಲೆ ಏರಿಕೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. 5 ರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೇ ತೈಲ ಬೆಲೆ ಏರಿಕೆ ಆಗಿದೆ. ಹೀಗಾಗಿ, ದೇಶದಲ್ಲೂ ಇಂಧನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತೈಲ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಹೆಚ್ಚಳವಾಗಿದೆ ಎಂದು ಸವದಿ ಹೇಳಿದರು.
ಇದನ್ನೂ ಓದಿ: ನನ್ನ ಮಕ್ಕಳು, ಮೊಮ್ಮಕ್ಕಳು BJPಯಲ್ಲೇ ಇರಬೇಕೆಂದು ವಿಲ್ನಲ್ಲಿ ಬರೆದಿಟ್ಟು ಬಿಡುತ್ತೇನೆ -ಸಚಿವ ನಾರಾಯಣಗೌಡ