ಬೆಂಗಳೂರು ಗ್ರಾಮಾಂತರ: ಹಣ ನೀಡುವಂತೆ ಅಪಾರ್ಟ್ಮೆಂಟ್ ಮಾಲೀಕನಿಗೆ ಬೆದರಿಕೆ ಒಡ್ಡಿ ಅದಕ್ಕೆ ಆತ ಬಗ್ಗದ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ಗೆ ಆ್ಯಸಿಡ್ ಎರಚಿರುವ ಘಟನೆ ಜಿಲ್ಲೆಯ ದೇವನಹಳ್ಳಿ ಬಳಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ಆಂಧ್ರ ಪ್ರದೇಶ ಮೂಲದ ಬಿಲ್ಡರ್ಗೆ ದುಷ್ಕರ್ಮಿಗಳು 50 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ರು ಎಂದು ತಿಳಿದುಬಂದಿದೆ. ದಾರಿಹೋಕರಿಂದ ಫೋನ್ ಪಡೆದು ಕರೆ ಮಾಡಿ ಬೆದರಿಕೆ ಸಹ ಹಾಕಿದ್ರಂತೆ. ಆದರೆ, ಇದಕ್ಕೆ ಅಪಾರ್ಟ್ಮೆಂಟ್ ಮಾಲೀಕ ಬಗ್ಗದ ಹಿನ್ನೆಲೆಯಲ್ಲಿ ಬಂಡೆ ಸ್ಫೋಟಿಸುವ ರಾಸಾಯನಿಕ ಬಳಸಿ ದೇವನಹಳ್ಳಿ ಹೊರವಲಯದಲ್ಲಿರುವ ಆತನ ನಿರ್ಮಾಣಹಂತದ ಅಪಾರ್ಟ್ಮೆಂಟ್ಗೆ ಹಾನಿ ಮಾಡಿದ್ದರು.
ಈ ಬಗ್ಗೆ, ಠಾಣೆಯಲ್ಲಿ ದೂರು ನೀಡಿದಕ್ಕೆ ಸಿಟ್ಟಿಗೆದ್ದ ದುಷ್ಕರ್ಮಿಗಳು ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ. ಸದ್ಯ, ಸೆಕ್ಯೂರಿಟಿ ಗಾರ್ಡ್ಗೆ ಬೆಂಗಳೂರಿನ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.