2020ರ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಯಾರು ಮಾಡಲಿದ್ದಾರೆ ಗೊತ್ತಾ?

  • TV9 Web Team
  • Published On - 18:48 PM, 12 Sep 2020
2020ರ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಯಾರು ಮಾಡಲಿದ್ದಾರೆ ಗೊತ್ತಾ?

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ತಯಾರಿ ಆರಂಭವಾಗಿದೆ. ಈ ಬಾರಿಯ ಆಚರಣೆ ಸರಳವಾಗಿರಲಿದ್ದು ಜಂಬೂಸವಾರಿಯಲ್ಲಿ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಲಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ST ಸೋಮಶೇಖರ್ ಹೇಳಿದ್ದಾರೆ.

ಮೈಸೂರು ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಮಾತನಾಡಿದ ಸಚಿವರು ವೀರನಹೊಸಹಳ್ಳಿಯಲ್ಲಿ ಗಜಪಯಣ ಕಾರ್ಯಕ್ರಮ ಇರಲ್ಲ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಸಲ ಕೊರೊನಾ ವಾರಿಯರ್ಸ್‌ನಿಂದ ದಸರಾ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು. ಕೊರೊನಾ ವಾರಿಯರ್ಸ್‌ ಆಯ್ಕೆ ಆಯಾ ಇಲಾಖೆಯ ಮುಖ್ಯಸ್ಥರು ಮಾಡುತ್ತಾರೆ. ಅಕ್ಟೋಬರ್‌ 17ರಂದು ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 7.45ರಿಂದ 8.15ರೊಳಗೆ ದಸರಾ ಉದ್ಘಾಟನೆ ನೆರವೇರಲಿದೆ ಅಂತಾ ಸಚಿವ ಸೋಮಶೇಖರ್ ಹೇಳಿದ್ದಾರೆ.

‘ಅರಮನೆ ಅಂಗಳದಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದೆ’
ಪ್ರತಿ ವರ್ಷದಂತೆ ವಿದ್ಯುತ್ ದೀಪಾಲಂಕಾರ ಇರಲಿದೆ. ದಸರಾ ಅಂಗವಾಗಿ 9 ದಿನಗಳ ಕಾರ್ಯಕ್ರಮ ಇರುತ್ತೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲದೆ. ಆದರೆ, ಒಂದು ದಿನಕ್ಕೆ ಒಂದು ಕಾರ್ಯಕ್ರಮ ಮಾತ್ರ ಹಮ್ಮಿಕೊಳ್ಳಲಾಗುವುದು. ಇದಲ್ಲದೆ, ಅರಮನೆ ಅಂಗಳದಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದ್ದು ಅದನ್ನು ಸುಮಾರು ಎರಡು ಸಾವಿರ ಜನ ವೀಕ್ಷಿಸಲು ಮಾತ್ರ ಅನುಮತಿ ಕೋರುತ್ತೇವೆ. ಕೇಂದ್ರ ಸರ್ಕಾರದ ಸೂಚನೆಯಂತೆ ಜನ ಸೇರಲು ಅವಕಾಶ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮಾಹಿತಿ ನೀಡಿದ್ದಾರೆ. ಅಭಿಮನ್ಯು, ಗೋಪಿ, ವಿಕ್ರಮ, ವಿಜಯ, ಕಾವೇರಿ ಆನೆಗಳು ಈ ಬಾರಿ ದಸರಾದಲ್ಲಿ ಭಾಗಿಯಾಗಲಿವೆ. ದಸರಾ ಉತ್ಸವದಲ್ಲಿ ನಂದಿಧ್ವಜ ಹಾಗೂ ಚಾಮುಂಡೇಶ್ವರಿ ಪೂಜೆಗೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ, ಅಂದು ಸಿಎಂ ಆಗಮಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

‘ಐದು ಜನ ಕೊರೊನಾ ವಾರಿಯರ್ಸ್‌ನಲ್ಲಿ ಒಬ್ಬರಿಂದ ದಸರಾ ಉದ್ಘಾಟನೆ’
ಒಂಭತ್ತು ದಿನಗಳ ಕಾಲ ಚಾಮುಂಡೇಶ್ವರಿ ದೇವಸ್ಥಾನದಲ್ಲೂ ವಿಶೇಷ ಪೂಜಾ ಕೈಂಕರ್ಯ ಜರುಗಲಿದ್ದು ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಫೈನಲ್ ಮಾಡ್ತಾರೆ. ಸದ್ಯ ಡಾ.ರವಿ ಮತ್ತು ಡಾ. CN ಮಂಜುನಾಥ್​ರ ಹೆಸರು ಕೇಳಿ ಬಂದಿದೆ. ಅದನ್ನ ಸಿಎಂ ಅಂತಿಮಗೊಳಿಸುತ್ತಾರೆ. ಐದು ಜನ ಕೊರೊನಾ ವಾರಿಯರ್ಸ್‌ನಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ, ನೇರ ಪ್ರಸಾರದ ಮೂಲಕ ಜಂಬೂ ಸವಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮಾಹಿತಿ ನೀಡಿದ್ದಾರೆ.