ಜಗತ್ತಿನ ಮೊಟ್ಟಮೊದಲ ಲಸಿಕೆಯ ಪ್ರಚಾರಕ್ಕಾಗಿ ಪಣತೊಟ್ಟ ಮೈಸೂರು ಮಹಾರಾಣಿ

  • TV9 Web Team
  • Published On - 20:43 PM, 20 Sep 2020
ಜಗತ್ತಿನ ಮೊಟ್ಟಮೊದಲ ಲಸಿಕೆಯ ಪ್ರಚಾರಕ್ಕಾಗಿ ಪಣತೊಟ್ಟ ಮೈಸೂರು ಮಹಾರಾಣಿ

ಮೈಸೂರು: ಕೊರೊನಾ ಮಹಾಮಾರಿ ಇಡೀ ವಿಶ್ವದಲ್ಲಿ ಸಾಕಷ್ಟು ಸಾವು ನೋವಿಗೆ ಕಾರಣವಾಗಿ ಪರಿಣಮಿಸಿದೆ. ಜಗತ್ತಿನಾದ್ಯಂತ ದಾಪುಗಾಲಿಡುತ್ತಾ ಸಾಗುತ್ತಿರುವ ಈ ಹೆಮ್ಮಾರಿಯನ್ನ ಬಗ್ಗುಬಡಿಯಲು ಹಲವಾರು ದೇಶಗಳು ಲಸಿಕೆಯ ಹುಡುಕಾಟದಲ್ಲಿ ತೊಡಗಿವೆ. ಕೆಲವರು ಕೊಂಚ ಯಶಸ್ಸು ಕಂಡರೆ ಮತ್ತೆ ಹಲವರು ಯತ್ನ ನಡೆಸುತ್ತಲ್ಲೇ ಇದ್ದಾರೆ.

ಆದರೆ, ಬಹಳಷ್ಟು ವರ್ಷಗಳ ಹಿಂದೆ ಕೊರೊನಾದಂತೆ ಮಾನವಕುಲವನ್ನು ಮತ್ತೊಂದು ಸಾಂಕ್ರಾಮಿಕ ರೋಗ ಬೆನ್ನು ಬಿಡದೆ ಕಾಡಿತ್ತು. ಅದೇ ಸಣ್ಣ ಸಿಡುಬು ಅಥವಾ ಮೈಲಿ ಬೇನೆ ರೋಗ (ಸ್ಮಾಲ್​ ಪಾಕ್ಸ್​). ಸಾವಿರಾರು ವರ್ಷಗಳಿಂದ ಮನುಕುಲವನ್ನು ಬಾಧಿಸುತ್ತಾ ಬಂದಿದ್ದ ಈ ರೋಗಕ್ಕೆ ಹಲವು ಪ್ರಯತ್ನಗಳ ನಂತರ 1796ರಲ್ಲಿ ಎಡ್ವರ್ಡ್​ ಜೆನ್ನರ್​ ಎಂಬ ಬ್ರಿಟಿಷ್​ ವೈದ್ಯ ಮೊದಲ ಲಸಿಕೆ ಕಂಡುಹಿಡಿದಿದ್ದ. ಇಡೀ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಸಾಂಕ್ರಾಮಿಕ ರೋಗವೊಂದರ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು.

ಸಣ್ಣ ಸಿಡುಬಿನ ವಿರುದ್ಧ ಪರಿಣಾಮಕಾರಿಯಾಗಿದ್ದ ಈ ಲಸಿಕೆಯ ಮಹತ್ವವನ್ನು ಅರಿತ ಇಂಗ್ಲೆಂಡ್​ ತನ್ನ ಇಡೀ ಸಾಮ್ರಾಜ್ಯದ ಪ್ರಜೆಗಳಿಗೆ ಅದನ್ನು ನೀಡಲು ಮುಂದಾಯಿತು. ಆದರೆ, ಭಾರತದಲ್ಲಿ ಈ ಲಸಿಕೆಯ ಬಗ್ಗೆ ಸಾಕಷ್ಟು ವಿರೋಧ ಹಾಗೂ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ, ಭಾರತೀಯರಿಗೆ ಲಸಿಕೆಯನ್ನು ಹಾಕಿಸಲು ಅಂದಿನ ಬ್ರಿಟಿಷ್​ ಸರ್ಕಾರ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಏನು ಮಾಡುವುದು ಎಂಬ ಯೋಚನೆಯಲ್ಲಿದ್ದ ಬ್ರಿಟಿಷ್​ ಸರ್ಕಾರದ ನೆರವಿಗೆ ಆಗ ಬಂದಿದ್ದು ಮೈಸೂರಿನ ಒಡೆಯರ್​ ರಾಜಮನೆತನ. ಅದರಲ್ಲೂ ಅಂದಿನ ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್​ರವರ ನೂತನ ವಧು ಮಹಾರಾಣಿ ದೇವಜಾ ಅಮ್ಮಣ್ಣಿ ಅವರು.

ಮಹಾರಾಣಿಯ ಭಾವಚಿತ್ರದಲ್ಲಿದೆ ವಿಶೇಷ ಸಂಗತಿ
1806ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್​ರವರನ್ನು ವರಿಸಿದ್ದ ಮಹಾರಾಣಿ ದೇವಜಾ ಅಮ್ಮಣ್ಣಿಯವರು ಲಸಿಕೆಯನ್ನು ಸ್ವೀಕರಿಸಲು ಒಪ್ಪಿಕೊಂಡರು. ಹಾಗಾಗಿ, ದೇಶದಲ್ಲಿ ಸಣ್ಣ ಸಿಡುಬಿನ ಮೊದಲ ಲಸಿಕೆಯನ್ನು ದೇವಜಾ ಅಮ್ಮಣ್ಣಿಯವರು ಪಡೆದರು. ಅಷ್ಟೇ ಅಲ್ಲದೆ, ತಾವು ಲಸಿಕೆ ಪಡೆದಿರುವ ಸಂಕೇತವಾಗಿ ಒಂದು ಭಾವಚಿತ್ರವನ್ನು ಸಹ ಮಾಡಿಸಿಕೊಂಡಿದ್ದರು. ಭಾವಚಿತ್ರದಲ್ಲಿ ರೂಪದರ್ಶಿಯಾಗಿ ಕಾಣುವ ದೇವಜಾ ಅಮ್ಮಣ್ಣಿಯವರು ಬಿಳಿ ಸೀರೆಯನ್ನು ಉಟ್ಟಿರುವುದು ಕಂಡು ಬರುತ್ತದೆ. ಮತ್ತೊಂದು ವಿಶೇಷ ಸಂಗತಿಯೆಂದರೆ ಮಹಾರಾಣಿ ತಮ್ಮ ಎಡ ತೋಳನ್ನು ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಲಸಿಕೆಯನ್ನು ಮಹಾರಾಣಿಯ ಎಡ ತೋಳಿಗೆ ನೀಡಿದ್ದ ಸಂಕೇತವಾಗಿ ಅವರು ಹೀಗೆ ಕಂಡು ಬರುತ್ತಾರೆ ಎಂದು ತಿಳಿದುಬಂದಿದೆ.

ಈ ಭಾವಚಿತ್ರವನ್ನು ಲಸಿಕೆಯ ಜಾಹೀರಾತಿನ ಹಾಗೆ ಪ್ರಚಾರಕ್ಕಾಗಿ ಬಳಸಿದ ಬ್ರಿಟಿಷ್​​ ಸರ್ಕಾರ ತದನಂತರ ಭಾರತೀಯರನ್ನು ಲಸಿಕೆ ತೆಗೆದುಕೊಳ್ಳುವಂತೆ ಒಪ್ಪಿಸುವಲ್ಲಿ ಯಶಸ್ವಿಯಾಗಿತ್ತು. ಈ ಭಾವಚಿತ್ರ ಕಾಲಕ್ರಮೇಣ ಕಣ್ಮರೆಯಾಗಿದ್ದು ಬಳಿಕ 2007ರಲ್ಲಿ ಪತ್ತೆಯಾಯಿತು. ಹಾಗಾಗಿ, ಹಲವು ವರ್ಷಗಳ ಕಾಲ ಜನರ ನೆನಪಿನಿಂದ ಮರೆಯಾಗಿದ್ದ ಈ ಘಟನೆ ಇದೀಗ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಭಾರತೀಯರ ಆರೋಗ್ಯದ ಹಿತದೃಷ್ಟಿಯಿಂದ ಲಸಿಕೆಯ ಪ್ರಚಾರಕ್ಕಾಗಿ ಪಣತೊಟ್ಟ ಮಹಾರಾಣಿ ದೇವಜಾ ಅಮ್ಮಣ್ಣಿಯವರ ಕೊಡುಗೆ ನಿಜಕ್ಕೂ ಅವಿಸ್ಮರಣೀಯ.