ನಾನೆಂಬ ಪರಿಮಳದ ಹಾದಿಯಲಿ: ಛಲವಿತ್ತು ಗುರಿಯಿತ್ತು ಹೊರಟೆ…

‘ನನಗೆ ಬೀದರಿನ ಕಾಲೇಜಿನಲ್ಲಿ ಬಿ.ಎಡ್​ ಸೀಟು ಸಿಕ್ಕಿತು. ಹತ್ತು ತಿಂಗಳ ಕೋರ್ಸಿನ ಅವಧಿಯಲ್ಲಿ ಒಮ್ಮೆಯೂ ಮಗುವನ್ನು ನೋಡಲು ಊರಿಗೆ ಬರಬಾರದು, ಇದಕ್ಕೊಪ್ಪಿದರೆ ಸರಿ ಇಲ್ಲವಾದರೆ ಮನೆಯಲ್ಲಿರಬೇಕು ಎಂಬ ಅತ್ತೆಯ ಷರತ್ತಿಗೆ ಒಪ್ಪಿದೆ. ಹಾಲು ಕುಡಿಯುವ ಕೂಸು, ಮಲಗಿರುವಾಗ ಮೆಲ್ಲಗೇ ಕೈಬಿಟ್ಟು ಬೀದರಿನ ಬಸ್ಸು ಏರಿದೆ.‘ ಉಮಾದೇವಿ ಬಾಗಲಕೋಟ

  • TV9 Web Team
  • Published On - 11:55 AM, 21 Jan 2021
ನಾನೆಂಬ ಪರಿಮಳದ ಹಾದಿಯಲಿ: ಛಲವಿತ್ತು ಗುರಿಯಿತ್ತು ಹೊರಟೆ...
ಚುಕ್ಕೆಗೆರೆಗಳೇ ಆಗಬೇಕೇ ರಂಗೋಲಿಗೆ? ಉಮಾದೇವಿ ಬಾಗಲಕೋಟ

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಬೆಳಗಾವಿ ಜಿಲ್ಲೆಯ ಕಿತ್ತೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಉಮಾದೇವಿ ಬಾಗಲಕೋಟ ಅವರ ಅನುಭವ ಕಥನ ನಿಮ್ಮ ಓದಿಗೆ…

‘ಅವ್ವಾ, ಈ ಸಲ ನನ್ನ ಹುಟ್ಟುಹಬ್ಬಕ್ಕ ಹೊಸ ಬಟ್ಟೆ ತೊಗೊಳ್ಳೂದು ಬ್ಯಾಡಾ, ನನ್ನ ಇಬ್ಬರ ಫ್ರೆಂಡ್ಸ್ ನ ಕರೀತೇನಿ. ಫಸ್ಟಕ್ಲಾಸ್ ಬಿಸಿ ರೊಟ್ಟಿ ಮತ್ತ ಜುಣಕಾ ಮಾಡಿಬಿಡು. ನನ್ನ ದೋಸ್ತ್ರು ನಿನ್ನ ಕೈ ಅಡುಗಿ ಬಾಳ ಬಗಸ್ತಾರು, ಹಂಗಂತ ಭಾಳ ತ್ರಾಸ್ ತೊಗೊಬ್ಯಾಡ…’ ಮಗನ ಮಾತು ಮುಂದುವರೆದಿತ್ತು. ಹತ್ತೊಂಬತ್ತು ವರುಷ ತುಂಬಿದ ಮಗ ತೆಂಗಿನ ಮರದಂತೆ ಬೆಳೆದು ನಿಂತಿದ್ದ. ಇಪ್ಪತ್ತು ವರುಷಗಳು ಅದ್ಹೇಗೆ ಮಿಂಚಿನಂತೆ ಕಳೆದವೋ ಎನಿಸುತ್ತಿದೆ.

ಮೊನ್ನೆಮೊನ್ನೆಯಷ್ಟೇ ಪುಟ್ಟ ಊಟದ ಬಾಕ್ಸಿನಲ್ಲಿ ಪುಟ್ಟ ಪುಟ್ಟ ಇಡ್ಲಿಗಳನ್ನಿಟ್ಟು ಜೊತೆಗೆ ಸಪ್ಪನೆಯ ಖೊಬ್ಬರಿ ಚಟ್ನಿ ಸವರಿ ಅವನ ಎಳೆಯ ಹೆಗಲಿಗೆ ಬ್ಯಾಗು ಸಿಕ್ಕಿಸಿ, ಕೈಯಲ್ಲಿ ಟಿಫಿನ್ ಬ್ಯಾಗ್ ಕೊಟ್ಟು ಕಳಿಸಿದ ನೆನಪು ಇನ್ನೂ ಈಗಷ್ಟೇ ನಡೆದಂತಿದೆ. ಬೂಟು, ಕಾಲಚೀಲ, ಸಮವಸ್ತ್ರ, ಬ್ಯಾಗು ಸಮೇತ ತಯಾರಾದ ಮಗನನ್ನೊಮ್ಮೆ ಎತ್ತಿಕೊಂಡು ಮುತ್ತಿಟ್ಟಾಗಲೇ ಸಮಾಧಾನ ಆಗ. ಈಗ ಚಿಗುರು ಮೀಸೆಯ ಮೊಗದ ಮೇಲೆ ಹಲವು ಭಾವ, ಹಲವು ಕುತೂಹಲ.

‘ಅಂವ ತಿಂತಾನ ಬಿಡು, ಮಕ್ಕಳು ಸ್ವತಃ ತಿಂದರನ ಹೊಟ್ಟಿ ತುಂಬತದ‘ ಅಂತ ಅತ್ತೆ ಹೇಳುವುದನ್ನು ಕೇಳಿಸಿಯೂ ಕೇಳಿಸಿಕೊಳ್ಳದಂತೆ ಮರೆಯಲ್ಲಿ ಕರೆದುಕೊಂಡು ಹೋಗಿ ತುತ್ತು ಮಾಡಿ ಸ್ವತಃ ಕೈಯಿಂದ ಉಣಿಸಿದಾಗಲೇ ತೃಪ್ತಿ ನನಗೆ.

ಮದುವೆಯಾದ ಹೊಸತು. ಪತಿಗೆ ಸಿಕಂದರಾಬಾದಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ. ಸಹಜವಾಗೇ ಬಣ್ಣದ ಕನಸ ಹೊತ್ತು, ಹೆತ್ತವರನ್ನು ತೊರೆದು ದೂರದ ಆಂಧ್ರದ ನೆಲಕ್ಕೆ ಕಾಲಿಟ್ಟದ್ದಾಯಿತು. ತೀರಾ ಸಂಪ್ರದಾಯಸ್ಥ ಕುಟುಂಬದಿಂದ ಬಂದ ನಾನು ಇಷ್ಟು ದೂರ ಪ್ರಯಾಣ ಬೆಳೆಸಿಯೇ ಇರಲಿಲ್ಲ. ಅಪರಿಚಿತ ಜನ, ಭಾಷೆಯ ನಡುವೆ ಬದುಕು ಆರಂಭವಾಯಿತು. ಅಲ್ಲಿನ ನೆಲಭಾಷೆ ತೆಲಗು ಕಲಿಯಲು ನನಗೆ ಕಷ್ಟವೇನೂ ಆಗಲಿಲ್ಲ. ಡಿಪ್ಲೊಮಾ ಎಲೆಕ್ಟ್ರೀಕಲ್ ಇಂಜನಿಯರಿಂಗ್‍ನಲ್ಲಿ ಪ್ರಥಮ ಶ್ರೇಣಿ ಪಡೆದು ಹವ್ಯಾಸಕ್ಕೆಂದು ಬಿ.ಎ ಬಾಹ್ಯ ಅಭ್ಯರ್ಥಿಯಾಗಿ ಎರಡು ವರ್ಷ ಪೂರೈಸಿದ್ದೆ. ಅಷ್ಟರಲ್ಲಿ ಮದುವೆಯೂ ಆಗಿ ಅಂತಿಮ ಬಿ.ಎ ಪಾಸು ಮಾಡುವುದಿತ್ತು. ಇನ್ನೇನು ಮದುವೆಯಾಯಿತಲ್ಲ ಬದುಕು ಸ್ಥಿರವಾಯಿತು ಎಂದುಕೊಂಡವಳಿಗೆ ಎರಡೇ ತಿಂಗಳಲ್ಲಿ ಅರಿವಾಯಿತು. ನಿಜವಾಗಿಯೂ ಬದುಕು ಆಗ ಆರಂಭವಾಯಿತೆಂದು.

ಪತಿಯದು ಖಾಸಗಿ ಕಂಪನಿಯಾದ್ದರಿಂದ ನೌಕರಿಯಲ್ಲಿ ಅಸ್ಥಿರತೆ ಇದ್ದೇ ಇತ್ತು. ಹಲವು ತಾಂತ್ರಿಕ ಕಾರಣಗಳಿಂದ ಕೆಲ ನೌಕರರನ್ನು ಸೇವೆಯಿಂದ ತೆಗೆಯಲಾಗುತ್ತದೆ ಎನ್ನುವ ವಿಷಯ ತಿಳಿದುಬಂತು. ಇಷ್ಟರಲ್ಲೇ ತಾಯಿಯಾಗುವ ಲಕ್ಷಣಗಳು ಕಂಡು, ವೈದ್ಯರು ದೃಢಪಡಿಸಿಯೂ ಆಯಿತು. ಏನಾದರೂ ಸರಿಯೇ ಪ್ರಕೃತಿ ತನ್ನ ಕಾರ್ಯ ನಿಲ್ಲಿಸುವುದೇ! ಇತ್ತ ಸಂತಸಪಡಬೇಕೋ, ದುಃಖಪಡಬೇಕೋ ಒಂದೂ ತಿಳಿಯದಾಯಿತು. ದೂರದ ಊರಿನಲ್ಲಿ ಹೆತ್ತವರಿಗೂ, ಅತ್ತೆ ಮನೆಯವರಿಗೂ ಸಂಭ್ರಮಕ್ಕೆ ಕಾರಣವಾದ ಈ ವಿಷಯ ನನಗೆ ಮಾತ್ರ ಗೊಂದಲ ಉಂಟುಮಾಡಿತ್ತು. ಯೋಚನೆಗೆ ಅವಕಾಶವೇ ಇಲ್ಲದಂತೆ ದೈಹಿಕ ಬದಲಾವಣೆಗಳು ಶುರುವಿಟ್ಟುಕೊಂಡವು. ವೈದ್ಯರ ಸಲಹೆಯಂತೆಯೇ ದಿನಚರಿ ಮಾಡಲ್ಪಟ್ಟಿತು. ಒಡಲಲ್ಲಿ ಕುಡಿಯೊಡಿದ ಜೀವಕ್ಕಾಗಿ ಮನಸ್ಸು, ಹೃದಯ ಹಂಬಲಿಸತೊಡಗಿತು.  ಯಾವ ಕಾರಣಕ್ಕೂ ಆತಂಕಪಡಬಾರದು, ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಂದು ವೈದ್ಯೆ ಹೇಳಿದ ಮಾತು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಇಷ್ಟು ದಿನದ ಬೇಕು-ಬೇಡಗಳೆಲ್ಲವೂ ಬದಲಾದವು. ಆಯ್ಕೆಗಳೇ ಮಾಯವಾದವು. ಇನ್ನೂ ಕಣ್ಣುಬಿಡದ ಜೀವಕ್ಕಾಗಿ ಹೃದಯದ ಮಿಡಿತ ಕ್ಷಣಕ್ಷಣವೂ ಹೆಚ್ಚಾಗುತ್ತಿತ್ತು. ಮಗು ಗಂಡೊ ಹೆಣ್ಣೋ ಎನ್ನುವ ಕುತೂಹಲ ಕಾಡತೊಡಗಿ ಹೆಣ್ಣು ಮಗುವೇ ಇರಲಿ ಎಂದು ಬಯಸಿದ್ದೂ ಆಯಿತು. ದಿವಸ ಕಳೆದು ಹೆರಿಗೆಗೆಂದು ತವರು ಮನೆಗೆ ಬಂದು ತಿಂಗಳು ಕಳೆದಿತ್ತಷ್ಟೆ, ಪ್ರಸವ ವೇದನೆ ಶುರುವಾಯಿತು. ಗಾಬರಿಗೊಂಡ ಅವ್ವನಿಗೆ ನಾನೇ ಧೈರ್ಯ ಹೇಳಬೇಕಾಯಿತು, ಇನ್ನೇನು ಮನದಲ್ಲಿ ಏಕೋ ತುಂಬಾ ಆತಂಕವಾಗಿತ್ತು. ದೇವರೆ, ನನ್ನ ಮಗು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸಿ ಒಳನಡೆದೆ. ಮುಂದಿನದ್ದೆಲ್ಲ ಚಲನಚಿತ್ರದ ದೃಶ್ಯಗಳಂತೆ ನಡೆದುಹೋಯಿತು. ಮುದ್ದಾದ ಗಂಡು ಮಗು, ಕರುಳ ಕುಡಿ ಮಡಿಲಲ್ಲಿತ್ತು. ಜಗತ್ತು ಇಷ್ಟು ಸುಂದರವೇ ಎನ್ನಿಸಿತು, ಪ್ರಪ್ರಥಮ ಬಾರಿ ಮನದಲ್ಲಿ ಇನ್ಯಾವ ವಿಚಾರಗಳೂ ಸುಳಿಯಲಿಲ್ಲ. ನನ್ನ ಮಗು, ಕೇವಲ ನನ್ನ ಕಂದ ಅಷ್ಟೇ.

ಉಮಾದೇವಿಯವರ ಕೈಯಲ್ಲರಳಿದ ಕಸೂತಿ

ಅಮ್ಮನ ಹದವಾದ ಆರೈಕೆಯಲ್ಲಿ ಬಾಣಂತನವು ಸಾಗಿ ಮಗು ದಂತದ ಬೊಂಬೆಯಂತೆ ಬೆಳೆಯುತ್ತಿತ್ತು. ಪ್ರತಿ ಗಳಿಗೆಯೂ ಮಗುವಿನ ಆರೈಕೆ, ಲಾಲನೆ-ಪಾಲನೆಯಲ್ಲೇ ಕಳೆಯುತ್ತಿತ್ತು. ಒಂದರ್ಥದಲ್ಲಿ ಅದೊಂದು ಅದೃಶ್ಯ ಕೆಲಸ. ನನ್ನ ಹೊಸ  ಗುರುತಾಗಿತ್ತು. ಇಡೀ ದಿನ ಕಳೆದರೂ ನಾನು ಏನೇನೂ ಮಾಡಿದೆನೆಂದೂ ನನಗೇ ಗೊತ್ತಾಗುತ್ತಿರಲಿಲ್ಲ. ಆದರೆ ಒಂದರೆಗಳಿಗೆಯೂ ಸಾಲದಂತಾಗಿತ್ತು. ಈ ಸಂತಸದ ನಡುವೆ ಮನಸ್ಸು ಘಾಸಿಗೊಳಿಸಿದ ವಿಷಯವೆಂದರೆ ನನ್ನ ಪತಿ ಕೆಲಸ ಕಳೆದುಕೊಂಡು ವಾಪಾಸು ಸ್ವಂತ ಊರಿಗೆ ಮರಳಿದ್ದು. ಮಗುವಿನ ಪ್ರಪಂಚದಲ್ಲಿ ಮುಳುಗಿಹೋಗಿದ್ದ ನನಗೆ ಇದೊಂದು ಆಘಾತವೇ ಆಗಿತ್ತು. ಸಹಜವಾಗೇ ನನ್ನ ಹೆತ್ತವರಿಗೆ ಆತಂಕವಾಗಿತ್ತು. ನನ್ನ ಪತಿ ತಮ್ಮ ಊರಲ್ಲಿ ಏನಾದರೊಂದು ವ್ಯಾಪಾರ ಆರಂಭಿಸುವುದೆಂದು ನಿರ್ಧಾರವಾಯಿತು. ಐದನೆಯ ತಿಂಗಳಿಗೆ ಮಗುವನ್ನೆತ್ತಿಕೊಂಡು ಪತಿಯ ಮನೆಗೆ ಬಂದೆ. ಅದೊಂದು ಮೂಲ ಸೌಕರ್ಯಗಳಿಲ್ಲದ ಹಳ್ಳಿಯ ಮನೆಯಾಗಿತ್ತು. ನನಗೆ ದಿಕ್ಕೇ ತೋಚದಂತಾಯಿತು. ದುಃಖ ಉಕ್ಕಿ ಬರುತ್ತಿತ್ತು. ಆದರೆ ನನ್ನ ಮಗುವಿನ ಮುಗ್ಧ ನಗು ಅದನ್ನೆಲ್ಲ ಮರೆಸಿ ನನ್ನಲ್ಲಿ ಜೀವನೋತ್ಸಾಹ ತುಂಬಿತು. ತಂದೆ-ತಾಯಿಯರ ಸಂಸ್ಕಾರ, ಬೆಳೆದುಬಂದ ವಾತಾವರಣ ನನ್ನನ್ನು ಧೈರ್ಯಗೆಡದಂತೆ ತಡೆಯಿತು.  ಅಂದೇ ನಿರ್ಧರಿಸಿದೆ, ಓದು ಮುಂದುವರೆಸುವುದೆಂದು. ಹೇಗೂ ಕೈಯಲ್ಲಿ ಬಿ.ಎ. ಡಿಗ್ರಿ ಇತ್ತು. ಮಕ್ಕಳಿಗೆ ಮನೆಪಾಠ ಶುರುಮಾಡಿದೆ. ನನಗೆ ಮೊದಲಿನಿಂದಲೂ ಕರಕುಶಲ ಕಲೆಗಳಲ್ಲಿ ಅತೀವ ಆಸಕ್ತಿ ಇತ್ತು. ಪೇಂಟಿಂಗ್, ಎಂಬ್ರಾಯಿಡರ್, ಮೆಹಂದಿ, ರಂಗೋಲಿ ಇತ್ಯಾದಿ ತರಬೇತಿ ನೀಡಲು ಆರಂಭಿಸಿದೆ. ಆದರೆ ಇದನ್ನೆಲ್ಲ ಮಾಡಿದ್ದು ನಾನೇನೇ ಎಂದು ಆಶ್ಚರ್ಯವಾಗುತ್ತದೆ.  ಒಂದರೆಗಳಿಗೆಯೂ ಬಿಡುವಿಲ್ಲದಂತೆ ದುಡಿಯುತ್ತಿದ್ದೆ. ಮಗುವಿನ ಕೆಲಸ, ಮನೆಕೆಲಸ, ಓದು ಇತ್ಯಾದಿಯಲ್ಲಿ ಮೈ-ಮನಸ್ಸು ದಣಿದು ಹಿಂಡಿಹಿಪ್ಪೆಯಾಗುತ್ತಿತ್ತು. ಕಣ್ಣೆದುರು ಒಂದೇ ಗುರಿ, ಮಗುವಿನ ಭವಿಷ್ಯ.

ಇಷ್ಟಕ್ಕೆ ನನ್ನ ಕಾರ್ಯ ಫಲ ನೀಡುವುದಿಲ್ಲವೆಂದು ಮನಸ್ಸು ಹೇಳುತ್ತಿತ್ತು. ನಿವೃತ್ತ ಶಿಕ್ಷಕರಾದ ತಂದೆಯವರ ಸಲಹೆಯಂತೆ ಬಿ.ಎಡ್ ಕೋರ್ಸ್ ಮಾಡುವುದೆಂದು ನಿರ್ಧರಿಸಿದೆ. ಮನದ ಇಂಗಿತವನ್ನು ಪತಿಯ ಮುಂದಿರಿಸಿದಾಗ ಅವರೂ ಸಮ್ಮತಿಸಿದರು. ಆ ವೇಳೆ ಬಿ.ಎಡ್ ಕಾಲೇಜುಗಳ ಸಂಖ್ಯೆ ಕಡಿಮೆ ಇದ್ದು, ನನಗೆ ಬೀದರಿನ ಕಾಲೇಜು ಒಂದರಲ್ಲಿ ಮೆರಿಟ್ ಆಧಾರದ ಮೇಲೆ ಸೀಟು ದೊರಕಿತ್ತು. ಒಂದೂವರೆ ವರ್ಷದ ಮಗು ಕಣ್ಣಮುಂದೆ ಬಂತು. ಏನು ಮಾಡುವುದು? ಮಗುವನ್ನು ಕರೆದುಕೊಂಡು ಹೋದರೆ ಜೊತೆಗೆ ಯಾರಾದರೂ ಬೇಕು. ಬರುವವರಾರು ಎಂಬ ಪ್ರಶ್ನೆ ಶುರುವಾಯಿತು. ಅತ್ತೆಯವರನ್ನು ಕೇಳಲು, ಅವರು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದರು. ಆದರೆ, ಮಗುವನ್ನು ಇಲ್ಲೇ ಬಿಟ್ಟು ಹೋದರೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಇಷ್ಟಾದರೆ ಚಿಂತೆಯಿರಲಿಲ್ಲ. ಆದರೆ ಹತ್ತು ತಿಂಗಳ ಕೋರ್ಸಿನ ಅವಧಿಯಲ್ಲಿ ನಡುವೆ ಒಮ್ಮೆಯೂ ಮಗುವನ್ನು ನೋಡಲು ಬರಬಾರದು ಎಂಬ ಷರತ್ತು ಹಾಕಿದರು. ಇದಕ್ಕೊಪ್ಪಿದರೆ ಸರಿ ಇಲ್ಲವಾದರೆ ಮನೆಯಲ್ಲಿರಬೇಕು. ಒಂದು ಕಡೆ ಮಗುವಿನ ಮೇಲಿನ ಅದಮ್ಯ ಪ್ರೀತಿ-ತಾಯ್ತನ, ಇನ್ನೊಂದೆಡೆ ಅದರ ಭವಿಷ್ಯ, ಕರ್ತವ್ಯ. ಹಾಲು ಕುಡಿಯುವ ಕೂಸು ಮಲಗಿರುವಾಗ ಮೆಲ್ಲಗೇ ಕೈಬಿಟ್ಟು ಬೀದರಿನ ಬಸ್ಸು ಏರಿದೆ. ನೆನಸಿಕೊಂಡರೆ ಈಗಲೂ ಗಂಟಲುಬ್ಬಿ ಕಣ್ಣು ತೊಟ್ಟಿಕ್ಕುತ್ತದೆ.

ಮಗುವಿನ ನೆನಪು ಸದಾ ಕಾಡುತ್ತಿತ್ತಾದರೂ ಸಾಧಿಸುವ ಛಲ ಅಚಲವಾಗಿತ್ತು. ಅತ್ತೆ ಹಾಕಿದ ಷರತ್ತನ್ನು ಪಾಲಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಬಿ.ಎಡ್​ ಪಾಸು ಮಾಡಿದೆ. ಮರಳಿ ಊರಿಗೆ ಬಂದಾಗ ನನ್ನ ಮಗ ಎರಡೂವರೆ ವರ್ಷದ ಕಂದ. ಓಡುತ್ತಾ ಬಂದು ‘ಅಮ್ಮ’ ಎಂದಾಗ ನನಗಾದ ಅನುಭವ ಅಕ್ಷರಕ್ಕಿಳಿಸಲಾರೆ.

ಶೀಘ್ರವೇ ಖಾಸಗಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡೆ. ಆದರೆ ಬರುವ ಅಲ್ಪ ಸಂಬಳ ಎಣ್ಣೆಗೆ ಬತ್ತಿಗೆ. ಪತಿಯ ವ್ಯಾಪಾರವೂ ಆರಕ್ಕೇರದ ಮೂರಕ್ಕಿಳಿಯದ ಅಂಕಿಯಂತಿತ್ತು. ಮತ್ತೊಂದು ಗುರಿಯತ್ತ ಮನಸ್ಸು ತುಡಿಯುತ್ತಿತ್ತು. ಅದುವೇ ಸರಕಾರಿ ನೌಕರಿ ಗಿಟ್ಟಿಸುವುದು. ಅದು ಸುಲಭವೇನೂ ಆಗಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಿತ್ತು. ಅದಕ್ಕಾಗಿ ತಕ್ಕ ಪೂರ್ವತಯಾರಿ, ಓದು ಅನಿವಾರ್ಯವಾಗಿತ್ತು. ಮಗು- ಶಾಲೆ–ಮನೆಗೆಲಸ ಎಲ್ಲವನ್ನೂ ನಿಭಾಯಿಸಿ ಕೂಡುಕುಟುಂಬದ ಓರೆಕೋರೆಗಳನ್ನು ಸಹಿಸುತ್ತ ಸಾಗಬೇಕಿತ್ತು. ಈ ನಡುವೆ ಎರಡು ಬಾರಿ ಗರ್ಭಪಾತ ಹಾಗೂ ಒಂದು ಮಗು ತೀರಿಹೋದ ನೋವನ್ನು ಅವಿತಿಟ್ಟುಕೊಂಡೆ. ದೇಹ ಮತ್ತು ಮನಸ್ಸು ತೀರಾ ಘಾಸಿಗೊಂಡವು. ಆದರೆ ಅದ್ಯಾವ ಅವ್ಯಕ್ತ ಧೈರ್ಯ ಮೂಡಿತ್ತೋ ಕಾಣೆ. ಬಾಹ್ಯ ಅಭ್ಯರ್ಥಿಯಾಗಿ ಇಂಗ್ಲಿಷಿನಲ್ಲಿ ಎಂ.ಎ  ಪಾಸು ಮಾಡಿದೆ. ಇದೆಲ್ಲದರ ಮಧ್ಯೆ ಮತ್ತೊಂದು ಗಂಡುಮಗುವಿಗೆ ತಾಯಿಯೂ ಆದೆ. ಸತತವಾಗಿ ನಾಲ್ಕು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಮೇಲೆ ನಾಲ್ಕನೆಯ ಬಾರಿ ಯಶಸ್ಸು ಕಂಡೆ. ಸರಕಾರಿ ನೌಕರಿ ನನ್ನದಾಯಿತು.

ಹೆಣ್ಣು ತಾಯಿಯಾಗುವಾಗ ಮಗುವಿನೊಟ್ಟಿಗೆ ಅದಮ್ಯ ಪ್ರೀತಿ, ಅಗಾಧ ಅಂತಃಕರಣ, ನಿಸ್ವಾರ್ಥದ ಜನನವೂ ಆಗುತ್ತದೆ ಜೊತೆಗೆ ಸಂವೇದನೆಯೂ ಹೆಚ್ಚುತ್ತಾ ಹೋಗುತ್ತದೆ. ನಿದ್ರೆಯಿಲ್ಲದೇ ಕಳೆದ ರಾತ್ರಿಗಳು, ಊಟವಿಲ್ಲದೇ ಕಳೆದ ಹಗಲುಗಳು, ದೈಹಿಕ-ಮಾನಸಿಕ ಬದಲಾವಣೆಗಳು ಇವೆಲ್ಲವನ್ನು ಮೆಟ್ಟಿನಿಲ್ಲುವ ಅದ್ಭುತ ಶಕ್ತಿ ತಾಯಿಯಲ್ಲಿ ಮಾತ್ರ ಸಾಧ್ಯ. ಮಕ್ಕಳಿಗೆ ಪಾಲನೆ-ಪೋಷಣೆ ಸಂಸ್ಕಾರ ನೀಡಿ ಅವರನ್ನು ಬೆಳೆಸಿ ದೊಡ್ಡವರನ್ನಾಗಿಸುವಂತಹ ಈ ಎಲ್ಲ ಅನುಭವಗಳು ಜೀವನಕ್ಕೊಂದು ಹೊಸ ಅರ್ಥ ನೀಡುತ್ತವೆ. ಅಗಾಧ ತಾಳ್ಮೆ ಉನ್ನತ ಮಾನವೀಯ ಮೌಲ್ಯಗಳನ್ನು ಚಿಮ್ಮಿಸುತ್ತವೆ. ಇದರಲ್ಲಿ ನನ್ನ ಪ್ರಯತ್ನವೆಷ್ಟು, ದೈವಬಲವೆಷ್ಟು, ಹಿರಿಯರ ಹಾರೈಕೆಯಷ್ಟು, ಪ್ರಕೃತಿಯ ಕೊಡುಗೆಯಷ್ಟು ಬಿಡಿಸಿ ಹೇಳಲಾರೆ. ಆದರೆ ತಾಯಿಯಾಗುವ ಅನುಭವ ಮಾತ್ರ ಬದುಕನ್ನು ಸಾರ್ಥಕಗೊಳಿಸುವ ಒಂದು ದಿವ್ಯಾನುಭವ. ಈ ಕ್ಷಣದಲ್ಲೂ ಕಣ್ಣೀರು ತನ್ನ ಪಾಡಿಗೆ ತಾನು ಹರಿಯುತ್ತದೆ. ಸಂತೋಷದ್ದೋ, ಸಂಕಟದ್ದೋ ಅಥವಾ ಎರಡರ ಮಿಶ್ರಣವೊ ಪದಕ್ಕೆ ಸಿಗದ ಜೀವಕಾವ್ಯ.

ವಾಸುವಿಗೆ ಬದನೆಕಾಯಿ ಇಷ್ಟವಿಲ್ಲ
ಮಡಿಕೆ ಕಾಳು ಸಂಜುವಿನ ಹೊಟ್ಟೆಗಾಗಲ್ಲ
ಶಾಮಲತ್ತೆಗೆ ನಿನ್ನೆಯ ರೊಟ್ಟಿ ಕೊಡಬೇಡ
ಅಮ್ಮ ಹೇಳುತ್ತಲೇ ಇದ್ದಳು

ಹಳದಿ ಒಡಲಲ್ಲಿ ಹಸಿರು ಹೂ
ಸೀರೆಯಲ್ಲಿ ಕೃಶ ಬಾರ್ಬಿಯಂತೆ ಕಂಡಳು
ಬಿಳುಚಿದ ಮುಂಗೈ ಮೇಲಿನ ನರಗಳು
ಉಟ್ಟ ಸೀರೆಯ ಹೂವಿಗೆ
ಟೊಂಗೆಗಳಂತೆ ಕಂಡವು

ಕೊರೋನಾಕ್ಕೆ ಲಸಿಕೆ ಬಂತಂತೆ ಹೌದೇನೆ?
ಆಚೆ ಮನೆ ಪ್ರೇಮನಿಗೆ ಮೂರನೆಯದೂ ಹೆಣ್ಣಂತೆ?
ಅಮ್ಮ, ನೀ ಸ್ವಲ್ಪ ಸುಮ್ಮನಿರ್ತೀಯಾ?
ಗದರಿದೆ.

ಏದುಸಿರು ಬಿಡುತ್ತಲೇ ಹೇಳಿದಳು
ನಾಳೆ ಅಮವಾಸ್ಯೆ ಕಣೆ
ನೆಲ ಗುಡಿಸಿ ಸಾರಿಸಬೇಕು
ಪೇಟೆ ಲಕ್ಷ್ಮಿಗೆ ನೈವೇದ್ಯದ
ಜೊತೆ ಕಾಯಿ ಇಡು.

ಧ್ವನಿ ಕ್ಷೀಣಿಸುತ್ತಿತ್ತು
ಹತ್ತಿರ ಹೋಗಿ ಕೇಳಿದೆ
ಅಮ್ಮಾ ನೀರು ಬೇಕಾ…
ಗಾಬರಿಯಿಂದ ಕೇಳಿದಳು
ಟೈಮೆಷ್ಟಾಯ್ತೆ?
ಸ್ವಲ್ಪ ಸಿಟ್ಟಿನಿಂದಲೇ ಹೇಳಿದೆ
ಎಂಟು ಗಂಟೆ
ನಿಮ್ಮಪ್ಪನಿಗೆ ಊಟ ಕೊಡು
ಧ್ವನಿ ಜೋರಾಯಿತು
ಕೆಮ್ಮಿನೊಟ್ಟಿಗೆ ಏದುಸಿರು

ನೀನೂ ಊಟ ಮಾಡಿಬಿಡು ಮಗಾ
ಆಮ್ಯಾಲೆ ಟೈಮ್ ಸಿಗಾಕಿಲ್ಲಾ
ಹೊರನಡೆದವಳು ತಿರುಗಿ ನೋಡಿದೆ
ಧ್ವನಿಯೇ ಬಾರದೆ ಕಿರುಚಿದೆ
ಅಮ್ಮಾ…

ನಾನೆಂಬ ಪರಿಮಳದ ಹಾದಿಯಲಿ: ಪರತ್ ಪಾವತಿಯಾಗುವ ತನಕ ಹರಿದ ಹೊಳೆ ನೀರೆಷ್ಟೋ…