ನಾನೆಂಬ ಪರಿಮಳದ ಹಾದಿಯಲಿ: ಸಾಲಿಗ್ರಾಮದ ಈ ಚೊತ್ತಿ ಕತ್ತುರಗಿ ಹಿಂದಿರುಗಿ ನೋಡಿದ್ದೇ ಇಲ್ಲ!

‘ಅವಲಕ್ಷಣದ ಹೆಣ್ಣುಕೂಸು ನಾನು. ಕಪ್ಪು, ಕುಳ್ಳು ಪೀಚು ಶರೀರ. ಆ ಅಂದಕ್ಕೆ ಕಲಶವಿಟ್ಟಂತೆ ಓರೆಕತ್ತಿನ ಊನವೂ. ಅಪಮಾನದ, ದಳ್ಳುರಿಯಲ್ಲಿ ಬೆಳೆಯುತ್ತಿದ್ದ ನನಗೆ ಕಾಲ ಹೀಗೆಯೇ ಆ ಕ್ಷಣವೇ ನಿಂತು ಹೋಗಲಿ ಅನ್ನಿಸುತ್ತಿತ್ತು. ಓರಗೆಯವರು ಅಣಕಿಸುವಾಗ ಭೋರೆಂದು ಅಳುತ್ತಿದ್ದೆ. ಆಗೆಲ್ಲಾ ತಾಯಿ ಬಂದು ಮಡಿಲೊಳಗೆ ಗಬಕ್ಕನೇ ಎಳೆದುಕೊಳ್ಳುತ್ತಿದ್ದಳು. ಹೀಗಾಗಿ ವಿಲಿಯಮ್ ಬ್ಲೇಕ್ ತನ್ನ Songs of Innocence ನಲ್ಲಿ ಹೇಳುವ ಹಾಗೆ ನನ್ನ ಬಾಲ್ಯವೆಂಬುದು ಸ್ವಚ್ಛಂದ ಚಂದದ ಆಡುಂಬೊಲವಾಗಿರಲಿಲ್ಲ.‘ ಡಾ. ಗಿರಿಜಾ ಶಾಸ್ತ್ರಿ

  • TV9 Web Team
  • Published On - 15:51 PM, 27 Jan 2021
ಲೇಖಕಿ ಡಾ. ಗಿರಿಜಾ ಶಾಸ್ತ್ರಿ

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಮುಂಬಯಿಯಲ್ಲಿ ವಾಸವಾಗಿರುವ ಡಾ. ಗಿರಿಜಾ ಶಾಸ್ತ್ರಿ ಅವರ ಆತ್ಮಕಥಾನಕದ ತುಣುಕುಗಳು ಇಲ್ಲಿ…

ಅದೊಂದು ಸಣ್ಣ ಊರು. ಮೈಸೂರು ಜಿಲ್ಲೆಯ, ಸಾಲಿಗ್ರಾಮ. ಅಲ್ಲೊಂದು ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣರ ಮನೆ. ಧರ್ಮಶಾಸ್ತ್ರ, ವೇದ, ಪುರಾಣ, ಜ್ಯೋತಿಷ್ಯ, ಕಾವ್ಯ, ನಾಟಕಗಳು ಆ ಮನೆಯ ಹಜಾರದ ಉಯ್ಯಾಲೆಯ ಮೇಲೆ ತೂಗುತ್ತಿದ್ದವು. ಅದೇ ಕತ್ತಲು ತುಂಬಿದ ಆ ಮನೆಯೊಳಗೆ ವ್ರತ, ಪೂಜೆ, ಮಡಿ, ಮೈಲಿಗೆ, ಮುಟ್ಟು, ಮುಸುರೆ, ಸ್ಪರ್ಶಾಸ್ಪರ್ಶತೆಯ ಬೆಂಕಿ ಮತ್ತು ಹೊಗೆ ತುಂಬಿಹೋಗಿತ್ತು. ಯಾರಿಗೂ ಅಲ್ಲೊಂದು ದೊಡ್ಡ ಕಿಟಕಿ ಇರಿಸಬೇಕೆಂಬ ಪರಿವೆಯೇ ಇರಲಿಲ್ಲವೋ ಅಥವಾ ಅದು ಇದ್ದುದೇ ಹಾಗೆಯೋ.

ಆ ಮನೆಯೊಳಗೊಂದು ಅವಲಕ್ಷಣದ ಹೆಣ್ಣುಕೂಸು ನಾನು ಹುಟ್ಟಿದೆ. ಆದರೆ ಹಾಗೆ ಹುಟ್ಟಿದುದು ಭರ್ಜರಿ ಮುಹೂರ್ತದಲ್ಲಿ ಎಂದು ಅಪ್ಪ ಹೇಳುತ್ತಿದ್ದರು. ‘ಕಪ್ಪು’ ಎಂದೇ ಹೇಳಬಹುದಾದ ಬಣ್ಣ, ಕುಳ್ಳು ಪೀಚು ಶರೀರ, ಸಾಧಾರಣ ಮೋರೆಯ ಹುಡುಗಿ ನಾನು. ಆ ಅಂದಕ್ಕೆ ಕಲಶವಿಟ್ಟಂತೆ ಓರೆಕತ್ತಿನ ಊನವೂ ಸೇರಿತ್ತು. ಎಲ್ಲರ ಬಾಯಲ್ಲಿ ನಾನು ‘ಚೊತ್ತಿ’ ಎಂದೋ‚ ‘ಕತ್ತುರಗಿ’ ಎಂದೋ ಬೆಳೆಯುತ್ತಿದ್ದೆ. ಕಾಲ ಯಾರಿಗೆ ಕಾಯುತ್ತದೆ? ಅಪಮಾನದ, ದೈನ್ಯದ ದಳ್ಳುರಿಯಲ್ಲಿ ಬೆಳೆಯುತ್ತಿದ್ದ ನನಗೆ ಕಾಲ ಹೀಗೆಯೇ ಆ ಕ್ಷಣವೇ ನಿಂತು ಹೋಗಲಿ ಎಂದು ಆ ಸಣ್ಣ ವಯಸ್ಸಿಗೇ ಎಷ್ಟು ಬಾರಿ ಎನಿಸಿರಲಿಲ್ಲ? ಶಾಲೆಗೆ ಹೋಗುವಾಗ, ಬರುವಾಗೆಲ್ಲಾ ಓರಗೆಯವರು ಅಣಕಿಸುವಾಗ ಭೋರೆಂದು ಅಳುತ್ತಿದ್ದೆ. ಹಾಗೆ ಅತ್ತಾಗಲೆಲ್ಲಾ ತಾಯಿ ಬಂದು ಮಡಿಲೊಳಗೆ ಗಬಕ್ಕನೇ ಎಳೆದುಕೊಂಡು ಸಮಾಧಾನ ಪಡಿಸುತ್ತಿದ್ದಳು. ಹೀಗಾಗಿ ವಿಲಿಯಮ್ ಬ್ಲೇಕ್ ಕವಿ ತನ್ನ Songs of Innocence ನಲ್ಲಿ ಹೇಳುವ ಹಾಗೆ ನನ್ನ ಬಾಲ್ಯವೆಂಬುದು ಸ್ವಚ್ಛಂದ ಚಂದದ ಆಡುಂಬೊಲವಾಗಿರಲಿಲ್ಲ.

‘ನಿನಗೇನಾಗಿದೆ ಮಗಳೇ, ಗಜಕೇಸರಿ ಯೋಗ ಇದೆ ನಿನಗೆ ಅಮ್ಮಯ್ಯ. ಅದು ಎಲ್ಲರಿಗೂ ಇರೋದಿಲ್ಲ. ವಿಶೇಷವಾದ ಜಾತಕ ನಿನ್ನದು. ಅದ್ಭುತವಾಗಿ ಬದುಕ್ತೀಯಾ. ಹುಚ್ಚು ಹುಡುಗಿ ಮೂಲೇಲಿ ಕೂತ್ಕೊಂಡು ಅಳ್ತಾಳೆ’ ಎಂದು ಅಪ್ಪ ಹೆಗಲ ಮೇಲೆ ಹೊದ್ದ ಶಲ್ಯವನ್ನು ಮತ್ತೊಮ್ಮೆ ಒದರಿ ಹೊದ್ದುಕೊಂಡು ಮನೆಯ ಹೆಬ್ಬಾಗಿಲನ್ನು ದಾಟುತ್ತಿದ್ದ ದೃಶ್ಯ ನನ್ನ ಕಣ್ಣಮುಂದೆ ಇನ್ನೂ ಇದೆ.

ನನಗೆ ಶಾಲೆಯ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಬೇಕೆಂಬ, ಹಾಡು ಕಲಿತುಕೊಳ್ಳಬೇಕೆಂಬ ಮಹದಾಸೆ. ಒಂದು ದಿನವೆಲ್ಲಾ ನನ್ನನ್ನು ಹಾಡಿನ ಕ್ಲಾಸಿಗೆ ಸೇರಿಸಬೇಕೆಂದು ಅತ್ತ ನೆನಪಿದೆ. ಆದರೆ ಅಪ್ಪನಿಗೆ ನಾನು ವಕೀಲಳಾಗಬೇಕೆಂಬ ಆಸೆ!

***

‘ಇದು ಯಾರ ಉತ್ತರ ಪತ್ರಿಕೆ ಹೇಳಿ ನೋಡುವಾ?’ ಹತ್ತನೆಯ ತರಗತಿಯಲ್ಲಿ ನಡೆದ ಮಧ್ಯಂತರ ಪರೀಕ್ಷೆಯ, ಕನ್ನಡದ ನನ್ನ ಉತ್ತರ ಪತ್ರಿಕೆಯನ್ನು ಬಾವುಟದಂತೆ ಮೇಲೆ ಹಿಡಿದು ಸಕಲೇಶಪುರದ ಸೇಂಟ್ ಜೋಸೆಫ್ ಶಾಲೆಯ ಮದರ್ ರೀಟಾ ಅವರು ನನ್ನೆಡೆಗೆ ಕಳ್ಳತನದ ನೋಟ ಬೀರಿ, ಉಳಿದ ಸಹಪಾಠಿಗಳನ್ನು ಕೇಳಿದ್ದರು. ಇಡೀ ತರಗತಿಯೊಳಗೆ ನಾನು ಬರೆದ ಉತ್ತರವನ್ನು ಜೋರಾಗಿ ಓದಿದ್ದರು. ಶಹಬಾಸ್‍ಗಿರಿಯ ಸುರಿಮಳೆಯಾಯಿತು. ಆ ಸಣ್ಣ ಊರಿನಲ್ಲಿ ಬಹುಶಃ ಸೈಕಲ್ ತುಳಿಯುತ್ತಿದ್ದ ಗಂಡುಬೀರಿ ಹುಡುಗಿಯೆಂದರೆ ನಾನೊಬ್ಬಳೇ. ಆಗ ನನಗೆ ಹದಿನೈದು ವರುಷ. ಬಸ್ ನಿಲ್ದಾಣದ ಬಳಿಯೇ ಇದ್ದ ನಮ್ಮ ಮನೆಯ ಮುಂದಿನ ಮೈದಾನದಲ್ಲಿ ಸೈಕಲ್ ತುಳಿಯುತ್ತಿದ್ದರೆ, ಊರ ಜನ ಕೋತಿ ಕುಣಿಸುವುದನ್ನೋ, ದೊಂಬರಾಟವನ್ನೋ ನೋಡುವಂತೆ ಸುತ್ತಲೂ ನಿಂತು ನೋಡುತ್ತಿದ್ದರು. ಕೆಲವೊಮ್ಮೆ ಸಿಳ್ಳೆಯನ್ನೂ ಹೊಡೆಯುತ್ತಿದ್ದರು.

***

ನನ್ನ ದುಃಖವನ್ನು, ಬುದ್ಧಿವಂತಿಕೆಯನ್ನು, ಸೋಲೊಪ್ಪದ ಎಣೆಯಿಲ್ಲದ ಹೀರುವ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದ ವ್ಯಕ್ತಿಯೆಂದರೆ ನನ್ನ ಹಿರಿಯಣ್ಣ ಮಾತ್ರ.‚ ‘ಅವಳಿಗೆ ಕುತ್ತಿಗೆಯ ಆಪರೇಷನ್ ಮಾಡಿಸಿ’ ಎಂದು ಅವನು ಅಪ್ಪನ ವಿರುದ್ಧ ನಿಂತು ಮಾತನಾಡುತ್ತಿದ್ದ. ಯಾರೋ ವೈದ್ಯರೊಬ್ಬರು ‘ಅವಳಿಗೆ ಆಪರೇಷನ್ ಮಾಡಿಸಿದರೆ ಮಿದುಳಿಗೆ ಅಪಾಯವೆಂದು’ ಹೆದರಿಸಿದ್ದುದೇ ನನ್ನ ಆಪರೇಷನ್ನಿಗೆ ಅಡ್ಡಿಯಾಗಿತ್ತು. ಸಾಹಿತ್ಯವೆಂದರೆ ಹಿರಿಯಣ್ಣನಿಗೆ ಪ್ರಾಣ. ನಾವುಗಳೆಲ್ಲಾ ಸಕಲೇಶಪುರಕ್ಕೆ ಬರುವುದಕ್ಕೂ ಮುನ್ನ, ಆಗಷ್ಟೇ ಹೈಸ್ಕೂಲು ಮೆಟ್ಟಿಲು ಹತ್ತಿದ ನಾನು, ಬೆಂಗಳೂರಿನ ರಾಜಾಜಿನಗರದ ಮನೆಯೊಂದರಲ್ಲಿ ಯಾವುದೋ ಒಂದು ರಮ್ಯ ಕಾದಂಬರಿಯನ್ನು ಕದ್ದು ಓದುತ್ತಿದ್ದಾಗ, ಅಣ್ಣನ ಕೈಗೆ ಸಿಕ್ಕಿಬಿದ್ದಿದ್ದೆ. ‘ನೀನು ಓದಬೇಕಾದುದು ಇಂಥ ದರಿದ್ರ ಪುಸ್ತಕಗಳನ್ನಲ್ಲ’ ಎಂದು ಅದನ್ನು ಕಿತ್ತುಕೊಂಡು, ಮಾರನೆಯ ದಿನವೇ ನನಗೆ ‘ಝಾನ್ಸೀರಾಣಿ’ ಎನ್ನುವ ಕಾದಂಬರಿಯೊಂದನ್ನು ಅವನು ತಂದುಕೊಟ್ಟಿದ್ದ.

ಅವನು ತನ್ನ ಗೆಳೆಯರ ಜೊತೆ ಆಗಾಗ ಸಾಹಿತ್ಯ ಪುಸ್ತಕಗಳ ಗಂಭೀರ ಚರ್ಚೆಯಲ್ಲಿ ತೊಡಗುತ್ತಿದ್ದ. ಅವನಿಗೆ ಮುಗಿಲ ಮುಟ್ಟುವ ಮಹತ್ವಾಕಾಂಕ್ಷೆ. ನನ್ನಲ್ಲೂ ಅಂತಹ ಕನಸಿನ ಬೀಜಗಳನ್ನು ಬಿತ್ತಿದ. ಆದರೆ ಅದನ್ನು ಪೋಷಿಸಲು ಅವನು ಹೆಚ್ಚುಕಾಲ ಉಳಿಯಲಿಲ್ಲ. ಅವನ ಅದಮ್ಯ ಕನಸಾದ ಸಾಹಿತ್ಯದ ಗಂಭೀರ ಅಧ್ಯಯನವನ್ನು ನಾನು ಕೈಗೊಳ್ಳುವುದನ್ನು ಅವನು ನೋಡಲಿಲ್ಲ. ಅದನ್ನು ನೆನಸಿಕೊಂಡಾಗಲೆಲ್ಲಾ ಹೊಟ್ಟೆಯೊಳಗೆ ಬೆಂಕಿ ಬೀಳುತ್ತದೆ. ಅದನ್ನೆಲ್ಲಾ ನನ್ನ ಕವಿತೆಯೊಳಗೆ ಬಚ್ಚಿಟ್ಟು ತಂಪು ಮಾಡಿಕೊಳ್ಳುತ್ತೇನೆ.

1975 ರ ಫೆಬ್ರುವರಿ 22 ನನ್ನ ಬಾಳಿನಲ್ಲಿ ಒಂದು ಕರಾಳ ದಿನ. ಸಕಲೇಶಪುರದ ಒಂದು ಮುಂಜಾವಿನಲ್ಲಿ ಅವನು ರಸ್ತೆ ಅಪಘಾತದಲ್ಲಿ ಸತ್ತ ಸುದ್ದಿ ಬರಸಿಡಿಲಂತೆ ಬಂದೆರಗಿತು.

ಮನೆಯಲ್ಲಿ ಸಾಯುವೆನೆಂದು ಹೆದರಿಸಿ, ಅಪ್ಪನನ್ನು ಒಪ್ಪಿಸಿ, ಅಮ್ಮನನ್ನು ಕೃಷ್ಣರಾಜ ಮಾರುಕಟ್ಟೆಯ ಬಳಿ ಇರುವ ಒಂದು ದೊಡ್ಡ ಆಸ್ಪತ್ರೆಯ ಮೂಳೆ ವೈದ್ಯರ ಬಳಿ ಎಳೆದುಕೊಂಡು ಬಂದಿದ್ದೆ. ಅಲ್ಲಿ ಪರೀಕ್ಷಿಸಿದ ಡಾಕ್ಟರ್, ಆ ಊನವು ಸರಿಯಾಗುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಹುಟ್ಟಿನಿಂದಲೇ ಬಂದ ಆ ಊನವನ್ನು ಹದಿನೆಂಟು ವರ್ಷಗಳನಂತರ ಸರಿಪಡಿಸಲು ಬಂದ ಅಮ್ಮನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದರು. ಬೆಡ್ ತೆರವಾಗಿ ಒಮ್ಮೆ ಆಸ್ಪತ್ರೆ ಸೇರಿದಾಕ್ಷಣ ಇನ್ನು ಎಲ್ಲವೂ ಸುಗಮವೆಂದು ಭಾವಿಸಿದ್ದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳಿಗೆ ಶಾಖಾಯ ಲವಣಾಯ ಮಾಡದೇ ಒಂದು ಹುಲ್ಲುಕಡ್ಡಿಯೂ ಜರಗುವುದಿಲ್ಲವೆಂದು ಆಗ ಗೊತ್ತಾಯಿತು. ಶೇಕಡಾ ಐವತ್ತು ಭಾಗ ಮಾತ್ರ ಗುಣವಾಗಬಹುದೆಂಬ ಡಾಕ್ಟರನ ಅನುಮಾನ ಫಿಸಿಯೋಥೆರಪಿಯಿಂದಾಗಿ ಸುಳ್ಳಾಗಿತ್ತು. ಹೆಚ್ಚು ಕಡಿಮೆ ಎಲ್ಲರಂತಾದೆ. ಆದರೆ ಆ ಊನ ಹುಟ್ಟುಹಾಕಿದ ಮಾನಸಿಕ ಹಿಂಸೆಯ ಗಾಯ ಮಾತ್ರ ಹಾಗೆಯೇ ಉಳಿದುಬಿಟ್ಟಿತ್ತು.

***

‘You are a brilliant girl, intelligent girl’ ಹೀಗೆಲ್ಲಾ ಯೋಚಿಸ್ತಾರೇನು? ಎಂದು ನಾನು ಕೇಳಿದ ಯಾವುದೋ ಬೆಪ್ಪುತನದ ಪ್ರಶ್ನೆಗೆ, ಕನ್ನಡದ ಸುಪ್ರಸಿದ್ಧ ವಿಮರ್ಶಕರೊಬ್ಬರು ತರಗತಿಯಾಚೆ ನನ್ನನ್ನು ಕಂಡು ಉದ್ಗಾರ ತೆಗೆದಿದ್ದರು. ನಾನು ಒಂದು ದಿನವೂ ಅವರ ತರಗತಿಯನ್ನು ತಪ್ಪಿಸಲಿಲ್ಲ. ನನ್ನ ಈ ಹುಚ್ಚು, ಗೆಳೆಯ, ಗೆಳತಿಯರ ಅಪಹಾಸ್ಯಕ್ಕೂ ಗುರಿಯಾಗಿತ್ತು. ಓದುತ್ತಿದ್ದುದು ಕನ್ನಡ ಎಂ.ಎ. ಆದರೂ ಹೆಚ್ಚಾಗಿ ಪರಿಚಯವಾದದ್ದು ಇಂಗ್ಲಿಷ್ ಕೃತಿಗಳೇ. ಕನ್ನಡ ಅಧ್ಯಯನ ಕೇಂದ್ರ ಬದುಕಿಗೆ ಕೊಟ್ಟ ಸಂಸ್ಕಾರವನ್ನು ನಾನು ಎಂದೂ ಮರೆಯಲಾರೆ. ಬಿ.ಎ. ತರಗತಿಗಳಲ್ಲಿದ್ದಾಗಲೇ ಪದ್ಯವೆಂಬ ಒಂದಿಷ್ಟು ಸಾಲುಗಳನ್ನು ನಾನು ಗೀಚುತ್ತಿದ್ದೆ. ಹಾಗೆ ಬರೆದಿದ್ದ ನೋಟ್ ಪುಸ್ತಕವನ್ನು ನಾನು ಆರಾಧಿಸುತ್ತಿದ್ದ ಆ ಮೇಷ್ಟ್ರಿಗೆ ಕೊಟ್ಟು ಅವರ ಅಭಿಪ್ರಾಯಕ್ಕಾಗಿ ಕಾದೆ. ನಾನೇ ದುಂಬಾಲು ಬಿದ್ದು ಮತ್ತೆ ಮತ್ತೆ ಕೇಳಿದಾಗ ಸ್ಟಾಫ್ ರೂಮಿಗೆ ಬರಹೇಳಿ ನನ್ನ ನೋಟ್ ಪುಸ್ತಕವನ್ನು ಮುಂದಿಟ್ಟು, ಅದನ್ನು ತೆರೆಯದೆಯೇ, ನನ್ನ ಗೆಳತಿ ಬರೆದ ಕವಿತೆಯೊಂದನ್ನು ಓದಿ ‘ಕವಿತೆಯೆಂದರೆ ಇದು’ ಎಂದು ಹೇಳಿದರು. ಕನ್ನಡದ ಅದ್ಭುತ ಕವಿತೆಗಳನ್ನು ಬಹಳ ಹೊತ್ತು ವಾಚಿಸಿದರು. ನನಗೆ ತಿಳಿದು ಹೋಯಿತು. ಮಂಕು ಬಡಿದವಳಂತೆ ಮನೆಗೆ ಬಂದು ಇಡಿಯ ಪುಸ್ತಕವನ್ನು ಬಚ್ಚಲ ಒಲೆಗೆ ಹಾಕಿಬಿಟ್ಟೆ.

ಒಂದು ದಿನ ತರಗತಿಯ ಹೊರಗೆ ಕುಳಿತಿದ್ದಾಗ, ನೆಚ್ಚಿನ ಮೇಷ್ಟ್ರಿಂದ ಬುಲಾವ್. ಎದೆ ನಡುಕದಿಂದ ಸ್ಟಾಫ್ ರೂಮ್ ಹೊಕ್ಕೆ. ಅವರು ಕುಳಿತುಕೊಳ್ಳಲು ಹೇಳಿದರು. ಅವರ ಕೈಯಲ್ಲಿ ನನ್ನ ಕವಿತೆ ಪ್ರಕಟವಾಗಿದ್ದ ಕನ್ನಡ ಸಂಘದ ಪತ್ರಿಕೆ ‘ಸಂವಾದ’! ‘ಕವಿತೆ ಚೆನ್ನಾಗಿ ಬರೆದಿದ್ದೀರಲ್ರೀ… ಗುಡ್… ಕೀಪ್ ಇಟ್ ಅಪ್!’ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಮುಂದೆ ಅದೇ ಕವಿತೆ ನನ್ನ ಪ್ರಥಮ ಕವನಸಂಕಲನದ ಪ್ರಥಮ ಕವಿತೆಯಾಯಿತು.

ಯಾವಾಗಲೂ ಯಾವುದೋ ಲೋಕದಲ್ಲಿ ವಿಹರಿಸುವಂತೆ ಕಾಣುತ್ತಿದ್ದ ನನ್ನ ಸಹಪಾಠಿಯೊಬ್ಬನಿದ್ದ. ಒಮ್ಮೆ ಸೆಮಿನಾರಿನಲ್ಲಿ ಅವನು ಪ್ರಬಂಧ ಮಂಡಿಸಿದ ರೀತಿಯನ್ನು ನೋಡಿ ನನಗೆ ಅವನ ಪ್ರತಿಭೆಯ ಸ್ವರೂಪ ಸ್ವಲ್ಪ ಸ್ವಲ್ಪವೇ ಪರಿಚಯವಾಗತೊಡಗಿತು. ಯಾವ ಪುಸ್ತಕವನ್ನು ಓದಿದರೂ ಅದರ ಪರಿಕಲ್ಪನೆ, ತಂತ್ರ, ವಸ್ತು, ಆಶಯ ಎಂದೆಲ್ಲಾ ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿ ಮುಂದಿಡುತ್ತಿದ್ದ. ಯಾರಿಗೂ ಹೊಳೆಯದ್ದು ಅವನಿಗೆ ಹೊಳೆಯುತ್ತಿತ್ತು. ಪರೀಕ್ಷೆಯ ಕಾಲದಲ್ಲಿ ಎಲ್ಲರೂ ಅವನಿಗೆ ಮುತ್ತಿಕೊಳ್ಳುತ್ತಿದ್ದರು. ಅವನು ಹೇಳಿದ್ದೇ ಸಾಕಾಗುತ್ತಿತ್ತು ಪರೀಕ್ಷೆಗೆ ಸಿದ್ಧವಾಗಲು. ಅವನ ಜ್ಞಾನದ ಆಳ ಹರಹುಗಳು ನನ್ನನ್ನು ವಿಸ್ಮಯಗೊಳಿಸುತ್ತಿದ್ದವು.

ಅಂದಿನಿಂದ ಆ ಗೆಳೆಯನ ಹತ್ತಿರ, ನಾನು ಹುಡುಗಿಯಾಗಿದ್ದರೂ ಏನನ್ನಾದರೂ ಹೇಳಿಕೊಳ್ಳುವುದು ಸಾಧ್ಯ ಎನಿಸಿಬಿಟ್ಟಿತು. ಅವನೊಬ್ಬ ಆಪ್ತ ಗೆಳೆಯನಾಗಿಬಿಟ್ಟ. ಆ ಸ್ನೇಹಿತನಿಗೆ ತಂಜಾವೂರಿನಲ್ಲಿ ಕೆಲಸ ಸಿಕ್ಕು ಹೊರಟು ಹೋದ. ನಮ್ಮ ಮಧ್ಯೆ ಕಾಗದ ಪತ್ರಗಳು ಓಡಾಡುತ್ತಿದ್ದರೂ ಹಂಚಿಕೊಳ್ಳಲು ಯಾರಿಲ್ಲದ ಖಿನ್ನತೆಯಿಂದ ನಾನು ಚಿಪ್ಪಿನೊಳಗೆ ಮತ್ತೆ ಅಡಗಿಕೊಂಡುಬಿಟ್ಟೆ. ಮತ್ತೆ ಕಾಗದ ಪತ್ರಗಳ ಓಡಾಟ. ಮತ್ತೊಮ್ಮೆ ಅವನು ಬೆಂಗಳೂರಿಗೆ ಯಾವುದೋ ಕೆಲಸದ ಮೇಲೆ ಬಂದಾಗ, ಸೆಂಟ್ರಲ್ ಕಾಲೇಜಿನ ಲೈಬ್ರರಿಯೊಳಗೆ ಕರೆದುಕೊಂಡು ಹೋಗಿ ‘ನಾವು ಮದುವೆ ಮಾಡಿಕೊಳ್ಳೋಣ’ ಎಂದು ಹೇಳಿಯೇ ಬಿಟ್ಟೆ.

ನಮ್ಮ ಮನೆಯವರೂ ಸುಲಭವಾಗಿ ಈ ಮದುವೆಗೆ ಒಪ್ಪಿರಲಿಲ್ಲ. ಕಾರಣ ಅವನು ನಮ್ಮ ಪಂಗಡಕ್ಕೆ ಸೇರಿದವನಾಗಿರಲಿಲ್ಲ. ಕೊನೆಗೆ ನನ್ನ ಹಟಮಾರಿತನವನ್ನು ಚೆನ್ನಾಗಿ ಬಲ್ಲ ಅವರು ಮಣಿಯಲೇಬೇಕಾಯಿತು. ಶಾಸ್ತ್ರೋಕ್ತವಾಗಿ ಎಲ್ಲರನ್ನೂ ಆಹ್ವಾನಿಸಿ ಮದುವೆ ಮಾಡಲು ಮುಂದಾದರು. ಈ ನಡುವೆ ನನ್ನ ಹಿರಿಯಣ್ಣ ಹುಟ್ಟುಹಾಕಿದ್ದ ಬೆಳಕಿನ ಬೀಜಗಳು ಕಮರಿ ಹೋಗಿದ್ದವು. ಈಗ ಅವು ಮತ್ತೆ ಮೊಳಕೆಯೊಡಲು ಪ್ರಾರಂಭಿಸಿದವು.

ಮದುವೆಯಾದ ಆರು ತಿಂಗಳಿಗೇ ನಾವು ಮುಂಬಯಿಗೆ ಬಂದೆವು. ಅವನಿಗೆ ಅಲ್ಲಿನ ವಿ.ವಿ.ಯ ಕನ್ನಡ ವಿಭಾಗದಲ್ಲಿ ಸಂಶೋಧನೆಗೆಂದು ಶಿಷ್ಯವೇತನ ದೊರೆತಿತ್ತು. ನಾನೂ ಕೂಡ ನನ್ನ ಕೇಂದ್ರ ಸರ್ಕಾರದ ನೌಕರಿಯಲ್ಲಿ ವರ್ಗಾವಣೆ ಸಿಗದ ಕಾರಣ ಅದನ್ನು ಬಿಟ್ಟು ಅವನನ್ನು ಸೇರಿಕೊಂಡೆ. ಗಂಜಿ ಮಡಕೆಯನ್ನು ಅರಸಿ ಮುಂಬಯಿಗೆ ಬಂದ ನಮ್ಮ ಬದುಕು ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಹಾಗೆ ಹಾಸಿಕೊಂಡು ಮಲಗಲು ತಾಯಿಯ ಮನೆಯ ನೆರವನ್ನು ಕೇಳುವ ಹಾಗೂ ಇರಲಿಲ್ಲ. ಕಾರಣ ಯಾರಿಗೂ ಬೇಡದ ಮದುವೆ ನಮ್ಮದಾಗಿತ್ತು.

ಮದುವೆಯಾದ ಒಂದೂವರೆ ವರ್ಷಕ್ಕೆಲ್ಲಾ ಮುದ್ದಾದ ಮಗ ಹುಟ್ಟಿದ. ನನ್ನ ಬದುಕಿನಲ್ಲಿ ಮರೆಯಲಾರದ ಸಂಗತಿಯೆಂದರೆ ಪಿಎಚ್.ಡಿ ಮಾಡಲು ಯು.ಜಿ.ಸಿ.ಯ ಜೆ.ಆರ್.ಎಫ್ ವಿದ್ಯಾರ್ಥಿ ವೇತನ ನನಗೆ ದೊರೆತ ವಿಷಯವನ್ನು ಹೊತ್ತ ಲಕೋಟೆಯೊಂದು ರಿಜಿಸ್ಟರ್ ಅಂಚೆಯ ಮೂಲಕ ಮನೆ ಬಾಗಿಲಿಗೆ ಬಂದುದು. ಆಗ ನಾನು ಅಕ್ಷರಶಃ ಮನೆಯೆಲ್ಲಾ ಕುಣಿದಾಡಿದ್ದೆ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ತಾಳ್ತಜೆ ವಸಂತಕುಮಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಾರಂಭ ಮಾಡಿದೆ. ಮನೆ, ಕ್ಯಾಂಪಸ್, ಅಧ್ಯಯನ, ಅಧ್ಯಾಪನ, ಸಂಶೋಧನೆ ಎಂದೆಲ್ಲಾ ಕಾಲಿಗೆ ಚಕ್ರ ಕಟ್ಟಿಕೊಂಡು ಮುಂಬಯಿ ರೈಲು ಹಳಿಗಳ ಮೇಲೆ ಓಡಿಯಾಡಿದೆ. ಈ ಎಲ್ಲದರ ನಡುವೆ, ನಾವು ಲೆಕ್ಕವಿಲ್ಲದಷ್ಟು ಸಲ ವಿಚಾರಸಂಕಿರಣ, ಕವಿಗೋಷ್ಠಿ, ಪುಸ್ತಕ ಪರಿಚಯ ಎಂದೆಲ್ಲಾ ಮುಂಬಯಿ ವಿಶ್ವವಿದ್ಯಾಲಯದ, ಸಂಘಸಂಸ್ಥೆಗಳ ವೇದಿಕೆಗಳನ್ನು ಹತ್ತಿದೆವು. ಅಲ್ಲದೇ, ಸ್ಥಳೀಯರ ಜೊತೆಗೂಡಿ ಸಂಘಸಂಸ್ಥೆಗಳನ್ನು ಕಟ್ಟಿದೆವು, ಕೆಲವರಿಗೆ ಪ್ರಿಯರಾದೆವು, ಇನ್ನು ಕೆಲವರಿಗೆ ಅಪ್ರಿಯರಾದೆವು. ಎಲ್ಲರೂ ನಮ್ಮನ್ನು ‘ಮುದ್ದಣ-ಮನೋರಮೆ’ ಎಂದು ಹಾಸ್ಯ ಮಾಡುತ್ತಿದ್ದರು. ನಮ್ಮನ್ನು ಮುಂಬಯಿ ಇನ್ನಿಲ್ಲದಂತೆ ಬೆಳೆಸಿತ್ತು. ಕನ್ನಡ ಪತ್ರಿಕೆಗಳು ಬೆಳೆಸಿದ್ದವು.

ನನ್ನೊಳಗೆ ಮಡುಗಟ್ಟಿದ್ದ ದೈನ್ಯವೆಲ್ಲಾ ಮಂಜಿನಂತೆ ಕರಗಿಹೋಗಿತ್ತು. ಸ್ತ್ರೀವಾದದ ಅಧ್ಯಯನ ನನ್ನ ವೈಯಕ್ತಿಕ ತುರ್ತು ಎಂದೂ ಆಗಿರಲಿಲ್ಲ. ಆದರೂ ನನ್ನ ಪ್ರಥಮ ಕವಿತಾ ಸಂಕಲನಕ್ಕೆ ‘ಹೆಣ್ಣೊಬ್ಬಳ ದನಿ’ ಎಂದು ಹೆಸರಿಟ್ಟೆ, ಅದಕ್ಕೆ ನನಗೆ ‘ಹರಿಹರಶ್ರೀ’ ಎಂಬ ಸಣ್ಣ ಪ್ರಶಸ್ತಿಯೂ ದೊರೆಯಿತು. ಗುರುಗಳಾದ ಜಿ.ಎಸ್. ಶಿವರುದ್ರಪ್ಪನವರು ಅದಕ್ಕೆ ತಮ್ಮ ಬೆನ್ನುಡಿಯನ್ನು ಬರೆದುದಲ್ಲದೇ, ಅದನ್ನು ಬಿಡುಗಡೆ ಕೂಡ ಮಾಡಿದ್ದರು. ಅದು ನನ್ನ ಬದುಕಿನ ಅತ್ಯಂತ ಸಂಭ್ರಮದ ದಿನ. ಯಾಕೆಂದರೆ ಅದು ನನ್ನ ಮೊದಲ ಪುಸ್ತಕವಾಗಿತ್ತು. ಪಿಎಚ್.ಡಿ. ನಂತರ ಅಕ್ಕಮಹಾದೇವಿಯ ಸಾಕ್ಷ್ಯಚಿತ್ರಕ್ಕೆ ಸಂಶೋಧನೆ ಮಾಡುವ ಪ್ರಾಜೆಕ್ಟ್ ಒಂದು ನನಗೆ ದೊರೆಯಿತು. ಅಕ್ಕ ನನಗೆ ಎಂದೂ ಪ್ರಿಯವಾದ ವ್ಯಕ್ತಿ. ಒಂದು ವರುಷ ನಾನು ‘ಅಕ್ಕ’ನ ಒಡನಾಟದಲ್ಲಿದ್ದೆ. ಮಧುಶ್ರೀ ದತ್ತ ಎನ್ನುವ ಬಂಗಾಳಿ ಮಹಿಳೆಯೊಬ್ಬರು ನಿರ್ಮಿಸಿದ ಆ ಚಿತ್ರ ‘ಸ್ಕ್ರಿಬಲ್ಸ್ ಆನ್ ಅಕ್ಕಾ’ ಎಂದು ತೆರೆಕಂಡು ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದ್ದು ನನ್ನ ಬದುಕಿನ ಮಹತ್ವದ ಘಟನೆ.

ಮುಂಬಯಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ಕೇಂದ್ರ ಸರ್ಕಾರದಿಂದ ಮೂರು ಬಾರಿ ಶಿಷ್ಯವೇತನಕ್ಕೆ ಪಾತ್ರಳಾದೆ. ನನ್ನ ಓರಗೆಯ ಹೆಚ್ಚಿನ ಮಂದಿಗೆ ಇಂತಹ ಅವಕಾಶ ಒದಗಿರಲಿಲ್ಲ, ಅಥವಾ ಅವರು ಪ್ರಯತ್ನಿಸಿರಲಿಲ್ಲವೇನೋ. ನನ್ನ ಎಲ್ಲಾ ಪ್ರಾಜೆಕ್ಟ್​ಗಳಿಗೂ ಸ್ತ್ರೀವಾದದ ಅಧ್ಯಯನದ ವಿಧಾನವನ್ನೇ ಆರಿಸಿಕೊಂಡಿದ್ದೆ. ನಾನು ಮಾಡಿದ ಇಂಗ್ಲಿಷ್ ಎಂ.ಎ ಬೇರೆಲ್ಲೂ ಸಹಾಯಕ್ಕೆ ಬರದಿದ್ದರೂ, ಭಾರತೀಯ ಇಂಗ್ಲಿಷ್ ಕಾದಂಬರಿಕಾರ್ತಿಯರನ್ನು ಅಧ್ಯಯನಕ್ಕಾಗಿ ಆರಿಸಿಕೊಂಡಾಗ ಅದನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಸಹಕಾರಿಯಾಯಿತು.

‘ಪಂಡಿತಾ ರಮಾಬಾಯಿ’ ಅವರ ಬಗೆಗಿನ ಒಂದು ಲೇಖನವನ್ನು ಮೆಚ್ಚಿಕೊಂಡ ಗುರುಗಳಾದ ಕಾಳೇಗೌಡ ನಾಗವಾರರು ಅದನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದರು. ‘ಮಾನವ ಸಂಪನ್ಮೂಲ ಇಲಾಖೆ’ ಮತ್ತು ‘ಯೂ.ಜಿ.ಸಿ’ ಗೆ ಸಲ್ಲಿಸಿದ್ದ ಎರಡು ಸಂಶೋಧನಾ ಕೃತಿಗಳು ಸೇರಿ ‘ಮಾನಸಿಯ ಲೋಕ’(2012) ಎಂಬ ಪುಸ್ತಕದ ರೂಪದಲ್ಲಿ ಪ್ರಕಟವಾಯಿತು. ಅದಕ್ಕೆ ಕಾಳೇಗೌಡ ನಾಗವಾರರೇ ಕಾರಣ ಎಂಬುದನ್ನು ನಾನು ಇಲ್ಲಿ ನೆನಯಬೇಕು. ಕಾಲೆಳೆದು ಬೀಳಿಸುವ ಜನ ಇರುತ್ತಾರೆ ನಿಜ ಹಾಗೆ ಮೇಲೆತ್ತುವ ಜನರೂ ಇರುತ್ತಾರೆ.

ಅನೇಕ ವಸಂತಗಳು ಉರುಳಿ ಹೋದವು. ಈ ಹೊತ್ತಿಗೆ ಎರಡನೆಯ ಮಗನೂ ಬೆಳೆದು ದೊಡ್ಡವನಾಗಿ ಕಾಲೆಜು ಸೇರಿದ್ದ. ನನ್ನ ಮತ್ತೆರಡು ವಿಮರ್ಶಾ ಲೇಖನಗಳ ಕೃತಿಗಳು ‘ಸೆರಗ ಬಿಡೋ ಮರುಳೆ’, ಮತ್ತು ‘ತಾಯ ಮುಖ ಕಾಣದಲ್ಲಾ’ ಅಚ್ಚಿಗೆ  ಹೋದವು. ಅದರ ಬೆನ್ನಿಗೇ ಬೆಂಗಳೂರಿನ ಪ್ರಪ್ರಥಮ ಎಕೋ ಉದ್ಯಾನದ ನಿರ್ಮಾಪಕಿ ಡಾ. ಲಲಿತಮ್ಮನವರ ವ್ಯಕ್ತಿ ಚಿತ್ರ ‘ಸಂಜೀವನ’ವೂ ಪ್ರಕಟವಾಯಿತು. ಈಗ ನಾನು ಅನುವಾದ ಮಾಡಿದ ಮರಾಠಿಯ ಪ್ರಸಿದ್ಧ ಲೇಖಕ ಪು.ಶಿ ರೇಗೆ ಅವರ ಕಾದಂಬರಿ ‘ಸಾವಿತ್ರಿ’(2018) ನನ್ನ ಕೈಯಲ್ಲಿದೆ.

ನನ್ನ ಪ್ರಥಮ ಕವಿತಾ ಸಂಕಲನ ‘ಹೆಣ್ಣೊಬ್ಬಳ ದನಿ’ ಪ್ರಕಟವಾದ ಹದಿನೇಳು ವರುಷಗಳನಂತರ, ಎರಡನೆಯ ಕವಿತಾ ಸಂಕಲನ ‘ಪುಸ್ತಕ ಮತ್ತು ನವಿಲು ಗರಿ’ (2012) ಹೊರಬಂದಿತು. ಕವಿತಾ ಸಂಕಲನ ‘ಅಭಿನವ’ ದಿಂದ ಬರಲು ಜಿ. ರಾಜಶೇಖರ ಅವರ ಅದ್ಭುತ ಮುನ್ನುಡಿ ಮತ್ತು ಅನಂತಮೂರ್ತಿಯವರ ಬೆನ್ನುಡಿಗಳೂ ಒತ್ತಾಸೆ ನೀಡಿದವು. ಒಂದು ವರುಷ ಕಳೆಯುವಷ್ಟರಲ್ಲೇ ಶಿವಮೊಗ್ಗ ಕರ್ನಾಟಕ ಸಂಘದಿಂದ ಕರೆ. ‘ಪುಸ್ತಕ ಮತ್ತು ನವಿಲು ಗರಿ’ ಗೆ ಜಿಎಸ್.ಎಸ್. ಪ್ರಶಸ್ತಿ ಬಂದಿತ್ತು. ನನ್ನ ತಲೆಗೂ ಗರಿ ಮೂಡಿತ್ತು.

ಐವತ್ತು ವರುಷಗಳ ಹಿಂದೆ ಇಂತಹ ಕಾಲವೊಂದು ನನಗಾಗಿ ಕಾಯುತ್ತಾ ಕುಳಿತಿತ್ತೆಂದು ನಾನು ಕಂಡಿರಲಿಲ್ಲ. ಕಡಲನ್ನೇ ನೋಡದ ನಾನು, ಕಡಲ ಬಳಿಯೇ 37 ವರುಷಗಳ ಕಾಲ ಎದ್ದು ಬಿದ್ದು ದಡಕ್ಕೆ ಬಡಿದು ಪ್ರವಾಹದ ಜೊತೆಗೆ ಉರುಳಿ ಉರುಳಿ ರೂಪುಗೊಂಡೆ. ನಿತ್ಯನೂತನವಾದ ಅರಬ್ಬಿ ಕಡಲು ಎಲ್ಲ ಮುಂಬಯಿಗರನ್ನು ತಾಯಿಯಂತೆ ತಬ್ಬಿಕೊಳ್ಳುವ ಹಾಗೆ ನನ್ನನ್ನೂ ನನ್ನ ಸಂಸಾರವನ್ನೂ ತಬ್ಬಿಕೊಂಡಿದೆ. ಧನ್ಯತೆಯನ್ನು ಮೂಡಿಸಿದೆ. ಯಾಕೋ ಈಗ ಅಪ್ಪನ ನೆನಪಾಗುತ್ತಿದೆ.

***

ಪರಿಚಯ: ಮುಂಬೈಯಲ್ಲಿ ವಾಸಿಸುತ್ತಿರುವ ಡಾ. ಗಿರಿಜಾ ಶಾಸ್ತ್ರೀ ಕನ್ನಡದಲ್ಲಿ ಪಿಎಚ್.ಡಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪದವಿಗಳನ್ನು ಪಡೆದಿದ್ದಾರೆ.  ಹೆಣ್ಣೊಬ್ಬಳ ದನಿ, ಕಥಾಮಾನಸಿ, ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ, ಪುಸ್ತಕ ಮತ್ತು ನವಿಲುಗರಿ, ಮಾನಸಿಯ ಲೋಕ, ತಾಯಮುಖ ಕಾಣದಲ್ಲಾ, ಸೆರಗ ಬಿಡೊ ಮರುಳೇ. ಸಂಜೀವನ- ಬೆಂಗಳೂರಿನ ಜೈವಿಕ ವನದ ನಿರ್ಮಾತೃ ಡಾ. ಲಲಿತಮ್ಮನವರ ಸಾಹಸ ಗಾಥೆ ಪುಸ್ತಕಗಳು ಪ್ರಕಟಗೊಂಡಿವೆ. ಸಾವಿತ್ರಿ: ಪುರುಷೋತ್ತಮ ರೇಗೆಯವರ ಮರಾಠಿ ಕಾದಂಬರಿ ಇವರ ಅನುವಾದ ಕೃತಿ. ಇವರು ಮುಂಬೆಳಕು ಕನ್ನಡ ಬಳಗ ಮತ್ತು  ಸೃಜನಾ: ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಘಟಕಿ ಕೂಡ.

ನಾನೆಂಬ ಪರಿಮಳದ ಹಾದಿಯಲಿ: ನುಜ್ಜುಗುಜ್ಜಾಗದೆ ಆಸೆಯೆಂಬ ಕುದುರೆ ಏರಲಾದೀತೆ?