ನಾನೆಂಬ ಪರಿಮಳದ ಹಾದಿಯಲಿ: ಖಿನ್ನತೆಗೆ ಜಾರುವ ಅಂಜಿಕೆಯಲ್ಲಿದ್ದಾಗಲೇ ಬರವಣಿಗೆಗೆ ತೊಡಗಿಕೊಂಡೆ

‘ಕಷ್ಟಗಳು ಹುಚ್ಚು ನಾಯಿಯಂತೆ ಬೆನ್ನಟ್ಟಿಕೊಂಡು ಬಂದಾಗಲೇ ನಾವು ಎಷ್ಟು ಜೋರಾಗಿ ಓಡಬಲ್ಲೆವು ಎಂಬ ಅರಿವಾಗುವುದು. ಹೆಣ್ಣು ತನ್ನ ಕೋಮಲತೆಯಿಂದ ಮೋಹಕವಾಗಿ ಕಾಣಬಹುದು. ಆದರೆ ಅದೇ ಹೆಣ್ಣು ಅಗತ್ಯ ಬಿದ್ದಾಗ ಖಡ್ಗ ಹಿಡಿದು, ಆತ್ಮವಿಶ್ವಾಸದಿಂದ ರಣರಂಗದಲ್ಲಿ ಧುಮುಕಿದಾಗ ಜಗತ್ತು ಅವಳನ್ನು ಆರಾಧಿಸುತ್ತದೆ. ಆದರೆ ಅಗತ್ಯ ಬಿದ್ದಾಗ ಮಾತ್ರವೇ ಏಕೆ ಆಕೆ ತನ್ನ ಸಾಮರ್ಥ್ಯಗಳನ್ನು ಒರೆಹಚ್ಚಿ ಬೆಳೆಸಿಕೊಳ್ಳಬೇಕು? ಬಾಲ್ಯದಿಂದಲೇ ಆಕೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಂಡುಕೊಳ್ಳಬೇಕೆಂದು ಮನವರಿಕೆ ಮಾಡಿ ಕೊಡುವುದಿಲ್ಲವೇಕೆ?‘ ಪೂರ್ಣಿಮಾ ಮಾಳಗಿಮನಿ

  • TV9 Web Team
  • Published On - 18:22 PM, 24 Jan 2021
ನಾನೆಂಬ ಪರಿಮಳದ ಹಾದಿಯಲಿ: ಖಿನ್ನತೆಗೆ ಜಾರುವ ಅಂಜಿಕೆಯಲ್ಲಿದ್ದಾಗಲೇ ಬರವಣಿಗೆಗೆ ತೊಡಗಿಕೊಂಡೆ

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಕೇಂದ್ರ ಸರ್ಕಾರದ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೂರ್ಣಿಮಾ ಮಳಗಿಮನಿ ಅವರ ಅನುಭವಕಥಾನಕ ನಿಮ್ಮ ಓದಿಗೆ…

ನಾನೆಂಬ ಪರಿಮಳದ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಾಗ ಕಾಲು ನಡುಗಿದ್ದು ನಿಜ. ಆದರೆ ಅದು ದಾರಿಯಲ್ಲಿನ ಕಲ್ಲು ಮುಳ್ಳುಗಳಿಗೆ ಹೆದರಿ ಹುಟ್ಟಿದ ನಡುಕವಾಗಿರಲಿಲ್ಲ. ಹಾಸಿಗೆಯಿದ್ದಷ್ಟೇ ಕಾಲು ಚಾಚಿ ಅಭ್ಯಾಸವಾಗಿ ಹೋಗಿದ್ದವಳೆದುರು ಆಕಾಶವನ್ನೇ ಹಾಸಿ ಬಿಟ್ಟಾಗ ಸಹಜವಾಗಿಯೇ ಮೂಡಿದ ತಲ್ಲಣ. ತೊಂಬತ್ತರ ದಶಕದಲ್ಲಿ ನಮ್ಮ ಶಿವಮೊಗ್ಗದ ಪುಟ್ಟ ಹಳ್ಳಿ ಹನುಮಂತಪುರದಲ್ಲಿ ಹೆಣ್ಣುಮಕ್ಕಳ ಮದುವೆಗೆ ಸಾಲ ಮಾಡುತ್ತಿದ್ದುದು ಸಹಜವಾಗಿತ್ತೇ ಹೊರತು ಓದಿಸಲು ಸಾಲ ಮಾಡಿದ ನನ್ನ ಅಪ್ಪ ಅಮ್ಮ ಹಾಸ್ಯಾಸ್ಪದವಾಗಿದ್ದರು. ಹಾಗೆ ಓದಿ ಕೆಲಸಕ್ಕೆಂದು ಬೆಂಗಳೂರು ಸೇರಿದವರು ಬಹಳ ಕಡಿಮೆ. ನಾನು ಮಾತ್ರ ಇಂಜಿನಿಯರಿಂಗ್ ಪದವಿ ಮುಗಿಸಿ, ಮಿಲಿಟರಿ ಸೇರುತ್ತೇನೆಂದಾಗ ‘ಇದಕ್ಕಿಂತ ಹೀನಾಯ ಪರಿಸ್ಥಿತಿ ಬರಲೇಬಾರದು, ದುಡಿಮೆಗಾಗಿ ಹೆಣ್ಣುಮಕ್ಕಳನ್ನು ಮಿಲಿಟರಿಗೆ ಸೇರಿಸುವುದೇ’ ಎಂದು ಎಲ್ಲರೂ ಆಡಿಕೊಂಡರು. ನನ್ನ ಅದೃಷ್ಟಕ್ಕೆ ಅಂಥದಕ್ಕೆಲ್ಲಾ ನನ್ನ ಅಪ್ಪ ಅಮ್ಮ ತಲೆ ಕೆಡಿಸಿಕೊಳ್ಳದೆ ಮಿಲಿಟರಿ ಸೇರಲು ಯಾವ ಆಕ್ಷೇಪಣೆಯೂ ಮಾಡದೆ ಒಪ್ಪಿದ್ದರು. ನನ್ನ ಜೀವನದ ಕ್ಯಾನ್ವಾಸ್ ಆಕಾಶದಷ್ಟಗಲ ತೆರೆದುಕೊಂಡು ಬಿಟ್ಟಿತ್ತು!

ಬೆಂಗಳೂರು ಕೂಡ ನೋಡಿರದ ನಾನು ಒಮ್ಮೆಲೇ ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿಯಾಗಿ ಸೇರಿ, ದೇಶದ ಉದ್ದಗಲಕ್ಕೂ ಧೈರ್ಯವಾಗಿ ಓಡಾಡುತ್ತಾ ಆರು ವರ್ಷಗಳು ಸೇವೆ ಸಲ್ಲಿಸಿದೆ. ಭಾಷೆ, ಊಟದ ಪದ್ಧತಿ, ಜೀವನಶೈಲಿ, ಭದ್ರತೆ ಎಲ್ಲಾ ವಿಷಯಗಳಲ್ಲಿ ನನ್ನ ಇತಿಮಿತಿಗಳನ್ನು ವಿಸ್ತಾರಿಸಿಕೊಳ್ಳುತ್ತಾ ಸಾಗಿದೆ. ಅದಾಗಲೇ ಆರನೇ ತರಗತಿಯಿಂದಲೇ ನವೋದಯ ವಿದ್ಯಾಲಯ ವಸತಿ ಶಾಲೆಯಲ್ಲಿ ಓದಿ, ಚಿಕ್ಕಂದಿನಿಂದ ನನ್ನ ಬದುಕಿನ ತೀರ್ಮಾನಗಳನ್ನು ನಾನೇ ತೆಗೆದುಕೊಳ್ಳುವುದನ್ನು ರೂಢಿಸಿಕೊಂಡಿದ್ದರಿಂದ ಅಪ್ಪ ಅಮ್ಮನಿಂದ ದೂರ ಇರುವುದು ಅಷ್ಟೇನೂ ಕಷ್ಟವಾಗಲಿಲ್ಲ. ಆ ಆರು ವರ್ಷಗಳು ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಬಹಳ ಪ್ರಭಾವ ಬೀರಿದುವು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಿಲಿಟರಿ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಇರುತಿತ್ತು. ಮೊದ ಮೊದಲು ಹೆಜ್ಜೆ ಹೆಜ್ಜೆಗೂ Odd Woman Out ಎನ್ನುವ ಭಾವನೆ ಕಾಡುತ್ತಿತ್ತಾದರೂ, ಜವಾಬ್ದಾರಿಯುತ ಮೇಲಧಿಕಾರಿಗಳ, ಸಹೋದ್ಯೋಗಿಗಳ ಸಹಕಾರದಿಂದ ಬಹುಬೇಗ ಹೊಂದಿಕೊಂಡೆ. ಲಿಂಗ ತಾರತಮ್ಯ ತೊಡೆಯಬೇಕೆನ್ನುವುದು ಬರೀ ಭಾಷಣ ಮಾಡುವ ವಿಷಯವಲ್ಲ, ಅನುದಿನವೂ ನಮ್ಮ ಆಚಾರ ವಿಚಾರಗಳಲ್ಲಿ ಅಳವಡಿಸಿಕೊಳ್ಳಬೇಕಾದ ವಿಷಯ ಎನ್ನುವುದು ಅರಿವಿಗೆ ಬಂದಿತ್ತು. ಹಾಗಾಗಿ ಜೀವನದ ವಿವಿಧ ಘಟ್ಟಗಳಲ್ಲಿ ಏನೇ ತಿರುವುಗಳು ಬಂದಾಗಲೂ ಒಂದು ಹೆಣ್ಣು, ಒಬ್ಬ ತಾಯಿ ಆಗಿರುವುದರಿಂದ ಈ ಕೆಲಸ ಮಾಡುವುದು ಸರಿಯಲ್ಲ ಅಥವಾ ಇದು ಸೂಕ್ತವಲ್ಲ, ಎನ್ನುವಂತಹ ವಿಚಾರಗಳು ಎಂದಿಗೂ ಬಾಧಿಸಲಿಲ್ಲ. ಅದೃಷ್ಟವಶಾತ್ ಪತಿಯೂ ಸಹಕರಿಸಿದ್ದರಿಂದ ಮದುವೆಯ ನಂತರವೂ ಕೇಂದ್ರ ಸರಕಾರದ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಸೇರಿಕೊಂಡು ಕೆಲಸ ಮುಂದುವರೆಸುವುದು ಅಷ್ಟೇನೂ ಕಷ್ಟವಾಗಲಿಲ್ಲ.

ಕಷ್ಟಗಳು ಹುಚ್ಚು ನಾಯಿಯಂತೆ ಬೆನ್ನಟ್ಟಿಕೊಂಡು ಬಂದಾಗಲೇ ನಾವು ಎಷ್ಟು ಜೋರಾಗಿ ಓಡಬಲ್ಲೆವು ಎಂಬ ಅರಿವಾಗುವುದು. ಒಂದು ಹೆಣ್ಣು ತನ್ನ ಕೋಮಲತೆಯಿಂದ ಮೋಹಕವಾಗಿ ಕಾಣಬಹುದು. ಆದರೆ ಅದೇ ಹೆಣ್ಣು ಅಗತ್ಯ ಬಿದ್ದಾಗ ಖಡ್ಗ ಹಿಡಿದು, ಆತ್ಮ ವಿಶ್ವಾಸದಿಂದ ರಣರಂಗದಲ್ಲಿ ಧುಮುಕಿದಾಗ ಜಗತ್ತು ಅವಳನ್ನು ಆರಾಧಿಸುತ್ತದೆ. ನನ್ನ ಪ್ರಶ್ನೆ ಏನೆಂದರೆ ಅಗತ್ಯ ಬಿದ್ದಾಗ ಮಾತ್ರವೇ ಏಕೆ ಹೆಣ್ಣು ತನ್ನ ಸಾಮರ್ಥ್ಯಗಳನ್ನು ಒರೆಹಚ್ಚಿ ಬೆಳೆಸಿಕೊಳ್ಳಬೇಕು? ಬಾಲ್ಯದಿಂದಲೇ ಆಕೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಂಡುಕೊಳ್ಳಬೇಕೆಂದು ಮನವರಿಕೆ ಮಾಡಿ ಕೊಡುವುದಿಲ್ಲವೇಕೆ? ಕ್ಷಿತಿಜದೆಡೆ ಎಳೆದು ಬಿಟ್ಟ ಬಾಣದಂತೆ ಬದುಕನ್ನು ಹೊಸ ಹೊಸ ಎತ್ತರಗಳಿಂದ ನೋಡಲು, ಅನುಭವಿಸಲು ಬಿಡಬಾರದೇಕೆ? ಆಗ ಭೂಮಿ ಮೇಲಿನ ಸಕಲ ಜೀವ ರಾಶಿಗಳಂತೆ ತಾಯಿಯಾಗುವುದೂ ಒಂದು ನೈಸರ್ಗಿಕ ಕ್ರಿಯೆ, ಆಕೆಯ ಹಲವು ಸಾಮರ್ಥ್ಯಗಳಲ್ಲಿ ಅದೂ ಒಂದು ಎಂದು ತಿಳಿಯುವುದಲ್ಲದೆ ತಾಯಿಯಾಗುವ ಮೊದಲು ತಾನು ಆಯ್ದುಕೊಂಡ ವೃತ್ತಿಯನ್ನಾಗಲೀ, ಕನಸುಗಳನ್ನಾಗಲಿ ಬದಿಗೊತ್ತಿ ಕೂರುವ ಅಗತ್ಯ ಬೀಳುವುದಿಲ್ಲ. ಹೆಣ್ಣಿಗೆ ಮದುವೆ, ಮಕ್ಕಳು ಎನ್ನುವುದೆಲ್ಲಾ ಜೀವನದ ಒಂದು ಅಂಗವೇ ಹೊರತು ಅದೇ ಜೀವನವಲ್ಲ; ಸಮಯಕ್ಕೆ ತಕ್ಕಂತೆ ನಮ್ಮ ಜೀವನದಲ್ಲಿ ನಮ್ಮ ಪಾತ್ರ ಬದಲಾಗುತ್ತಿದ್ದರೂ ನಮ್ಮ ಗುರಿ ಬದಲಾಗುವುದು ಅನಿವಾರ್ಯವಲ್ಲ ಎನ್ನುವುದನ್ನು ಸುತ್ತಲಿನ ಸಾಧನೆಗೈದಿರುವ ಹಲವಾರು ಮಹಿಳೆಯರಿಂದ ಅರಿತಿದ್ದೇನೆ.

ಇಷ್ಟೆಲ್ಲಾ ಧೈರ್ಯದಿಂದ ಮುನ್ನುಗ್ಗುತ್ತಿದ್ದವಳು ನನಗೇ ಒಬ್ಬ ಮಗಳು ಹುಟ್ಟಿದಾಗ ಮಾತ್ರ ಕೊಂಚ ಅಧೀರಳಾಗಿ ಬಿಟ್ಟೆ. ಕೆಲವೇ ಮಕ್ಕಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಲ್ಯಾಕ್ಟೋಸ್ ಇಂಟಾಲರೆನ್ಸ್ ಎನ್ನುವ ಹಾಲಿನ ಅಲರ್ಜಿ ನನ್ನ ಮಗಳಲ್ಲಿ ಕಾಣಿಸಿಕೊಂಡು, ಮೇಲಿನ ಹಾಲು, ಊಟ ತಿನ್ನಿಸುವುದೇ ಕಷ್ಟವಾಗಿತ್ತು. ಒಂದು ವರ್ಷವೂ ತುಂಬಿರದ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವುದು ಹೇಗೆ ಎಂದು ಬಹಳ ಒದ್ದಾಡಿದೆ. ಆಗ ದೆಹಲಿಯಲ್ಲಿ ವಾಸಿಸುತ್ತಿದ್ದೆವು. ಮಗುವನ್ನು ನೋಡಿಕೊಳ್ಳಲು ನೆರವಾಗಲು ಬಂದ ಅತ್ತೆ ಮಾವಂದಿರಿಗೆ ಅಲ್ಲಿಯ ವಾತಾವರಣ ಒಗ್ಗದೆ ಬಹಳ ತೊಂದರೆಯಾಯಿತು. ಇಷ್ಟೆಲ್ಲಾ ತೊಡಕುಗಳ ಮಧ್ಯೆಯೂ ಕೆಲಸಕ್ಕೆ ಹೋಗಲೇಬೇಕೆನ್ನುವ ಹಠವೇಕೆ? ಪತಿಯ ಆದಾಯ ಆರಾಮದಾಯಕ ಜೀವನ ನಡೆಸಲು ಸಾಕಾಗುತ್ತದೆಯಲ್ಲ, ಏಕಿಷ್ಟು ದುರಾಸೆ ಎಂದೆಲ್ಲಾ ಬಂಧುಬಳಗ ಕೊಂಕಾಡಿದರು.  ಆಗಲೂ ಧೃತಿಗೆಡದ ನಾನು ಮಗು ಮಗುವಾಗಿಯೇ ಉಳಿಯುವುದಿಲ್ಲವಲ್ಲ, ನಾಳೆ ಬೆಳೆದು ದೊಡ್ಡವಳಾಗುತ್ತಾಳೆ ತಾನೇ ಎಂದು ಸಮಾಧಾನ ಮಾಡಿಕೊಂಡೆ. ಒಮ್ಮೆ ಆಫೀಸಿನ ಕೆಲಸದ ಮೇಲೆ ಒಂದು ತಿಂಗಳು ಬೇರೆ ಊರಿಗೆ ಪ್ರಯಾಣ ಮಾಡಬೇಕಾಗಿ ಬಂತು. ದೆಹಲಿಯಲ್ಲಿಯೇ ಒಬ್ಬ ಡಾಕ್ಟರ್ ಬಳಿ ಮಗುವಿನ ಹಾಲು ಜೀರ್ಣವಾಗದ ಸಮಸ್ಯೆ ಹೇಳಿಕೊಂಡು, ಕೆಲಸ ಬಿಟ್ಟುಬಿಡಲೇ ಎಂದಾಗ ಜೋಗಿ ನಕ್ಕುಬಿಟ್ಟ ಅವರು, ‘ಇದು ಅಮೇರಿಕಾದ ಮಕ್ಕಳಲ್ಲಿ ಹೆಚ್ಚು. ನಮ್ಮ ಮಕ್ಕಳು ಏನನ್ನು ತಿಂದರೂ ಅರಗಿಸಿಕೊಳ್ಳುತ್ತವೆ. ಹಾಲು ಬಿಟ್ಟರೆ ಬೇರೆ ಊಟವೇ ಇಲ್ಲವೇ? ಏಕೆ ಚಿಂತೆ ಮಾಡುತ್ತೀರಿ’ ಎಂದು ಸಮಾಧಾನ ಹೇಳಿದರು. ಆಗಷ್ಟೇ ಒಂದೂವರೆ ವರ್ಷದವಳಾಗಿದ್ದ ಮಗುವನ್ನು ಅಮ್ಮನ ಜೊತೆ ಬಿಟ್ಟು ಹೋಗಿದ್ದೆ. ಪ್ರತಿದಿನವೂ ಮಗಳು ಹೇಗಿದ್ದಾಳೋ, ಏನು ಉಂಡಳೋ, ಬಿಟ್ಟಳೋ , ಮಲಗಿದಳೋ ಇಲ್ಲವೋ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತಿದ್ದ ನನಗೇ ಆಶ್ಚರ್ಯವಾಗುವಂತೆ ಒಂದೆರಡು ದಿನಗಳಲ್ಲೇ ಮಗಳು ಹೊಂದಿಕೊಂಡಿದ್ದು ತಿಳಿದು ಸಮಾಧಾನವಾಗಿತ್ತು. ಆದರೆ ನಾನು ಮರಳಿ ಬಂದಾಗ ನಾನೆಣಿಸಿದ್ದಂತೆ ನನ್ನೆಡೆಗೆ ಓಡಿ ಬರದೆ, ನಾನು ಯಾರೋ ಏನೋ ಎಂದು ಪಿಳಿ ಪಿಳಿ ನೋಡುತ್ತಾ ನನ್ನ ಗುರುತು ಹಿಡಿಯಲು ಎರಡು ನಿಮಿಷ ತೆಗೆದುಕೊಂಡ ಮಗಳನ್ನು ನೋಡಿದಾಗ ಕಣ್ಣಲ್ಲಿ ನೀರು ಬಂದಿತ್ತು. ಕೆಲವು ಬಂಧನಗಳೇ ಹಾಗೇ. ಬಿಡಿಸಿಕೊಂಡ ಘಳಿಗೆಯಲ್ಲೇ ಮತ್ತಷ್ಟು ಗಟ್ಟಿಯಾಗಿ ಬೆಸೆದುಕೊಂಡು ಬಿಡುತ್ತವೆ.

ನಾನು ಕಾಲೇಜು ಓದುವಾಗ ನನ್ನನ್ನೂ ಸೇರಿದಂತೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದ ಸಮಸ್ಯೆ ಎಂದರೆ ಹಣಕಾಸಿನ ತೊಂದರೆ. ಆಗ ಅದೇ ದೊಡ್ಡ ಸಮಸ್ಯೆ ಎನಿಸಿತ್ತು. ಆದರೆ ದಶಕಗಳ ನಂತರ ಈಗ ಹಿಂದಿರುಗಿ ನೋಡಿದರೆ ಹಣಕಾಸಿನ ತೊಂದರೆಗಿಂತ ಸುಲಭವಾದ ಸಮಸ್ಯೆಯೇ ಇಲ್ಲವೆನಿಸುತ್ತದೆ. Beg, borrow or steal! ಈ ಮಂತ್ರದಿಂದ ಅದನ್ನು ಹೇಗೋ ಪರಿಹರಿಸಿಕೊಳ್ಳಬಹುದು. ನನಗೆ ನಿಜವಾದ ಸಮಸ್ಯೆ ಎದುರಾದದ್ದು ಎಲ್ಲರೂ ಅಸೂಯೆ ಪಡುವಷ್ಟರ ಮಟ್ಟಿಗೆ ಲೈಫ್ ಸೆಟಲ್ ಆದಾಗ! ಹೌದು. ಬಡತನದಲ್ಲೇ ಓದಿ, ಕೆಲಸ ಪಡೆದು, ಒಳ್ಳೆಯ ಹುಡುಗನೊಂದಿಗೆ ಮದುವೆಯಾಗಿ, ಒಳ್ಳೆಯ ಅತ್ತೆ ಮಾವ ಸಿಕ್ಕು, ಮಗುವೂ ಆಗಿ ಜೀವನದಲ್ಲಿ ಇನ್ನೂ ಏನನ್ನು ತಾನೇ ಬಯಸಲು ಸಾಧ್ಯ ಎನ್ನುವಂತಹ ಸಂದರ್ಭದಲ್ಲಿ. ಸವಾಲುಗಳೇ ಇಲ್ಲದ ನೀರಸ ಬದುಕನ್ನು ಸವಿಯುವುದಾದರೂ ಹೇಗೆ ಎನ್ನುವುದೇ ಪ್ರಶ್ನೆಯಾಗಿಬಿಟ್ಟಾಗ.

ಮನೆ, ಮಗು, ಆಫೀಸ್ ಕೆಲಸ, ನನ್ನ ಆರೋಗ್ಯ, ಹಿರಿಯರ ಆರೋಗ್ಯ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂದು ನಂಬಿದ್ದಾಗಲೇ ಅದು ಏಕೋ, ಏನೋ ಮಾನಸಿಕ ಖಿನ್ನತೆಯಿಂದ ಕುಗ್ಗತೊಡಗಿದೆ. ಯಾವುದರಲ್ಲೂ ಆಸಕ್ತಿಯಿಲ್ಲದೆ, ಯಾವುದರಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳದೆ, ಮನೆಯಲ್ಲೂ, ಆಫೀಸಿನಲ್ಲೂ ಎಲ್ಲರಿಂದ ನಿಂದನೆಗೊಳಗಾದೆ. ಸರಿಯಾಗಿ ಅಡುಗೆ ಕೂಡ ಮಾಡಲು ಬರುತ್ತಿರಲಿಲ್ಲ. ಮಗು ಹುಟ್ಟುವ ಮೊದಲು ಅಡಿಗೆ ಮಾಡುವುದು ಒಂದು ಅತ್ಯನಿವಾರ್ಯ ಕೆಲಸ ಅನ್ನಿಸಿರಲಿಲ್ಲ. ಆಫೀಸ್ ಕ್ಯಾಂಟೀನಿನಲ್ಲೋ, ಮನೆ ಎದುರಿನ ಹೋಟೆಲುಗಳಲ್ಲೋ ಏನೋ ಒಂದು ತಿಂದು ಹೇಗೋ ಮ್ಯಾನೇಜ್ ಮಾಡುತ್ತಿದ್ದವಳಿಗೆ ಒಮ್ಮೆಲೇ ಎಲ್ಲಾ ಕಡೆಯಿಂದ ಒತ್ತಡಗಳ ಹೇರಿದಂತಾಗಿತ್ತು. ಒಬ್ಬ ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿದರೂ ರುಚಿಯಾಗಿ ಅಡುಗೆ ಮಾಡಲು, ಮನೆ ನಡೆಸಿಕೊಂಡು ಹೋಗಲು ಬರದಿದ್ದರೆ ಅವಳ ಅಸ್ತಿತ್ವಕ್ಕೇ ಅರ್ಥವೇ ಇಲ್ಲ ಎನ್ನುವಂತ ಎಲ್ಲರ ಮಾತುಗಳಿಂದ ಮತ್ತಷ್ಟು ಖಿನ್ನತೆ ಕಾಡತೊಡಗಿತು. ಅಪ್ಪಿತಪ್ಪಿ ಯಾರೊಂದಿಗಾದರೂ ಹೇಳಿಕೊಂಡರೆ, ‘ಅಯ್ಯೋ ನಿಮಗೆಲ್ಲ ಎಷ್ಟೊಂದು ಅನುಕೂಲತೆಗಳಿವೆ, ಮನೆಗೆಲಸದವಳು ಬರುತ್ತಾಳೆ, ಒಂದೇ ಮಗು, ಕೈ ತುಂಬಾ ಸಂಬಳ; ನಮ್ಮ ಕಾಲದಲ್ಲಿ ಪುರುಸೊತ್ತಿಲ್ಲದ ಮನೆಗೆಲಸ, ತುಂಬಿದ ಮನೆ, ಅತ್ತೆ ಮಾವಂದಿರ ಪಿರಿಪಿರಿ, ನಾದಿನಿ ಮೈದುನರ ಜವಾಬ್ದಾರಿ ಎಲ್ಲಾ ಇತ್ತು. ಆದರೂ ನಾಲ್ಕಾರು ಮಕ್ಕಳನ್ನು ಬೆಳೆಸಿದ್ವಿ. ನೀವುಗಳು ಬಹಳ ನಾಜೂಕು ಬಿಡ್ರಮ್ಮ. ಒಂದು ಮಗುವನ್ನೂ ಕೂಡಾ ನೆಟ್ಟಗೆ ನೋಡಿಕೊಳ್ಳಲು ಆಗದೇ? ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ವಯಸ್ಸಾದ ಅಪ್ಪ ಅಮ್ಮಂದಿರಿಗೆ ಏಕೆ ಕಷ್ಟ ಕೊಡುತ್ತೀರಿ? ಇಷ್ಟೊಂದು ಸ್ವಾರ್ಥಿಗಳಾಗಿ ಅದು ಹೇಗೆ ಬದುಕುತ್ತೀರಿ?’ ಅಂತೆಲ್ಲಾ ಅವಕಾಶ ಸಿಕ್ಕೊಡನೆ ಕೊಂಕು ನುಡಿದು, ಮುಖಕ್ಕೆ ಉಗಿದು ಮಂಗಳಾರತಿ ಮಾಡುತ್ತಿದ್ದರು.

ಹಲವು ವರ್ಷಗಳು ವಿದೇಶದಲ್ಲಿ ನೆಲೆಸಿ ಬಂದ ಆಂಟಿಯೊಬ್ಬರು, ‘ನಮ್ಮ ದೇಶದಲ್ಲಿ ಕೈಗೊಬ್ಬರು, ಕಾಲಿಗೊಬ್ಬರು ಆಳು ಇಟ್ಟುಕೊಂಡು ರಾಣಿಯಂತೆ ಬದುಕುತ್ತಿದ್ದೇವೆ. ಒಮ್ಮೆ ಹೊರಗೆ ಹೋಗಿ ನೋಡಿ. ನಾಲ್ಕಾರು ಮಕ್ಕಳು ಹೆತ್ತರೂ ಬಾಣಂತನಕ್ಕೆ ಕೂಡ ತವರಿಗೆ ಹೋಗುವುದಿಲ್ಲ. ಒಂದೇ ವಾರಕ್ಕೆ ಎದ್ದು ಯಾವ ಕೆಲಸದವರ ಸಹಾಯವೂ ಇಲ್ಲದೆ, ತಾವೇ ಅಡಿಗೆ ಮಾಡುವುದು, ಕಾರು ಓಡಿಸಿಕೊಂಡು ಮಕ್ಕಳನ್ನು ಶಾಲೆಗೆ ಬಿಡುವುದು, ನಲ್ಲಿ ರಿಪೇರಿಯಿಂದ ಹಿಡಿದು ಪ್ರತಿಯೊಂದೂ ಮಾಡಿಕೊಂಡು ಹೇಗೆ ಮ್ಯಾನೇಜ್ ಮಾಡ್ತಾರೆ ಅಂತ’ ಎಂದು ಅಸೂಯೆಯೋ ಎಂಬಂತೆ ನುಡಿದರು. ಒಮ್ಮೆ ಸಂಬಂಧಿಕರೊಬ್ಬರು, ತಮ್ಮ ಮಗನಿಗೆ ಹೆಣ್ಣು ನೋಡುತ್ತಿದ್ದ ಆಂಟಿಗೆ, ‘ಯಾವ ಕಾರಣಕ್ಕೂ ಹಾಸ್ಟೆಲಿನಲ್ಲಿದ್ದು ಓದಿದ ಹುಡುಗಿಯರನ್ನು ಮಾತ್ರ ಮಗನಿಗೆ ತಂದುಕೋ ಬೇಡಮ್ಮ, ಅವಕ್ಕೆ ಏನೂ ಅಂದರೆ ಏನೂ ಮನೆಗೆಲಸ ಬರುವುದಿಲ್ಲ.’ ಎಂದು ನನ್ನನ್ನೇ ಉದ್ದೇಶಿಸಿ ಹೇಳಿದರು. ಅದುವರೆಗೂ ನನಗಿಷ್ಟವಾದ ರೀತಿಯಲ್ಲೇ ಬದುಕು ನಡೆಸಿದ, ಕೊಂಪೆಯೊಂದರಿಂದ ಆರಂಭಿಸಿ ರಾಜಧಾನಿ ದೆಹಲಿಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸಿದ ನನಗೆ, ತಾಯಿಯಾಗಲು ನಾನು ಅರ್ಹಳೇ ಅಲ್ಲವೇನೋ, ನನ್ನಿಂದ ಈ ಜವಾಬ್ದಾರಿ ನಿಭಾಯಿಸುವುದು ಸಾಧ್ಯವೇ ಇಲ್ಲವೇನೋ ಎನಿಸಿ ಬಿಟ್ಟಿತ್ತು. ಎಂದೂ ಕಾಡಿರದ ಆತ್ಮ ಗೌರವ, ಆತ್ಮ ವಿಶ್ವಾಸದ ಕೊರತೆ ಕಾಡತೊಡಗಿತು. ಎಲ್ಲರಿಂದ ಎಲ್ಲಾ ವಿಚಾರಗಳಲ್ಲೂ ಮೆಚ್ಚುಗೆಯನ್ನೇ ಗಳಿಸಿ ಬೆಳೆದುಬಂದ ನನಗೆ ಹೊಸ ಹೊಸ ಬಂಧನಗಳು ಬೆಸೆದುಕೊಂಡಂತೆಲ್ಲಾ ನಾನೆಷ್ಟು ನಿಷ್ಪ್ರಯೋಜಕಳಾಗಿದ್ದೇನೆ ಅನಿಸತೊಡಗಿತ್ತು. ಒಂದು ಸಮಯದಲ್ಲಿ ಎಲ್ಲಾ ಬಂಧನಗಳನ್ನು ಬಿಟ್ಟು ಒಬ್ಬಳೇ ಇರಬೇಕೆಂದು ಕೂಡ ಅನಿಸಿತ್ತು. ಆದರೆ ಅಲ್ಲೂ ನೆಮ್ಮದಿಯಿಲ್ಲದೆ ಒದ್ದಾಡಿದೆ.

ಆಗ ಒಂದು ದಿನ ಟೈಮ್ಸ್ ಓಫ್ ಇಂಡಿಯಾದಲ್ಲಿ ಚೇತನ್ ಭಗತ್ ಬರೆದಿದ್ದ ಒಂದು ಲೇಖನ ಓದಿದೆ. ಅದರಲ್ಲಿ ‘ನಮ್ಮ ದೇಶದಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರು ತುಂಬಾ ಒತ್ತಡದಲ್ಲಿ ಬದುಕುತ್ತಾರೆ, ಏಕೆಂದರೆ ಮನೆ, ಆಫೀಸ್, ಮಕ್ಕಳ ಪಾಲನೆ, ಅಡುಗೆ, ಹಿರಿಯರ ಸೇವೆ, ರೂಪ, ಆರೋಗ್ಯ ಎಲ್ಲಾ ಅಂದರೆ ಎಲ್ಲಾ ಕ್ಷೇತ್ರದಲ್ಲೂ A ಪ್ಲಸ್ ಸ್ಕೋರ್ ಮಾಡಲು ಪ್ರಯತ್ನಿಸುತ್ತಾರೆ. ಅದು ಅನಗತ್ಯ. ಸಹಾಯಕರನ್ನಿಟ್ಟುಕೊಂಡು ಸ್ವಲ್ಪಮಟ್ಟಿಗೆ ಜೀವನವನ್ನು ಆರಾಮದಾಯಕ ಮಾಡಿಕೊಳ್ಳಬೇಕು.’ ಎಂಬರ್ಥ ಬರುವಂತಿತ್ತು.

ಅದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಎಲ್ಲರಿಂದ ಶಬಾಷ್ ಎನ್ನಿಸಿಕೊಳ್ಳಬೇಕು ಎನ್ನುವ ಹಠ ಬಿಟ್ಟು, ನನಗೆ ಖುಷಿ ಕೊಡುವ ಮತ್ತು ಸಾಧ್ಯವಾದುದಷ್ಟನ್ನೇ ಮಾಡಿಕೊಂಡು ಇರಲು ತೊಡಗಿದೆ. ಎಲ್ಲ ಸಮಯದಲ್ಲೂ ಎಲ್ಲರನ್ನೂ ಮೆಚ್ಚಿಸಬೇಕೆಂಬ ಹಠ ಆತಂಕಕಾರಿ, ಅನಗತ್ಯ ಎನ್ನುವುದು ಮನವರಿಕೆಯಾಯಿತು. ನನ್ನ ಮನದ ತುಮುಲಗಳನ್ನು ಬ್ಲಾಗಿನಲ್ಲಿ ಬರೆದು ಹೊರಹಾಕಿದೆ. ಅದರಿಂದ ಮನಸ್ಸಿಗೆ ಬಹಳ ಹಿತ ಅನಿಸುತಿತ್ತು. ಅದೇ ಸಮಯದಲ್ಲಿ ಕತೆ, ಕವನ ಬರೆಯಬೇಕೆಂದು ತೀವ್ರವಾಗಿ ಅನ್ನಿಸತೊಡಗಿತು. ಇಷ್ಟೆಲ್ಲಾ ಕೆಲಸದ ನಡುವೆ ಅದಕ್ಕೆಲ್ಲಿ ಸಮಯ ಸಿಗುತ್ತೆ ಎಂದು ಎಲ್ಲರೂ ಆಶ್ಚರ್ಯ ಪಡುವಂತೆ, ಇಂಗ್ಲೀಷ್ ನಲ್ಲಿ 2017ರಲ್ಲಿ ಒಂದು ಕಿರುಗತೆಗಳ ಸಂಕಲನ ಪ್ರಕಟಿಸಿದೆ ‘Anyone but the Spouse’.  ಹಲವಾರು ಲೇಖನಗಳನ್ನೂ, ಕವಿತೆಗಳನ್ನೂ ಬರೆದೆ. ಕಲಿಯುವುದು ಬಹಳ ಇದೆ ಎಂಬುದರ ಅರಿವಿನ ಜೊತೆಗೆ ಬರೆಯುತ್ತಿರುವುದರಿಂದಲೇ ಅದು ಸಾಧ್ಯ ಎನ್ನುವುದೂ ನಿಜ ಅನಿಸಿತು. ಇದೀಗ ಮೊದಲ ಕಾದಂಬರಿ ‘ಇಜಯಾ’ ಗೋಮಿನಿ ಪ್ರಕಾಶನದ ಮೂಲಕ ಪ್ರಕಟಣೆಗೆ ಸಿದ್ಧವಾಗಿದೆ. ಖಿನ್ನತೆಗೆ ಜಾರುವ ಅಂಜಿಕೆಯಲ್ಲಿದ್ದಾಗಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ನನ್ನನ್ನು ಉಳಿಸಿತ್ತು.

ನನ್ನ ಮಗಳು ಮಗುವಾಗಿ ಒಬ್ಬ ಅಮ್ಮನಿಂದ ಕಲಿತಿದ್ದಕ್ಕಿಂತ, ಲೇಖಕಿಯಾಗಿ ನಾನು ಅಂಬೆಗಾಲಿಡುವುದನ್ನು ನೋಡು ನೋಡುತ್ತಾ ಹೆಚ್ಚು ಕಲಿತಳು ಮತ್ತು ಪುಸ್ತಕದ ಬೆನ್ನುಡಿ ಓದಿ ತಾನೇ ಆಯ್ದು ಕೊಳ್ಳುವಷ್ಟು ಬೆಳೆದಳು. ಇಂಗ್ಲಿಷ್ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಳು. ಹುಟ್ಟುಹಬ್ಬಕ್ಕೆ ಪುಸ್ತಕಗಳು ಕಾಣಿಕೆಯಾಗಿ ಸಿಕ್ಕಾಗ ಹೆಚ್ಚು ಖುಷಿಪಟ್ಟಳು. ಅವಳಿಗೆ ನಾನು ಹೀಗೆ ಮಾಡು, ಹಾಗೆ ಮಾಡು ಎಂದು ಹೇಳಿದ್ದು ಕಡಿಮೆಯೇ. ಆದರೆ ನನ್ನನ್ನು ಅನುಕರಣೆ ಮಾಡುತ್ತಾ ನನಗಿಂತ ಹೆಚ್ಚು ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಂಡಿದ್ದಾಳೆ. ಇಂಗ್ಲಿಷ್​ನಲ್ಲಿ ಕವಿತೆಗಳನ್ನೂ ಬರೆಯುತ್ತಾಳೆ. ಹದಿಮೂರು ವರ್ಷದ ಆಕೆ ಕಾದಂಬರಿಯನ್ನೂ ಬರೆಯುತ್ತಿದ್ದಾಳೆ. ತನ್ನ ಮನೋರಂಜನೆಗೆ ಏನು ಬೇಕೋ ಅದನ್ನು ಅವಳೇ ಹುಡುಕಿಕೊಂಡು ತೊಡಗಿಸಿಕೊಂಡಾಗ, ನಾನು ಬರೆಯುತ್ತಾ ಕುಳಿತಾಗ ತಾನೂ ಬಂದು ಲ್ಯಾಪ್​ಟಾಪ್​ ಹಿಡಿದು ಟೈಪಿಸುತ್ತ ಕುಳಿತುಕೊಳ್ಳುವ ಅವಳನ್ನು ನೋಡಿದಾಗ, ಮಕ್ಕಳು ನಮ್ಮ ಶಕ್ತಿಯಾಗುತ್ತಾರೆ, ಜೀವನೋತ್ಸಾಹ ತುಂಬುತ್ತಾರೆ, ನಮ್ಮ ಕಾಲಿಗೆ ತೊಡರುವುದಿಲ್ಲ ಬದಲಿಗೆ ಚೈತನ್ಯ ತುಂಬುತ್ತಾರೆ ಎನ್ನುವುದು ಅರಿವಾಗಿದೆ.

ಬರಹ ಬದುಕಿನ ಬಂಧನಗಳೊಂದಿಗೆ ಬೆಸೆದುಕೊಂಡೇ ಬದುಕಲು ಕಲಿಸಿದೆ.

***
ಪರಿಚಯ: ಶಿವಮೊಗ್ಗದ ಪುಟ್ಟ ಹಳ್ಳಿ ಹನುಮಂತಾಪುರದಲ್ಲಿ 1978ರಲ್ಲಿ ಜನಿಸಿದ ಪೂರ್ಣಿಮಾ ಮಾಳಗಿಮನಿ, ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದು ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘Anyone but the Spouse’ ಕಥಾ ಸಂಕಲನ ಇವರ ಮೊದಲ ಪುಸ್ತಕ. ಸದ್ಯದಲ್ಲೇ ಗೋಮಿನಿ ಪ್ರಕಾಶನದಿಂದ ಮೊದಲ ಕಾದಂಬರಿ ‘ಇಜಯಾ’ ಹೊರಬರುತ್ತಿದೆ. ಕರ್ತವ್ಯ ಪಾಲನೆ ಮತ್ತು ಕನಸುಗಳ ಬೆನ್ನಟ್ಟುವುದರ ನಡುವಿನ ಇಕ್ಕಟ್ಟಿನಲ್ಲಿ ಇದರ ವಸ್ತು ಹರಡಿಕೊಂಡಿದೆ.

ನಾನೆಂಬ ಪರಿಮಳದ ಹಾದಿಯಲಿ: ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ ಎಂಬರಿವಿನಲ್ಲೇ…