ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ.. ‘ಅಮರ್ ಜವಾನ್ ಜ್ಯೋತಿ’ಗೆ ಪ್ರಧಾನಿ ಮೋದಿ ನಮನ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಳೆದ ವರ್ಷ ಸ್ವಾತಂತ್ರ್ಯೋತ್ಸವವನ್ನ ಸರಳವಾಗಿ ಆಚರಿಸಲಾಯಿತ್ತು. ಈಗ ಅದೇ ಭೀತಿ 72 ನೇ‌ ಗಣರಾಜ್ಯೋತ್ಸವಕ್ಕೂ ತಟ್ಟಿದ್ದು, ಸರಳವಾಗಿ ಆಚರಿಸಲಾಗ್ತಿದೆ. ಗಣರಾಜ್ಯೋತ್ಸವ ಆಚರಿಸಲು ದೆಹಲಿಯ ರಾಜಪಥ ಮತ್ತು ಮಾಣೆಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು ಸರಳ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

  • TV9 Web Team
  • Published On - 6:29 AM, 26 Jan 2021
ಸಾಂಕೇತಿಕ ಚಿತ್ರ

ಕೊರೊನಾ ಅನ್ನೋ ಮಹಾಮಾರಿ ಜಗತ್ತನ್ನ ಕಾಡಲು ಶುರು ಮಾಡಿ ವರ್ಷ ಕಳೆದು ಹೋಗಿದೆ. ಈ ಹೆಮ್ಮಾರಿ ಜನರ ಜೀವನದಲ್ಲಿ ಅನೇಕ ಬದಲಾವಣೆಗಳನ್ನ ತಂದಿದೆ. ಇದೇ ರೀತಿ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆಯಲ್ಲೂ ಭಾರಿ ಬದಲಾವಣೆಗಳು ಆಗಿವೆ. ಹೀಗಾಗಿ ಕಳೆದ ವರ್ಷ ಸ್ವಾಂತತ್ರ್ಯೋತ್ಸವನ್ನ ಸರಳವಾಗಿ ಆಚರಿಸಲಾಗಿತ್ತು. ಇದೇ ರೀತಿ ಈ ಬಾರಿಯ ಗಣರಾಜ್ಯೋತ್ಸವವನ್ನ ಸರಳವಾಗಿ ಆಚರಿಸಲಾಗ್ತಿದೆ. ಇದೇ ರೀತಿ ದೆಹಲಿಯ ರಾಜಪಥ ಮತ್ತು ಬೆಂಗಳೂರಿನ ಮಾಣೆಕ್ ಷಾ ಪರೇಡ್ ಗ್ರೌಂಡ್​ನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಷ್ಟ್ರಪತಿ ಕೋವಿಂದ್​ರಿಂದ ನಡೆಯುತ್ತೆ ಧ್ವಜಾರೋಹಣ
ಇಂದು ಬೆಳಗ್ಗೆ 9 ಗಂಟೆಗೆ ದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಶುರುವಾಗಲಿದೆ. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅಮರ ಜವಾನ್ ಜ್ಯೋತಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಲಿದ್ದಾರೆ. ಇದಾದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧ್ವಜಾರೋಹಣ ಮಾಡಲಿದ್ದಾರೆ. ಈ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ವಿಶೇಷತೆ-ಬದಲಾವಣೆಗಳು ಏನೇನು?
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದೇಶಿ ಅತಿಥಿ ಭಾಗಿಯಾಗ್ತಿಲ್ಲ. ಜೊತೆಗೆ ಬಾಂಗ್ಲಾದೇಶ ವಿಮೋಚನೆಯ 50ನೇ ವರ್ಷದ ನೆನಪಿಗಾಗಿ ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ನಲ್ಲಿ ಬಾಂಗ್ಲಾದೇಶದ ಸೇನಾ ತುಕಡಿ ಭಾಗಿಯಾಗಲಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆ ಮಾಡುವಾಗ ದೈಹಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿದ್ದು, ಇದೇ ಕಾರಣಕ್ಕೆ ಪರೇಡ್ ವೀಕ್ಷಣೆಗೆ 1 ಲಕ್ಷ 25 ಸಾವಿರ ಜನರ ಬದಲು 25 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಿದ್ದಾರೆ.

ಎಲ್ಲಕ್ಕಿಂತಾ ಮುಖ್ಯವಾಗಿ, ಈ ಬಾರಿ 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಪರೇಡ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ರಾಜಪಥದಲ್ಲಿ ವಿವಿಧ ರಾಜ್ಯಗಳ 17 ಸ್ತಬ್ದಚಿತ್ರಗಳು ಸೇರಿ ಒಟ್ಟು 31 ಸ್ತಬ್ದಚಿತ್ರಗಳು ಪ್ರದರ್ಶನವಾಗಲಿದ್ದು, ಸ್ತಬ್ದಚಿತ್ರಗಳ ಜೊತೆ ಸಂಚರಿಸುವ ಕಲಾವಿದರ ಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ. ಪರೇಡ್ ವೀಕ್ಷಣೆ ವೇಳೆ ಕೊರೊನಾ ಲಕ್ಷಣ ಕಂಡು ಬಂದರೆ, ಅಂತೋರು ವಿಶ್ರಾಂತಿ ಪಡೆಯೋಕೆ 8 ವಿಶ್ರಾಂತಿ ಬೂತ್​ಗಳ ವ್ಯವಸ್ಥೆ ಮಾಡಲಾಗಿದೆ. ಗಣರಾಜ್ಯೋತ್ಸವದ ಏರ್​ಶೋನಲ್ಲಿ ರಫೇಲ್ ಫೈಟರ್​ ಜೆಟ್​​ಗಳು ಭಾಗಿಯಾಗಲಿವೆ.

ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿಯೂ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ನೇರವೇರಿಸಲಿದ್ದಾರೆ. ಸ್ವಾತಂತ್ರ್ಯೋತ್ಸವ ಆಚರಿಸಿದಂತೆ ಈ ಬಾರಿ ಗಣರಾಜ್ಯೋತ್ಸವವನ್ನ ಆಚರಿಸಲು ಬಿಬಿಎಂಪಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಧರಿಸಿವೆ. ಮಾಣೆಕ್​ ಷಾ ಮೈದಾನಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ.

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, 7 ಡಿಸಿಪಿ, 16 ಎಸಿಪಿ ಸೇರಿ, 1100 ಪೊಲೀಸ್ ಸಿಬ್ಬಂದಿ‌ ಹಾಗೂ 12 ಕೆಎಸ್‌ಆರ್‌ಪಿ, 9 ಸಿಆರ್‌ಪಿ, ಬಾಂಬ್ ಸ್ಕ್ವಾಡ್ ನಿಯೋಜಿಸಲಾಗಿದೆ.

ಒಟ್ನಲ್ಲಿ ಕೊವಿಡ್ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮ ಅತ್ಯಂತ ಸರಳ ಆಚರಣೆ ಮಾಡಲು‌ ಸಕಲ ತಯಾರಿ ನಡೆದಿದೆ.

ಜಮ್ಮುವಿನಲ್ಲಿ ಸೇನಾ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ: ಇಬ್ಬರು ಪೈಲಟ್​ಗಳ ಸ್ಥಿತಿ ಗಂಭೀರ