ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಾಣ ಮಾಡಿದರೂ.. ಕ್ರೀಡಾಂಗಣಗಳಿಗೆ ಇಲ್ಲ ನಿರ್ವಹಣೆ ಭಾಗ್ಯ
ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಅಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಆದರೇ ಆ ಕ್ರೀಡಾಂಗಣಗಳು ಕ್ರಿಡಾ ಪಟುಗಳಿಗೆ ಮಾತ್ರ ಬಳಕೆಯಾಗುತ್ತಿಲ್ಲ.
ಬೀದರ್: ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಅಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಆದರೇ ಆ ಕ್ರೀಡಾಂಗಣಗಳು ಕ್ರಿಡಾ ಪಟುಗಳಿಗೆ ಮಾತ್ರ ಬಳಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ನಿರ್ವಹಣೆಯ ಕೊರತೆಯಿಂದಾಗಿ ಆ ಕ್ರೀಡಾಂಗಣಗಳು ಹಾಳು ಕೊಂಪೆಯಾಗಿವೆ.
ಬೀದರ್ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳ ಸ್ಥಿತಿ ನೋಡಿದರೆ ನಿಜಕ್ಕೂ ಮರುಕ ಹುಟ್ಟಿಸುತ್ತದೆ. ಜಿಲ್ಲಾ ಕೇಂದ್ರದಲ್ಲೇ ಹೊಸ ಕ್ರೀಡಾಂಗಣ ಪಾಳು ಬಿದ್ದರೂ ಕೇಳುವವರಿಲ್ಲದಂತಾಗಿದೆ. ಮೈದಾನದ ಸುತ್ತಲೂ ವೃತ್ತಾಕಾರದಲ್ಲಿ ನಿರ್ಮಿಸಿದ್ದ ನೆಹರು ಕ್ರೀಡಾಂಗಣದಲ್ಲಿನ ಪ್ರೇಕ್ಷಕರ ಗ್ಯಾಲರಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಯೋಗ್ಯವಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯಾಗಿದ್ದ ದಿ.ಅನುರಾಗ ತಿವಾರಿ ಅವರು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗೆ ಮನವರಿಕೆ ಮಾಡಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ತರುವಲ್ಲಿ ಯಶಸ್ವಿ ಕಂಡಿದ್ದರು.
ಫಲ ನೀಡದ ಯೋಜನೆ.. ಕಡತಗಳಲ್ಲೇ ಉಳಿದು ಹೋಗಿದೆ: 2016ರಲ್ಲಿ ಹಳೆಯದಾದ ಕ್ರೀಡಾಂಗಣದ ಗ್ಯಾಲರಿಯನ್ನು ನೆಲಸಮಗೊಳಿಸಲಾಯಿತು. ಆದರೆ ಕಾಮಗಾರಿ ವೇಗ ಪಡೆದುಕೊಳ್ಳಲಿಲ್ಲ. ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಮೂಲಕ ಹೊಸ ಕ್ರೀಡಾಂಗಣ ನಿರ್ಮಿಸಲಾಗಿದೆ. ಒಪ್ಪಂದದ ಪ್ರಕಾರ 2019ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕ್ರೀಡಾಂಗಣದ ವಿನ್ಯಾಸಕ್ಕೆ ಕ್ರೀಡಾಪಟುಗಳಿಂದ ಆಕ್ಷೇಪ ವ್ಯಕ್ತವಾದ್ದರಿಂದ ತೊಡಕು ಉಂಟಾಯಿತು. ಕ್ರೀಡಾಂಗಣಕ್ಕೆ ನಾಲ್ಕು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ.
ನಾಲ್ಕು ಕಡೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿದರೂ ಮೊದಲಿದ್ದ ಗ್ಯಾಲರಿಗಿಂತ ಈಗಿನ ಗ್ಯಾಲರಿ ವಿಸ್ತಾರ ಕಡಿಮೆ ಮಾಡಲಾಗಿದೆ. ಕ್ರೀಡಾಂಗಣ ಅಂದ ಕಳೆದುಕೊಂಡಿದೆ. ಇನ್ನೂ ಜಿಲ್ಲಾ ಕೇಂದ್ರದಲ್ಲಿ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿತ್ತು. ಕ್ರೀಡಾಂಗಣದಲ್ಲಿ ಫುಟ್‌ಬಾಲ್, ಹಾಕಿ, ಅಥ್ಲೆಟಿಕ್ ಟ್ರ್ಯಾಕ್, ಹೊರ ಆವರಣದಲ್ಲಿ ವಾಲಿಬಾಲ್, ಲಾನ್ ಟೆನಿಸ್, ಬ್ಯಾಸ್ಕೆಟ್‌ಬಾಲ್ ಸೇರಿದಂತೆ ಕಬಡ್ಡಿ, ಕೊಕ್ಕೊಗೂ ಅಂಗಣ ನಿರ್ಮಾಣ ಮಾಡುವ ಯೋಜನೆ ಇತ್ತು. ಮೂರು ವರ್ಷಗಳಲ್ಲಿ ಯೋಜನೆಯ ಲೆಕ್ಕಾಚಾರವೇ ಬುಡಮೇಲಾಗಿದೆ. ಬೇಸಿಗೆಯಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯೇ ಖಾಲಿ ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ ಅವರಿಗೆ ಕ್ರೀಡಾ ಇಲಾಖೆಯ ಹೆಚ್ಚುವರಿ ಹೊಣೆ ವಹಿಸಲಾಗಿತ್ತು.
ಜೂಜುಕೋರರು, ಕುಡುಕರ ತಾಣವಾಗುತ್ತಿದೆ: ಎರಡು ತಿಂಗಳ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ರಾಜೇಶ ನಾಡಿಗೇರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಕ್ರೀಡಾಂಗಣವನ್ನು ಕ್ರೀಡಾಪಟುಗಳಿಗೆ ಮುಕ್ತಗೊಳಿಸುವ ಪ್ರಯತ್ನ ಕಡತಗಳಲ್ಲೇ ಉಳಿದುಕೊಂಡಿದೆ. ಇನ್ನೂ ಬೀದರ್ ಜಿಲ್ಲಾ ಕ್ರೀಡಾಂಗಣದ ಸ್ಥಿತಿಯೊಂದಾದರೆ ಔರಾದ್ ತಾಲೂಕು ಕ್ರಿಡಾಂಗಣದ ಸ್ಥಿತಿಯೂ ಕೂಡಾ ಇದೇ ಆಗಿದೆ. ಇಲ್ಲಿಯೂ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕ್ರಿಡಾಂಗಣ ನಿರ್ಮಾಣ ಮಾಡಲಾಗಿದೆ. ಆದರೇ ಇಲ್ಲಿ ಸಮರ್ಪಕ ನಿರ್ವಹಣೆಯನ ಕೊರೆತೆಯಿಂದಾಗಿ ಕ್ರಿಡಾಂಗಣದಲ್ಲಿ ಕ್ರಿಡಾ ಚಟುವಟಿಕೆಗಳು ನಡೆಯದಂತಾ ಸ್ಥಿತಿ ಇಲ್ಲಿದೆ. ಇನ್ನೂ ಕ್ರೀಡಾಂಗಣದ ಸುತ್ತಮುತ್ತ ಕಂಪೌಂಡ್ ನಿರ್ಮಾಣ ಮಾಡಿಲ್ಲ. ಹೀಗಾಗಿ ಜಾಣುವಾರುಗಳು ಕೂಡಾ ಇಲ್ಲಿಯೇ ವಾಸ ಮಾಡುತ್ತವೆ.
ಇನ್ನೂ ರಾತ್ರಿಯಾದರೆ ಸಾಕು ಜೂಜುಕೋರರು, ಕುಡುಕರ ನೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ. ಒಟ್ಟಾರೆ ಬೀದರ್ ನಗರದ ಹೃದಯ ಭಾಗದ ಈ ಕ್ರೀಡಾಂಗಣ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ನಿರ್ವಹಣೆಯ ಕೊರೆತೆಯಿಂದ ಕ್ರೀಡಾಂಗಣ ಹಾಳಾಗುತ್ತಿದೆ. ಸಂಬಂಧ ಪಟ್ಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕ್ರಮಕ್ಕೆ ಮುಂದಾಗಬೇಕಿದೆ. ಈಗಲಾದ್ರು ಸಂಬಂಧ ಪಟ್ಟ ಅಧಿಕಾರಿಗಳು, ಸಚಿವರು, ಶಾಸಕು ಒಂದಿಷ್ಟು ಒತ್ತಡ ಹಾಕಿ ಕ್ರೀಡಾಂಗಣ ಹಾಳಾಗದಂತೆ ನೋಡಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.