ಶಿವಮೊಗ್ಗ: ಎಲ್ಲೆಡೆ ಕೊರೊನಾ ವೈರಸ್ ಕಾಟ ಮತ್ತು ಲಾಕ್ ಡೌನ್ ಬಗ್ಗೆಯೇ ಮಾತು. ಆದ್ರೆ ಬಿಜೆಪಿ ಮಾತ್ರ ಸದ್ದಿಲ್ಲದೇ ಆಪರೇಶನ್ ಕಮಲದಲ್ಲಿ ನಿರತವಾಗಿದೆ. ಪರಿಣಾಮ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ತವರಿನಲ್ಲಿಯೇ ಅವರ ಪುತ್ರ ಮಾಡಿದ ಆಪರೇಶನ್ ಕಮಲಕ್ಕೆ ಪುರಸಭೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ.
ಹೌದು ಕೆಲ ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಸಿಎಂ ಬಿಎಸ್ವೈ ಅವರ ತವರು ಕ್ಷೇತ್ರ ಶಿಕಾರಿಪುರದ ಪುರಸಭೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 8 ಮತ್ತು ಮೂವರು ಪಕ್ಷೇತರರು ಆಯ್ಕೆಗೊಂಡಿದ್ದರು.
ಕಾಂಗ್ರೆಸ್ ಸದಸ್ಯರಿಗೆ ಆಪರೇಶನ್ ಕಮಲ ಇದಾದ ನಂತರ ಸಿಎಂ ಬಿಎಸ್ವೈ ಪುತ್ರ ಮತ್ತು ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಪುರಸಭೆ ಸೋಲಿಗೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮಾದರಿಯಲ್ಲೇ ಈಗ ಪುರಸಭೆಯನ್ನೂ ಕಮಲದ ತೆಕ್ಕೆಗೆ ಹಾಕಿಕೊಳ್ಳಲು ಆಪರೇನ್ ಕಮಲಕ್ಕೆ ಮುಂದಾಗಿದ್ದಾರೆ.
ಪರಿಣಾಮ ಪುರಸಭೆಗೆ ಆಯ್ಕೆಗೊಂಡಿರುವ ಕಾಂಗ್ರಸ್ ಪಕ್ಷದ ರಮೇಶ್ ಮತ್ತು ಉಮಾಪತಿ ಎನ್ನುವ ಇಬ್ಬರು ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದ ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಾಗೇನೇ ಮೂವರು ಪಕ್ಷೇತರಾದ ಪ್ರಶಾಂತ ಜೀನಳ್ಳಿ, ರೇಖಾಬಾಯಿ, ಸಾದೀಕ್ ಕೂಡಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಪುರಸಭೆಯಲ್ಲಿ ಗೆದ್ದೂ ಸೋತ ಕಾಂಗ್ರೆಸ್ ಪುರಸಭೆಯನ್ನು ಗೆದ್ದು ಬಿಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ಸಂಖ್ಯಾಬಲ ಈಗ 10ಕ್ಕೆ ಕುಸಿದಿದೆ. ಇನ್ನೂ ಬಿಜೆಪಿಗೆ 8 ರಿಂದ ಮೂವರು ಪಕ್ಷೇತರ ಬೆಂಬಲದೊಂದಿಗೆ 11ಕ್ಕೆ ಏರಿಕೆ ಯಾಗಿದೆ. ಇದರ ಜೊತೆಗೆ ಬಿಜೆಪಿಯ ಶಾಸಕರ ಮತ್ತು ಸಂಸದರ ಒಂದು ಮತ ಬಿಜೆಪಿ ಬಳಿಯಿದೆ.
ಕಾಂಗ್ರೆಸ್ ಪಕ್ಷದ ಇಬ್ಬರು ಪುರಸಭೆ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಈ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾದ್ರೆ ಬಿಜೆಪಿ ಸಲೀಸಾಗಿ ಪುರಸಭೆ ಚುಕ್ಕಾಣಿ ಹಿಡಿಯಲಿದೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಆಕ್ರೋಶ ಹೀಗೆ ಚುನಾವಣೆಯಲ್ಲಿ ಆದ ಮುಖಭಂಗವನ್ನು ಬಿಜೆಪಿ ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಲಕ್ಷ ಲಕ್ಷ ಸೂಟ್ಕೇಸ್ ವ್ಯವಹಾರ ನಡೆದಿದೆ. ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ಇಬ್ಬರು ಕಾಂಗ್ರೆಸ್ ಪುರಸಭೆ ಸದಸ್ಯರ ರಾಜೀನಾಮೆಯನ್ನು ಚುನಾವಣಾಧಿಕಾರಿಗಳು ಅಂಗೀಕಾರ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಒಂದುವೇಳೆ ಅಂಗೀಕರಿಸಿದ್ರೆ ಶಿಕಾರಿಪುರದ ಬಿಎಸ್ ವೈ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.-ಬಸವರಾಜ್ ಯರಗಣವಿ