ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದ್ದ ಪಾಕ್‌ ಕ್ರಿಕೆಟ್ ತಂಡದ 10 ಆಟಗಾರರಿಗೆ ಕೊರೊನಾ

  • TV9 Web Team
  • Published On - 9:26 AM, 24 Jun 2020
ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದ್ದ ಪಾಕ್‌ ಕ್ರಿಕೆಟ್ ತಂಡದ 10 ಆಟಗಾರರಿಗೆ ಕೊರೊನಾ

ಕೊರೊನಾ ವೈರಸ್ ತನ್ನ ಕರಾಳ ರೂಪವನ್ನು ತೋರಿಸುತ್ತಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದೀಗ ಪಾಕ್‌ ಕ್ರಿಕೆಟ್ ತಂಡದ 10 ಆಟಗಾರರಿಗೆ ಕೊರೊನಾ ದೃಢಪಟ್ಟಿದೆ. ಇಂಗ್ಲೆಂಡ್‌ ಪ್ರವಾಸ ಸಲುವಾಗಿ ಪ್ರಕಟಿಸಿದ್ದ ಪಾಕಿಸ್ತಾನದ ತಂಡದ 29 ಆಟಗಾರರಲ್ಲಿ ಇದೀಗ ಒಟ್ಟು 10 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ.

ಆಟಗಾರರು ಜೂನ್ 28ರಂದು ಮ್ಯಾಂಚೆಸ್ಟರ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಹೀಗಾಗಿ ಈ ಮೊದಲೇ ಎರಡು ಹಂತಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕಿತ್ತು. ಅದರಂತೆಯೇ ಮೊದಲ ಹಂತದ ತಪಾಸಣೆಯಲ್ಲಿ ಮೂವರು ಯುವ ಆಟಗಾರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಎರಡನೇ ಹಂತದ ಕೊವಿಡ್ ಟೆಸ್ಟ್​ನಲ್ಲಿ 7 ಆಟಗಾರರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಫಖರ್ ಜಮಾನ್, ಶದಾಬ್ ಖಾನ್, ಹೈದರ್ ಅಲಿ, ಹ್ಯಾರಿಸ್ ರೌಫ್‍, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ರಿಜ್ವಾನ್, ವಹಾಬ್ ರಿಯಾಜ್‌ ಸೇರಿದಂತೆ ಒಟ್ಟು 10 ಮಂದಿಗೆ ಸೋಂಕು ತಗುಲಿದೆ. ಆಗಸ್ಟ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದ್ದ ತಂಡ ಸೋಂಕಿಗೆ ತುತ್ತಾಗಿದೆ.