ಶರವೇಗದಲ್ಲಿ ಅವಳಿ ನಗರ ಸ್ಮಾರ್ಟ್ ಸಿಟಿ ಯೋಜನೆ: ಅಂತಿಮ ಹಂತಕ್ಕೆ ತಲುಪಿದ ಪಜಲ್ ಪಾರ್ಕಿಂಗ್ ಕಾಮಗಾರಿ

ಹೊಚ್ಚ ಹೊಸ ಗ್ಲಾಸ್​ಗಳನ್ನು ಹಾಕುತ್ತಾ ಲಂಡನ್​ನಲ್ಲಿರುವ ಪಾರ್ಕ್ ಮಾದರಿಯಲ್ಲೆ ಇಂದಿರಾ ಗ್ಲಾಸ್​ಹಾಸ್​ ಅಭಿವೃದ್ದಿ ಪಡಿಸಲಾಗುತ್ತಿದೆ. ಇದೇ ಗ್ಲಾಸ್​​ಹೌಸ್​ನಲ್ಲಿ ಪಜಲ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

  • ರಹಮತ್ ಕಂಚಗಾರ್
  • Published On - 17:21 PM, 1 Jan 2021
ಶರವೇಗದಲ್ಲಿ ಅವಳಿ ನಗರ ಸ್ಮಾರ್ಟ್ ಸಿಟಿ ಯೋಜನೆ: ಅಂತಿಮ ಹಂತಕ್ಕೆ ತಲುಪಿದ ಪಜಲ್ ಪಾರ್ಕಿಂಗ್ ಕಾಮಗಾರಿ
ಪಜಲ್ ಪಾರ್ಕಿಂಗ್ ಕಾಮಗಾರಿಗಳು ಮುಗಿಯುವ ಹಂತಕ್ಕೆ ಬಂದಿದೆ.

ಹುಬ್ಬಳ್ಳಿ: ಧಾರವಾಡದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಅತ್ಯಂತ ಚುರುಕಾಗಿ ನಡೆಯುತ್ತಿವೆ. ಆಲ್ ಓವರ್ ಇಂಡಿಯಾದ ಸ್ಮಾರ್ಟ್ ಸಿಟಿ ರ್ಯಾಂಕಿಂಗ್​ನಲ್ಲಿ ಅವಳಿ ನಗರವೇ ಇಂದಿಗೂ ನಂಬರ್ ಒನ್ ಪಟ್ಟ ಭದ್ರಪಡಿಸಿಕೊಂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ಮಾರ್ಟ್ ಸಿಟಿಯ ಒಂದೊಂದೆ ಕಾಮಗಾರಿಗಳು ಮುಗಿಯುವ ಹಂತಕ್ಕೆ ಬಂದು ನಿಂತಿವೆ. ಹುಬ್ಬಳ್ಳಿಯ ಸೌಂದರ್ಯ ಹೆಚ್ಚಿಸುವ ಇಂದಿರಾ ಗಾಜಿನ ಮನೆ ಮತ್ತಷ್ಟು ಸ್ಮಾರ್ಟ್ ಆಗುತ್ತಿದೆ.

ಹೊಚ್ಚ ಹೊಸ ಗ್ಲಾಸುಗಳನ್ನು ಹಾಕುತ್ತಾ ಲಂಡನ್​ನಲ್ಲಿರುವ ಪಾರ್ಕ್ ಮಾದರಿಯಲ್ಲೆ ಇಂದಿರಾ ಗ್ಲಾಸ್​​ಹೌಸ್ ಅಭಿವೃದ್ದಿ ಪಡಿಸಲಾಗುತ್ತಿದೆ. ಇದೇ ಗ್ಲಾಸ್​​ಹೌಸ್​ನಲ್ಲಿ ಪಜಲ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನಿತ್ಯ ಪ್ರಾಯೋಗಿಕವಾಗಿ ರನ್ ಮಾಡಲಾಗುತ್ತಿದೆ. ನೆಲ ಮಹಡಿ ಜತೆಯಲ್ಲಿ ಐದು ಅಂತಸ್ತಿನ ಮಾದರಿಯಲ್ಲಿ 180 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಪಜಲ್ ಪಾರ್ಕಿಂಗ್ ನಿರ್ಮಾಣ ಮಾಡಲಾಗುತ್ತಿದೆ. ಏಕಕಾಲಕ್ಕೆ ಇಲ್ಲಿ 37 ಕಾರುಗಳನ್ನು ಪಾರ್ಕ್ ಮಾಡಬಹುದು.

4.59 ಕೋಟಿ ರೂ. ವೆಚ್ಚದ ಪಾರ್ಕಿಂಗ್
ಬೆಂಗಳೂರಿನಂತಹ ಮೆಗಾ ಸಿಟಿಯಲ್ಲಿ ಸರ್ಕಾರ ಆಡಳಿತವಿರುವ ಯಾವ ಕಟ್ಟಡದಲ್ಲೂ ಪಜಲ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣವಾಗಿಲ್ಲ. ಹುಬ್ಬಳ್ಳಿಯಲ್ಲಿಯೇ ಮೊದಲ ಬಾರಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಯೋಜನೆ ತೆಗೆದುಕೊಳ್ಳಲಾಗಿದೆ. ಅಪ್ಪಟ ಎಲೆಕ್ಟ್ರೋ ಮೆಕ್ಯಾನಿಕಲ್ ತಂತ್ರಜ್ಞಾನದಡಿ ಈ ಪಾರ್ಕಿಂಗ್​ನ ಯಂತ್ರಗಳು ಕಾರ್ಯನಿರ್ವಹಿಸುತ್ತವೆ. ಕಾರು ನಿಲುಗಡೆ ಮಾಡಿದರೂ ಎಲ್ಲೂ ಕೂಡಾ ಕಾರುಗಳು ಅಲುಗಾಡೋದಿಲ್ಲಾ. ಕೆಳಗಿಂದ ಮೇಲೆ, ಮೇಲಿಂದ ಕೆಳಗೆ ಸುಲಭವಾಗಿ ನಿಲುಗಡೆ ಮಾಡಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಒಟ್ಟಾರೆ 4.59 ಕೋಟಿ ರೂಪಾಯಿ ವೆಚ್ಚದಲ್ಲಿ ಪಜಲ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ.

ನಿಟ್ಟುಸಿರು ಬಿಟ್ಟ ವಾಣಿಜ್ಯ ನಗರಿ ಮಂದಿ
ವಾಣಿಜ್ಯ ನಗರಿಯಲ್ಲಿ ಜನ ಸಂದಣಿ ರಾಜಧಾನಿ ಬೆಂಗಳೂರನ್ನು ಮೀರಿಸುವಂತೆ ಬೆಳೆಯುತ್ತಿದೆ. ಮಹಾನಗರದ ಯಾವುದೇ ಭಾಗಕ್ಕೆ ಹೋದರೂ ಮೊದಲಿಗೆ ಎದುರಾಗುವ ಸಮಸ್ಯೆ ಅಂದರೆ ಪಾರ್ಕಿಂಗ್. ಕೋಪ್ಪೀಕರ್ ರಸ್ತೆ, ದಾಜೀಬಾನ್ ಪೇಟ್, ಕಂಚಗಾರ್ ಗಲ್ಲಿ, ಮಹಾವೀರ್ ಗಲ್ಲಿ, ಮೂರ ಸಾವಿರ ಮಠ, ಸ್ಟೇಷನ್ ರಸ್ತೆ, ವಿದ್ಯಾನಗರ ಎಲ್ಲಿ ಹೋದರು ಒಂದು ದ್ವೀಚಕ್ರ ವಾಹನ ನಿಲುಗಡೆಗಾಗಿ ಹರಸಾಹಸ ಪಡಬೇಕಾಗುತ್ತದೆ.

ಇಂದಿರಾ ಗ್ಲಾಸ್​ಹೌಸಿಗೆ ಭೇಟಿ ನೀಡುವ ಪ್ರವಾಸಿಗರಿಗಂತೂ ವಾಹನ ನಿಲುಗಡೆಯೇ ಒಂದು ದೋಡ್ಡ ತಲೆ ನೋವು. ನಿತ್ಯ ಸಾವಿರಾರು ಜನ ಪಾರ್ಕಿಂಗ್ ಭೇಟಿ ನೀಡುತ್ತಾರೆ. ಇಲ್ಲಿ ನಿಲುಗಡೆ ವ್ಯವಸ್ಥೆ ಇಲ್ಲದೆ ಅದೆಷ್ಟೋ ಜನ ವಾಪಸ್ ಹೋಗಿರುವುದು ಇದೆ. ಪಜಲ್ ಪಾರ್ಕಿಂಗ್​ನಿಂದ ಬಹುದಿನಗಳಿಂದ ಕಾಡುತ್ತಿದ್ದ ದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವಂತಿದ್ದು, ಕೆಲವೇ ದಿನಗಳಲ್ಲಿ ಪಜಲ್ ಪಾರ್ಕಿಂಗ್ ಲೋಕಾರ್ಪಣೆಗೊಳ್ಳಲಿದೆ.

Fact Check | ‘ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ’ ವೈರಲ್ ಫೋಟೊ ವಾರಣಾಸಿಯದ್ದು