ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ರಾಜಕಾರಿಣಿಗಳು ಮುಗ್ಧರು. ತಾಂತ್ರಿಕ ವಿಚಾರಗಳಲ್ಲಿ ಹಿಂದುಳಿದಿದ್ದಾರೆ. ಅಂಥವರನ್ನೇ ಟಾರ್ಗೆಟ್ ಮಾಡುವ ದೊಡ್ಡ ಜಾಲವಿದೆ. ರಮೇಶ್ ಜಾರಕಿಹೊಳಿ ಸಿಡಿಯ ಹಿಂದೆ ಸಂಚು ಇದೆ. ತನಿಖೆಯ ಹಂತದಲ್ಲಿರುವುದರಿಂದ ಹೆಚ್ಚು ಮಾತನಾಡುವುದು ತಪ್ಪಾಗುತ್ತದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಗಮನಿಸಿದಾಗ ಯಾರ ಮೇಲೆಯೂ ಬಲವಂತ ನಡೆದಂತೆ ಕಾಣಿಸುವುದಿಲ್ಲ. ಅದು ಅಸಲಿಯೋ-ನಕಲಿಯೋ ಎಂಬುದು ತನಿಖೆಯಿಂದ ಸಾಬೀತಾಗಬೇಕು ಎಂದು ಹೇಳಿದರು. ರಾಜಕಾರಿಣಿಗಳಿಗೆ ಸಂಬಂಧಿಸಿದಂತೆ ನಾಳೆ ಇನ್ನೊಂದು ಕಡೆ ಮತ್ತೊಂದು ವಿಷಯ ಬಹಿರಂಗಪಡಿಸುವೆ ಎಂದು ರಾಜಶೇಖರ ಮುಲಾಲಿ ಅಚ್ಚರಿಯ ಹೇಳಿಕೆ ನೀಡಿದರು.
‘ಹೆಂಡತಿ ಮಕ್ಕಳನ್ನು ನೆನಪಿಸಿಕೊಳ್ಳಲಿ’
ಕೆಲ ಶಾಸಕರು ಪ್ರವೃತ್ತಿಯಿಂದಲೇ ಇಂತಹ ಕೆಲಸ ಮಾಡುತ್ತಿದ್ದಾರೆ. ಧೂಮಪಾನ, ಮದ್ಯಪಾನದಂತೆ ಇದನ್ನೂ ಮಾಡುತ್ತಿದ್ದಾರೆ. ಇಂಥವರನ್ನ ಟಾರ್ಗೆಟ್ ಮಾಡುವ ಜಾಲ ಬೆಂಗಳೂರಿನಲ್ಲಿದೆ. ಈ ಜಾಲಕ್ಕೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಶಾಸಕರೇ ಟಾರ್ಗೆಟ್. ನಮ್ಮ ಭಾಗದ ಶಾಸಕರು ಮೈ ಮರೆಯದೆ ಎಚ್ಚರಿಕೆಯಿಂದ ಇರಬೇಕು. ಶಾಸಕರಾದವರಿಗೆ ಸಂಸ್ಕೃತಿ, ಸಂಸ್ಕಾರ, ಬುದ್ಧಿ ಇರಬೇಕು, ಭಾಗಿಯಾಗುವ ಮುನ್ನ ಹೆಂಡತಿ, ಮಕ್ಕಳನ್ನು ನೆನಪಿಸಿಕೊಳ್ಳಬೇಕು ಎಂದು ಈ ಹಿಂದೆ ಹೇಳಿದ್ದರು.
ಕರ್ನಾಟಕದಲ್ಲಿ 224 ಶಾಸಕರ ಪೈಕಿ 60 ಪ್ರತಿಶತ ಶಾಸಕರು ಇಂಥ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇದು ಅವರಿಗೆ ಪ್ರವೃತ್ತಿ ಎಂದು ಹೇಳಿರುವುದು ಪಕ್ಷಾತೀತವಾಗಿ ಶಾಸಕರುಗಳ ಮೇಲೆ ಸಂದೇಹ ಪಡುವಂತೆ ಆಗಿದೆ. ಇನ್ನೊಂದೆಡೆ ದಿನೇಶ್ ಕಲ್ಲಹಳ್ಳಿ ಸಹ ತನ್ನ ಬಳಿ ಇನ್ನಷ್ಟು ರಾಜಕಾರಣಿಗಳ ವಿಡಿಯೋ ಇರುವುದಾಗಿ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿ
ನನ್ನ ಬಳಿ 19 ಸಿಡಿಗಳಿವೆ ಎಂದು ಹೇಳಿಕೆ ನೀಡಿದ್ದ ಬಳ್ಳಾರಿ ಮೂಲದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿಯಾಗಿದೆ. ಕಬ್ಬನ್ಪಾರ್ಕ್ ಠಾಣೆ ಪೊಲೀಸರಿಂದ ನೋಟಿಸ್ ಜಾರಿಯಾಗಿದೆ. ರಾಜಶೇಖರ್ ಮುಲಾಲಿಗೆ ಸೋಮವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.ಮುಲಾಲಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಮಂಡ್ಯದ ಮಾನವ ಹಕ್ಕು ಸೇವಾ ಸಮಿತಿ ಅಧ್ಯಕ್ಷೆ ಇಂದಿರಾ ದೂರು ನೀಡಿದ್ದರು.
ಇದನ್ನೂ ಓದಿ: ನನ್ನ ಬಳಿ 19 ಸಿಡಿಗಳಿವೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿ