ಓದು ಮಗು ಓದು : ಕನ್ನಡದ ಪ್ರಕಾಶಕರೇ ಇತ್ತ ಒಮ್ಮೆ ಗಮನಿಸಿ…

‘ಮಕ್ಕಳ ಆಸಕ್ತಿಗಳಿಗೆ ಅನುಗುಣವಾಗಿ ಮಾತೃಭಾಷೆಯಲ್ಲಿ ಪುಸ್ತಕಗಳು ಲಭ್ಯವಾಗಬೇಕು. ಇಲ್ಲವಾದರೆ ಯಥಾಪ್ರಕಾರ ಯಾವ ಭಾಷೆಯಲ್ಲಿ ಅವರ ಓದಿನ ಹಸಿವು ತಣಿವುದೋ ಅಲ್ಲಿಗೇ ಅವರು ಹೊರಳುತ್ತಾರೆ. ಆದ್ದರಿಂದ ಕನ್ನಡದಲ್ಲಿ ಹತ್ತರಿಂದ ಹದಿನಾರು ವರ್ಷದವರೆಗಿನ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಪುಸ್ತಕಗಳನ್ನು ಪ್ರಕಟಿಸಬೇಕಾದ ಅಗತ್ಯ ಇದೆ.‘ ಪ್ರಶಾಂತ ಭಟ್.

  • TV9 Web Team
  • Published On - 13:27 PM, 16 Jan 2021
ಓದು ಮಗು ಓದು : ಕನ್ನಡದ ಪ್ರಕಾಶಕರೇ ಇತ್ತ ಒಮ್ಮೆ ಗಮನಿಸಿ...
ಏನು ಓದುತ್ತಿದ್ದಾಳೆ ಪುಟ್ಟಿ ಸಾಂಗತ್ಯ?

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು.
ಇ-ಮೇಲ್: tv9kannadadigital@gmail.com

ಮಂಗಳೂರಿನ ಪ್ರಶಾಂತ ಭಟ್ ಓದುವ ಹವ್ಯಾಸವನ್ನೇ ನೆಚ್ಚಿಕೊಂಡವರು. ಅವರ ಅಭಿಪ್ರಾಯದೊಂದಿಗೆ ಅವರ ಮಗಳು ಸಾಂಗತ್ಯಳ ಆಯ್ಕೆಗಳೂ ಇಲ್ಲಿವೆ.

ಎಳೆ ವಯಸ್ಸಿನ ಮಕ್ಕಳಿಗೆ ವಾಸ್ತವದ ಹಂಗಿಲ್ಲದ ಕಲ್ಪನೆಯ ರಮ್ಯ ಕಥೆಯೋ, ಒಳಿತು ಕೆಡುಕುಗಳ ನಡುವಿನ ಸಂಘರ್ಷದ ಕಥೆಯೋ ಜಾಸ್ತಿ ರುಚಿಸುತ್ತದೆ.‌ ಇದು ಬೆಳೆದಂತೆಲ್ಲ ರಮ್ಯ ಕಥೆಗಳ ವ್ಯಾಪ್ತಿ ಅವರ ದೈಹಿಕ ಬೆಳವಣಿಗೆಗೆ ಅನುಸಾರವಾಗಿ ಬದಲಾಗುತ್ತದೆ.
ಕನ್ನಡದಲ್ಲಿ ಈ ದಿಸೆಯಲ್ಲಿ ನೋಡಿದರೆ ಸ್ವಲ್ಪ ನಿರಾಸೆಯಾಗುವುದು ಸಹಜ. ಎಳೆಯ ಮಕ್ಕಳ ಓದಿಗಾಗಿ ಪುರಾಣದ ಕಥೆಗಳು, ಪಂಚತಂತ್ರ, ಮಹಾಭಾರತ, ರಾಮಾಯಣ, ಚಂದಮಾಮ ಹೀಗೆ ಅದೇ ಕಥೆಗಳೇ ಇವೆ. ಇವು ಅವರ ಕಲ್ಪನೆಯ ವಿಸ್ತಾರ ಹಿಗ್ಗಿಸುವ ಕೆಲಸವನ್ನು ದಶಕಗಳಿಂದ ಮಾಡುತ್ತಾ ಬಂದಿದ್ದರೂ ಇದು ಕೇವಲ ಬೋಧನಾತ್ಮಕವಾಗಿಯಷ್ಟೇ. ಒಂದೂರಲ್ಲಿ ಒಬ್ಬ ರಾಜನಿದ್ದ ಅಥವಾ ಒಂದೂರಲ್ಲಿ ಒಬ್ಬಳು ಅಜ್ಜಿಯಿದ್ದಳು ಎಂದು ಶುರುವಾಗುವ ಕಥೆಗಳ ಸ್ವರೂಪವೂ ಇದೇ.

ಹಾಗಾದರೆ ಅವರ ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಚಿಂತನೆ ಬೆಳೆಸುವ ಕಥೆಗಳ ನಮ್ಮ ಭಾಷೆಯಲ್ಲಿ ಹುಡುಕಹೊರಟರೆ ನಿರಾಸೆಯೇ ಎದುರಾಗುತ್ತದೆ. ರಾಜಶೇಖರ ಭೂಸನೂರಮಠ ಅವರ ವೈಜ್ಞಾನಿಕ ಕಥೆಗಳು, ಪಳಕಳ ಸೀತಾರಾಮ ಭಟ್ಟರಂತ ಮಕ್ಕಳ ಸಾಹಿತಿಗಳು, ಶಿವರಾಮ ಕಾರಂತರ ಮಕ್ಕಳಿಗಾಗಿ ಬರೆದ ವೈಜ್ಞಾನಿಕ ಬರಹಗಳ ಬಿಟ್ಟರೆ ಈ ದಿಸೆಯಲ್ಲಿ ದೊಡ್ಡ ಮಟ್ಟದ ಪ್ರಗತಿ ಆಗಲಿಲ್ಲ ಎಂಬುದು ಕಣ್ಣಿಗೆ ಹೊಡೆದು ಕಾಣುವ ಸತ್ಯ. ಇದನ್ನು ಪಾಶ್ಚಾತ್ಯ ಸಾಹಿತ್ಯದ ಉದಾಹರಣೆಯಾಗಿ ಇಟ್ಟುಕೊಂಡು ವಿಶ್ಲೇಷಣೆ ಮಾಡಬಹುದು.

ಅಲ್ಲಿ ಮಕ್ಕಳ ಪ್ರಾಯಕ್ಕನುಗುಣವಾಗಿ ಬೇರೆ ಬೇರೆ ಪ್ರಕಾರದ ಸಾಹಿತ್ಯ ಬರೆಯುವವರೂ ಅದಕ್ಕೆ ಅಪಾರ ಓದುಗರೂ ಇದ್ದಾರೆ. ಹ್ಯಾರಿ ಪಾಟರ್‌ನಂತಹ ಸರಣಿಗಳು ಅಲ್ಲಿ ಕೋಟಿಗಟ್ಟಲೆ ಜನರ ಆಕರ್ಷಿಸಿದೆ. ಈ‌ ಕಥೆಗಳೆಲ್ಲ ಮಕ್ಕಳಿಗೆಂದೇ ಬರೆಯಲ್ಪಟ್ಟಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಈ‌  ಸರಣಿಗಳೆಲ್ಲ ಮುಂದುವರೆಯುತ್ತಾ ಇದ್ದ ಹಾಗೆ ಕಥೆಯ ಮುಖ್ಯ ಪಾತ್ರದಲ್ಲೂ ಬೆಳವಣಿಗೆ ಆಗುತ್ತಾ ಓದುಗ ಮಕ್ಕಳು ತಮ್ಮನ್ನು ಆ ಪಾತ್ರದೊಂದಿಗೆ ತುಲನೆ ಮಾಡಿ ಸಮೀಕರಿಸಲು ಸಹಾಯವಾಗುತ್ತದೆ. ಮ್ಯಾಜಿಕ್ ಇಂತಹ ಕಥೆಗಳ ಪ್ರಮುಖ ಅಂಶ.
ಅಸಾಧ್ಯ ಕೆಲಸಗಳ ಸಾಧ್ಯ ಮಾಡಬಹುದಾದ ಬಗೆ ಮಕ್ಕಳ ಕಲ್ಪನಾ ಶಕ್ತಿಯ ಎಲ್ಲೆಗಳ ವಿಸ್ತರಿಸುವುದರಿಂದ ಅವರ ಮಾನಸಿಕ ಬೆಳವಣಿಗೆಯಾಗುತ್ತದೆ.

ಈ ದಿಸೆಯಲ್ಲಿ ನೋಡಿದಾಗ ನಮ್ಮಲ್ಲಿ ಹತ್ತು ವರ್ಷದವರೆಗಿನ ಮಕ್ಕಳಿಗೆ ಸಾಕಷ್ಟು ಸರಕು ಇದ್ದರೂ ‘ಟೀನ್ ಫಿಕ್ಷನ್’ ಅಂತ ಬಾಲ್ಯದಿಂದ ಯೌವನಕ್ಕೆ ತಿರುಗುವ ಕಾಲದಲ್ಲಿ ಮಕ್ಕಳು ಓದಬಹುದಾದ ಪುಸ್ತಕಗಳ ಬಹು ದೊಡ್ಡ ಕೊರತೆಯಿದೆ ಎಂದು ಅನಿಸುತ್ತದೆ. ಅತ್ತ ಹುಡುಗಾಟವೂ ಅಲ್ಲದ ಇತ್ತ ಪ್ರೌಢವೂ ಅಲ್ಲದ ಯೋಚನೆಗಳ ವಯಸ್ಸಲ್ಲಿ ಮಕ್ಕಳು ಮಾತೃಭಾಷೆಯಲ್ಲಿ ಓದಲು ಅವರಿಗೆ ಸಿಗುವ ಪುಸ್ತಕಗಳು ತಮ್ಮ ದೇಹದ ಕುರಿತಾದ ಮಾಹಿತಿಯವು ಮಾತ್ರ. ಮಾಹಿತಿ ತಂತ್ರಜ್ಞಾನದ ಕ್ರಾಂತಿ ಹೆಚ್ಚಿರುವ ಈ ದಿನಗಳಲ್ಲಿ ಹೆಚ್ಚಿನವು ಇಂಟರ್ನೆಟ್ ಅಲ್ಲಿ ಲಭ್ಯವಿರುವ ಕಾರಣ ಇದು ಗ್ರಾಮೀಣ ಮತ್ತು ಪಟ್ಟಣ ಎರಡೂ ಮಕ್ಕಳಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದ ಹಾಗೆ ಮಾಡಿವೆ. ಈ ದಿಸೆಯಲ್ಲಿ ‌ಹೆಚ್ಚಿನ ಪ್ರಯತ್ನ ಆಗಬೇಕಾಗಿದೆ.

ನನ್ನ ಮಗಳು ಕೂಡ ಈ ಚಿಣ್ಣರ ಕಥೆಗಳ ಆಸ್ಥೆಯಿಂದ‌ ಓದುವವಳೇ. ದೊಡ್ಡ ದೊಡ್ಡ ಕಥೆಗಳ ಸಂಕೀರ್ಣತೆ ಅವಳಿಗೆ ಅರ್ಥವಾಗುವಷ್ಟು ವಯಸ್ಸಾಗಿರದಿದ್ದರೂ, ದೃಶ್ಯ ಮಾಧ್ಯಮದ ಮೂಲಕ ಅರಿತುಕೊಂಡ ‌ಪಾತ್ರಗಳ ಕುರಿತಾದ ಪುಸ್ತಕ ಸಿಕ್ಕರೆ ಅದನ್ನು ಓದಿ ಆ ಪಾತ್ರಗಳ ತನ್ನ ಜೀವನದ ಹಿರಿ ಕಿರಿಯರ ಜೊತೆ ಸಮೀಕರಿಸುವುದು ಅವಳಿಗೆ ಇಷ್ಟದ ಕೆಲಸ. ಎಲ್ಲಾ ಮಕ್ಕಳಂತೆ ನಾಯಕಿ ಪಾತ್ರ ಅವಳಿಗೇ ಮೀಸಲು.

ಈ ದಿಸೆಯಲ್ಲಿ ಅವಳ ಗಮನ ಸೆಳೆದ ಪುಸ್ತಕಗಳು
ಫ್ರೋಜನ್ ಸರಣಿಗಳು
ಛೋಟಾ ಭೀಮ್
ಹನುಂತನ ಪುರಾಣ ಕಥೆಗಳು
ಪೆಪ್ಪಾ ಪಿಗ್ ಎನ್ನುವ ಹಂದಿಯ ಕಥೆ

ಅವಳಿಗೆ ಕಥೆ ಹೇಳಲು ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಮಕ್ಕಳ ಕಥೆ’ ಸರಣಿಯ ಹನ್ನೆರಡು ಪುಟ್ಟ ಪುಸ್ತಕಗಳು ,
ಅಯೋಧ್ಯಾ ಪ್ರಕಾಶನದ ‘ಅಜ್ಜಿ ಹೇಳಿದ ಕತೆಗಳು’ ಸಹಾಯ ಮಾಡಿದವು. ಇನ್ನು ಶಿಶು ಗೀತೆಗಳ ವಿಷಯಕ್ಕೆ ಬಂದರೆ ಪ್ರಾಸಬದ್ಧವಾದ ರಚನೆಯ ‘ತಟ್ಟು ಚಪ್ಪಾಳೆಯ ಪುಟ್ಟ ಮಗು’ ಲಯಬದ್ಧ ಸಾಲುಗಳು ಅವಳ ಆಕರ್ಷಿಸಿದವು. ಬೆಳವಣಿಗೆ ದಿನಂಪ್ರತಿ ನಡೆಯುವ ಕ್ರಿಯೆಯಾದುದರಿಂದ ಇವತ್ತಿದ್ದ ಹಾಗೆ ಮುಂದಿನ ಕ್ಷಣ ಅವರ ಆಸಕ್ತಿ ಇರುವುದಿಲ್ಲ. ಅವರ ಆಸಕ್ತಿ ಬದಲಾದ ಹಾಗೆ ಅದನ್ನು ಸೆಳೆದುಕೊಳ್ಳುವ ಅಂಶದ ಪುಸ್ತಕಗಳು ಮಾತೃಭಾಷೆಯಲ್ಲಿ ಲಭ್ಯವಾದರೆ ಮಕ್ಕಳು ಅವನ್ನು ಓದುತ್ತವೆ. ಇಲ್ಲವಾದರೆ ಯಥಾಪ್ರಕಾರ ಯಾವ ಭಾಷೆಯಲ್ಲಿ ಲಭ್ಯವಿದೆಯೋ ಅಲ್ಲಿಗೆ ಅವರ ಆಸಕ್ತಿ ಬದಲಾಗುತ್ತದೆ. ಇದಾಗದಂತೆ ಕನ್ನಡದಲ್ಲಿ ಇಂತಹ ಹತ್ತರಿಂದ ಹದಿನಾರು ವರ್ಷದವರೆಗಿನ ಮಕ್ಕಳ ಗಮನದಲ್ಲಿರಿಸಿಕೊಂಡು ಬರಬೇಕಾದ ಪುಸ್ತಕಗಳ ಅಗತ್ಯ ಇದೆ.

ಓದು ಮಗು ಓದು: ನನ್ನ ಮನಸಲ್ಲಿರೋ ಪ್ರಶ್ನೆಗೆ ಪುಸ್ತಕಗಳಲ್ಲೂ ಉತ್ತರ ಸಿಗುತ್ತೆ!