ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?

  • TV9 Web Team
  • Published On - 17:39 PM, 9 Nov 2020
ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?

ಅಮೆರಿಕದ ಅಧ್ಯಕ್ಷಗಾದಿಗೆ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಖಚಿತಗೊಂಡಿರುವ ಬೆನ್ನಲ್ಲಿ, ಭಾರತದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಶುಭಕೋರಿರುವ ಎಸ್.ಎಂ. ಕೃಷ್ಣ ಬೈಡೆನ್ ಮತ್ತು ಕಮಲಾಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

ಬೈಡೆನ್, ಕಮಲಾ ಹ್ಯಾರಿಸ್ ಗೆ ಆತ್ಮೀಯರಂತೆ ಎಸ್.ಎಂ. ಕೃಷ್ಣ!
ಈ ಹಿಂದೆ 2009ರಿಂದ 2012ರ ವರೆಗೆ, ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಎಸ್.ಎಂ. ಕೃಷ್ಣ, ಆಗ ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಬರಾಕ್ ಒಬಾಮಾ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ರನ್ನು ಕೃಷ್ಣ ಭೇಟಿಯಾಗಿದ್ದರು.

ಅಮೆರಿಕದ ಚುನಾವಣೆಗೂ ಮೊದಲೇ ಕೃಷ್ಣ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಶುಭ ಹಾರೈಸಿದ್ದರು ಮತ್ತು ಖಾಸಗಿಯಾಗಿ ತಮ್ಮ ಶುಭ ಸಂದೇಶವನ್ನು ರವಾನಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಮಲಾ, ಬೈಡೆನ್ ಜೊತೆಗೆ ಕೃಷ್ಣಗೆ ಉತ್ತಮ ಸಂಪರ್ಕವೂ ಇದೆ. ಅಮೆರಿಕಾದ ಮತದಾನಕ್ಕಿಂತ ಮೊದಲು ನಮ್ಮ ದೇಶದಲ್ಲಿ ಆಚರಿಸಿದ ದಸರಾ ಸಂದರ್ಭದಲ್ಲಿಯೇ ಕೃಷ್ಣ ಅವರು ಖಡಕ್ ಮಾತನಾಡಿದ್ದರು. ಅಮೆರಿಕಾದಲ್ಲಿ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರು ಗೆಲ್ಲಲಿ ಎಂದು ನೇರವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮೆರಿಕ ದಲ್ಲಾಸ್ ನ ಸಥರ್ನ್ ಮೆಥಡಿಸ್ಟ್ ಯುನಿವರ್ಸಿಟಿ, ವಾಷಿಂಗ್ಟನ್ ಡಿ.ಸಿ.ಯ ಜಾರ್ಜ್ ವಾಷಿಂಗ್ಟನ್ ಯುನಿವರ್ಸಿಟಿಗಳಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ ಎಸ್.ಎಂ. ಕೃಷ್ಣ ಅವರು ಅಮೆರಿಕದ ವ್ಯವಸ್ಥೆಯ ಕುರಿತು ಉತ್ತಮ ಜ್ಞಾನ ಪಡೆದವರಾಗಿದ್ದಾರೆ. ಭಾರತೀಯ ರಾಜಕೀಯ ಧುರೀಣ ಕೃಷ್ಣಗೆ ಈಗ 88 ವರ್ಷ ವಯಸ್ಸಾಗಿದ್ದು ಭಾರತೀಯ ರಾಜ್ಯ, ರಾಷ್ಟ್ರ ರಾಜಕಾರಣಗಳ ಅನುಭವ ಹೊಂದಿದ್ದಾರೆ.

1962ರಿಂದ ಭಾರತೀಯ ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವ ಅವರು 2017ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪ್ರಸ್ತುತ ಆಳ್ವಿಕೆ ನಡೆಸುತ್ತಿರುವುದು ನರೇಂದ್ರ ಮೋದಿ ಆಡಳಿತದ ಬಿಜೆಪಿ ಪಕ್ಷವಾಗಿರುವುದರಿಂದ, ದೇಶಕ್ಕೆ ಮತ್ತು ಪಕ್ಷಕ್ಕೆ, ಭಾರತ-ಅಮೆರಿಕ ಸಂಬಂಧವಾಗಿ ಎಸ್.ಎಂ. ಕೃಷ್ಣ ಕಡೆಯಿಂದ ಉತ್ತಮ ಸಹಾಯವಾಗುವ ನಿರೀಕ್ಷೆಯಿದೆ.